ಬಡವರು ದೇಶದಲ್ಲಿಯ ಏಕೈಕ ಜಾತಿಯಾಗಿದ್ದಾರೆ ಎನ್ನುವ ಪ್ರಧಾನಿ ಮೋದಿ ತನ್ನನ್ನು ಒಬಿಸಿ ಎಂದು ಹೇಳಿಕೊಳ್ಳುವುದೇಕೆ?: ರಾಹುಲ್ ಗಾಂಧಿ ಪ್ರಶ್ನೆ

Update: 2023-11-04 16:11 GMT

ರಾಹುಲ್ ಗಾಂಧಿ Photo- PTI

ಜಗದಾಲಪುರ (ಛತ್ತೀಸ್‌ಗಡ): ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಶನಿವಾರ ಇಲ್ಲಿ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಬಡವರನ್ನು ದೇಶದಲ್ಲಿಯ ಏಕೈಕ ಜಾತಿಯೆಂದು ಪರಿಗಣಿಸಿರುವ ಅವರು ತನ್ನನ್ನು ಒಬಿಸಿ ಎಂದು ಗುರುತಿಸಿಕೊಳ್ಳುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಅವರು,ಬಿಜೆಪಿಯು ಬುಡಕಟ್ಟು ಜನರನ್ನು ಆದಿವಾಸಿಗಳ ಬದಲು ವನವಾಸಿಗಳು ಎಂದು ಉಲ್ಲೇಖಿಸುವ ಮೂಲಕ ಅವರನ್ನು ಅವಮಾನಿಸುತ್ತಿದೆ ಎಂದು ಆರೋಪಿಸಿದರು. ತನ್ನ ಪಕ್ಷವು ‘ವನವಾಸಿ ’ ಪದವನ್ನು ದೇಶದಿಂದಲೇ ತೊಡೆದುಹಾಕಲಿದೆ ಎಂದರು.

ಬಿಜೆಪಿ ನಾಯಕರು ತಮ್ಮ ಭಾಷಣಗಳಲ್ಲಿ ಆದಿವಾಸಿಗಳ ಬದಲು ವನವಾಸಿ ಪದವನ್ನು ಬಳಸುತ್ತಾರೆ. ನರೇಂದ್ರ ಮೋದಿ ಮತ್ತು ಆರೆಸ್ಸೆಸ್ ಈ ವನವಾಸಿ ಎಂಬ ನೂತನ ಪದವನ್ನು ಸೃಷ್ಟಿಸಿದ್ದಾರೆ. ವನವಾಸಿ ಮತ್ತು ಆದಿವಾಸಿ ಪದಗಳ ನಡುವೆ ಭಾರೀ ವ್ಯತ್ಯಾಸವಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕನೋರ್ವ ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜಿಸಿ, ಅದನ್ನು ಚಿತ್ರೀಕರಿಸಿದ್ದ ಮತ್ತು ಬಳಿಕ ಅದನ್ನು ವೈರಲ್ ಮಾಡಿದ್ದ. ಅದು ಬಿಜೆಪಿಯ ಮನಃಸ್ಥಿತಿ. ಪ್ರಾಣಿಗಳಂತೆ ನಿಮ್ಮ ಸ್ಥಳ ಕಾಡಿನಲ್ಲಿದೆ ಎಂದು ಅವರು ಭಾವಿಸಿದ್ದಾರೆ ಮತ್ತು ನಿಮ್ಮನ್ನು ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ ರಾಹುಲ್, ಬಿಜೆಪಿ ನಾಯಕರು ಪ್ರಾಣಿಗಳ ಮೇಲೆ ಮೂತ್ರ ವಿಸರ್ಜಿಸುವುದನ್ನು ನೀವು ಎಂದಾದರೂ ನೋಡಿದ್ದೀರಾ? ಆದರೆ ಅವರು ಆದಿವಾಸಿಯೋರ್ವನ ಮೇಲೆ ಮೂತ್ರ ವಿಸರ್ಜಿಸುವುದನ್ನು ನೀವು ನೋಡಿದ್ದೀರಿ. ಆದಿವಾಸಿ ಒಂದು ಕ್ರಾಂತಿಕಾರಿ ಪದವಾಗಿದೆ. ಆದಿವಾಸಿಗಳು ಎಂದರೆ ಈ ದೇಶದ ಮೂಲ ಮಾಲಕರು ಎಂದು ಅರ್ಥ. ಬಿಜೆಪಿ ಈ ಪದವನ್ನು ಬಳಸುವುದಿಲ್ಲ,ಏಕೆಂದರೆ ಹಾಗೆ ಮಾಡಿದರೆ ಅವರು ನಿಮ್ಮ ಭೂಮಿ,ನೀರು ಮತ್ತು ಅರಣ್ಯಗಳನ್ನು ನಿಮಗೆ ಮರಳಿಸಬೇಕಾಗುತ್ತದೆ ಎಂದರು.

ವನವಾಸಿ ಪದವು ಆದಿವಾಸಿಗಳಿಗೆ ಅವಮಾನವಾಗಿದ್ದು,ಅದನ್ನು ಕಾಂಗ್ರೆಸ್ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ ರಾಹುಲ್,ಮೊದಲು ಮೋದಿಯವರು ತನ್ನ ಭಾಷಣಗಳಲ್ಲಿ ವನವಾಸಿ ಪದವನ್ನು ಬಳಸುತ್ತಿದ್ದರು,ಆದರೆ ಈಗ ಅವರು ಅದನ್ನು ನಿವಾರಿಸುತ್ತಿದ್ದಾರೆ. ಅವರು ತನ್ನ ಶಬ್ದಗಳನ್ನು ಬದಲಿಸಿದ್ದಾರೆ,ಆದರೆ ತನ್ನ ಆಲೋಚನೆಯನ್ನು ಬದಲಿಸುವುದು ಅವರಿಗೆ ಸಾಧ್ಯವಿಲ್ಲ. ಅವರ ಚಿಂತನೆಯು ಈಗಲೂ ಬುಡಕಟ್ಟು ಜನರನ್ನು ಅವಮಾನಿಸುವುದಾಗಿದೆ ಎಂದು ಆರೋಪಿಸಿದರು.

ಬಡವರು ದೇಶದಲ್ಲಿಯ ಏಕೈಕ ಜಾತಿ ಎಂದು ಮೋದಿ ತನ್ನ ಭಾಷಣದಲ್ಲಿ ಹೇಳಿದ್ದಾರೆ. ಈ ದೇಶದಲ್ಲಿ ದಲಿತರು,ಆದಿವಾಸಿಗಳು,ಹಿಂದುಳಿದವರು ಇದ್ದಾರೆ ಎನ್ನುವುದು ನಮಗೆಲ್ಲರಿಗೂ ಗೊತ್ತು. ದೇಶದಲ್ಲಿ ಒಂದೇ ಜಾತಿಯಿದ್ದರೆ ಅವರು ತನ್ನನ್ನು ಒಬಿಸಿ ಎಂದು ಕರೆದುಕೊಳ್ಳುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ದಾಳಿ ನಡೆಸಿದ ರಾಹುಲ್, ಮೋದಿ ಏನು ಮಾಡುತ್ತಾರೆ? ನಿಮ್ಮ ಭೂಮಿಯನ್ನು ಅದಾನಿಗೆ ನೀಡಿ ಎಂದು ಅವರು ಸೂಚಿಸುತ್ತಾರೆ. ಅದಾನಿ ನಿಮ್ಮ ಭೂಮಿಯನ್ನು ಕಿತ್ತುಕೊಳ್ಳುತ್ತಾರೆ ಮತ್ತು ನೀವು ವಿರೋಧಿಸಿದಾಗ ಬಿಜೆಪಿ ಸರಕಾರ ನಿಮ್ಮ ಮೇಲೆ ಗುಂಡುಗಳನ್ನು ಹಾರಿಸುತ್ತದೆ. ಅದಾನಿ ನಿಮ್ಮ ಭೂಮಿ ಮತ್ತು ಗಣಿಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಾರೆ. ಅವರಿಂದ ಹಣವು ಛತ್ತೀಸ್‌ಗಡ ಅಥವಾ ಬಸ್ತರ್‌ನ ಗ್ರಾಮಗಳಿಗೆ ತಲುಪುತ್ತದೆಯೇ? ಹಣವು ಅಮೆರಿಕಕ್ಕೆ ರವಾನೆಯಾಗುತ್ತದೆ. ಈ ಹಣದ ಲಾಭವನ್ನು ಅದಾನಿ ಪಡೆದುಕೊಳ್ಳುತ್ತಾರೆ,ಬಿಜೆಪಿ ನಾಯಕರು ಹಣವನ್ನು ಪಡೆಯುತ್ತಾರೆ. ಹಣವು ಚುನಾವಣೆಗಳಿಗಾಗಿ ಬಳಕೆಯಾಗುತ್ತದೆ ಎಂದರು.

ಕಾಂಗ್ರೆಸ್ ಪಕ್ಷವು ರೈತರು,ಕಾರ್ಮಿಕರು ಮತ್ತು ಬುಡಕಟ್ಟು ಜನರಿಗೆ ಹಣವನ್ನು ನೀಡುತ್ತದೆ ಮತ್ತು ಅದರಿಂದ ಅವರಿಗೆ ಪ್ರಯೋಜನವಾಗುತ್ತದೆ ಎಂದು ರಾಹುಲ್ ಹೇಳಿದರು.

90 ಸದಸ್ಯಬಲದ ಛತ್ತೀಸ್‌ಗಡ ವಿಧಾನ ಸಭೆಗೆ ಚುನಾವಣೆಯು ನ.7 ಮತ್ತು 17ರಂದು ಎರಡು ಹಂತಗಳಲ್ಲಿ ನಡೆಯಲಿದೆ.

ಜಗದಾಲಪುರ ಕ್ಷೇತ್ರವು ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಬುಡಕಟ್ಟು ಪ್ರಾಬಲ್ಯದ ಬಸ್ತರ್ ವಿಭಾಗದಲ್ಲಿಯ 20 ವಿಧಾನಸಭಾ ಕ್ಷೇತ್ರಗಳಲ್ಲಿ ಸೇರಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News