ಸಿಜೆಐ ಹಾಗೂ ಮಣಿಪುರ ಹಿಂಸಾಚಾರದ ಕುರಿತ ಹೇಳಿಕೆ: ಲೇಖಕ ಬದ್ರಿ ಶೇಷಾದ್ರಿ ಬಂಧನ

Update: 2023-07-29 08:33 GMT

ಬದ್ರಿ ಶೇಷಾದ್ರಿ (Photo: Twitter)

ಚೆನ್ನೈ: ಮಣಿಪುರ ಹಿಂಸಾಚಾರ ಕುರಿತ ಹೇಳಿಕೆಗಾಗಿ ರಾಜಕೀಯ ವಿಶ್ಲೇಷಕ ಹಾಗೂ ಪ್ರಕಾಶಕ ಬದ್ರಿ ಶೇಷಾದ್ರಿ ಅವರನ್ನು ತಮಿಳುನಾಡು ಪೊಲೀಸರು ಜುಲೈ 29ರಂದು ಚೆನ್ನೈನಲ್ಲಿ ಬಂಧಿಸಿದ್ದಾರೆ. ಕಳೆದ ವಾರ, ಜುಲೈ 22ರಂದು ಆಧಾನ್ ತಮಿಳು ಯೂಟ್ಯೂಬ್ ವಾಹಿನಿಗೆ ಅವರು ನೀಡಿದ್ದ ಸಂದರ್ಶನವನ್ನು ಆಧರಿಸಿ ಈ ಬೆಳ್ಳಂಬೆಳಗ್ಗೆಯ ಬಂಧನ ನಡೆದಿದೆ. ಆ ಸಂದರ್ಶನದಲ್ಲಿ ಅವರು ಮಣಿಪುರ ಹಿಂಸಾಚಾರ, ಮಣಿಪುರ ಹಿಂಸಾಚಾರದಲ್ಲಿ ಕುಕಿಗಳು, ಮೈತೈಗಳು ಹಾಗೂ ನಾಗಾಗಳು ಮತ್ತು ಆಡಳಿತಾರೂಢ ಬಿಜೆಪಿ ಸರ್ಕಾರದ ಪಾತ್ರದ ಕುರಿತು ಮಾತನಾಡಿದ್ದರು ಎಂದು thenewsminute.com ವರದಿ ಮಾಡಿದೆ.

ವಕೀಲರಾದ ಕವಿಯರಸು ಅವರು ನೀಡಿದ್ದ ದೂರನ್ನು ಆಧರಿಸಿ ಈ ಬಂಧನ ನಡೆದಿದೆ. ಸಂದರ್ಶನದ ಬೇಳೆ ಬದ್ರಿ ಶೇಷಾದ್ರಿ ಅವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಕುರಿತು ಮಾತನಾಡಿರುವ ರೀತಿಯಿಂದ ನಾನು ಕ್ಷೋಭೆಗೊಳಗಾಗಿದ್ದೇನೆ ಎಂದು ಕವಿಯರಸು ದೂರಿನಲ್ಲಿ ತಿಳಿಸಿದ್ದಾರೆ.

ಆ ಸಂದರ್ಶನದಲ್ಲಿ ಮೈತೈ ಸಮುದಾಯಕ್ಕೆ ಪರಿಶಿಷ್ಟ ಬುಡಕಟ್ಟು ಸ್ಥಾನಮಾನ ನೀಡುವ ಮಣಿಪುರ ಹೈಕೋರ್ಟ್‌ನ ನಿರ್ಣಯದಿಂದ ಮಣಿಪುರದಲ್ಲಿ ಸಮಸ್ಯೆಗಳು ಪ್ರಾರಂಭವಾದವು ಎಂದು ಹೇಳಿದ್ದ ಬದ್ರಿ ಶೇಷಾದ್ರಿ, ನಂತರ ಸಂದರ್ಶನದುದ್ದಕ್ಕೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ಅವರನ್ನು ಟೀಕಿಸುತ್ತಾ ಸಾಗಿದ್ದರು. ಮಣಿಪುರ ಹಿಂಸಾಚಾರದ ಕುರಿತ ಸುಪ್ರೀಂಕೋರ್ಟ್ ನಿಲುವನ್ನು ಟೀಕಿಸಿದ್ದ ಅವರು, ಒಂದು ವೇಳೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಕೈಗೆ ಗನ್ ಇಟ್ಟರೆ ಅವರು ಶಾಂತಿಯನ್ನು ಖಾತ್ರಿಗೊಳಿಸಬಲ್ಲರೆ ಎಂದು ಪ್ರಶ್ನಿಸಿದ್ದರು. ಈ ಸಂದರ್ಶನದ ವಿರುದ್ಧ ದೂರು ನೀಡಿರುವ ಕವಿಯರಸು, "ಬದ್ರಿ ಶೇಷಾದ್ರಿ ಅವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಹುದ್ದೆಯ ಘನತೆಯನ್ನು ತಗ್ಗಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಸುಪ್ರೀಂಕೋರ್ಟ್ ಹಾಗೂ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಗೌರವಕ್ಕೂ ಚ್ಯುತಿ ತಂದಿದ್ದಾರೆ" ಎಂದು ಆರೋಪಿಸಿದ್ದಾರೆ.

ಕವಿಯರಸು ದೂರನ್ನು ಆಧರಿಸಿ ಬದ್ರಿ ಶೇಷಾದ್ರಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 153 (ಗಲಭೆ ಸೃಷ್ಟಿಸಲು ಉದ್ದೇಶಪೂರ್ವಕ ಪ್ರಚೋದನೆ), 153ಎ (ಧರ್ಮ, ಜನಾಂಗ, ಜನ್ಮ ಸ್ಥಳ, ನಿವಾಸ, ಭಾಷೆ ಇತ್ಯಾದಿಯ ಆಧಾರದಲ್ಲಿ ಎರಡು ಗುಂಪುಗಳ ನಡುವೆ ದ್ವೇಷ ಹರಡುವುದು ಮತ್ತು ಸೌಹಾರ್ದತೆಗೆ ಧಕ್ಕೆ ತರುವಂಥ ಪೂರ್ವಗ್ರಹಪೀಡಿತ ಕೃತ್ಯಗಳಲ್ಲಿ ತೊಡಗುವುದು) ಮತ್ತು 505 (ಸಾರ್ವಜನಿಕ ಅಸಭ್ಯತೆ ಪ್ರದರ್ಶಿಸುವ ಹೇಳಿಕೆ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮೈತೇಯಿ ಸಮುದಾಯದ ಪುರುಷರ ಗುಂಪೊಂದು ಇಬ್ಬರು ಕುಕಿ ಸಮುದಾಯದ ಮಹಿಳೆಯರ ನಗ್ನ ಮೆರವಣಿಗೆ ಮಾಡಿರುವ ಘಟನೆಯ ವಿಡಿಯೊ ಕಾಣಿಸಿಕೊಂಡ ನಂತರ, ಮಣಿಪುರದಲ್ಲಿ ಶಾಂತಿಯನ್ನು ಖಾತ್ರಿಪಡಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಮಣಿಪುರ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಜುಲೈ 20ರಂದು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು.

ಬದ್ರಿ ಶೇಷಾದ್ರಿ ಅವರು ನ್ಯೂ ಹಾರಿಝಾನ್ ಮೀಡಿಯಾ ಪ್ರೈ. ಲಿ.ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಕ್ರಿಕ್ ಇನ್ಫೋ ಜಾಲತಾಣದ ಸಹ ಸಂಸ್ಥಾಪಕರಾಗಿದ್ದಾರೆ. ಅವರು ಸಂಘ ಪರಿವಾರದ ಸ್ವರಾಜ್ಯ ನಿಯತಕಾಲಿಕಕ್ಕೆ ಲೇಖನಗಳನ್ನು ಬರೆಯುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News