ವಯನಾಡ್ | ಭೂಕುಸಿತಗಳಲ್ಲಿ ಬದುಕುಳಿದವರಿಗೆ ರೆಸಾರ್ಟ್,ಮದರಸಾದಲ್ಲಿ ಆಶ್ರಯ

Update: 2024-07-30 22:06 IST
ವಯನಾಡ್ | ಭೂಕುಸಿತಗಳಲ್ಲಿ ಬದುಕುಳಿದವರಿಗೆ ರೆಸಾರ್ಟ್,ಮದರಸಾದಲ್ಲಿ ಆಶ್ರಯ

PC : PTI 

  • whatsapp icon

ವಯನಾಡ್ : ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತಗಳಲ್ಲಿ ಬದುಕುಳಿದವರ ಪೈಕಿ ಸುಮಾರು 200 ಜನರು ರೆಸಾರ್ಟ್ ಮತ್ತು ಮದರಸಾದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ವಿದ್ಯುತ್, ಸಾಕಷ್ಟು ಆಹಾರ ಮತ್ತು ಸ್ವಚ್ಛ ನೀರಿನ ಅಲಭ್ಯತೆ ಸಂತ್ರಸ್ತರನ್ನು ಕಾಡುತ್ತಿದೆ.

‘ಮಳೆ ತೀವ್ರಗೊಳ್ಳುತ್ತಿದ್ದಂತೆ ನಮಗೆ ಎಚ್ಚರಿಕೆಗಳನ್ನು ನೀಡಲಾಗಿತ್ತು ಮತ್ತು ನಸುಕಿನ 1:30ರ ಸುಮಾರಿಗೆ ನಾವು ಮನೆಗಳಿಂದ ಹೊರಬಿದ್ದಿದ್ದೆವು. ಕೆಲವರು ರೆಸಾರ್ಟ್ ತಲುಪಿದ್ದರೆ ಇತರರು ಮದರಸಾದಲ್ಲಿ ಆಶ್ರಯ ಪಡೆದಿದ್ದಾರೆ. ನಮ್ಮೊಂದಿಗೆ ಮಕ್ಕಳು ಮತ್ತು ಅನಾರೋಗ್ಯಪೀಡಿತ ಹಿರಿಯರಿದ್ದಾರೆ. ರೆಸಾರ್ಟ್ನಲ್ಲಿ ನಮಗೆ ಸ್ವಲ್ಪ ಅನ್ನ ನೀಡಲಾಗಿತ್ತು, ಗಂಜಿ ತಯಾರಿಸಲಾಗಿತ್ತು. ಆದರೆ ಇಲ್ಲಿ ಆಹಾರದ ಕೊರತೆಯಿದೆ ’ ಎಂದು ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ರೆಸಾರ್ಟ್ನಲ್ಲಿ ಆಶ್ರಯ ಪಡೆದಿರುವ ಮುಹಮ್ಮದ್ ರಶೀದ್ ಹೇಳಿದರು.

ಭೂಕುಸಿತದಿಂದ ತನ್ನ ಮನೆ ಉಳಿದಿದೆಯೇ ಎನ್ನುವುದು ರಶೀದ್‌ಗೆ ಗೊತ್ತಿಲ್ಲ. ರೆಸಾರ್ಟ್ ಮತ್ತು ಮದರಸಾಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮತ್ತು ರಸ್ತೆ ಹಾನಿಗೊಂಡಿರುವುದರಿAದ ಸಹಾಯ ವಿಳಂಬವಾಗಲಿದೆ ಎಂದರು.

2020ರಲ್ಲಿ ಮುಂಡಕ್ಕೈನಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ್ದಾಗ ನಿವಾಸಿಗಳಲ್ಲಿ ಹಲವರು ಸುರಕ್ಷಿತವೆಂದು ಪರಿಗಣಿಸಲಾಗಿದ್ದ ಎಸ್ಟೇಟ್ ಪ್ರದೇಶಗಳಿಗೆ ತೆರಳಿದ್ದರು. ಆದರೆ ಮಂಗಳವಾರದ ಭೂಕುಸಿತದಿಂದ ಈ ಪ್ರದೇಶವೂ ಸಂಕಷ್ಟಕ್ಕೆ ಸಿಲುಕಿದ್ದು,ಜನರು ಮದರಸಾಕ್ಕೆ ಧಾವಿಸಿದ್ದರು.

ಮುಂಡಕ್ಕೈ ನಿವಾಸಿಗಳೇ ಆಗಿರುವ ರೆಸಾರ್ಟ್ ಮಾಲಿಕರು ಹವಾಮಾನ ಎಚ್ಚರಿಕೆಯಿಂದಾಗಿ ಗ್ರಾಹಕರನ್ನು ಬರಮಾಡಿಕೊಂಡಿರಲಿಲ್ಲ. ಹೀಗಾಗಿ ಖಾಲಿಯಿದ್ದ ರೆಸಾರ್ಟ್ ಸಂತ್ರಸ್ತರ ಪಾಲಿಗೆ ಸುರಕ್ಷಿತ ಸ್ಥಳವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News