ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವವರಿಗೆ ಮತ ನೀಡಿ : ರೈತ ನಾಯಕ ರಾಕೇಶ್ ಟಿಕಾಯತ್

Update: 2024-05-24 16:40 GMT

ರಾಕೇಶ್ ಟಿಕಾಯತ್ | PTI  

ನೋಯ್ಡಾ : ಮೇ 25 ಹಾಗೂ ಜೂನ್ 1ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಎರಡು ಅಂತಿಮ ಹಂತದ ಮತದಾನದಲ್ಲಿ ಆಡಳಿತಾರೂಢ ಬಿಜೆಪಿಯ ಅಭ್ಯರ್ಥಿಗಳನ್ನು ಸೋಲಿಸುವ ಸಾಮರ್ಥ್ಯವಿರುವ ಅಭ್ಯರ್ಥಿಗೆ ಮತ ನೀಡಿ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಅವರು ಗುರುವಾರ ಮನವಿ ಮಾಡಿದ್ದಾರೆ.

ರೈತ ಒಕ್ಕೂಟಗಳ ಮಾತೃ ಸಂಸ್ಥೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ)ದ ಭಾಗವಾಗಿರುವ ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ವಕ್ತಾರರಾಗಿರುವ ರಾಕೇಶ್ ಟಿಕಾಯತ್, ಪ್ರಸಕ್ತ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಬಿಜೆಪಿ ಅಲ್ಲ, ಬದಲಾಗಿ ದೇಶವನ್ನು ವಶಪಡಿಸಿಕೊಂಡಿರುವ ಬಂಡವಾಳಶಾಹಿಗಳು ಎಂದಿದ್ದಾರೆ.

ಎಪ್ರಿಲ್ 19ರಂದು ಆರಂಭವಾಗಿರುವ ಲೋಕಸಭಾ ಚುನಾವಣೆಯ ಐದು ಹಂತಗಳು ಈಗಾಗಲೇ ಪೂರ್ಣಗೊಂಡಿವೆ. 10 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಉತ್ತರಪ್ರದೇಶ, ಹರ್ಯಾಣ, ದಿಲ್ಲಿ, ಪಂಜಾಬ್, ಬಿಹಾರ್, ಹಿಮಾಚಲಪ್ರದೇಶ, ಒಡಿಶಾ, ಜಾರ್ಖಂಡ್, ಪಶ್ಚಿಮಬಂಗಾಳ ಹಾಗೂ ಚತ್ತೀಸ್ಗಢಗಳಾದ್ಯಂತದ 100ಕ್ಕೂ ಅಧಿಕ ಕ್ಷೇತ್ರಗಳಿಗೆ ಮೇ 25 ಹಾಗೂ ಜೂನ್ 1ರಂದು ಮತದಾನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

‘‘ಎರಡು ಹಂತಗಳ ಮತದಾನ ಬಾಕಿ ಇದೆ. ಬಿಜೆಪಿಯನ್ನು ಸೋಲಿಸಲು ಸಾಧ್ಯವಿರುವ ಅಭ್ಯರ್ಥಿಗಳಿಗೆ ನೀವು ಮತ ನೀಡಬೇಕು ಎಂದು ಎಸ್ಕೆಎಂ ಸ್ಪಷ್ಟವಾಗಿ ಹೇಳುತ್ತದೆ. ಇದು ಬಿಜೆಪಿ ಸರಕಾರವಲ್ಲ. ಬದಲಾಗಿ ಬಂಡವಾಳಶಾಹಿಗಳ ಗುಂಪಿನ ಸರಕಾರ. ಈ ಗುಂಪು ದೇಶವನ್ನು ವಶಪಡಿಸಿಕೊಂಡಿದೆ ಹಾಗೂ ಈ ಗುಂಪು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಅವರನ್ನು ಯಾರೂ ಬೆಂಬಲಿಸುವುದಿಲ್ಲ’’ ಎಂದು ಟಿಕಾಯತ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.

‘‘ಈ ಚುನಾವಣೆ ಭಾರತದ ಸಾರ್ವಜನಿಕರು ಹಾಗೂ ಈ ಗುಂಪಿನ ನಡುವೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಸಾರ್ವಜನಿಕರು ಸ್ಪರ್ಧಿಸುತ್ತಿದ್ದಾರೆ. ಯಾವುದೇ ಚಿಂತೆಯ ಅಗತ್ಯ ಇಲ್ಲ. ನಿಮ್ಮ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಬಿಜೆಪಿಯನ್ನು ಸೋಲಿಸುತ್ತಾರೆ ಎಂದು ಭಾವಿಸುತ್ತೀರೋ ಅವರಿಗೆ ಮತ ನೀಡಿ’’ ಎಂದು ಟಿಕಾಯತ್ ಹೇಳಿದ್ದಾರೆ.

ನಿರ್ದಿಷ್ಟವಾಗಿ ನಮಗೆ ಯಾರೊಂದಿಗೂ ವೈಯುಕ್ತಿಕ ಭಿನ್ನಾಭಿಪ್ರಾಯವಿಲ್ಲ. ಎಸ್ಕೆಎಂ ಹೇಳುವುದು ಇದನ್ನೇ. ಅದು ಹರ್ಯಾಣ, ದಿಲ್ಲಿ, ಪಂಜಾಬ್, ಉತ್ತರಪ್ರದೇಶ ಅಥವಾ ದೇಶದ ಉಳಿದ ಭಾಗವೇ ಆಗಿರಲಿ, ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಅಭ್ಯರ್ಥಿಗೆ ಮತ ನೀಡಿ ಎಂಬ ಮಾರ್ಗ ಸೂಚಿಯನ್ನು ಮೋರ್ಚಾ ನೀಡಿದೆ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News