ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಸೋನಿಯಾ ಗಾಂಧಿ
ಹೊಸದಿಲ್ಲಿ: ವಯಸ್ಸು ಹಾಗೂ ಅನಾರೋಗ್ಯದ ಕಾರಣದಿಂದ ತಾನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಗುರುವಾರ ಹೇಳಿದ್ದಾರೆ.
ಮುಂಬರುವ ರಾಜ್ಯಸಭೆ ಚುನಾವಣೆಗೆ ಬುಧವಾರ ರಾಜಸ್ಥಾನದಿಂದ ನಾಮಪತ್ರ ಸಲ್ಲಿಸಿದ ಒಂದು ದಿನದ ಬಳಿಕ ಸೋನಿಯಾ ಗಾಂಧಿ ಅವರು ತನ್ನ ಕ್ಷೇತ್ರವಾದ ರಾಯ್ಬರೇಲಿಯ ಮತದಾರರಿಗೆ ಬರೆದ ಪತ್ರದಲ್ಲಿ ಈ ವಿಚಾರ ತಿಳಿಸಿದ್ದಾರೆ ಅಲ್ಲದೆ, ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಲೋಕಸಭೆಯಲ್ಲಿ ರಾಯ್ಬರೇಲಿ ಕ್ಷೇತ್ರವನ್ನು 2004ರಿಂದ ಪ್ರತಿನಿಧಿಸುತ್ತಿರುವ ಸೋನಿಯಾ ಗಾಂಧಿ ಅವರು ತನ್ನ ಪತಿ (ರಾಜೀವ್ ಗಾಂಧಿ) ಹಾಗೂ ಅತ್ತೆ (ಮಾಜಿ ಪ್ರಧಾನಿ ಇಂದಿರಾ ಗಾಂಧಿ) ಅವರನ್ನು ಕಳೆದುಕೊಂಡು ಇಲ್ಲಿಗೆ ಬಂದಾಗ ಜನತೆ ತನ್ನನ್ನು ಒಪ್ಪಿಕೊಂಡು ಸ್ವೀಕರಿಸಿರುವುದನ್ನು ಕೂಡ ನೆನಪಿಸಿಕೊಂಡಿದ್ದಾರೆ.
‘‘ನಾನು ಇಂದು ಏನಾಗಿದ್ದೇನೆಯೋ, ಅದಕ್ಕೆ ನೀವೇ ಕಾರಣ ಎಂದು ಹೆಮ್ಮೆಯಿಂದ ಹೇಳುತ್ತೇನೆ. ನಿಮ್ಮ ನಂಬಿಕೆಯನ್ನು ಗೌರವಿಸಲು ನನ್ನ ಕೈಲಾದಷ್ಟು ಮಾಡಿದ್ದೇನೆ. ವಯಸ್ಸು ಹಾಗೂ ಅನಾರೋಗ್ಯದ ಕಾರಣದಿಂದ ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’’ ಎಂದು ಅವರು ಹೇಳಿದ್ದಾರೆ.
‘‘ಈ ನಿರ್ಧಾರದ ಬಳಿಕ ನನಗೆ ನೇರವಾಗಿ ನಿಮ್ಮ ಸೇವೆ ಮಾಡುವ ಅವಕಾಶ ಸಿಗಲಾರದು. ಆದರೆ, ನನ್ನ ಮನಸ್ಸು ಹಾಗೂ ಆತ್ಮ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ. ಹಿಂದಿನಂತೆ ಭವಿಷ್ಯದಲ್ಲಿ ಕೂಡ ನೀವು ನನ್ನೊಂದಿಗೆ ಹಾಗೂ ನನ್ನ ಕುಟುಂಬದೊಂದಿಗೆ ನಿಲ್ಲುತ್ತೀರಿ ಎಂಬ ನಂಬಿಕೆ ನನಗೆ ಇದೆ’’ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.