ಉತ್ತರ ಪ್ರದೇಶ ಸರಕಾರದಿಂದ ಗೂಂಡಾ ಕಾಯ್ದೆಯ ವ್ಯಾಪಕ ದುರ್ಬಳಕೆ; ಅಲಹಾಬಾದ್ ಹೈಕೋರ್ಟ್ ಅಸಮಾಧಾನ
ಹೊಸದಿಲ್ಲಿ: ಉತ್ತರ ಪ್ರದೇಶ ಸರಕಾರವು ಗೂಂಡಾ ಕಾಯ್ದೆಯನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅಲಹಾಬಾದ್ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಗೂಂಡಾ ಕಾಯ್ದೆ ಹೇರುವ ವಿಷಯದಲ್ಲಿ ಉತ್ತರಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಏಕರೂಪತೆ ಇಲ್ಲದಿರುವುದನ್ನು ಗಮನಿಸಿರುವುದಾಗಿ ರಾಹುಲ್ ಚತುರ್ವೇದಿ ಹಾಗೂ ಮೊಹಮ್ಮದ್ ಅಝರ್ ಹುಸೈನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಆಗಸ್ಟ್ 10ರಂದು ಜಾರಿಗೊಳಿಸಿದ ಆದೇಶದಲ್ಲಿ ತಿಳಿಸಿದೆ ಎಂದು ‘ಬಾರ್ ಆ್ಯಂಡ್ ಬೆಂಚ್’ ಗುರುವಾರ ವರದಿ ಮಾಡಿದೆ.
ಗೂಂಡಾ ಕಾಯ್ದೆಯನ್ನು ಯಾವುದೇ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಆಕ್ಟೋಬರ್ 31ರೊಳಗೆ ಏಕರೂಪದ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವಂತೆ ಹೈಕೋರ್ಟ್ ಆದಿತ್ಯನಾಥ್ ನೇತೃತ್ವದ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ಗೂಂಡಾ ಕಾಯ್ದೆಯಡಿ ತನಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿರುವುದನ್ನು ಪ್ರಶ್ನಿಸಿ ಗೋವರ್ಧನ್ ಎಂಬಾತ ಸಲ್ಲಿಸಿದ ಅರ್ಜಿಯ ಆಲಿಕೆಯ ಸಂದರ್ಭ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಗೋವರ್ಧನ್ ವಿರುದ್ಧ ಒಂದು ಕ್ರಿಮಿನಲ್ ಪ್ರಕರಣ ಹಾಗೂ ಪೊಲೀಸ್ ದೂರು ಇರುವುದನ್ನು ಉಲ್ಲೇಖಿಸಿ ಆತನಿಗೆ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ವಿತ್ತ ಹಾಗೂ ಕಂದಾಯ) ಅವರು ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದರು.
ಒಂದು ವೇಳೆ ಆರೋಪಿಗಳು ಅಪರಾಧ ಪ್ರವೃತ್ತಿಯುಳ್ಳವರಾಗಿದ್ದಲ್ಲಿ ಅಥವಾ ಅಪರಾಧಗಳನ್ನು ಎಸಗುವ ಪ್ರವೃತ್ತಿಯಿರುವ ತಂಡವೊಂದರ ಸದಸ್ಯನಾಗಿದ್ದಲ್ಲಿ ಮಾತ್ರವೇ ಆತನಿಗೆ ಗೂಂಡಾ ಎಂಬ ಹಣೆಪಟ್ಟಿಯನ್ನು ಕಟ್ಟಬಹುದಾಗಿದೆ ಎಂದು ನ್ಯಾಯಾಲಯ ತಿಳಿಸಿತು.
ಗೂಂಡಾ ಎಂಬ ಪದವೇ, ಕಳಂಕದ ಹೊರೆಯನ್ನು ವ್ಯಕ್ತಿಯ ಮೇಲೆ ಹೊರಿಸುತ್ತದೆ. ಕಾನೂನು ಅನುಷ್ಠಾನ ಅಧಿಕಾರಿಗಳು ಸಾಮಾನ್ಯವೆಂಬಂತೆ ಹಾಗೂ ಬೇಜವಾಬ್ದಾರಿಯಿಂದ ವ್ಯಕ್ತಿಯನ್ನು ಗೂಂಡಾ ಎಂಬುದಾಗಿ ಬ್ರಾಂಡ್ ಮಾಡುತ್ತಿರುವ ಬಗ್ಗೆ ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ‘ಬಾರ್ ಆ್ಯಂಡ್ ಬೆಂಚ್’ ವರದಿಯಲ್ಲಿ ತಿಳಿಸಿದೆ.
‘‘ಓರ್ವ ವ್ಯಕ್ತಿಯನ್ನು ಗೂಂಡಾ ಎಂದು ಬ್ರಾಂಡ್ ಮಾಡುವುದರಿಂದ ಆತನ ಸಮಗ್ರ ಭವಿಷ್ಯ ಹಾಗೂ ಪ್ರತಿಷ್ಠೆಯು ಬೀದಿಪಾಲಾಗುತ್ತದೆ ಮತ್ತು ಆತನ ಹೆಸರು ಹಾಗೂ ಕುಟುಂಬದ ಪ್ರತಿಷ್ಠೆಗೆ ಸರಿಪಡಿಸಲು ಸಾಧ್ಯವಾಗದಂತಹ ಹಾನಿಯನ್ನುಂಟು ಮಾಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಿಸಿದೆ’’ ಎಂದು ವರದಿ ತಿಳಿಸಿದೆ.
ಗೋವರ್ಧನ್ ವಿರುದ್ಧ ಕನಿಷ್ಠ ಒಂದು ಅಥವಾ ಎರಡು ಪ್ರಕರಣಗಳು ದಾಖಲಾಗಿದ್ದು, ಆತನ ವಿರುದ್ಧ ಗೂಂಡಾ ಕಾಯ್ದೆಯನ್ನು ಹೇರುವುದು ಸಮರ್ಥನೀಯವೆಂದು ಉತ್ತರಪ್ರದೇಶ ಸರಕಾರದ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದರು.
ಆದರೆ ಅದಕ್ಕೆ ಸಮ್ಮತಿ ವ್ಯಕ್ತಪಡಿಸದ ನ್ಯಾಯಪೀಠವು ಹೆಚ್ಚುವರಿ ಪ್ರಕರಣಗಳಿಗೆ ಸಂಬಂಧಿಸಿ ನ್ಯಾಯಾಂಗ ನೋಟಿಸ್ ಜಾರಿಗೊಳಿಸಲು ಸಾಧ್ಯವಿಲ್ಲ. ಅರ್ಜಿದಾರನ ವಿರುದ್ಧ ಗೂಂಡಾ ಕಾಯ್ದೆಯನ್ನು ಹೇರುವ ಪ್ರಸ್ತಾವನೆಯ ವಿಷಯದಲ್ಲಿ ಕಣ್ಣುಮುಚ್ಚಾಲೆಯಾಟ ಆಡಲು ಸಾಧ್ಯವಿಲ್ಲವೆಂದು ನ್ಯಾಯಾಲಯ ತಿಳಿಸಿತು.
ಗೂಂಡಾ ಕಾಯ್ದೆಯಡಿ ನೋಟಿಸ್ ಜಾರಿಗೊಳಿಸುವಾಗ ಅಧಿಕಾರಿಗಳು ಅತ್ಯಂತ ಜಾಗರೂಕತೆಯಿಂದ ವರ್ತಿಸಬೇಕು ಹಾಗೂಆರೋಪಿಯ ಹಿನ್ನೆಲೆಯನ್ನು ಕೂಲಂಕುಷವಾಗಿ ಪರಿಶೀಲಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಿಸಿತು.
ಇದರ ಜೊತೆಗೆ, ಉತ್ತರಪ್ರದೇಶ ಸರಕಾರವು ಗ್ಯಾಂಗ್‌ಸ್ಟರ್‌ಗಳು ಹಾಗೂ ಸಮಾಜ ವಿರೋಧಿ ಚಟುವಟಿಕೆಗಳು (ತಡೆ) ಕಾಯ್ದೆಯನ್ನು ಮನಬಂದಂತೆ ಬಳಸುತ್ತಿರುವ ಬಗ್ಗೆಯೂ ನ್ಯಾಯಾಲಯವು ಅಸಂತುಷ್ಟಿಯನ್ನು ಪ್ರದರ್ಶಿಸಿದೆ.