ವಯನಾಡ್ ಬೈಲಿ ಸೇತುವೆ ನಿರ್ಮಾಣದ ಹಿಂದಿರುವ ʼಲೇಡಿ ಟೈಗರ್ʼ ಸೇನಾಧಿಕಾರಿ ಮೇಜರ್ ಸೀತಾ ಶೆಲ್ಕೆ ಯಾರು?

Update: 2024-08-03 15:12 GMT

PC : X 

ವಯನಾಡ್ : ಭೂ ಕುಸಿತದಿಂದ ತತ್ತರಿಸಿ ಹೋಗಿರುವ ವಯನಾಡ್ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಮುಂದುವರಿದಿದ್ದು, ಈ ನಡುವೆ ಬೈಲಿ ಸೇತುವೆ ನಿರ್ಮಾಣದ ಮೇಲುಸ್ತುವಾರಿ ವಹಿಸಿದ್ದ ಸೇನಾಧಿಕಾರಿಯೊಬ್ಬರು ತಮ್ಮ ಸೇವೆಗಾಗಿ ಅಪಾರ ಪ್ರಶಂಸೆಗೊಳಗಾಗಿದ್ದಾರೆ.

ಜುಲೈ 30ರಂದು ಸಂಭವಿಸಿದ ಭೂ ಕುಸಿತದಿಂದಾಗಿ ಚೂರಲ್ ಮಲ ಹಾಗೂ ಮುಂಡಕ್ಕೈ ಕುಗ್ರಾಮಗಳು ಮುಖ್ಯ ಭೂಪ್ರದೇಶದಿಂದ ಅಕ್ಷರಶಃ ಸಂಪರ್ಕ ಕಡಿದುಕೊಂಡಿದ್ದವು. ಭೂ ಕುಸಿತದ ಸಂದರ್ಭದಲ್ಲಿ ಈ ಕುಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯೊಂದು ಕೊಚ್ಚಿಕೊಂಡು ಹೋಗಿದ್ದದ್ದು ಇದಕ್ಕೆ ಕಾರಣ. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ತೊಡಕುಂಟಾಗಿತ್ತು.


 



ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ 31 ಗಂಟೆಗಳ ಕಾಲ ಯಾವುದೇ ವಿರಾಮವಿಲ್ಲದೆ 190 ಅಡಿ ಉದ್ದದ ಸೇತುವೆ ನಿರ್ಮಾಣದ ಉಸ್ತುವಾರಿ ವಹಿಸಿದ್ದು ಓರ್ವ ಮಹಿಳಾ ಸೇನಾಧಿಕಾರಿ. ಬೆಂಗಳೂರಿನ ಮದ್ರಾಸ್ ಸ್ಯಾಪರ್ಸ್ ಎಂದೂ ಕರೆಯಲಾಗುವ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ನ 70 ಮಂದಿ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿಗಳ ಪೈಕಿ ಇದ್ದದ್ದು ಕೇವಲ ಓರ್ವ ಮಹಿಳಾ ಸೇನಾಧಿಕಾರಿ ಮಾತ್ರ. ಯುದ್ಧಗಳ ಸಂದರ್ಭದಲ್ಲಿ ಸೇನೆಗೆ ದಾರಿ ನಿರ್ಮಿಸಿಕೊಡುವ, ಸೇತುವೆ ನಿರ್ಮಾಣ ಮಾಡುವ ಹಾಗೂ ಯುದ್ಧಪೀಡಿತ ಪ್ರದೇಶಗಳಲ್ಲಿ ನೆಲ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸುವ ಮಹತ್ವದ ಜವಾಬ್ದಾರಿಯನ್ನು ಈ ಗುಂಪಿನ ಯೋಧರು ನಿರ್ವಹಿಸುತ್ತಾರೆ. ಅಲ್ಲದೆ ಈ ಗುಂಪು ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲೂ ತೊಡಗಿಕೊಳ್ಳುತ್ತದೆ. ತೀರಾ ಇತ್ತೀಚೆಗೆ 2018ರಲ್ಲಿ ಕೇರಳದಲ್ಲಿ ಸಂಭವಿಸಿದ್ದ ಪ್ರವಾಹದ ಸಂದರ್ಭದಲ್ಲಿ ಈ ತಂಡವು ಕ್ರಿಯಾಶೀಲವಾಗಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತ್ತು.

ಇಂತಹ ತಂಡವು ಬೈಲಿ ಸೇತುವೆ ನಿರ್ಮಾಣದಲ್ಲಿ ತೊಡಗಿದ್ದಾಗ, ಅದರ ಉಸ್ತುವಾರಿ ವಹಿಸಿದ್ದ ಏಕೈಕ ಮಹಿಳಾ ಸೇನಾಧಿಕಾರಿ ಮೇಜರ್ ಸೀತಾ ಶೆಲ್ಕೆ. ಮಹಾರಾಷ್ಟ್ರದ ಅಹ್ಮದ್ ನಗರ್ ನವರಾದ ಮೇಜರ್ ಸೀತಾ ಶೆಲ್ಕೆ 2012ರಲ್ಲಿ ಸೇನೆಯನ್ನು ಸೇರ್ಪಡೆಯಾಗಿದ್ದರು. ಅವರು ಚೆನ್ನೈ ಒಟಿಎನಲ್ಲಿ ತಮ್ಮ ತರಬೇತಿ ಪೂರೈಸಿದ್ದರು. ಇಂತಹ ಮೇಜರ್ ಶೆಲ್ಕೆ ನಿರ್ಮಾಣ ಹಂತದಲ್ಲಿರುವ ಸೇತುವೆಯ ಮೇಲೆ ನಿಂತಿರುವ ಚಿತ್ರಗಳು ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಆ ಮೂಲಕ ಎಲ್ಲ ಬಗೆಯ ಲಿಂಗ ಪೂರ್ವಗ್ರಹವನ್ನು ಪುಡಿಗಟ್ಟಿದೆ.

ಮೇಜರ್ ಸೀತಾ ಶೆಲ್ಕೆ ಅವರ ಚಿತ್ರವನ್ನು ಹಂಚಿಕೊಂಡಿರುವ ಓರ್ವ ಬಳಕೆದಾರರು, “ಮೇಜರ್ ಸೀತಾ ಶೆಲ್ಕೆ ಹಾಗೂ ಇಂಜಿನಿಯರ್ ರೆಜಿಮೆಂಟ್ ಬಗ್ಗೆ ನಮಗೆ ಹೆಮ್ಮೆಯಾಗುತ್ತಿದೆ. ಕೇವಲ 31 ಗಂಟೆಯೊಳಗೆ ವಯನಾಡ್ ನ ಬೈಲಿ ಸೇತುವೆಯನ್ನು ಯಶಸ್ವಿಯಾಗಿ ನಿರ್ಮಿಸಿರುವುದು ನಿಜಕ್ಕೂ ಅದ್ಭುತ!” ಎಂದು ಶ್ಲಾಘಿಸಿದ್ದಾರೆ.

ಇದಲ್ಲದೆ, ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ ಮೇಜರ್ ಸೀತಾ ಶೆಲ್ಕೆಯನ್ನು ‘ಲೇಡಿ ಟೈಗರ್’ ಎಂದು ಸ್ಥಳೀಯ ಮಾಧ್ಯಮಗಳು ಪ್ರಶಂಸಿಸಿವೆ.

ಮೇಜರ್ ಶಲ್ಕೆ ವಯನಾಡ್ ರಕ್ಷಣಾ ಕಾರ್ಯಾಚರಣೆಯಲ್ಲಿ ತೋರಿರುವ ಅದ್ವಿತೀಯ ಬದ್ಧತೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಅವರ ಮೇಲುಸ್ತುವಾರಿಯಲ್ಲಿ ನಿರ್ಮಾಣಗೊಂಡಿರುವ ಬೈಲಿ ಸೇತುವೆ, ನೂತನ ಸೇತುವೆ ನಿರ್ಮಾಣಗೊಳ್ಳುವವರೆಗೂ ಅಲ್ಲಿಯೇ ಉಳಿಯಲಿದೆ ಎಂದು ಭಾರತೀಯ ಸೇನೆ ಘೋಷಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News