ಆಪ್ ತೆಕ್ಕೆಗೆ ಭರೂಚ್ ಕ್ಷೇತ್ರ: ನನ್ನ ತಂದೆಯ ಪರಂಪರೆಯನ್ನು ಬಿಟ್ಟುಕೊಡುವುದಿಲ್ಲ ಎಂದ ಕಾಂಗ್ರೆಸ್‌ ನ ಅಹ್ಮದ್ ಪಟೇಲ್ ಪುತ್ರಿ

Update: 2024-02-24 10:46 GMT

ಮುಮ್ತಾಝ್ ಪಟೇಲ್ (Photo: ANI)

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದೊಂದಿಗಿನ ಸೀಟು ಹಂಚಿಕೆ ಮಾತುಕತೆಯಲ್ಲಿ ಭರೂಚ್ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಲಾಗದಿದ್ದಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿ. ಅಹ್ಮದ್ ಪಟೇಲ್ ಅವರ ಪುತ್ರಿ ಮುಮ್ತಾಝ್ ಪಟೇಲ್ ಕಾಂಗ್ರೆಸ್ ಕಾರ್ಯಕರ್ತರ ಬಳಿ ಶನಿವಾರ ಕ್ಷಮೆ ಯಾಚಿಸಿದ್ದಾರೆ.

ಇದಕ್ಕೂ ಮುನ್ನ ಭರೂಚ್ ಲೋಕಸಭಾ ಕ್ಷೇತ್ರವನ್ನು ಆಪ್‌ಗೆ ಬಿಟ್ಟುಕೊಡಲು ಆಕ್ಷೇಪಿಸಿದ್ದ ಮುಮ್ತಾಝ್ ಪಟೇಲ್, ಅಹ್ಮದ್ ಪಟೇಲ್ ಅವರ 45 ವರ್ಷದ ಪರಂಪರೆ ವ್ಯರ್ಥವಾಗಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಮುಮ್ತಾಝ್ ಪಟೇಲ್, "ಮೈತ್ರಿಕೂಟದಲ್ಲಿ ಭರೂಚ್ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಲಾಗದಿದ್ದಕ್ಕೆ ನಾನು ಜಿಲ್ಲಾ ಕಾರ್ಯಕರ್ತರಲ್ಲಿ ಕ್ಷಮೆ ಯಾಚಿಸುತ್ತೇನೆ. ನಾವು ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಲು ಮತ್ತೆ ಒಗ್ಗೂಡೋಣ. ನಾವು ಅಹ್ಮದ್ ಪಟೇಲರ 45 ವರ್ಷದ ಪರಂಪರೆಯು ವ್ಯರ್ಥವಾಗಲು ಅವಕಾಶ ನೀಡುವುದಿಲ್ಲ" ಎಂದು ಬರೆದುಕೊಂಡಿದ್ದಾರೆ.

ಆಪ್ ಪಕ್ಷವು ಈಗಾಗಲೇ ಭರೂಚ್ ಲೋಕಸಭಾ ಕ್ಷೇತ್ರಕ್ಕೆ ದೇದಿಯಾಪಾಡ ಶಾಸಕ ಚೈತರ್ ವಾಸವ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News