ಮಹಿಳೆಯ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ: ಕೇರಳ ಹೈಕೋರ್ಟ್
ಕೊಚ್ಚಿ: ಮಹಿಳೆಯೋರ್ವಳು ಇನ್ನೊಬ್ಬ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದರೂ ಭಾರತೀಯ ದಂಡ ಸಂಹಿತೆ (ಐಪಿಸಿ)ಯ 345ಎ ಕಲಂ ಅಡಿ ಆರೋಪಿ ಮಹಿಳೆಯ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣವನ್ನು ದಾಖಲಿಸಲು ಸಾಧ್ಯವಿಲ್ಲ ಎಂದು ಕೇರಳ ಉಚ್ಚ ನ್ಯಾಯಾಲಯವು ಇತ್ತೀಚಿಗೆ ಎತ್ತಿ ಹಿಡಿದಿದೆ.
ಮಹಿಳೆ ತನ್ನ ಪತಿಯ ಮನೆಯವರ ವಿರುದ್ಧ ದಾಖಲಿಸಿರುವ ವೈವಾಹಿಕ ಕ್ರೌರ್ಯ ಪ್ರಕರಣದಲ್ಲಿ ಕ್ರಿಮಿನಲ್ ಕಲಾಪಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾ.ಎ.ಬದ್ರುದ್ದೀನ್ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ತನ್ನ ನಾದಿನಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಳು ಎಂದು ಮಹಿಳೆ ಆರೋಪಿಸಿದ್ದಳು. ಆದರೆ ಲೈಂಗಿಕ ಕಿರುಕುಳ ಆರೋಪದೊಂದಿಗೆ ವ್ಯವಹರಿಸುವ ಐಪಿಸಿಯ ಕಲಂ 354ಎ ಕೇವಲ ಪುರುಷರು ಎಸಗುವ ಕೃತ್ಯಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ನ್ಯಾಯಾಲಯವು ಬೆಟ್ಟು ಮಾಡಿದೆ.
ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)ಯು ಜಾರಿಗೆ ಬರುವವರೆಗೂ ಐಪಿಸಿ ಭಾರತದ ಅಧಿಕೃತ ಕ್ರಿಮಿನಲ್ ಸಂಹಿತೆಯಾಗಿತ್ತು. ನೂತನ ಕಾನೂನಿನಡಿ ಕಲಂ 75 ಐಪಿಸಿಯಲ್ಲಿದ್ದ ಲೈಂಗಿಕ ಕಿರುಕುಳ ವ್ಯಾಖ್ಯೆಯನ್ನೇ ಉಳಿಸಿಕೊಂಡಿದೆ.
ವೈವಾಹಿಕ ಕ್ರೌರ್ಯ ಪ್ರಕರಣವನ್ನು ದಾಖಲಿಸಿದ್ದ ಮಹಿಳೆ ತನ್ನ ಅತ್ತೆ ತನ್ನ ಜೀವಕ್ಕೆ ಅಪಾಯವನ್ನುಂಟು ಮಾಡಲು ಪ್ರಯತ್ನಿಸಿದ್ದರು ಮತ್ತು ತನ್ನ ನಾದಿನಿ ಅನುಚಿತ ಲೈಂಗಿಕ ಚಟುವಟಿಕೆಗಳಿಗಾಗಿ ತನ್ನನ್ನು ಬಲವಂತಗೊಳಿಸುತ್ತಿದ್ದಳು ಎಂದು ಆರೋಪಿಸಿದ್ದಳು.
ಐಪಿಸಿಯ 345ಎ ಮತ್ತು 498ಎ ಕಲಂಗಳಡಿ ಮಹಿಳೆಯ ಪತಿ ಮತ್ತು ಇತರ ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಆರಂಭಿಸಲಾಗಿತ್ತು. ಬಳಿಕ ತಮ್ಮ ವಿರುದ್ಧದ ಕ್ರಿಮಿನಲ್ ಆರೋಪಗಳನ್ನು ರದ್ದುಗೊಳಿಸುವಂತೆ ಕೋರಿ ಮಹಿಳೆಯ ಅತ್ತೆ ಮತ್ತು ನಾದಿನಿ ಹೈಕೋರ್ಟ್ ಮೊರೆ ಹೋಗಿದ್ದರು.
ಲೈಂಗಿಕ ಕಿರುಕುಳ ಆರೋಪಗಳನ್ನು ನ್ಯಾಯಾಲಯವು ಕೈಬಿಟ್ಟಿದೆಯಾದರೂ ಮಹಿಳೆಯ ಇತರ ಆರೋಪಗಳು ಆಕೆಯ ಅತ್ತೆಯನ್ನು ಐಪಿಸಿಯ 498ಎ ಕಲಂ ಅಡಿ ವಿಚಾರಣೆಗೆ ಒಳಪಡಿಸುವುದನ್ನು ಅಗತ್ಯವಾಗಿಸಿವೆ ಎಂದು ಹೇಳಿದೆ.