ಹಾಲಿ ಸಂಸದರ 100 ಕ್ಷೇತ್ರಗಳ ಪಟ್ಟಿಯನ್ನು ತಡೆ ಹಿಡಿದ ಬಿಜೆಪಿ: ಮೇನಕಾ ಗಾಂಧಿ, ವಿ.ಕೆ.ಸಿಂಗ್ ಭವಿಷ್ಯ ಏನು?

Update: 2024-03-04 05:54 GMT

ಸಾಂದರ್ಭಿಕ ಚಿತ್ರ (PTI)


ಹೊಸದಿಲ್ಲಿ: ಬಿಜೆಪಿಯ ಹಾಲಿ ಸಂಸದರ 100 ಕ್ಷೇತ್ರಗಳ ಪಟ್ಟಿಯನ್ನು ಬಿಜೆಪಿ ತಡೆ ಹಿಡಿದಿರುವುದು ಹಿರಿಯ ನಾಯಕಿ ಮೇನಕಾ ಗಾಂಧಿ, ಕೇಂದ್ರಸಚಿವ ವಿ.ಕೆ. ಸಿಂಗ್ ಸೇರಿದಂತೆ ಹಲವು ಮಂದಿ ಹಿರಿಯ ಮುಖಂಡರ ರಾಜಕೀಯ ಭವಿಷ್ಯದ ಬಗ್ಗೆ ವದಂತಿಗಳಿಗೆ ಕಾರಣವಾಗಿದೆ.

ಹಲವು ಸುತ್ತುಗಳ ಮಾತುಕತೆ ನಡೆದರೂ, ಉತ್ತರ ಪ್ರದೇಶದಲ್ಲಿ ಬಿಜೆಪಿಯ 29 ಮಂದಿ ಹಾಲಿ ಸಂಸದರು ಪ್ರತಿನಿಧಿಸುವ ಕ್ಷೇತ್ರಗಳು ಸೇರಿದಂತೆ 100ಕ್ಕೂ ಹೆಚ್ಚು ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುವುದನ್ನು ಪಕ್ಷದ ಮುಖಂಡರು ತಡೆಹಿಡಿದಿದ್ದಾರೆ.

ಉತ್ತರ ಪ್ರದೇಶದಲ್ಲಿ ತಡೆಹಿಡಿದಿರುವ ಬಹುತೇಕ ಸ್ಥಾನಗಳು ಪೂರ್ವಭಾಗದ್ದಾಗಿದ್ದು, ಇಲ್ಲಿ ಸಣ್ಣ ಪಕ್ಷಗಳ ಜತೆಗಿನ ಸ್ಥಾನ ಹೊಂದಾಣಿಕೆ ಮಾತುಕತೆಗಳು ನಡೆಯುತ್ತಿವೆ. ಆದರೆ ಕೇಂದ್ರ ಸಚಿವ ವಿ.ಕೆ.ಸಿಂಗ್ (ಗಾಝಿಯಾಬಾದ್), ಮೇನಕಾಗಾಂಧಿ (ಸುಲ್ತಾನಪುರ), ಅವರ ಪುತ್ರ ವರುಣ್ ಗಾಂಧಿ (ಫಿಲಿಬಿಟ್) ಮತ್ತು ವಿವಾದಾತ್ಮಕ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (ಕೇಸರ್ ಗಂಜ್) ಅವರ ಭವಿಷ್ಯ ತೂಗುಯ್ಯಾಲೆಯಲ್ಲಿದೆ.

ಗಾಝಿಯಾಬಾದ್ ಸುತ್ತಮುತ್ತಲ ಬಹುತೇಕ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದರೂ, ವಿ.ಕೆ.ಸಿಂಗ್ ಅವರ ಹೆಸರು ಮೊದಲ ಪಟ್ಟಿಯಲ್ಲಿಲ್ಲ. ಅಂದರೆ ಅವರನ್ನು ಬದಲಾಯಿಸುವ ವಿಚಾರ ಪಕ್ಷದ ಹಿರಿಯ ಮುಖಂಡರಲ್ಲಿದೆ ಎನ್ನಲಾಗಿದೆ. ಹಲವು ಬಾರಿ ಪಕ್ಷದ ಶಿಸ್ತಿಗೆ ಬದ್ಧರಾಗಿಲ್ಲ ಎಂಬ ಹಿನ್ನೆಲೆಯಲ್ಲಿ ಮತ್ತು ಬಹಿರಂಗವಾಗಿ ಪಕ್ಷವನ್ನು ಟೀಕಿಸಿ ಮುಜುಗರಕ್ಕೀಡುಮಾಡಿದ ಕಾರಣಕ್ಕೆ ವರುಣ್ ಗಾಂಧಿಯವರನ್ನು ಫಿಲಿಬಿಟ್ ಕ್ಷೇತ್ರದಿಂದ ಕಣಕ್ಕೆ ಇಳಿಸದಿರುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ಜತೆಗೆ ಅವರ ತಾಯಿ ಮೇನಕಾ ಗಾಂಧಿಯವರ ಸುಲ್ತಾನ್ ಪುರ ಕ್ಷೇತ್ರ ಬೇರೆಯವರ ಪಾಲಾಗುತ್ತದೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ.

ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದ ವಿವಾದಾತ್ಮಕ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕಣಕ್ಕೆ ಇಳಿಸಲು ಪಕ್ಷ ಹಿಂದೇಟು ಹಾಕುತ್ತಿದೆ ಎನ್ನಲಾಗಿದ್ದು, ಅವರ ಪುತ್ರ ಹಾಗೂ ಶಾಸಕ ಪ್ರತೀಕ್ ಭೂಷಣ್ ಸಿಂಗ್ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿ ಇದೆ. ಕೆಲ ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿಗಳನ್ನು ನೋಡಿಕೊಂಡು ತನ್ನ ಅಭ್ಯರ್ಥಿಗಳನ್ನು ಬಿಜೆಪಿ ಅಂತಿಮಪಡಿಸಲಿದೆ ಎಂದು ತಿಳಿದು ಬಂದಿದೆ.

ಈ ವಾರಾಂತ್ಯದಲ್ಲಿ ಮತ್ತೆ ಸಭೆ ಸೇರಿ ಮಹಾರಾಷ್ಟ್ರ, ಬಿಹಾರ ಹಾಗೂ ಕರ್ನಾಟಕದಲ್ಲಿ ಮಿತ್ರಪಕ್ಷಗಳ ಜತೆ ಸ್ಥಾನ ಹೊಂದಾಣಿಕೆ ಒಪ್ಪಂದವನ್ನು ಅಂತಿಮಪಡಿಸಲಿದೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News