ನಾನು ಮುಖ್ಯಮಂತ್ರಿಯೊಂದಿಗೆ ಯಾವುದೇ ಸಾರ್ವಜನಿಕ ವೇದಿಕೆಗಳನ್ನು ಹಂಚಿಕೊಳ್ಳುವುದಿಲ್ಲ: ಪಶ್ಚಿಮ ಬಂಗಾಳ ರಾಜ್ಯಪಾಲ

Update: 2024-09-13 06:55 GMT

ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ್ ಬೋಸ್ (Photo: PTI)

ಕೋಲ್ಕತ್ತಾ: ಆರ್ಜಿ ಕರ್ ಆಸ್ಪತ್ರೆ ಮುಷ್ಕರಕ್ಕೆ ಸಂಬಂಧಿಸಿದಂತೆ ನಾನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಯಾವುದೇ ಸಾರ್ವಜನಿಕ ವೇದಿಕೆಗಳನ್ನು ಹಂಚಿಕೊಳ್ಳುವುದಿಲ್ಲ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ್ ಬೋಸ್ ಅವರು ಘೋಷಿಸಿದ್ದಾರೆ. ಅಲ್ಲದೆ, ನಾನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸಾಮಾಜಿಕ ಬಹಿಷ್ಕಾರ ಹೇರಿದ್ದೇನೆ ಎಂದೂ ಹೇಳಿದ್ದಾರೆ.

ಈ ಕುರಿತು ವಿಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಆನಂದ್ ಬೋಸ್, “ನಾನು ಮುಖ್ಯಮಂತ್ರಿಯೊಂದಿಗೆ ಯಾವುದೇ ಸಾರ್ವಜನಿಕ ವೇದಿಕೆಯನ್ನು ಹಂಚಿಕೊಳ್ಳುವುದಿಲ್ಲ. ಅವರು ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸುತ್ತಿರುವುದರ ವಿರುದ್ಧ ನಾನು ಸಕ್ರಿಯ ಕ್ರಮ ಕೈಗೊಳ್ಳಲಿದ್ದೇನೆ. ನನ್ನ ರಾಜ್ಯಪಾಲ ಪಾತ್ರವು ಸಂವಿಧಾನದ ಚೌಕಟ್ಟಿಗೆ ಒಳಪಟ್ಟಿದೆ” ಎಂದು ಹೇಳಿದ್ದಾರೆ.

ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಮುಷ್ಕರ ನಿರತ ವೈದ್ಯರ ನಡುವೆ ನಡೆಯಬೇಕಿದ್ದ ಪ್ರಸ್ತಾವಿತ ಸಭೆಯು ರದ್ದುಗೊಂಡ ನಂತರ ರಾಜ್ಯಪಾಲರಿಂದ ಈ ಸಂದೇಶ ಹೊರ ಬಿದ್ದಿದೆ.

ವೈದ್ಯಕೀಯ ಸಿಬ್ಬಂದಿಗಳು ರಾಜ್ಯ ಕಾರ್ಯಾಲಯ ನಬನ್ನಾದ ದ್ವಾರಗಳನ್ನು ತಲುಪಿದರೂ, ಆರ್ಜಿದ ಕರ್ ಆಸ್ಪತ್ರೆ ಮುಷ್ಕರದ ಪರಿಹಾರಕ್ಕಾಗಿ ನಡೆಯಲಿರುವ ಸಭೆಯ ನೇರ ಪ್ರಸಾರ ಮಾಡಬೇಕು ಎಂಬ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ, ನಾವು ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದು ಪಟ್ಟು ಹಿಡಿದರು. ಆದರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾತುಕತೆಯ ನೇರ ಪ್ರಸಾರಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದು, ಸಭೆಯ ಕಲಾಪಗಳನ್ನು ಬೇಕಾದರೆ ವಿಡಿಯೊ ಚಿತ್ರೀಕರಣ ಮಾಡಬಹುದು ಎಂದು ಸಲಹೆ ನೀಡಿದರು. ಆದರೆ, ಮಮತಾ ಬ್ಯಾನರ್ಜಿ ಅವರ ಈ ಸಲಹೆಯನ್ನು ಮುಷ್ಕರನಿರತ ವೈದ್ಯಕೀಯ ಸಿಬ್ಬಂದಿಗಳು ನಿರಾಕರಿಸಿದ್ದಾರೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗೃಹ ಮತ್ತು ಆರೋಗ್ಯ ಖಾತೆಗಳೆರಡನ್ನೂ ಹೊಂದಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News