ಜನಸಾಮಾನ್ಯರಿಗೆ ನ್ಯಾಯಾಂಗದಲ್ಲಿ ನಂಬಿಕೆಯಿದೆ ಎಂದು ಹೇಳುವ ಹಕ್ಕು ನಮಗಿಲ್ಲ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಓಕಾ‌

Update: 2025-03-27 16:50 IST
Abhay Shreeniwas Oka

ನ್ಯಾಯಾಧೀಶ ಅಭಯ ಎಸ್. ಓಖಾ | PC : The Hindu

  • whatsapp icon

ಹೊಸದಿಲ್ಲಿ: ‘ಇತ್ತೀಚಿನ ವರ್ಷಗಳಲ್ಲಿ ಜನಸಾಮಾನ್ಯರು ನ್ಯಾಯಾಂಗದಲ್ಲಿ ನಂಬಿಕೆ ಹೊಂದಿದ್ದಾರೆ ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವ ಹಕ್ಕು ನಮಗಿಲ್ಲ. ಈ ಮಾತನ್ನು ನಾನಲ್ಲ,ಮುಖ್ಯವಾಗಿ ಸಾರ್ವಜನಿಕರು ಮತ್ತು ಕಕ್ಷಿದಾರರು ಹೇಳಬೇಕಿತ್ತು ’ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಅಭಯ ಎಸ್. ಓಖಾ ಅವರು ಬುಧವಾರ ಇಲ್ಲಿ ಹೇಳಿದರು. ನ್ಯಾಯಾಂಗವು ತನ್ನ ದೋಷಗಳನ್ನು ಒಪ್ಪಿಕೊಳ್ಳಬೇಕು ಮತ್ತು ಟೀಕೆಗಳನ್ನು ಸರಿಯಾದ ಮನೋಭಾವದಿಂದ ಸ್ವೀಕರಿಸಬೇಕು ಎಂದೂ ಅವರು ಒತ್ತಿ ಹೇಳಿದರು.

ವಿಚಾರಣಾ ನ್ಯಾಯಾಲಯಗಳಲ್ಲಿ ದೀರ್ಘಾವಧಿಯಿಂದ ಪ್ರಕರಣಗಳ ಬಾಕಿ, ದೇಶಾದ್ಯಂತ ನ್ಯಾಯಾಂಗ ಮೂಲ ಸೌಕರ್ಯಗಳ ಸ್ಥಿತಿ ಮತ್ತು ಪ್ರಕರಣಗಳು ಇತ್ಯರ್ಥಗೊಳ್ಳುವಲ್ಲಿ ವಿಳಂಬದಿಂದಾಗಿ ವಿಚಾರಣಾಧೀನ ಕೈದಿಗಳು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಕಳವಳಗಳನ್ನೂ ಅವರು ವ್ಯಕ್ತಪಡಿಸಿದರು.

ನ್ಯಾ. ಓಕಾ ಸಂವಿಧಾನದ 75ನೇ ವರ್ಷಾಚರಣೆಯ ಅಂಗವಾಗಿ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಷನ್ ಭಾರತ ಮಂಡಪಮ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ನ್ಯಾಯದ ಲಭ್ಯತೆ ಮತ್ತು ಸಂವಿಧಾನದ 75 ವರ್ಷಗಳು-ನ್ಯಾಯಾಂಗ ಮತ್ತು ನಾಗರಿಕರ ನಡುವಿನ ಅಂತರವನ್ನು ಕಡಿಮೆ ಮಾಡುವುದು’ ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತಿದ್ದರು.

ನ್ಯಾ.ಓಕಾ ಅವರ ಭಾಷಣವು ಅವರ ಅಭಿಪ್ರಾಯದಲ್ಲಿ ಕಳೆದ 75 ವರ್ಷಗಳಲ್ಲಿ ‘ಅಧೀನ’ ಅಥವಾ ‘ಕೆಳ ನ್ಯಾಯಾಲಯ’ಗಳಾಗಿ ನಿರ್ಲಕ್ಷಿಸಲ್ಪಟ್ಟರುವ ವಿಚಾರಣಾ ನ್ಯಾಯಾಲಯಗಳನ್ನು ಕೇಂದ್ರೀಕರಿಸಿತ್ತು.

ವಿಚಾರಣಾ ನ್ಯಾಯಾಲಯಗಳು ಸಾಮಾನ್ಯ ಜನರು ಸಂಪರ್ಕಿಸಬಹುದಾದ ನ್ಯಾಯಾಲಯಗಳಾಗಿವೆ ಮತ್ತು ಈ ನ್ಯಾಯಾಲಯಗಳ ಮುಂದೆ 4.54 ಕೋಟಿ ಪ್ರಕರಣಗಳು ಬಾಕಿಯಿವೆ ಎಂದು ಅವರು ಎತ್ತಿ ತೋರಿಸಿದ ಅವರು,‘ಈ ಪೈಕಿ ಶೇ.25ರಿಂದ 30ರಷ್ಟು ಪ್ರಕರಣಗಳು 10 ವರ್ಷಗಳಷ್ಟು ಹಳೆಯದಾಗಿವೆ. ಸಾಮಾನ್ಯ ಜನರಿಗೆ ನ್ಯಾಯಾಂಗದ ಮೇಲೆ ನಂಬಿಕೆಯಿದೆ ಎಂದು ಈಗಲೂ ನಾವು ನಂಬಬಹುದೇ? ನಾವು ನಮ್ಮ ದೋಷಗಳು ಮತ್ತು ನ್ಯೂನತೆಗಳನ್ನು ಒಪ್ಪಿಕೊಳ್ಳಬೇಕು’ ಎಂದರು. ನ್ಯಾಯಾಂಗ ಮತ್ತು ನಾಗರಿಕರ ನಡುವೆ ಅಂತರ ಎನ್ನುವುದು ಖಂಡಿತವಾಗಿಯೂ ಇದೆ ಎಂದರು.

ನ್ಯಾಯಾಧೀಶರು ಮತ್ತು ಜನಸಂಖ್ಯೆ ಅನುಪಾತವು ನಿಶ್ಚಲವಾಗಿರುವುದು ಪ್ರಕರಣಗಳು ಬಾಕಿ ಉಳಿದಿರುವುದಕ್ಕೆ ಇನ್ನೊಂದು ಪ್ರಮುಖ ಕಾರಣವಾಗಿದೆ ಎಂದು ಹೇಳಿದ ನ್ಯಾ.ಓಕಾ,‘ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸದಿದ್ದರೆ ಸಂವಿಧಾನದ 100 ವರ್ಷಗಳನ್ನು ಪೂರೈಸಿದ ಬಳಿಕವೂ ನಾವು ಬಾಕಿಯಿರುವ ಪ್ರಕರಣಗಳ ಬಗ್ಗೆ ಮಾತನಾಡುತ್ತಲೇ ಇರಬಹುದು. ಹುದ್ದೆಗಳ ಸೃಷ್ಟಿಯೊಂದೇ ಸಾಲುವುದಿಲ್ಲ,ನಮಗೆ ನ್ಯಾಯಾಲಯಗಳು, ಸಿಬ್ಬಂದಿಗಳು, ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳ ಅಗತ್ಯವೂ ಇದೆ. ಮಾಡಬೇಕಾದ್ದು ಬಹಳಷ್ಟಿದೆ ’ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News