ಮೀಸಲಾತಿ ಮಿತಿ 50%ಕ್ಕಿಂತ ಹೆಚ್ಚಿಸುವುದು ನಮ್ಮ ಗುರಿ: 'ಮೀಸಲಾತಿ ವಿರೋಧಿ' ಟೀಕೆ ಬಗ್ಗೆ ಸ್ಪಷ್ಟನೆ ನೀಡಿದ ರಾಹುಲ್ ಗಾಂಧಿ
ಹೊಸದಿಲ್ಲಿ: ತನ್ನ ವಿರುದ್ಧ ಕೇಳಿ ಬಂದ 'ಮೀಸಲಾತಿ ವಿರೋಧಿ' ಎಂಬ ಟೀಕೆ ಬಗ್ಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸ್ಪಷ್ಟನೆಯನ್ನು ನೀಡಿದ್ದು, ನಾನು ಮೀಸಲಾತಿ ವಿರೋಧಿಯಲ್ಲ, ಈಗ ಮೀಸಲಾತಿಗೆ ಶೇ. 50ರ ಮಿತಿಯಿದ್ದು, ಈ ಮಿತಿಯನ್ನು ಮೀರಿ ಮೀಸಲಾತಿ ಹೆಚ್ಚಿಸುವುದು ಕಾಂಗ್ರೆಸ್ ನ ಉದ್ದೇಶವಾಗಿದೆ ಎಂದು ಸ್ಪಷ್ಟೀಕರಣವನ್ನು ನೀಡಿದ್ದಾರೆ.
ನಿನ್ನೆ ಯಾರೋ ನಾನು ಮೀಸಲಾತಿ ವಿರೋಧಿ ಎಂದು ನನ್ನ ಹೇಳಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದಾರೆ. ನಾನು ಸ್ಪಷ್ಟಪಡಿಸುವುದೇನೆಂದರೆ, ನಾನು ಮೀಸಲಾತಿ ವಿರೋಧಿ ಅಲ್ಲ. ನಾವು 50% ಮಿತಿಯನ್ನು ಮೀರಿ ಮೀಸಲಾತಿಯನ್ನು ನೀಡುತ್ತೇವೆ ಎಂದು ಅವರು ಅಮೆರಿಕದ ನ್ಯಾಷನಲ್ ಪ್ರೆಸ್ ಕ್ಲಬ್ನಲ್ಲಿ ನಡೆದ ಸಂದರ್ಶನದಲ್ಲಿ ಸ್ಪಷ್ಟೀಕರಣವನ್ನು ನೀಡಿದ್ದಾರೆ.
ಅಮೆರಿಕಾದ ಜಾರ್ಜ್ ಟೌನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, ಭಾರತದಲ್ಲಿ ಸಮಾನತೆ ಪರಿಸ್ಥಿತಿ ಬಂದಾಗ ಕಾಂಗ್ರೆಸ್ ಪಕ್ಷವು ಮೀಸಲಾತಿಯನ್ನು ರದ್ದುಗೊಳಿಸುವ ಕುರಿತು ಚಿಂತಿಸುವುದು. ಆದರೆ, ಭಾರತದಲ್ಲೀಗ ಆ ಪರಿಸ್ಥಿತಿಯಿಲ್ಲ ಎಂಬ ಹೇಳಿಕೆ ನೀಡಿದ್ದರು. ಇದರ ಬೆನ್ನಿಗೇ ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿ ನಾಯಕರು ರಾಹುಲ್ ಗಾಂಧಿ ವಿರುದ್ಧ ಟೀಕೆಯನ್ನು ಮಾಡಿದ್ದರು.