ಗುಜರಾತ್ | ಖಾಸಗಿ ಕಂಪನಿಯೊಂದರ ಸಂದರ್ಶನಕ್ಕೆ ಅಭ್ಯರ್ಥಿಗಳ ನೂಕುನುಗ್ಗಲು: ಕಳಚಿ ಬಿದ್ದ ರೇಲಿಂಗ್

Update: 2024-07-11 16:29 GMT

PC: NDTV

ಅಹಮದಾಬಾದ್: ದೇಶದಲ್ಲಿ ಬಿಗಡಾಯಿಸುತ್ತಿರುವ ನಿರುದ್ಯೋಗ ಸಮಸ್ಯೆಗೆ ಕನ್ನಡಿ ಹಿಡಿಯುವಂತೆ, ಗುಜರಾತ್‌ನ ಖಾಸಗಿ ಕಂಪನಿಯೊಂದು ಆಯೋಜಿಸಿದ್ದ 10 ಹುದ್ದೆಗಳಿಗಾಗಿನ ನೇಮಕಾತಿ ಸಂದರ್ಶನಕ್ಕೆ 1,800ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದು, ಈ ಸಂದರ್ಭದಲ್ಲಿ ಏರ್ಪಟ್ಟ ನೂಕುನುಗ್ಗಲಿನಲ್ಲಿ ಸಂದರ್ಶನ ಆಯೋಜಿಸಲಾಗಿದ್ದ ಹೋಟೆಲ್‌ನ ಮೆಟ್ಟಿಲಿನ ರೇಲಿಂಗ್ ಕಳಚಿ ಬಿದ್ದಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಗುಜರಾತ್‌ನ ಭರೂಚ್‌ನಲ್ಲಿರುವ ಖಾಸಗಿ ಕಂಪನಿಯೊಂದು 10 ಹುದ್ದೆಗಳ ನೇಮಕಾತಿಗಾಗಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿತ್ತು.‌ ಹೋಟೆಲ್ ಒಂದರಲ್ಲಿ ಆಯೋಜನೆಗೊಂಡಿದ್ದ ಈ ಉದ್ಯೋಗ ನೇಮಕಾತಿ ಸಂದರ್ಶನಕ್ಕೆ 1,800ಕ್ಕೂ ಹೆಚ್ಚು ಅಭ್ಯರ್ಥಿಗಳು ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದ ಅಭ್ಯರ್ಥಿಗಳ ನಡುವೆ ನೂಕುನುಗ್ಗಲು ಉಂಟಾಗಿ, ಮೆಟ್ಟಿಲಿನ ರೇಲಿಂಗ್ ಕಳಚಿ ಬಿದ್ದಿದೆ. ಆಗ ಕೆಲ ಅಭ್ಯರ್ಥಿಗಳು ಮೆಟ್ಟಿಲಿನ ಮೇಲಿಂದ ಕೆಳಕ್ಕೆ ಬಿದ್ದಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ಘಟನೆಯ ವಿರುದ್ಧ ವಾಗ್ದಾಳಿ ನಡೆಸಿರುವ ವಿರೋಧ ಪಕ್ಷವಾದ ಕಾಂಗ್ರೆಸ್, ಈ ಘಟನೆಯು ದೇಶದಲ್ಲಿ ಏರಿಕೆಯಾಗುತ್ತಿರುವ ನಿರುದ್ಯೋಗಕ್ಕೆ ಪುರಾವೆಯಾಗಿದ್ದು, ಭಾರಿ ಪ್ರಚಾರ ಪಡೆದ ಗುಜರಾತ್ ಮಾದರಿಯ ವೈಫಲ್ಯಕ್ಕೆ ನಿದರ್ಶನವಾಗಿದೆ ಎಂದು ಟೀಕಿಸಿದೆ.

ಆದರೆ, ಈ ಘಟನೆಗೆ ಸಂದರ್ಶನ ಏರ್ಪಡಿಸಿದ್ದ ಖಾಸಗಿ ಕಂಪನಿಯ ವೈಫಲ್ಯವೇ ಕಾರಣ ಎಂದು ಆಡಳಿತಾರೂಢ ಬಿಜೆಪಿಯ ಭರೂಚ್ ಲೋಕಸಭಾ ಕ್ಷೇತ್ರದ ಸಂಸದ ಮನ್ಷುಕ್ ವಾಸವ ಪ್ರತಿ ಆರೋಪ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News