‘‘ಈಗಲೂ ಮೌನವಾಗಿದ್ದರೆ ಇನ್ನಷ್ಟು ಜನರ ಹಂಬಲ ಸತ್ತುಹೋದೀತು!’’
ಎರಡು ವರ್ಷಗಳ ಹಿಂದೆ ಜುಲೈ ೫ರಂದು, ಜಾರ್ಖಂಡ್ ಮೂಲದ ೮೪ ವರ್ಷದ ಬುಡಕಟ್ಟು ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ ಬಂಧನದಲ್ಲಿದ್ದಾಗಲೇ ಕೊನೆಯುಸಿರೆಳೆದರು. ಅವರ ಸಾವು ಸರಕಾರದ ನಿರ್ಲಕ್ಷ್ಯ ಮತ್ತು ಕೈದಿಗಳ ರಕ್ಷಣೆಯಲ್ಲಿನ ಅದಕ್ಷತೆಯನ್ನು ಬಯಲು ಮಾಡಿತು. ಪಾರ್ಕಿನ್ಸನ್ ಕಾಯಿಲೆಯಲ್ಲಿದ್ದ ಸ್ವಾಮಿ ಜೈಲಿನಲ್ಲಿ ಸುಮಾರು ಒಂದು ವರ್ಷ ಕಳೆದರು. ಅವರಿಗೆ ಅಗತ್ಯ ಸೌಕರ್ಯವನ್ನೂ ಜೈಲಿನಲ್ಲಿ ಒದಗಿಸದೆ ಅಮಾನವೀಯತೆ ತೋರಿಸಲಾಯಿತು.
ಅವರು ಇಲ್ಲವಾಗಿ ಎರಡು ವರ್ಷ ತುಂಬಿದ ಹೊತ್ತಲ್ಲಿ, ಅವರ ೧೧ ಮಂದಿ ಸಹ ಆರೋಪಿಗಳಾದ ಸುಧೀರ್ ಧಾವಳೆ, ರೋನಾ ವಿಲ್ಸನ್, ಸುರೇಂದ್ರ ಗಡ್ಲಿಂಗ್, ಶೋಮಾ ಸೇನ್, ಮಹೇಶ್ ರಾವುತ್, ವೆರ್ನಾನ್ ಗೊನ್ಸಾಲ್ವಿಸ್, ಅರುಣ್ ಫೆರೇರಾ, ಹನಿ ಬಾಬು, ರಮೇಶ್ ಗೈಚೋರ್, ಸಾಗರ್ ಗೋರ್ಖೆ ಮತ್ತು ಜ್ಯೋತಿ ಜಗತಾಪ್ - ಎಲ್ಲರೂ ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಶಿಕ್ಷಣ ತಜ್ಞರು - ಸ್ವಾಮಿ ಅವರು ಯಾವ ಸಮುದಾಯದೊಂದಿಗೆ ಅತಿ ನಿಕಟವಾಗಿ ಕೆಲಸ ಮಾಡಿದ್ದರೋ ಅಂಥ ಬುಡಕಟ್ಟಿಗೆ ಸೇರಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ಇತ್ತೀಚೆಗೆ ದೇಶದಲ್ಲಿನ ಕೈದಿಗಳ ಸ್ಥಿತಿಗತಿಗಳ ಬಗ್ಗೆ ಭಾವುಕರಾಗಿ ಮಾತನಾಡಿದ ಮುರ್ಮು, ಸ್ವಾಮಿ ಅವರ ಸಂಘಟನೆಯಾದ ಬಗೈಚಾ ಮೇಲೆ ದಾಳಿ ನಡೆದು ಅಂತಿಮವಾಗಿ ಅವರನ್ನು ಎನ್ಐಎ ಬಂಧಿಸಿದ ಸಂದರ್ಭದಲ್ಲಿ ಜಾರ್ಖಂಡ್ನ ರಾಜ್ಯಪಾಲರಾಗಿದ್ದರು.
ಪತ್ರದ ಜೊತೆಗೆ, ಬಂಧಿತ ಮಾನವ ಹಕ್ಕುಗಳ ಹೋರಾಟಗಾರರು ತಮ್ಮನ್ನು ಬಂಧಿಸಿಡಲಾಗಿರುವ ಮುಂಬೈನ ತಲೋಜಾ ಮತ್ತು ಬೈಕುಲ್ಲಾ ಜೈಲುಗಳಲ್ಲಿ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದರು.
ಅವರು ರಾಷ್ಟ್ರಪತಿಗಳಿಗೆ ಬರೆದ ಪತ್ರದ ಪೂರ್ಣ ಪಾಠ ಇಲ್ಲಿದೆ.
ಫಾದರ್ ಸ್ಟ್ಯಾನ್ ಸ್ವಾಮಿ ಕಸ್ಟಡಿಯಲ್ಲೇ ಸಾವನ್ನಪ್ಪಿಅಥವಾ ಸರಕಾರದ ಪಕ್ಕಾ ಲೆಕ್ಕಾಚಾರದ ಕ್ರೂರ ನಡೆಯಿಂದಾದ ಸಾಂಸ್ಥಿಕ ಹತ್ಯೆಗೆ ಅಮೂಲ್ಯ ಜೀವವೊಂದು ಬಲಿಯಾಗಿ ಎರಡು ವರ್ಷಗಳಾಗಿವೆ. ಐವತ್ತು ವರ್ಷಗಳಿಗೂ ಹೆಚ್ಚು ಕಾಲ ದೇಶದ ಬಡವರಲ್ಲಿ ಬಡವರಾದ ಜನರ ಅದರಲ್ಲಿಯೂ ವಿಶೇಷವಾಗಿ ಬಿಹಾರ ಮತ್ತು ಜಾರ್ಖಂಡ್ ಬುಡಕಟ್ಟುಗಳ ಹಕ್ಕುಗಳಿಗಾಗಿ ಹೋರಾಡಲು ಮುಡಿಪಾಗಿದ್ದ ಜೀವ ಅವರದಾಗಿತ್ತು. ಕಳೆದ ಎರಡು ವರ್ಷಗಳಲ್ಲಿ, ಮೊದಲ ಬಾರಿಗೆ ಭಾರತದ ರಾಷ್ಟ್ರಪತಿಯಾಗಿ ಬುಡಕಟ್ಟು ಮಹಿಳೆಯೊಬ್ಬರ ಆಯ್ಕೆಗೆ ಸಾಕ್ಷಿಯಾಗಿದ್ದೇವೆ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಭಾಗಿಯೆಂದು ಆರೋಪಿಸಿ ರಾಂಚಿಯ ಬಗೈಚಾದಲ್ಲಿ ಫಾದರ್ ಸ್ಟ್ಯಾನ್ ಮನೆ ಮೇಲೆ ಎರಡೆರಡು ಬಾರಿ ಪುಣೆ ಪೊಲೀಸರು ದಾಳಿ ಮಾಡಿದಾಗ ಮತ್ತು ಅವರನ್ನು ಎನ್ಐಎ ಬಂಧಿಸಿ ನವಿ ಮುಂಬೈ ಜೈಲಿಗೆ ಕರೆದೊಯ್ದಾಗ ನೀವು ಜಾರ್ಖಂಡ್ ರಾಜ್ಯಪಾಲರಾಗಿದ್ದಿರಿ ಮತ್ತು ಮೌನ ವಹಿಸಿದ್ದಿರಿ.
ನಿಮ್ಮ ಅಧಿಕಾರಾವಧಿಯಲ್ಲಿ, ಭಾರತದ ಬುಡಕಟ್ಟು ಜನರು ಮತ್ತು ಇತರ ಬಡ ಮತ್ತು ದಮನಿತ ವರ್ಗಗಳು, ಸಮುದಾಯಗಳ ಉನ್ನತಿಯೆಂಬುದು ಕೇವಲ ಸಾಂಕೇತಿಕತೆಗೆ ಸೀಮಿತವಾಗಿರುವುದಿಲ್ಲ ಎಂದು ನಾವು ಪ್ರಾಮಾಣಿಕ ವಾಗಿ ಭಾವಿಸುತ್ತೇವೆ. ಸದ್ಯದ ಸರಕಾರ ಇಡೀ ಆರ್ಥಿಕತೆಯನ್ನು ಕಾರ್ಪೊರೇಟ್ ವ್ಯವಸ್ಥೆಗೆ ಮಾರುತ್ತಿರುವ ಹೊತ್ತಿನಲ್ಲಿಯೇ ಸಾಂಸ್ಕೃತಿಕ ಮತ್ತು ಜಾತಿ ಸಂಕೇತಗಳ ಮೂಲಕ ಬಡವರನ್ನು ಗೆಲ್ಲಲು ಬಯಸುವುದು ನಿಜವಾದ ಅಪಾಯವಾಗಿದೆ. ನಿಧಾನವಾಗಿ ಬ್ರಾಹ್ಮಣ ಹಿಂದೂ ರಾಷ್ಟ್ರ ನಿರ್ಮಾಣದೆಡೆಗೆ ಹೊರಟಿರುವ ಈಗಿನ ಸರಕಾರ ದೇಶಾದ್ಯಂತ ಕೋಮು ದ್ವೇಷವನ್ನು ಹೊತ್ತಿಸುತ್ತಿರುವ ಮತ್ತು ಅಲ್ಪಸಂಖ್ಯಾತರ ಮೇಲೆ ಫ್ಯಾಶಿಸ್ಟ್ ದಾಳಿಗಳನ್ನು ಹೆಚ್ಚಿಸಿರುವ ಪರಿಣಾಮವಾಗಿ ಒಬ್ಬರ ಮೂಲಭೂತ ಹಕ್ಕುಗಳಿಗೆ ಬೆದರಿಕೆಯೊಡ್ಡುವ ಕೆಟ್ಟ ವಾತಾವರಣ ಸೃಷ್ಟಿಯಾಗಿದೆ ಮಾತ್ರವಲ್ಲ, ಒಬ್ಬರ ಪೌರತ್ವ ಮತ್ತು ದೇಶಪ್ರೇಮವನ್ನೂ ಪ್ರಶ್ನಿಸಲಾಗುತ್ತಿದೆ. ನೀವು ಸಾಂಕೇತಿಕತೆಯನ್ನು ದಾಟಿದ್ದೀರಿ ಮತ್ತು ನಿಮ್ಮ ಸಮುದಾಯಕ್ಕೆ ಬದ್ಧವಾಗಿರುವುದರ ಪುರಾವೆಯಾಗಿ ಬಡವರ ರಕ್ಷಣೆಗೆ ಕೆಲಸ ಮಾಡಿದ್ದೀರಿ ಎಂಬುದರ ಕುರಿತು ಚರಿತ್ರೆ ತೀರ್ಮಾನಿಸಲಿದೆ.
ನಿಮ್ಮ ಅಧಿಕಾರಾವಧಿಯಲ್ಲಿ ಬುಡಕಟ್ಟು ಸಮಸ್ಯೆಗಳಿಗೆ ನೀಡಬೇಕಿರುವ ಪ್ರಾಮುಖ್ಯತೆ, ನಿಮ್ಮ ಎಲ್ಲಾ ಅಧಿಕೃತ ಭೇಟಿಗಳಲ್ಲಿ ನಿಯಮಿತ ವೈಶಿಷ್ಟ್ಯವಾಗಿರುವ ಆದಿವಾಸಿ ನೃತ್ಯ ಮತ್ತು ಶಿರಸ್ತ್ರಾಣವನ್ನು ಪ್ರದರ್ಶಿಸುವಷ್ಟಕ್ಕೇ ಸೀಮಿತವಾಗಿರುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಈ ಮಧ್ಯೆ ಆದಿವಾಸಿಗಳ ಹಕ್ಕುಗಳು ಕ್ರಮೇಣ ಹರಣವಾಗುತ್ತಿವೆ. ಸಾಂಪ್ರದಾಯಿಕ ಅರಣ್ಯ ರಕ್ಷಕರಾಗಿದ್ದ ಆದಿವಾಸಿಗಳನ್ನು ಈಗ ಅರಣ್ಯ ವಿನಾಶಕರೆಂಬಂತೆ ನೋಡಲಾಗುತ್ತಿದೆ. ಸುಪ್ರೀಂ ಕೋರ್ಟ್ ತನ್ನ ೨೦೧೯ರ ಆದೇಶದಲ್ಲಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಅರಣ್ಯವಾಸಿಗಳನ್ನು ಹೊರಹಾಕಲು ಸೂಚಿಸಿದೆ. ಈ ತೀರ್ಪು ಪರಿಶೀಲನೆಯಲ್ಲಿದ್ದರೂ, ಸರಕಾರ ಈ ಬಗ್ಗೆ ನಿರಾಸಕ್ತವಾಗಿರುವುದು ಅದರ ಆಲಸ್ಯದಿಂದಲೇ ಸ್ಪಷ್ಟವಾಗಿದೆ. ಫಾದರ್ ಸ್ಟ್ಯಾನ್ ಮತ್ತವರ ಆದಿವಾಸಿ ಬಂಧುಗಳು ೨೦೦೦ ದಶಕದ ಮಧ್ಯದಲ್ಲಿ ಜಾರ್ಖಂಡ್ನಲ್ಲಿ ಬುಡಕಟ್ಟು ಹಳ್ಳಿಗಳನ್ನು ಸಂವಿಧಾನದ ಐದನೇ ಶೆಡ್ಯೂಲ್ ಮತ್ತು PESA ಕಾಯ್ದೆಯಡಿ ಗ್ರಾಮ ಸಭೆಗಳ ಅಧಿಕಾರದೊಂದಿಗೆ ಸದೃಢಗೊಳಿಸುವ ಉದ್ದೇಶದ ‘ಪಾತಾಳ್ಗಡಿ’ ಚಳವಳಿ ಪ್ರಾರಂಭಿಸಿದರು. ಆದರೆ, ಕಾನೂನಿನ ಅರಿವು ಮೂಡಿಸಿದ್ದನ್ನು ಪ್ರಶಂಸಿಸುವ ಬದಲು ಸಾವಿರಾರು ಆದಿವಾಸಿಗಳ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಯಿತು. ಫಾದರ್ ಸ್ಟ್ಯಾನ್ ಅವರನ್ನೂ ಆರೋಪಿಯನ್ನಾಗಿಸಲಾಯಿತು. ಇತರ ಬುಡಕಟ್ಟು ಪ್ರದೇಶಗಳಲ್ಲೂ ಇಂಥದೇ ಪರಿಸ್ಥಿತಿ ಇದೆ. ಅಲ್ಲಿ ನೂರಾರು ಆದಿವಾಸಿ ಯುವಕರು ಮಾವೋವಾದಿ ಪ್ರಕರಣಗಳಲ್ಲಿ ಜೈಲು ಪಾಲಾಗುತ್ತಿದ್ದಾರೆ. ಕೆಲವರು ನಕಲಿ ಎನ್ಕೌಂಟರ್ಗಳಿಗೆ ಬಲಿಯಾಗುತ್ತಿದ್ದಾರೆ. ಪ್ರಸ್ತಾವಿತ ಜನಗಣತಿ ಬುಡಕಟ್ಟು ಜನಾಂಗದವರ ಪ್ರತ್ಯೇಕ ಧರ್ಮ ‘ಸರ್ಣಾ’ವನ್ನು ನಿರಾಕರಿಸುವುದಕ್ಕೂ ಯತ್ನಿಸುತ್ತದೆ.
ಹೆಚ್ಚಿನ ಕಾರಾಗೃಹಗಳನ್ನು ನಿರ್ಮಿಸುವ ಬದಲು, ಕಡಿಮೆ ಕಾರಾಗೃಹಗಳೇ ಸಾಕೆನ್ನುವಂಥ ಪರಿಸ್ಥಿತಿಯನ್ನು ನಿರ್ಮಿಸಲು ಸರಕಾರ ಯತ್ನಿಸಬೇಕೆಂದು ನೀವು ಸರಿಯಾಗಿಯೇ ಹೇಳಿದ್ದೀರಿ. ನಿಜವಾಗಿಯೂ ದೊಡ್ಡ ಮಾತು. ಮಾವೋವಾದಿ ಸಂಬಂಧಿತ ಪ್ರಕರಣಗಳಲ್ಲಿ ಸುಳ್ಳು ಆರೋಪ ಹೊರಿಸಿ ಹಲವಾರು ಬುಡಕಟ್ಟು ಯುವಕರನ್ನು ಜೈಲಿನಲ್ಲಿರಿಸಿರುವ ಬಗ್ಗೆ ಸ್ವತಃ ಫಾದರ್ ಸ್ಟ್ಯಾನ್ ಅವರೂ ಜಾರ್ಖಂಡ್ನ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಿದ್ದರು. ಜಾರ್ಖಂಡ್ನಲ್ಲಿನ ವಿಚಾರಣಾಧೀನ ಕೈದಿಗಳ ಕುರಿತು ‘ಬಗೈಚಾ’ ಸಿಬ್ಬಂದಿ ಮತ್ತು ಕೆಲ ವಕೀಲರು ನಡೆಸಿದ ಆರು ತಿಂಗಳ ಸಂಶೋಧನೆಯಲ್ಲಿ ಈ ವಿಚಾರ ಬಹಿರಂಗವಾಗಿತ್ತು. ಆದರೂ ಸರಕಾರ ತನ್ನಿಂದ ತಪ್ಪಾಗಿದೆಯೆಂಬುದನ್ನು ನಿರಾಕರಿಸಿತು ಮಾತ್ರವಲ್ಲ, ಸತ್ಯ ಬಹಿರಂಗಪಡಿಸಿದ ಅವರನ್ನು ಅಕ್ಷರಶಃ ಮುಗಿಸಲು ನಿರ್ಧರಿಸಿತು.
ನಾಗರಿಕ ಸಮಾಜ ರಾಷ್ಟ್ರೀಯ ಭದ್ರತೆಗೆ ಹೊಸ ತೊಡಕು ಎಂದು ಕೇಂದ್ರ ಸರಕಾರದ ಪ್ರಮುಖರೊಬ್ಬರು ನಿರ್ಲಜ್ಜವಾಗಿ ಘೋಷಿಸಿದ್ದಾರೆ. ಹಿಂದಿರುಗಿ ನೋಡಿದರೆ, ಭೀಮಾ ಕೋರೆಗಾಂವ್ ವಿರುದ್ಧದ ಕಾನೂನು ಕ್ರಮ ಮತ್ತು ದಿಲ್ಲಿ-ಯುಪಿಯ ಸಿಎಎ ವಿರೋಧಿ ಪ್ರಕರಣಗಳು ಈ ಕುತಂತ್ರಿ ಅಜೆಂಡಾ ಸಕ್ರಿಯವಾಗಿರುವುದರ ಉದಾಹರಣೆಗಳಾಗಿವೆ. ಸರಕಾರದ ವಿರುದ್ಧ ಪ್ರತಿಭಟನೆ ಅಥವಾ ಆಂದೋಲನ ಭುಗಿಲೆದ್ದರೆ, ಪ್ರತಿಭಟನಾಕಾರರನ್ನು ಅಪರಾಧಿಗಳನ್ನಾಗಿಸುವುದು ಇಲ್ಲವೇ ಪರಿಸ್ಥಿತಿಯನ್ನು ಕೋಮುಸ್ವರೂಪಕ್ಕೆ ತಿರುಗಿಸುವುದು ನಡೆಯುತ್ತದೆ. ಯಾವುದೇ ಸಂಸ್ಥೆ ಅಥವಾ ಎನ್ಜಿಒವನ್ನು ಎಫ್ಸಿಆರ್ಎ-ಫೆಮಾ ಉಲ್ಲಂಘನೆ ಅಥವಾ ಭಯೋತ್ಪಾದಕತೆ ಹೆಸರಿನಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ. ಸಿಬಿಡಿಟಿ, ಈ.ಡಿ. ಮತ್ತು ಎನ್ಐಎ ಸದಾ ಸಿದ್ಧವಿರುತ್ತವೆ. ಮಾಧ್ಯಮ ಸಂಸ್ಥೆಗಳು ಕೂಡ ಇದನ್ನೇ ಅನುಸರಿಸುತ್ತವೆ. ತಮ್ಮ ವಿರುದ್ಧದ ಮಾಧ್ಯಮಗಳ ಬಾಯಿಮುಚ್ಚಿಸಲು ಆಗದಿದ್ದಾಗ, ಕಾರ್ಪೊರೇಟ್ ಸ್ನೇಹಿತರ ಮೂಲಕ ಅವನ್ನು ಖರೀದಿಸಿ, ಕೇಸರಿ ಪಕ್ಷದ ತುತ್ತೂರಿಯಾಗುವಂತೆ ಮಾಡಲಾಗುತ್ತದೆ. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಂಬಂಧಿತ ಐಟಿ ನಿಯಮಗಳನ್ನು ತಿರುಚುವ ಮೂಲಕ ತನ್ನ ಪಾತ್ರವನ್ನು ನಿರ್ವಹಿಸುತ್ತದೆ.
ಪ್ರತಿ ನ್ಯಾಯಾಂಗ ವಿಚಾರಣೆಯಲ್ಲೂ, ಭೀಮಾ ಕೋರೆಗಾಂವ್ ಆರೋಪಿಗಳ ವಿರುದ್ಧದ ಕಾನೂನು ಪ್ರಕ್ರಿಯೆ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವುದಕ್ಕಲ್ಲ, ಬದಲಿಗೆ ಅರ್ಬನ್ ನಕ್ಸಲ್ ಪಿತೂರಿಯನ್ನು ಪತ್ತೆಹಚ್ಚುವುದಕ್ಕೆ ಮತ್ತು ಶಿಕ್ಷಿಸುವುದಕ್ಕೆ ಎಂದು ಸರಕಾರ ಪದೇ ಪದೇ ಹೇಳಿಕೊಂಡಿದೆ. ಆದರೆ, ಫಾದರ್ ಸ್ಟ್ಯಾನ್ ವಿರುದ್ಧದ ೩೩೬ ಸಾಕ್ಷಿಗಳ ಪೈಕಿ ಒಂದು ಸಾಕ್ಷಿಯ ಪುರಾವೆ ಬೇರೆ ಕಥೆಯನ್ನೇ ಹೇಳಿದೆ. ಭೀಮಾ ಕೋರೆಗಾಂವ್ ಆರೋಪಿಗಳ ವಿರುದ್ಧ ಸುಳ್ಳು ಮೊಕದ್ದಮೆ ಹೂಡಲಾಗಿದೆ ಮತ್ತು ಅವರು ನಿರಪರಾಧಿಗಳು ಎಂದು ಕೋಲ್ಕತಾದ ಸಭೆಯಲ್ಲಿ ಫಾದರ್ ಸ್ಟ್ಯಾನ್ ಹೇಳಿದ್ದರು ಎಂದು ಅವರ ಸಾಕ್ಷ್ಯ ಹೇಳುತ್ತದೆ. ಹಾಗೆ ಅವರು ಹೇಳಿದ್ದನ್ನೇ ಅಪರಾಧವೆಂದು ೮೩ ವರ್ಷ ವಯಸ್ಸಿನ ವ್ಯಕ್ತಿಯನ್ನು ಎಂಟು ತಿಂಗಳ ಕಾಲ ಜೈಲಿನಲ್ಲಿರಿಸಿ ಅವರ ಸಾವಿಗೆ ಕಾರಣವಾಗುವುದು ಸ್ವತಃ ಭಿನ್ನ ದನಿಯನ್ನು ಅಡಗಿಸುವ ಅಪರಾಧವಲ್ಲವೆ?
ಫಾದರ್ ಸ್ಟ್ಯಾನ್ ಅವರ ಸಿಪ್ಪರ್ ಪ್ರಸಂಗ ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆ ಎಷ್ಟು ಅಸ್ವಸ್ಥ ಎಂಬುದರ ಸಾಕ್ಷಿ. ಕೇವಲ ಅವರ ಪ್ಲಾಸ್ಟಿಕ್ ಸಿಪ್ಪರ್-ಟಂಬ್ಲರ್ ಅನ್ನು ಜೈಲು ಗೇಟ್ನಲ್ಲಿ ಅನಾಮತ್ತಾಗಿ ಮುಟ್ಟುಗೋಲು ಹಾಕಿಕೊಂಡಿದ್ದಷ್ಟೇ ಅಲ್ಲ, ಅವರು ಹೊಸದಕ್ಕಾಗಿ ಬೇಡಿಕೆಯಿಟ್ಟಾಗ ವಿಚಾರಣಾ ನ್ಯಾಯಾಲಯ ಎನ್ಐಎಗೆ ಉತ್ತರ ಸಲ್ಲಿಸಲು ಅವಕಾಶ ನೀಡಿ ಸುಮಾರು ಒಂದು ತಿಂಗಳ ಕಾಲ ಮುಂದೂಡಿತು. ತೀವ್ರವಾದ ಪಾರ್ಕಿನ್ಸನ್ ಕಾಯಿಲೆಯ ಕಾರಣದಿಂದಾಗಿ ಅವರು ಗ್ಲಾಸ್ನಿಂದ ಕುಡಿಯುವುದು ಸಾಧ್ಯವಿರಲಿಲ್ಲ. ಆದರೆ ಮಾಧ್ಯಮಗಳಲ್ಲಿ ಈ ವಿಚಾರ ಹೆಡ್ಲೈನ್ ಆಗುತ್ತಿದ್ದಂತೆ ಕೆಲವೇ ಗಂಟೆಗಳಲ್ಲಿ ಜೈಲು ಅಧೀಕ್ಷಕರು ಫಾದರ್ ಸ್ಟ್ಯಾನ್ ಅವರಿಗೆ ಸಿಪ್ಪರ್ಗಳು, ಸ್ಟ್ರಾಗಳು, ವಾಕಿಂಗ್ ಸ್ಟಿಕ್, ಊರುಗೋಲು, ಗಾಲಿಕುರ್ಚಿ, ವೆಸ್ಟರ್ನ್ ಕಮೋಡ್ ಮತ್ತು ಹಾಸಿಗೆ ಎಲ್ಲವನ್ನೂ ಒದಗಿಸಿ, ಅವೆಲ್ಲವುಗಳ ಜೊತೆಗೆ ಫಾದರ್ ಅವರ ಫೋಟೊ ತೆಗೆದುಕೊಂಡರು. ಬಹುಶಃ ತನ್ನ ಮೇಲಧಿಕಾರಿಯ ಕೋಪ ತಣಿಸಲು ಹಾಗೆ ಮಾಡಿದ್ದಿರಬೇಕು. ಜೈಲು ಸುಧಾರಣೆ ನಿಜವಾಗಿಯೂ ಆಗುವುದು ಹೇಗೆ ಎಂಬುದಕ್ಕೆ ಇದೊಂದು ನಿದರ್ಶನ. ಒಂದೋ ಮಾಧ್ಯಮದಲ್ಲಿ ಬಯಲಾಗಬೇಕು ಇಲ್ಲವೇ ಮೇಲಧಿಕಾರಿಗಳ ಇಚ್ಛೆಯಿಂದ ಆಗಬೇಕು. ಆದರೆ ಕೈದಿಗಳಿಗೆ ಅಗತ್ಯವಿದೆ ಎಂಬ ಕಾರಣದಿಂದಂತೂ ಅಲ್ಲ.
ತಮ್ಮ ಕಂಪ್ಯೂಟರ್ನಲ್ಲಿ ಕಂಡುಬಂದ ದಾಖಲೆಗಳಿಗೆ ಸ್ಟ್ಯಾನ್ ಅವರ ಮೊದಲ ಪ್ರತಿಕ್ರಿಯೆ ತೀವ್ರ ಆಘಾತ ಮತ್ತು ತಿರಸ್ಕಾರ ಭಾವನೆಯಾಗಿತ್ತು. ಅವರು ಅಸಹ್ಯಪಟ್ಟುಕೊಂಡಿದ್ದರು. ಅಂತಹ ಯಾವುದನ್ನೂ ತನ್ನ ಕಲ್ಪನೆಯಲ್ಲಿಯೂ ತಾನು ಹೊಂದಿರಲು ಸಾಧ್ಯವಿಲ್ಲ ಎಂದು ಅವರು ಸಹ ಕೈದಿಗಳಿಗೆ ಪದೇ ಪದೇ ಹೇಳುತ್ತಿದ್ದರು. ನ್ಯಾಯಾಲಯಗಳು ಅವರನ್ನು ನಂಬಲಿಲ್ಲ. ಅದೇ ಆಳುವ ಪಕ್ಷದ ರಾಜಕಾರಣಿ ಅಥವಾ ಪ್ರಸಿದ್ಧ ವ್ಯಕ್ತಿಯ ಡೀಪ್ ಫೇಕ್ ಕಾಣಿಸಿಕೊಂಡರೆ ಸರಕಾರ ತಕ್ಷಣವೇ ಅತ್ಯುತ್ತಮ ವಿಧಿವಿಜ್ಞಾನ ಪರೀಕ್ಷೆಯ ಮೊರೆಹೋಗುತ್ತದೆ. ಆದರೆ ಫಾದರ್ ಸ್ಟ್ಯಾನ್ ಅವರ ವಿಚಾರದಲ್ಲಿ ಅದು ಆಗಲೇ ಇಲ್ಲ. ಸತ್ಯ ಎಂದಿಗೂ ಮುಖ್ಯವಾಗಲೇ ಇಲ್ಲ. ಸರಕಾರದ ರಾಜಕೀಯ ಅಗತ್ಯಗಳನ್ನು ಪೂರೈಸುವ ಸುಳ್ಳು ನಿರೂಪಣೆಯ ಸೃಷ್ಟಿಯೇ ಮುಖ್ಯವಾಗಿತ್ತು.
ಕಳೆದ ಡಿಸೆಂಬರ್ನಲ್ಲಿ, ಅಮೆರಿಕ ಮೂಲದ ಡಿಜಿಟಲ್ ಫೊರೆನ್ಸಿಕ್ ಸಂಸ್ಥೆ ಆರ್ಸೆನಲ್ ಕನ್ಸಲ್ಟಿಂಗ್, ಆಕ್ಷೇಪಾರ್ಹ ದಾಖಲೆಗಳನ್ನು ಹೊಂದಿದೆ ಎಂದು ಭಾವಿಸಲಾದ ಫಾದರ್ ಅವರ ಹಾರ್ಡ್ ಡಿಸ್ಕ್ ಅನ್ನು ವಿಶ್ಲೇಷಿಸಿದ ನಂತರ ತನ್ನ ವರದಿಯನ್ನು ಬಿಡುಗಡೆ ಮಾಡಿತು. ಅವರ ಕಂಪ್ಯೂಟರ್ ಸುಮಾರು ಐದು ವರ್ಷಗಳ ನಿರಂತರ ಮಾಲ್ವೇರ್ ದಾಳಿಗೆ ಗುರಿಯಾಗಿತ್ತು. ಅದರ ಹಿಂದಿದ್ದವರು ಅದನ್ನು ಫಾದರ್ ಚಟುವಟಿಕೆಗಳ ಮೇಲೆ ನಿಗಾ ಇಡಲು ಮತ್ತು ಸೃಷ್ಟಿಸಲಾದ ದಾಖಲೆಗಳನ್ನು ಅವರ ಕಂಪ್ಯೂಟರ್ನಲ್ಲಿ ಸೇರಿಸಲು ಬಳಸಿದ್ದರು. ಹಾರ್ಡ್ಡಿಸ್ಕ್ ಅನ್ನು ವಶಪಡಿಸಿಕೊಳ್ಳುವ ಹಿಂದಿನ ರಾತ್ರಿ ಜೂನ್ ೧೨, ೨೦೧೯ರಂದು, ದಾಳಿಕೋರರು ತಮ್ಮ ಟ್ರ್ಯಾಕ್ಗಳನ್ನು ಅಳಿಸಲು ವ್ಯಾಪಕ ಪ್ರಯತ್ನ ನಡೆಸಿದ್ದರು. ಸಂಚಿನಲ್ಲಿದ್ದ ಮಾಲ್ವೇರ್ ದಾಳಿಕೋರ ಫಾದರ್ ಅವರ ಕಂಪ್ಯೂಟರ್ ವಶಪಡಿಸಿಕೊಂಡ ಪೊಲೀಸ್ ತಂಡದ ಭಾಗವಾಗಿರದಿದ್ದರೆ ಅನುಮಾನವೇ ಬರುತ್ತಿರಲಿಲ್ಲ. ಆಗಸ್ಟ್ ೨೮, ೨೦೧೮ರಂದು ಫಾದರ್ ಸ್ಟ್ಯಾನ್ ಅವರ ಕಂಪ್ಯೂಟರ್ ವಶಪಡಿಸಿಕೊಳ್ಳಲು ಮರೆತಿದ್ದ ಪುಣೆ ಪೊಲೀಸರು ಅದಕ್ಕೆಂದೇ ಜೂನ್ ೧೨, ೨೦೧೯ರಂದು ಮತ್ತೆ ದಾಳಿ ನಡೆಸಿದ್ದರ ಅರ್ಥ ಆನಂತರ ಸ್ಪಷ್ಟವಾಗಿದೆ.
ಆಡಳಿತಾರೂಢ ಪಕ್ಷ ಕ್ರಿಶ್ಚಿಯನ್ ಚರ್ಚ್ ಮುಖ್ಯಸ್ಥರ ಮೇಲೆ ಅದರಲ್ಲೂ ವಿಶೇಷವಾಗಿ, ಇತರ ಅಲ್ಪಸಂಖ್ಯಾತರು ಗಮನಾರ್ಹವಾಗಿ ದೂರವಾಗುತ್ತಿದ್ದರೂ ಶೇ.೧೪ರಷ್ಟು ಕ್ರಿಶ್ಚಿಯನ್ನರಿರುವ ಕೇರಳದಲ್ಲಿ ಪ್ರಭಾವ ಬೀರತೊಡಗಿದೆ. ಇದು ಈಶಾನ್ಯದಲ್ಲಿ ಚುನಾವಣೆಗೆ ನೆರವಾಯಿತು. ಆದರೂ ಫಾದರ್ ಸ್ಟ್ಯಾನ್ ಪ್ರಕರಣದಲ್ಲಿ ಜಾರ್ಖಂಡ್ನ ಬುಡಕಟ್ಟು ಜನರನ್ನು ಸಂಘಟಿಸುವಲ್ಲಿನ ಅದರ ಪಾತ್ರದಿಂದಾಗಿ ಕ್ರಿಶ್ಚಿಯನ್ ಚರ್ಚ್ ಅನ್ನು ಗುರಿಯಾಗಿಸಲಾಗಿದೆ. ಫಾದರ್ ಸ್ಟ್ಯಾನ್ ಅವರನ್ನು ನಿಷೇಧಿತ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದಾರೆಂದು ದೂಷಿಸಿದ್ದಲ್ಲದೆ, ಇತರ ಪಾದ್ರಿಗಳಿಗೂ ತನಿಖೆಯ ಹೆಸರಿನಲ್ಲಿ ಕಿರುಕುಳ ನೀಡಲಾಯಿತು. ಕಪೋಲಕಲ್ಪಿತ ಪತ್ರಗಳಲ್ಲಿ, ಜಾರ್ಖಂಡ್ ಡಯಾಸಿಸ್ ನಡೆಸುತ್ತಿರುವ ಸ್ಥಳೀಯ ಮತ್ತು ಜನಪ್ರಿಯ ಸಮುದಾಯ ಸಂಘಟನೆ ವಿರುದ್ಧ ಧಾರ್ಮಿಕ ಮತಾಂತರದಲ್ಲಿ ತೊಡಗಿಸಿಕೊಂಡಿದೆ, ಅನಿಯಂತ್ರಿತ ವಿದೇಶಿ ಹಣವನ್ನು ಪಡೆಯುತ್ತಿದೆ ಮತ್ತು ಮಾವೋವಾದಿ ಚಳವಳಿಯಲ್ಲಿದೆ ಎಂದು ಆರೋಪಿಸಲಾಯಿತು. ಹಿಂದುತ್ವ ಯೋಜನೆ ಒಪ್ಪಿಕೊಳ್ಳಲು ಸಿದ್ಧರಿರುವ ಅಲ್ಪಸಂಖ್ಯಾತ ನಾಯಕರಿಗೆ ಅವಕಾಶ ಕಲ್ಪಿಸಿರಬಹುದು; ಆದರೆ ಪ್ರಶ್ನಿಸಿದವರನ್ನು ಕ್ರೂರವಾಗಿ ಹತ್ತಿಕ್ಕಲಾಯಿತು.
ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ, ಕಸ್ಟಡಿಯಲ್ಲಿರುವ ವ್ಯಕ್ತಿಯ ಸಾವಿನ ಕಾರಣದ ಬಗ್ಗೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಮೂಲಕ ತನಿಖೆ ನಡೆಸಬೇಕೆಂದು ಹೇಳುತ್ತದೆ. ಫಾದರ್ ಸಾವಿನ ವಿಚಾರದಲ್ಲಿಯೂ ಅಂಥ ತನಿಖೆ ನಡೆದಿದೆಯಾದರೂ ವರದಿ ಹೊರಬಂದಿಲ್ಲ. ನಿರ್ಣಾಯಕ ಪ್ರಶ್ನೆಯೆಂದರೆ, ಮ್ಯಾಜಿಸ್ಟ್ರೇಟ್ ಕೇವಲ ತಕ್ಷಣದ ಕಾರಣಗಳಿಗೆ ಸೀಮಿತರಾಗುತ್ತಾರೆಯೇ ಅಥವಾ ಆಳವಾಗಿ ಪರಿಶೀಲಿಸುತ್ತಾರೆಯೇ? ಬಂಧಿತ ವ್ಯಕ್ತಿಯನ್ನು ನೋಡಿಕೊಳ್ಳುವಲ್ಲಿ ರಾಜ್ಯದ ವ್ಯವಸ್ಥಿತ ವೈಫಲ್ಯವನ್ನು ಗಮನಿಸುತ್ತಾರೆಯೇ? ಫಾದರ್ ಸ್ಟ್ಯಾನ್ ಜೈಲು ಆಸ್ಪತ್ರೆಯಲ್ಲಿದ್ದಾಗ ಎಂಬಿಬಿಎಸ್ ವೈದ್ಯರನ್ನು ನೇಮಿಸುವಲ್ಲಿ ಕಾರಾಗೃಹ ಇಲಾಖೆ ವಿಫಲವಾಗಿದ್ದುದನ್ನು ಪರಿಗಣಿಸುತ್ತಾರೆಯೇ? ಫಾದರ್ ಸ್ಟ್ಯಾನ್ ಅವರ ವೈದ್ಯಕೀಯ ಅಗತ್ಯವನ್ನು ನೋಡಿಕೊಳ್ಳಲು ಮೂಲಸೌಕರ್ಯ ಇಲ್ಲದಿದ್ದುದರ ಬಗ್ಗೆ ನ್ಯಾಯಾಲಯಕ್ಕೆ ಪ್ರಾಮಾಣಿಕವಾಗಿ ತಿಳಿಸುವಲ್ಲಿನ ಜೈಲು ಅಧೀಕ್ಷಕರ ವೈಫಲ್ಯವನ್ನು ಪರಿಗಣನೆಗೆ ತೆಗದುಕೊಳ್ಳುತ್ತಾರೆಯೇ? ಫಾದರ್ ಅವರಿಗೆ ಕೋವಿಡ್ ಸಮಯದಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ನೀಡಲು, ಸುಪ್ರೀಂ ಕೋರ್ಟ್ ಮತ್ತು ಸರಕಾರ ಜೈಲುಗಳ ದಟ್ಟಣೆ ಕಡಿಮೆ ಮಾಡಲು ಕರೆ ನೀಡಿದ್ದಾಗಲೂ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ತನಿಖಾಧಿಕಾರಿ ಉದ್ದೇಶಪೂರ್ವಕ ವಿರೋಧಿಸಿದ್ದರೆಂಬುದನ್ನು ಗಮನಿಸುತ್ತಾರೆಯೇ? ಫಾದರ್ ಸ್ಟ್ಯಾನ್ ಅವರ ಆಮ್ಲಜನಕದ ಮಟ್ಟ ಶೇ.೮೫ಕ್ಕಿಂತ ಕಡಿಮೆಯಿದ್ದುದು ಮತ್ತು ಅದರಿಂದಾಗಿ ತಕ್ಷಣವೇ ಕೋವಿಡ್ ಪರೀಕ್ಷೆ ನಡೆಸಲು ಆಗದಿದ್ದುದರ ಬಗ್ಗೆ ಉಲ್ಲೇಖಿಸಲು ಜೈಲು ವೈದ್ಯಕೀಯ ಅಧಿಕಾರಿಯ ಉದ್ದೇಶಪೂರ್ವಕ ವಿಫಲತೆಯನ್ನು ಗಣನೆಗೆ ತೆಗೆದುಕೊಳ್ಳುತ್ತಾರೆಯೆ? ಫಾದರ್ ಸ್ಟ್ಯಾನ್ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಕೋವಿಡ್ ಸೋಂಕಿಗೆ ತುತ್ತಾಗಿರುವುದು ತಕ್ಷಣವೇ ತಿಳಿಯಿತು, ಆದರೆ ಜೈಲಿನಲ್ಲೇಕೆ ಇದನ್ನು ಪತ್ತೆ ಮಾಡಲಾಗಲಿಲ್ಲ ಎಂದು ಮ್ಯಾಜಿಸ್ಟ್ರೇಟ್ ಪ್ರಶ್ನಿಸುತ್ತಾರೆಯೆ? ಎಲ್ಲಕ್ಕಿಂತ ಮುಖ್ಯವಾದ ಪ್ರಶ್ನೆಯೆಂದರೆ, ಅವರನ್ನು ಮೊದಲನೆಯವರಾಗಿ ಬಂಧಿಸಿದ ಎನ್ಐಎ ಕ್ರಮ ಸಮರ್ಥನೀಯವೆ?
ಈಗ ನಿಮ್ಮ ಮಾತು ನಿರ್ಣಾಯಕವಾಗಿದೆ. ಸ್ಟ್ಯಾನ್ ಅವರ ವಿಚಾರದಲ್ಲಿನ ಜಾರ್ಖಂಡ್ ರಾಜ್ಯಪಾಲರ ಮೌನ, ತನ್ನ ಜನರೊಡನೆ ಇರಬೇಕೆಂಬ ಅವರ ಹಂಬಲವನ್ನೇ ನಿರಾಕರಿಸಿತು. ಅದೇ ಮೌನ ಅಂಥದೇ ಹಂಬಲವನ್ನು ಈಗ ಇನ್ನೂ ಅನೇಕರ ಪಾಲಿಗೆ ನಿರಾಕರಿಸುತ್ತದೆ.
ನಾವು ಈ ಸಂಕಟದ ಕುರಿತು ದನಿಯೆತ್ತುತ್ತಲೇ ಇರುತ್ತೇವೆ.