ʼಭಾರತ್ ಜೋಡೋ ನ್ಯಾಯ್ ಯಾತ್ರೆʼಯ ಆರಂಭಕ್ಕೆ ಮಣಿಪುರದಲ್ಲಿ ಹಿಂಸಾಚಾರದ ಕರಿಛಾಯೆ
ಇಂಫಾಲ್: ಮಣಿಪುರದ ಗಡಿ ಪಟ್ಟಣವಾದ ಮೊರೆಹ್‌ನಲ್ಲಿ ಮತ್ತೆ ವರದಿಯಾದ ಹಿಂಸಾಚಾರದಿಂದಾಗಿ ಕಾಂಗ್ರೆಸ್ ಪಕ್ಷವು ಆರಂಭಿಸಲಿರುವ 'ಭಾರತ್ ಜೋಡೋ ನ್ಯಾಯ್ ಯಾತ್ರೆ'ಗೆ ರಾಜ್ಯ ಸರಕಾರದಿಂದ ಅನುಮತಿ ವಿಳಂಬವಾಗಿದೆ.
ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಮಣಿಪುರ ಪೊಲೀಸರು ಮತ್ತು ತೀವ್ರಗಾಮಿಗಳ ನಡುವೆ ಇತ್ತೀಚೆಗೆ ನಡೆದ ಗುಂಡಿನ ಚಕಮಕಿಯಿಂದ ಮೊರೆಹ್‌ನಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಭದ್ರತಾ ಪಡೆಗಳ ಮೇಲಿನ ದಾಳಿಗೆ ಕಾರಣರಾದ ಶಸ್ತ್ರಸಜ್ಜಿತ ತೀವ್ರಗಾಮಿಗಳನ್ನು ಬಂಧಿಸಲು ಅಸ್ಸಾಂ ರೈಫಲ್ಸ್, ಬಿಎಸ್ಎಫ್ ಮತ್ತು ರಾಜ್ಯ ಪೊಲೀಸರ ಜಂಟಿ ಪ್ರಯತ್ನದಿಂದ ರಾಜ್ಯದಲ್ಲಿ "ಸಾಮೂಹಿಕ ಕೂಂಬಿಂಗ್ ಕಾರ್ಯಾಚರಣೆಗಳು" ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಹೇಳಿದ್ದಾರೆ.
"ರಾಹುಲ್ ಗಾಂಧಿಯವರ ರ‍್ಯಾಲಿಗೆ ಅನುಮತಿ ನೀಡುವ ಕುರಿತು, ವಿವಿಧ ಭದ್ರತಾ ಏಜೆನ್ಸಿಗಳಿಂದ ವರದಿಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ವರದಿಗಳನ್ನು ಸ್ವೀಕರಿಸಿದ ನಂತರ ನಾವು ಅನುಮತಿ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು 'ಭಾರತ್ ಜೋಡೋ ನ್ಯಾಯ್ ಯಾತ್ರೆ'ಗೆ ಅನುಮತಿ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
ಸೋಮವಾರ ಬೆಳಗ್ಗೆ ಮೊರೆಹ್‌ನಲ್ಲಿ ನಗರದ ಕೆಲವು ಭಾಗಗಳಲ್ಲಿ ಉಗ್ರರು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಗುಂಡಿನ ಚಕಮಕಿ ನಡೆದಿದೆ. ದಾಳಿಯ ಸಮಯದಲ್ಲಿ ಮೋರ್ಟರ್ ಶೆಲ್‌ಗಳನ್ನು ಬಳಸಲಾಗಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ, ಆದರೂ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್ ಪಕ್ಷವು ಜನವರಿ 14 ರಂದು ಇಂಫಾಲ್ ಪೂರ್ವ ಜಿಲ್ಲೆಯ ಹಟ್ಟಾ ಕಾಂಗ್ಜೆಬುಂಗ್‌ನಿಂದ 'ಭಾರತ್ ಜೋಡೋ ನ್ಯಾಯ್ ಯಾತ್ರೆ'ಯನ್ನು ಪ್ರಾರಂಭಿಸುವ ಯೋಜನೆಯಲ್ಲಿದೆ.
ಗುವಾಹಟಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು, “ಮಣಿಪುರ ಸರ್ಕಾರದಿಂದ ಪಕ್ಷವು ಆಯೋಜಿಸಿರುವ ಯಾತ್ರೆಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಅನುಮತಿಗೆ ಸಲ್ಲಸಿರುವ ಅರ್ಜಿಗೆ ಕೇಂದ್ರದಿಂದ ಅನುಮೋದನೆ ಸಿಕ್ಕಿಲ್ಲ ಎಂದು ರಾಜ್ಯ ಸರಕಾರವು ಹೇಳಿದೆ. ಹಾಗಾಗಿ ಅನುಮತಿಗಾಗಿ ಕಾಯುತ್ತಿದ್ದೇವೆ” ಎಂದು ಹೇಳಿದ್ದಾರೆ.
'ಭಾರತ್ ಜೋಡೋ ನ್ಯಾಯ್ ಯಾತ್ರೆ' ಯು 66 ದಿನಗಳಲ್ಲಿ ಬಸ್ಸುಗಳು ಮತ್ತು ಕಾಲ್ನಡಿಗೆಯಲ್ಲಿ 6,713 ಕಿಮೀಗಳನ್ನು ಕ್ರಮಿಸುವ ಗುರಿ ಹೊಂದಿದೆ. ಈ ಪಯಣದುದ್ದಕ್ಕೂ 110 ಜಿಲ್ಲೆಗಳು, 100 ಲೋಕಸಭಾ ಸ್ಥಾನಗಳು ಮತ್ತು 337 ವಿಧಾನಸಭಾ ಕ್ಷೇತ್ರಗಳನ್ನು ದಾಟಿ, ಮಾರ್ಚ್ 20 ರಂದು ಮುಂಬೈನಲ್ಲಿ ಯಾತ್ರೆ ಮುಕ್ತಾಯಗೊಳ್ಳಲಿದೆ.