ಪಶ್ಚಿಮ ಬಂಗಾಳ | ಚುನಾವಣೋತ್ತರ ಹಿಂಸಾಚಾರ ; ಬಿಜೆಪಿ ಕಾರ್ಯಕರ್ತನ ಗುಂಡಿಕ್ಕಿ ಹತ್ಯೆ

Update: 2024-06-02 15:43 GMT

ಸಾಂದರ್ಭಿಕ ಚಿತ್ರ

ಕೋಲ್ಕತಾ : ಪಶ್ಚಿಮಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಚುನಾವಣೋತ್ತರ ಹಿಂಸಾಚಾರದ ಸಂದರ್ಭ ಗುಂಪೊಂದು ಬಿಜೆಪಿ ಕಾರ್ಯಕರ್ತನನ್ನು ಹತ್ಯೆಗೈದಿದೆ.

ಈ ಹತ್ಯೆಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಈ ಹತ್ಯೆ ಕೌಟುಂಬಿಕ ದ್ವೇಷದ ಕಾರಣಕ್ಕೆ ನಡೆದಿದೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.

ಜಿಲ್ಲೆಯ ಉತ್ತರ ಭಾಗದ ಕಾಲಿಗಂಜ್‌ನಲ್ಲಿ ಬಿಜೆಪಿ ಕಾರ್ಯಕರ್ತ ಹಾಫಿಝುರ್ ಶೇಖ್, ಇತರರೊಂದಿಗೆ ಶನಿವಾರ ರಾತ್ರಿ ಕೇರಂ ಆಡುತ್ತಿರುವ ಸಂದರ್ಭ ಈ ಹತ್ಯೆನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೋಟಾರು ಸೈಕಲ್‌ನಲ್ಲಿ ಆಗಮಿಸಿದ 10ರಿಂದ 12 ಮಂದಿ ಶೇಖ್ ಅವರ ಮೇಲೆ ಗುಂಡುಹಾರಿಸಿದರು ಹಾಗೂ ಅನಂತರ ಅವರನ್ನು ಇರಿದರು. ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ಅವರು ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಸ್ಥಳೀಯರು 2 ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದರು. ಅಲ್ಲದೆ, ಮೃತದೇಹವನ್ನು ಕೊಂಡೊಯ್ಯಲು ಅವಕಾಶ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ಸಮಯದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಯಿತು.

ತಮ್ಮ ಪಕ್ಷದ ಕಾರ್ಯಕರ್ತ ಹಾಫಿಝುರ್ ಶೇಖ್ ಅವರನ್ನು ತೃಣಮೂಲ ಕಾಂಗ್ರೆಸ್‌ನ ಗೂಂಡಾಗಳು ಹತ್ಯೆಗೈದಿದ್ದಾರೆ ಎಂದು ಬಿಜೆಪಿಯ ಉತ್ತರ ನಾಡಿಯಾ ಘಟಕದ ಅಧ್ಯಕ್ಷ ಅರ್ಜುನ್ ಬಿಸ್ವಾಸ್ ಆರೋಪಿಸಿದ್ದಾರೆ.

ಈ ಹತ್ಯೆಗೆ ಕೌಟುಂಬಿಕ ದ್ವೇಷ ಕಾರಣ. ತೃಣ ಮೂಲ ಕಾಂಗ್ರೆಸ್‌ನ ಯಾವುದೇ ಪಾತ್ರ ಇಲ್ಲ ಎಂದು ತೃಣಮೂಲ ಕಾಂಗ್ರೆಸ್‌ನ ಜಿಲ್ಲಾ ನಾಯಕ ರುಕ್ಬನೂರ್ ರೆಹ್ಮಾನ್ ಹೇಳಿದ್ದಾರೆ.

ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಹಾಫಿಝುರ್ ಶೇಖ್ ಅವರ ಕುಟುಂಬ ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News