ಮೋದಿ ಸರಕಾರವು ಕರ್ನಾಟಕದ ನರೇಗಾ ಕಾರ್ಮಿಕರ ವೇತನಗಳನ್ನು ಯಾವಾಗ ಪಾವತಿಸಲಿದೆ? : ಕಾಂಗ್ರೆಸ್

Update: 2024-04-29 16:11 GMT

ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ: ಕರ್ನಾಟಕದ ಪ್ರಮುಖ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಅದು ರಾಜ್ಯದ ನರೇಗಾ ಕಾರ್ಮಿಕರ ವೇತನಗಳನ್ನು ಯಾವಾಗ ಪಾವತಿಸಲಿದೆ ಎಂದು ಪ್ರಶ್ನಿಸಿದೆ.

ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ್‌ ಅವರು ಸೋಮವಾರ ಬಾಗಲಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರ‍್ಯಾಲಿಗೆ ಮುನ್ನ ಅವರ ಮುಂದೆ ಪ್ರಶ್ನೆಗಳನ್ನಿರಿಸಿದ್ದಾರೆ.

ಬಾಗಲಕೋಟೆ-ಕುಡಚಿ ನಡುವೆ ರೈಲು ಮಾರ್ಗವನ್ನು ಒದಗಿಸುವಲ್ಲಿ ಮೋದಿ ಸರಕಾರವು ವಿಫಲಗೊಂಡಿದ್ದೇಕೆ? ಮಹಾದಾಯಿ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳನ್ನು ಮೋದಿ ಸರಕಾರವು ತಡೆಹಿಡಿದಿರುವುದೇಕೆ? ಪ್ರಧಾನಿಯವರು ಕರ್ನಾಟಕದ ನರೇಗಾ ಕಾರ್ಮಿಕರಿಗೆ ವೇತನಗಳನ್ನು ನೀಡುವುದು ಯಾವಾಗ ಎಂದು ರಮೇಶ್‌ ತನ್ನ ಎಕ್ಸ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಮೋದಿಯವರ ಸುಳ್ಳುಗಳನ್ನು ಪಟ್ಟಿ ಮಾಡಿರುವ ರಮೇಶ್‌, ನೈಋತ್ಯ ರೈಲ್ವೆಯ ಬಾಗಲಕೋಟೆ-ಕುಡಚಿ ರೈಲು ಮಾರ್ಗ ನಿರ್ಮಾಣದಲ್ಲಿ ಎಂಟು ವರ್ಷಗಳಿಗೂ ಅಧಿಕ ವಿಳಂಬವಾಗಿದೆ. ಸದ್ಯಕ್ಕೆ ಕೇವಲ ಶೇ.33ರಷ್ಟು, ಅಂದರೆ 142 ಕಿ.ಮೀ.ಮಾರ್ಗದ ಪೈಕಿ 46 ಕಿ.ಮೀ.ಮಾರ್ಗವಷ್ಟೇ ಕಾಮಗಾರಿ ಪೂರ್ಣಗೊಂಡಿದೆ. 986 ಕೋ.ರೂ.ವೆಚ್ಚದ ಯೋಜನೆಗೆ 2010-11ರಲ್ಲಿ ಮಂಜೂರಿಯನ್ನು ನೀಡಲಾಗಿತ್ತು, ಇದೀಗ ವೆಚ್ಚವು 1,649 ಕೋ.ರೂ.ಗೇರಿದೆ. 2016, ಮಾರ್ಚ್‌ನಲ್ಲಿ ಪೂರ್ಣಗೊಳ್ಳಬೇಕಿದ್ದ ಯೋಜನೆಯು ಈಗ 2017ರಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ. ಕರ್ನಾಟಕ ಸರಕಾರವು ಯೋಜನೆಗಾಗಿ ಭೂಮಿಯನ್ನು ಉಚಿತವಾಗಿ ನೀಡಿದೆ. ಯೋಜನೆಯ ಶೇ.50ರಷ್ಟು ವೆಚ್ಚವನ್ನೂ ಭರಿಸುತ್ತಿದೆ. ಆದರೂ ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ಮೋದಿ ಸರಕಾರವು ವಿಫಲಗೊಂಡಿದೆ ಎಂದು ಹೇಳಿದ್ದಾರೆ.

ಈ ಪ್ರಮುಖ ರೈಲ್ವೆ ಯೋಜನೆಯು 11 ವರ್ಷಗಳಷ್ಟು ವಿಳಂಬಗೊಂಡಿರುವುದು ಏಕೆ? ಮೋದಿ ಸರಕಾರದ ಅಸಮರ್ಥತೆ ಅಥವಾ ಅದರ ಕರ್ನಾಟಕ ವಿರೋಧಿ ಧೋರಣೆ ಇದಕ್ಕೆ ಕಾರಣವೇ ಎಂದೂ ರಮೇಶ್‌ ಪ್ರಶ್ನಿಸಿದ್ದಾರೆ.

ಮೋದಿ ಸರಕಾರವು ಕಳೆದ ವರ್ಷದ ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋ.ರೂ.ಗಳ ಅನುದಾನವನ್ನು ಪ್ರಕಟಿಸಿತ್ತು,ಆದರೆ ಒಂದು ವರ್ಷ ಕಳೆದಿದ್ದರೂ ಈ ಅನುದಾನದಲ್ಲಿ ಒಂದೇ ಒಂದು ಪೈಸೆಯನ್ನೂ ಬಿಡುಗಡೆ ಮಾಡಿಲ್ಲ ಎಂದು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಬಹಿರಂಗಗೊಳಿಸಿದ್ದಾರೆ ಎಂದು ರಮೇಶ್‌ ತನ್ನ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ತನ್ನ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮೋದಿಯವರು ಮಹಾದಾಯಿ-ಕಳಸಾ ಬಂಡೂರಿ ನಾಲಾ ಯೋಜನೆಯಲ್ಲಿನ ದೀರ್ಘಕಾಲಿಕ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದಾಗ್ಯೂ ಈ ವರ್ಷದ ಆರಂಭದಲ್ಲಿ ಕೇಂದ್ರ ಪರಿಸರ, ಅರಣ್ಯಗಳು ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಯೋಜನೆಗೆ ಅನುಮತಿ ನೀಡುವುದನ್ನು ಮುಂದೂಡಿದೆ ಎಂದು ಹೇಳಿರುವ ರಮೇಶ್‌, ತೀವ್ರ ಬರದಿಂದ ತತ್ತರಿಸಿರುವ ರಾಜ್ಯದಲ್ಲಿ ಕುಡಿಯುವ ನೀರು ಪೂರೈಕೆ ಮತ್ತು ನೀರಾವರಿಗೆ ಈ ಯೋಜನೆಗಳು ಮಹತ್ವದ್ದಾಗಿವೆ. ಮೋದಿ ಸರಕಾರವು ಇಂತಹ ಅಗತ್ಯ ಮೂಲಸೌಕರ್ಯ ಯೋಜನೆಗಳನ್ನು ನಿರ್ಲಕ್ಷಿಸಿರುವುದೇಕೆ? ಕರ್ನಾಟಕದ ಜನತೆಯ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಯಾಕಿಷ್ಟು ದ್ವೇಷ ಎಂದು ಪ್ರಶ್ನಿಸಿದ್ದಾರೆ.

ಬರದ ದವಡೆಯಲ್ಲಿರುವ ಕರ್ನಾಟಕದ ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸಲು ನರೇಗಾ ಯೋಜನೆಯಡಿ ಕೆಲಸದ ದಿನಗಳನ್ನು 100ರಿಂದ 150ಕ್ಕೆ ಹೆಚ್ಚಿಸುವಂತೆ ರಾಜ್ಯ ಸರಕಾರವು ಮನವಿ ಮಾಡಿಕೊಂಡಿದೆ. ಬರದ ಅವಧಿಯಲ್ಲಿ ಕೆಲಸದ ದಿನಗಳನ್ನು ಹೆಚ್ಚಿಸಲು ಕಾಯ್ದೆಯಡಿ ಅವಕಾಶವಿದ್ದರೂ ಮೋದಿ ಸರಕಾರವು ಯೋಜನೆಯ ವಿಸ್ತರಣೆಯಲ್ಲಿ ವಿಫಲಗೊಂಡಿದ್ದು ಮಾತ್ರವಲ್ಲ, ನರೇಗಾ ಕಾರ್ಮಿಕರಿಗೆ ವೇತನಕ್ಕಾಗಿ 1,600 ಕೋ.ರೂ.ಗಳನ್ನು ಬಿಡುಗಡೆ ಮಾಡುವಲ್ಲಿಯೂ ಅದು ವಿಫಲಗೊಂಡಿದೆ ಎಂದು ರಮೇಶ್‌ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News