ʼರಾಘವ್ ಚಡ್ಡಾ ಎಲ್ಲಿ?ʼ: ಅರವಿಂದ್ ಕೇಜ್ರಿವಾಲ್ ಬಂಧನದ ಬಳಿಕ ಶರದ್ ಪವಾರ್ ಬಣ ಪ್ರಶ್ನೆ
ಹೊಸ ದಿಲ್ಲಿ: ದಿಲ್ಲಿ ಅಬಕಾರಿ ನೀತಿಯಲ್ಲಿ ಬಂಧನಕ್ಕೀಡಾಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸದ್ಯ ಜಾರಿ ನಿರ್ದೇಶನಾಲಯದ ವಶದಲ್ಲಿದ್ದರೂ, ಆಪ್ ನಾಯಕ ಹಾಗೂ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಅನುಪಸ್ಥಿತಿ ಕುರಿತು ಶನಿವಾರ ಎನ್‌ಸಿಪಿ (ಶರದ್ ಪವಾರ್) ನಾಯಕ ಜಿತೇಂದ್ರ ಔಹಾದ್ ಪ್ರಶ್ನೆಯೆತ್ತಿದ್ದಾರೆ.
ಗಮನಾರ್ಹ ಸಂಗತಿಯೆಂದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ರಚನೆಯಾಗಿರುವ ವಿರೋಧ ಪಕ್ಷಗಳ ನೇತೃತ್ವದ ಇಂಡಿಯಾ ಮೈತ್ರಿಕೂಟದಲ್ಲಿ ಎನ್‌ಸಿಪಿ (ಶರದ್ ಪವಾರ್) ಹಾಗೂ ಆಮ್ ಆದ್ಮಿ ಪಕ್ಷಗಳೂ ಭಾಗಿಯಾಗಿವೆ.
ಸದ್ಯ, ಅಳಿಸಿ ಹಾಕಿರುವ ಎಕ್ಸ್ ಫೋಸ್ಟ್ ನಲ್ಲಿ, “ರಾಘವ್ ಚಡ್ಡಾ ಎಲ್ಲಿ?” ಎಂದು ಔಹಾದ್ ಪ್ರಶ್ನಿಸಿದ್ದರು.
ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಔಹಾದ್, ರಾಘವ್ ಚಡ್ಡಾರ ಅನುಮಾನಾಸ್ಪದ ಗೈರಿನ ಕುರಿತು ಪ್ರಶ್ನಿಸುವುದಕ್ಕೂ ಮುನ್ನ, ಅತಿಶಿಯಂಥ ನಾಯಕರ ಸಕ್ರಿಯ ಹಾಜರಾತಿ ಕಡೆ ಬೊಟ್ಟು ಮಾಡಿದರು.
ಚಡ್ಡಾ ಬುದ್ಧಿವಂತ ಹಾಗೂ ಶ್ಲಾಘನೀಯ ನಾಯಕರಾಗಿದ್ದು, ಅವರ ಗೈರು ಆಪ್ ಕಾರ್ಯಕರ್ತರಿಗೆ ನೋವನ್ನುಂಟು ಮಾಡುತ್ತದೆ ಎಂದು ಅವರು ವ್ಯಾಖ್ಯಾನಿಸಿದರು.
ರಾಘವ್ ಛಡ್ಡಾ ಸದ್ಯ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ತಮ್ಮ ಪತ್ನಿ ಪರಿನೀತಿ ಚೋಪ್ರಾರೊಂದಿಗೆ ಲಂಡನ್ ನಲ್ಲಿದ್ದಾರೆ.