ಚುನಾವಣೆಗಾಗಿ ದೀಪಾವಳಿಯನ್ನೇ ಮುಂದೂಡಿದ ಗ್ರಾಮಸ್ಥರು!
ಸಾಜನ್ ಪುರ: ಮತದಾನದ ದಿನವೇ ದೀಪಾವಳಿ ಆಚರಣೆ ಬರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಅಲಿರಾಜ್ ಪುರದ ಗ್ರಾಮಸ್ಥರು ದೀಪಾವಳಿಯ ಸಂಭ್ರಮವನ್ನು ಏಳು ದಿನಗಳ ಕಾಲ ಮುಂದೂಡಿದ್ದಾರೆ.
ಈ ಆದಿವಾಸಿ ಸಮುದಾಯದ ದೀಪಾವಳಿಯ ವೇಳಾಪಟ್ಟಿಯನ್ನು ಗ್ರಾಮದ ಹಿರಿಯರು ನಿರ್ಧರಿಸುತ್ತಾರೆ. "ನಾವು ಇತರರಂತೆ ದೀಪಾವಳಿ ಆಚರಿಸುವುದಿಲ್ಲ. ಇದು ಸಾಮಾನ್ಯವಾಗಿ ಪ್ರತಿ ವರ್ಷ ಶುಕ್ರವಾರ ಬರುತ್ತದೆ. ದೀಪಾವಳಿ ಪೂಜೆಯನ್ನು ನವೆಂಬರ್ 17ರಂದು ಆಚರಿಸಲು ಹಿರಿಯರು ನಿರ್ಧರಿಸಿದ್ದರು. ಆದರೆ ಅಂದು ಮತದಾನದ ದಿನವಾಗಿರುವುದರಿಂದ ಮುಂದೂಡಿದ್ದಾರೆ" ಎಂದು ಸಾಜನ್ಪುರ ಪಂಚಾಯ್ತಿ ಕಾರ್ಯದರ್ಶಿ ಖುರ್ಬನ್ ಥೋಮರ್ ಹೇಳಿದ್ದಾರೆ.
ದೇಶಾದ್ಯಂತ ದೀಪಗಳ ಹಬ್ಬ ಮುಗಿದು ಒಂದು ವಾರದ ಬಳಿಕ ಅಂದರೆ ನವೆಂಬರ್ 24ರಂದು ಇಲ್ಲಿ ದೀಪಾವಳಿಯನ್ನು ಅಚರಿಸಲು ಪಂಚಾಯ್ತಿ ನಿರ್ಧರಿಸಿದೆ. "ಎಲ್ಲ ಗ್ರಾಮಸ್ಥರು ಅವರ ನಿಯೋಜಿತ ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಪ್ರತಿ ವರ್ಷ ಈ ಗ್ರಾಮಗಳ ಅನೌಪಚಾರಿಕ ಮುಖ್ಯಸ್ಥರು ಬದ್ವಾ (ಅರ್ಚಕರು) ಜತೆ ಚರ್ಚಿಸಿ ದೀಪಾವಳಿ ದಿನಾಂಕವನ್ನು ನಿರ್ಧರಿಸುತ್ತಾರೆ" ಎಂದು ಅಲಿರಾಜ್ ಪುರ ಆದಿವಾಸಿ ಸಂಸ್ಕೃತಿ ಸಂಶೋಧಕ ಅನಿಲ್ ತನ್ವರ್ ಸ್ಪಷ್ಟಪಡಿಸಿದ್ದಾರೆ.
ದೀಪಾವಳಿ ದಿನ ದೇವಸ್ಥಾನದಲ್ಲಿ ಸೇರುವ ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸಿ ಪ್ರಾಣಿ ಬಲಿ ನೀಡುತ್ತಾರೆ. ಎಲ್ಲರೂ ಜತೆಯಾಗಿ ಪಟಾಕಿಗಳನ್ನು ಸಿಡಿಸಿ, ಮನೆಗಳಲ್ಲಿ ದೀಪ ಬೆಳಗುತ್ತಾರೆ ಎಂದು ಅವರು ವಿವರಿಸಿದ್ದಾರೆ.
"ಚುನಾವಣೆ ಕಾರಣದಿಂದ ಅವರು ನಮ್ಮ ಸಂಭ್ರಮಾಚರಣೆಯನ್ನು ಮರು ಹೊಂದಾಣಿಕೆ ಮಾಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ನಾವು ಮದ್ಯಪಾನ ಮಾಡಿ ಸಂಭ್ರಮಿಸುತ್ತೇವೆ. ಆದ್ದರಿಂದ ನಮ್ಮ ಜನರ ಮತಗಳ ಮೇಲೆ ಪರಿಣಾಮ ಬೀರುವುದರಿಂದ ಹಾಗೆ ಮಾಡುವುದಿಲ್ಲ. ಸ್ಪಷ್ಟವಾಗಿ ಅವರು ಯೋಚಿಸಿ ಮತದಾನ ಮಾಡಬೇಕು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದೇವ ಎಂದು ತೋಮರ್ ಎಂಬವರು ಹೇಳಿದ್ದಾರೆ.