ಅನ್ನಭಾಗ್ಯ ಯೋಜನೆ: 5 ಕೆಜಿ ಅಕ್ಕಿ ಬದಲು ಹಣ ನೀಡಲು ಸಂಪುಟ ನಿರ್ಧಾರ

Update: 2023-06-28 12:33 GMT

ಬೆಂಗಳೂರು, ಜೂ.28: ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ವಿತರಿಸಲು ಹೆಚ್ಚುವರಿ ಅಕ್ಕಿ ಲಭ್ಯವಾಗದೆ ಇರುವುದರಿಂದ, ತಲಾ ಐದು ಕೆಜಿ ಅಕ್ಕಿ ಬದಲು ಹಣ ನೀಡಲು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ, ‘ಭಾರತೀಯ ಆಹಾರ ನಿಗಮ(ಎಫ್‍ಸಿಐ)ದ ದರದಂತೆ ಪ್ರತಿ ಕೆಜಿ ಅಕ್ಕಿಗೆ 34 ರೂ.ಗಳಂತೆ(ಒಬ್ಬ ಸದಸ್ಯರಿಗೆ 170ರೂ.) ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗಳಿಗೆ ಜು.1ರಿಂದಲೆ ಜಾರಿಗೆ ಬರುವಂತೆ ಹಣ ಜಮೆ ಮಾಡಲಾಗುವುದು ಎಂದು ಹೇಳಿದರು.

ನಾವು ಜನತೆಗೆ ಮಾತು ಕೊಟ್ಟಂತೆ ಅಕ್ಕಿ ಪಡೆಯಲು ಸಾಕಷ್ಟು ಪ್ರಯತ್ನ ಮಾಡಿದೆವು. ಎಫ್‍ಸಿಐ ನವರು ನಮಗೆ ಅಕ್ಕಿ ಕೊಡುವುದಾಗಿ ಮೊದಲು ಒಪ್ಪಿಕೊಂಡು, ನಂತರ ನಿರಾಕರಿಸಿದರು. ಈ ವಿಚಾರದ ಕುರಿತು ಕೇಂದ್ರ ಆಹಾರ ಸಚಿವ ಪಿಯೂಶ್ ಗೋಯೆಲ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿ, ಒತ್ತಾಯಿಸಿದರೂ ನಮ್ಮ ಬೇಡಿಕೆಗೆ ಸ್ಪಂದಿಸಲಿಲ್ಲ ಎಂದು ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಪಡಿತರ ವ್ಯವಸ್ಥೆಯಡಿ ವಿತರಣೆ ಮಾಡಲು ಪ್ರತಿ ತಿಂಗಳು 135 ಲಕ್ಷ ಟನ್ ಅಕ್ಕಿ ಅಗತ್ಯವಿದೆ. ಕೇಂದ್ರದ ಬಳಿ 262 ಲಕ್ಷ ಟನ್ ಲಭ್ಯವಿದೆ. ಹಣ ಕೊಡುತ್ತೇವೆ ಎಂದು ಹೇಳಿದರೂ ಕೇಳಲಿಲ್ಲ. ಈಗ ಪ್ರತಿ ಕೆಜಿಗೆ 31 ರೂ.ಗಳಂತೆ 15 ಲಕ್ಷ ಟನ್ ಅಕ್ಕಿಯನ್ನು ಮುಕ್ತ ಮಾರುಕಟ್ಟೆಗೆ ಬಿಡಲು ಟೆಂಡರ್ ಕರೆದಿದ್ದಾರೆ ಎಂದು ಮುನಿಯಪ್ಪ ಹೇಳಿದರು.

ಅಕ್ಕಿ ಸರಬರಾಜು ವಿಚಾರದಲ್ಲಿ ಕೇಂದ್ರ ಸರಕಾರ ಸಂಪೂರ್ಣ ರಾಜಕಾರಣ ಮಾಡಿದೆ. ಆದುದರಿಂದ, ಅಕ್ಕಿ ಪೂರೈಕೆ ಮಾಡುವ ಏಜೆನ್ಸಿಗಳ ಅಧಿಕಾರಿಗಳನ್ನು ಕರೆದು ಚರ್ಚೆ ಮಾಡಿದ್ದೆವು. ಆದರೆ, ಅವರಿಂದಲೂ ಯಾವುದೆ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ ಎಂದು ಅವರು ಟೀಕಿಸಿದರು.

ಒಂದು ತಿಂಗಳಿಗೆ 750-800 ಕೋಟಿ ರೂ.ಗಳು ಇದಕ್ಕಾಗಿ ಬೇಕಾಗುತ್ತದೆ. ತಾತ್ಕಾಲಿಕವಾಗಿ ಹಣ ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಅಕ್ಕಿಯ ಲಭ್ಯತೆ ಖಾತರಿ ಪಡಿಸಿಕೊಂಡ ಬಳಿಕ ಅಕ್ಕಿಯನ್ನೆ ವಿತರಿಸಲಾಗುವುದು. ಇದಕ್ಕಾಗಿ, ಟೆಂಡರ್ ಕರೆಯಲಾಗುವುದು. ಎಪಿಎಲ್ ಕಾರ್ಡುದಾರರಿಗೆ ವಿತರಿಸಲು ಅಗತ್ಯವಿರುವ 20 ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನು ನಾವು ಖರೀದಿ ಮಾಡಿ ವಿತರಿಸುತ್ತೇವೆ ಎಂದು ಮುನಿಯಪ್ಪ ಹೇಳಿದರು.

ರಾಜ್ಯದಲ್ಲಿ 85 ಲಕ್ಷ ಬಿಪಿಎಲ್ ಕಾರ್ಡುಗಳಿದ್ದು, ಈ ಪೈಕಿ ಶೇ.95ರಷ್ಟು ಬಿಪಿಎಲ್ ಕಾರ್ಡುದಾರರ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಆಗಿದೆ. ಇನ್ನು ಉಳಿದಿರುವುದನ್ನು ಆದಷ್ಟ ಬೇಗ ಮಾಡಿಸಿ, ಅರ್ಹರ ಖಾತೆಗಳಿಗೆ ಹಣ ಜಮೆ ಮಾಡುತ್ತೇವೆ ಎಂದು ಮುನಿಯಪ್ಪ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News