ಪಶ್ಚಿಮ ಬಂಗಾಳ | ರಾಜ್ಯಪಾಲರಿಂದ ಕಿರುಕುಳ ಆರೋಪ ಕುರಿತು ರಾಷ್ಟ್ರಪತಿಗೆ ಪತ್ರ ಬರೆಯಲಿದ್ದೇನೆ: ಸಂತ್ರಸ್ತ ಮಹಿಳೆ

Update: 2024-05-10 17:04 GMT

ಸಿ.ವಿ. ಆನಂದ್ ಬೋಸ್ | PC : PTI 

ಕೋಲ್ಕತಾ: ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ಅವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ಪಶ್ಚಿಮ ಬಂಗಾಳದ ರಾಜ್ಯಪಾಲರ ಭವನದ ಮಹಿಳಾ ಗುತ್ತಿಗೆ ಉದ್ಯೋಗಿ, ಈ ವಿಷಯದ ಕುರಿತಂತೆ ಮಧ್ಯೆ ಪ್ರವೇಶಿಸಲು ತಾನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆಯಲಿದ್ದೇನೆ ಎಂದು ಶುಕ್ರವಾರ ಹೇಳಿದ್ದಾರೆ.

ರಾಜ್ಯಪಾಲರು ತನ್ನ ವಿರುದ್ಧದ ಕಿರುಕುಳ ಆರೋಪದಿಂದ ಹೊರ ಬರುವ ಪ್ರಯತ್ನವಾಗಿ ರಾಜ ಭವನದ ಹಲವು ಸಿಸಿಟಿವಿ ದೃಶ್ಯಾವಳಿಗಳನ್ನು ಪ್ರದರ್ಶಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.

ತನ್ನ ಮುಖವನ್ನು ಮಸುಕುಗೊಳಿಸದೆ, ಎಡಿಟ್ ಮಾಡದೆ ವೀಡಿಯೊ ದೃಶ್ಯಾವಳಿಯನ್ನು ಪ್ರದರ್ಶಿಸುವ ಮೂಲಕ ರಾಜ್ಯಪಾಲರು ಇನ್ನೊಂದು ಅಪರಾಧ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ರಾಜ್ಯಪಾಲ ಬೋಸ್ ಅವರು ಸಾಂವಿಧಾನಿಕ ರಕ್ಷಣೆ ಪಡೆಯುತ್ತಿರುವುದರಿಂದ ಕೋಲ್ಕತ್ತಾ ಪೊಲೀಸರ ಕೈ ಕಟ್ಟಿ ಹಾಕಿದಂತಾಗಿದೆ. ಆದುದರಿಂದ ಅವರ ಕುರಿತು ನಿರೀಕ್ಷೆ ಇರಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಮಹಿಳೆ, ತಾನು ಇದರಿಂದಾಗಿ ತೀವ್ರ ಖನ್ನತೆಗೆ ಒಳಗಾಗಿದ್ದೇನೆ ಹಾಗೂ ರಾಷ್ಟ್ರಪತಿ ಅವರಿಗೆ ಪತ್ರ ಬರೆಯುವುದು ನ್ಯಾಯ ಪಡೆಯುವ ಏಕೈಕ ಮಾರ್ಗ ಎಂದು ಭಾವಿಸಿದ್ದೇನೆ ಎಂದಿದ್ದಾರೆ.

‘‘ಸಾಂವಿಧಾನಿಕ ರಕ್ಷಣೆ ಪಡೆಯುತ್ತಿರುವುದರಿಂದ ಹಾಲಿ ರಾಜ್ಯಪಾಲರಿಗೆ ಏನೂ ಆಗುವುದಿಲ್ಲ. ಆದರೆ, ಅವರು ಎಸಗಿದ ಅಪರಾಧ ? ಈ ವಿಷಯದ ಕುರಿತು ಮಧ್ಯಪ್ರವೇಶಿಸಲು ಕೋರಿ ರಾಷ್ಟ್ರಪತಿ ಅವರಿಗೆ ಪತ್ರ ಬರೆಯಲು ನಾನು ನಿರ್ಧರಿಸಿದ್ದೇನೆ’’ ಎಂದು ಅವರು ತಿಳಿಸಿದ್ದಾರೆ.

ವೀಡಿಯೊದ ಮೂಲಕ ತನ್ನ ಗುರುತನ್ನು ಬಹಿರಂಗಪಡಿಸಿರುವ ರಾಜ್ಯಪಾಲರ ವಿರುದ್ಧ ತಾನು ಪೊಲೀಸರನ್ನು ಕೂಡ ಸಂಪರ್ಕಿಸಲಿದ್ದೇನೆ ಎಂದು ಅವರು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News