ನಾಗಾಲ್ಯಾಂಡ್ ಪುರಸಭೆ ಚುನಾವಣೆಯಲ್ಲಿ ಮಹಿಳಾ ಕೋಟ ಯಾಕೆ ಜಾರಿಗೊಳಿಸಿಲ್ಲ?: ಕೇಂದ್ರ, ರಾಜ್ಯಕ್ಕೆ ಸುಪ್ರೀಂ ತರಾಟೆ
ಹೊಸದಿಲ್ಲಿ: ನಗರ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವ ನಿಯಮವನ್ನು ನಾಗಾಲ್ಯಾಂಡ್ ನಲ್ಲಿ ಜಾರಿಗೊಳಿಸದೆ ಇರುವ ಬಗ್ಗೆ ಕೇಂದ್ರ ಸರಕಾರ ಯಾಕೆ ಮಾನವಾಗಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪ್ರಶ್ನಿಸಿದೆ.
ನಾಗಾಲ್ಯಾಂಡ್ ವಿಧಾನಸಭೆಯು 2012 ಸೆಪ್ಟಂಬರ್ ನಲ್ಲಿ ಅಂಗೀಕರಿಸಿದ ನಿರ್ಣಯವೊಂದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯೊಂದರ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ 33 ಶೇಕಡ ಮೀಸಲಾತಿ ನೀಡಬೇಕೆನ್ನುವ ಸಂವಿಧಾನದ 243ಡಿ ವಿಧಿಯ ವ್ಯಾಪ್ತಿಯಿಂದ ರಾಜ್ಯವನ್ನು ಹೊರಗಿಡಲು ಆ ನಿರ್ಣಯ ಅವಕಾಶ ನೀಡುತ್ತದೆ. ಆ ನಿರ್ಣಯವನ್ನು 2016 ನವೆಂಬರ್ ನಲ್ಲಿ ವಾಪಸ್ ಪಡೆಯಲಾಯಿತಾದರೂ, 33% ಮೀಸಲಾತಿ ಇನ್ನೂ ಜಾರಿಗೊಂಡಿಲ್ಲ.
ಚುನಾವಣೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವುದಕ್ಕೆ ರಾಜ್ಯದ ಬುಡಕಟ್ಟು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ನಾಗಾ ಸಂಪ್ರದಾಯದಲ್ಲಿ, ಮಹಿಳೆಯರು ಯಾವತ್ತೂ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಗಳ ಭಾಗವಾಗಿರಲಿಲ್ಲ ಎಂದು ಅವು ವಾದಿಸುತ್ತಿವೆ. ಅದೂ ಅಲ್ಲದೆ, ಮಹಿಳೆಯರಿಗೆ ಮೀಸಲಾತಿ ನೀಡುವುದು, ಸಂವಿಧಾನದ 371ಎ ವಿಧಿಯಡಿಯಲ್ಲಿ ರಾಜ್ಯಕ್ಕೆ ನೀಡಲಾಗಿರುವ ವಿಶೇಷ ಅಧಿಕಾರಗಳ ಉಲ್ಲಂಘನೆಯಾಗುತ್ತದೆ ಎಂದೂ ಅವು ಹೇಳುತ್ತವೆ.
‘‘ನಮ್ಮ ದೇಶದಲ್ಲಿ ಸಾಮಾಜಿಕ ಸುಧಾರಣೆಗೂ ಮುನ್ನ ಕಾನೂನು ಬರುತ್ತದೆ. ಅದು ಸಾಮಾಜಿಕ ಸುಧಾರಣೆಗೆ ವೇಗ ನೀಡುತ್ತದೆ’’ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ದುಲಿಯ ಅವರನ್ನೊಳಗೊಂಡ ನ್ಯಾಯಪೀಠವೊಂದು ಮಂಗಳವಾರ ಹೇಳಿತು.
ಬಿಜೆಪಿಯು ನಾಗಾಲ್ಯಾಂಡ್ ನಲ್ಲಿ ಆಡಳಿತ ನಡೆಸುತ್ತಿರುವ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿಯ ಮಿತ್ರಪಕ್ಷವಾಗಿರುವುದರಿಂದ, ಈ ವಿಷಯದಲ್ಲಿ ವಹಿಸಲು ಕೇಂದ್ರ ಸರಕಾರಕ್ಕೆ ಒಂದು ಪಾತ್ರವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
‘‘ಕೇಂದ್ರ ಸರಕಾರ ಹಿಂಜರಿಯುತ್ತಿದೆ ಎಂದು ನಾವು ಹೇಳುವಂತೆ ಮಾಡಬೇಡಿ. ಸಂವಿಧಾನದ ಪರಿಚ್ಛೇದವೊಂದನ್ನು ಜಾರಿಗೊಳಿಸಲಾಗುತ್ತಿಲ್ಲ. ನೀವು ಏನು ಮಾಡುತ್ತಿದ್ದೀರಿ? ಇದರಲ್ಲಿ ನಮ್ಮ ಜವಾಬ್ದಾರಿ ಇಲ್ಲ ಎಂದು ಹೇಳಲು ನಿಮ್ಮನ್ನು ನಾವು ಬಿಡುವುದಿಲ್ಲ. ಇತರ ಪ್ರಕರಣಗಳಲ್ಲಿ, ರಾಜ್ಯ ಸರಕಾರದೊಂದಿಗೆ ನಿಮಗೆ ಉತ್ತರದಾಯಿತ್ವ ಇಲ್ಲದಿದ್ದರೂ, ನೀವು ಕ್ರಮಗಳನ್ನು ತೆಗೆದುಕೊಂಡಿದ್ದೀರಿ. ಆದರೆ, ಇಲ್ಲಿ, ರಾಜ್ಯ ಮತ್ತು ಕೇಂದ್ರ ಸರಕಾರಗಳು ಒಂದೇ ಪಕ್ಷಕ್ಕೆ ಸೇರಿವೆ’’ ಎಂದರು.
ಅದೇ ವೇಳೆ, ನಾಗಾಲ್ಯಾಂಡ್ನ ಸಾಂಪ್ರದಾಯಿಕ ಕಾನೂನುಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬುದಾಗಿಯೂ ನ್ಯಾಯಾಲಯ ಹೇಳಿತು.