ಪ್ಲೇ ಆಫ್ ರೇಸ್ ನಲ್ಲಿರುವ ಆರ್ ಸಿ ಬಿ ಮುಂದಿರುವ ಸವಾಲುಗಳೇನು?
ಹೊಸದಿಲ್ಲಿ: ಬೆಂಗಳೂರಿನಲ್ಲಿ ರವಿವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್ ಗಳ ಅಂತರದಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿ ಬಿ)ತಂಡ ಈ ಋತುವಿನಲ್ಲಿ ಸತತ 5ನೇ ಜಯ ದಾಖಲಿಸಿದ್ದಲ್ಲದೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು. ಆರ್ ಸಿ ಬಿ ಗೆಲುವಿನೊಂದಿಗೆ ಪ್ರಸಕ್ತ ಐಪಿಎಲ್ ನಲ್ಲಿ ಪ್ಲೇ ಆಫ್ ಸ್ಫರ್ಧೆಯಲ್ಲಿ ಅನಿರೀಕ್ಷಿತ ತಿರುವು ಲಭಿಸಿದೆ. ಪ್ಲೆಸಿಸ್ ಪಡೆ ನಾಕೌಟ್ ಹಂತಕ್ಕೇರುವ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.
ಆರ್ ಸಿ ಬಿ ಭರ್ಜರಿ ಜಯದೊಂದಿಗೆ 13 ಪಂದ್ಯಗಳಲ್ಲಿ 12 ಅಂಕ ಗಳಿಸಿದ್ದು +0.387 ನೆಟ್ ರನ್ ರೇಟ್ ಗಳಿಸಿದೆ. ಆರ್ ಸಿ ಬಿ ಮೇ 18 ರಂದು ಬೆಂಗಳೂರಿನಲ್ಲಿ ನಡೆಯುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸಲಿದೆ. ಉಭಯ ತಂಡಗಳ ಪಾಲಿಗೆ ಈ ಪಂದ್ಯವು ನಾಕೌಟ್ ಸ್ಪರ್ಧೆಯಾಗಿದೆ. ಇದರಲ್ಲಿ ಜಯ ಸಾಧಿಸುವ ತಂಡ ಪ್ಲೇ ಆಫ್ ಗೆ ತೇರ್ಗಡೆಯಾಗಲಿದ್ದು, ಸೋಲು ಕಾಣುವ ತಂಡವು ನಾಕೌಟ್ ಸ್ಪರ್ಧೆಯಿಂದ ನಿರ್ಗಮಿಸಲಿದೆ.
ಸಿಎಸ್ಕೆ ಸದ್ಯ 13 ಪಂದ್ಯಗಳಲ್ಲಿ 7ರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ನೆಟ್ ರನ್ ರೇಟ್ +0.528 ಇದೆ. ಸನ್ರೈಸರ್ಸ್ ಹೈದರಾಬಾದ್ 12 ಪಂದ್ಯಗಳಲ್ಲಿ 7ರಲ್ಲಿ ಜಯ ಸಾಧಿಸಿ 14 ಅಂಕ ಗಳಿಸಿದ್ದು ಇನ್ನೂ ಎರಡು ಪಂದ್ಯ ಆಡಲು ಬಾಕಿ ಇದೆ. ನೆಟ್ ರನ್ ರೇಟ್ +0.406 ಇದೆ.
ಸನ್ರೈಸರ್ಸ್ ಹೈದರಾಬಾದ್ ತಂಡ ತನ್ನ ಕೊನೆಯ 2 ಲೀಗ್ ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳನ್ನು ಎದುರಿಸಲಿದೆ. ಈ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಜಯ ಸಾಧಿಸಿದರೂ ಸನ್ರೈಸರ್ಸ್ ತಂಡವು ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಲಿದೆ. ಈಗಾಗಲೇ 14 ಅಂಕ ಗಳಿಸಿರುವ ಸನ್ರೈಸರ್ಸ್ ಉತ್ತಮ ರನ್ರೇಟ್ ಕಾಯ್ದುಕೊಂಡಿದೆ.
ಲಕ್ನೊ ಸೂಪರ್ ಜಯಂಟ್ಸ್ ಕೂಡ ಪ್ರಬಲ ಸ್ಪರ್ಧಿಯಾಗಿದೆ. ಆದರೆ ಅದರ ನೆಟ್ ರನ್ ರೇಟ್ ಅತ್ಯಂತ ಕಳಪೆ(-0.769)ಯಾಗಿದ್ದು ಉಳಿದಿರುವ 2 ಪಂದ್ಯಗಳನ್ನು ಗೆಲ್ಲಲೇಬೇಕಾದ ಅಗತ್ಯವಿದೆ.
ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ಲೇ ಆಫ್ ರೇಸ್ನಿಂದ ಬಹುತೇಕ ಹೊರಗುಳಿದಿದ್ದು, ಗರಿಷ್ಠ 14 ಅಂಕದೊಂದಿಗೆ ಲೀಗ್ ಹಂತದ ಅಭಿಯಾನವನ್ನು ಅಂತ್ಯಗೊಳಿಸುವ ಸಾಧ್ಯತೆಯಿದೆ.
► ಐಪಿಎಲ್-2024ರ ಪ್ಲೇ ಆಫ್ ಗೆ ಆರ್ ಸಿ ಬಿ ಹೇಗೆ ಅರ್ಹತೆ ಪಡೆಯಬಹುದು?
ಆರ್ ಸಿ ಬಿ ಪ್ಲೇ ಆಫ್ ಗೆ ತೇರ್ಗಡೆಯಾಗುವ ಸನ್ನಿವೇಶ ನಿರ್ಮಾಣವಾಗಬೇಕಾದರೆ ಸನ್ರೈಸರ್ಸ್ ಹೈದರಾಬಾದ್ ತಂಡ ಒಂದು ಅಥವಾ ಎರಡೂ ಪಂದ್ಯಗಳನ್ನು ಜಯಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಬೇಕು ಹಾಗೂ ಲಕ್ನೊ ಸೂಪರ್ ಜಯಂಟ್ಸ್ ಒಂದಕ್ಕಿಂತ ಹೆಚ್ಚು ಪಂದ್ಯ ಗೆಲ್ಲಬಾರದು. ಐಪಿಎಲ್ ಪ್ಲೇ ಆಫ್ನ 4ನೇ ಹಾಗೂ ಅಂತಿಮ ಸ್ಥಾನವು ಸಿಎಸ್ಕೆ ಹಾಗೂ ಆರ್ ಸಿ ಬಿ ನಡುವಿನ ಪಂದ್ಯದಲ್ಲಿ ನಿರ್ಣಯವಾಗುತ್ತದೆ. ಈ ಸ್ಪರ್ಧೆಯು ಪ್ಲೇ ಆಫ್ ರೇಸ್ನಲ್ಲಿ ಎಲಿಮಿನೇಟರ್ ಆಗಲಿದೆ.
ಆರ್ ಸಿ ಬಿ ತಂಡ ಸಿಎಸ್ಕೆ ರನ್ರೇಟ್ ಅನ್ನು ಮೀರಿಸಬೇಕಾದರೆ 18 ಅಥವಾ ಅದಕ್ಕಿಂತ ಹೆಚ್ಚು ರನ್ನಿಂದ ಮಣಿಸಬೇಕು. ರನ್ ಚೇಸ್ ವೇಳೆ 11 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಬೇಕು.