ವೃತ್ತಿಪರತೆಯ ಕೊರತೆಯೂ ಮಾರುಕಟ್ಟೆಯ ಹಂಬಲವೂ
ಸುದ್ದಿಯ ರೋಚಕತೆಯನ್ನೇ ಪ್ರಧಾನವಾಗಿ ಬಿಂಬಿಸುವ ಭರದಲ್ಲಿ ‘ಬ್ರೇಕಿಂಗ್ ನ್ಯೂಸ್’ ಎಂಬ ಪದಗುಚ್ಛದ ಮೂಲಾರ್ಥವನ್ನೇ ಹಾಳುಗೆಡಹಿರುವ ಸುದ್ದಿಮನೆಗಳಿಗೆ ಪ್ರತಿಯೊಂದು ಹೊಸ ಸುದ್ದಿಯೂ ‘ಬ್ರೇಕ್’ ಮಾಡಲೆಂದೇ ಸೃಷ್ಟಿಯಾಗುತ್ತವೆ. ಮಾರುಕಟ್ಟೆ ಟಿಆರ್‌ಪಿ ರೇಟಿಂಗ್ ವಾಹಿನಿಗಳ ಅಸ್ತಿತ್ವಕ್ಕೆ ಮೂಲ ಆಧಾರ ಎನ್ನುವುದು ಸರ್ವವೇದ್ಯವೇ ಆದರೂ, ಜನಮಾನಸದ ನಡುವೆ ಸದಭಿಪ್ರಾಯವನ್ನು ಮೂಡಿಸುವ ನಿಟ್ಟಿನಲ್ಲಿ, ಸಮಾಜದ ಒಳಿತು ಕೆಡುಕುಗಳನ್ನು ಪಾರದರ್ಶಕವಾಗಿ ಚರ್ಚೆಗೊಳಪಡಿಸಿ, ಸತ್ಯಾಸತ್ಯತೆಯನ್ನು ಜನರ ಮುಂದಿಡುವ ವೃತ್ತಿಪರ ಕರ್ತವ್ಯವನ್ನು ಸುದ್ದಿವಾಹಿನಿಗಳು ಮರೆಯಕೂಡದಲ್ಲವೇ?
ಲಕ್ಷಾಂತರ ಜನರ ಸಾವು ನೋವಿಗೆ ಕಾರಣವಾದ ಕೋವಿಡ್-19 ವೈರಾಣು ಒಂದು ರೀತಿಯಲ್ಲಿ ಭಾರತೀಯ ಸಮಾಜದಲ್ಲಿ ಅವಿತುಕೊಂಡಿದ್ದ ಹಲವು ಆಯಾಮಗಳ ದುಷ್ಟತನ ಮತ್ತು ಕೊಳಕುಗಳನ್ನು ಹೊರಹಾಕುವ ಮೂಲಕ 21ನೆಯ ಶತಮಾನದ ಭಾರತದ ಜನತೆಗೆ ಸತ್ಯದರ್ಶನವನ್ನೂ ಮಾಡಿಸಿತ್ತು. ಜಾತಿ ವ್ಯವಸ್ಥೆಯ ತಾರತಮ್ಯ, ಅರ್ಥವ್ಯವಸ್ಥೆಯಲ್ಲಡಗಿದ್ದ ಅಸಮಾನತೆಗಳು, ಆರೋಗ್ಯ ವಲಯದ ಕೊರತೆಗಳು, ಕೋಮು-ಮತದ್ವೇಷದ ವಿವಿಧ ಆಯಾಮಗಳು, ಮೇಲಿನಿಂದ ಕೆಳಗಿನವರೆಗೂ ಆಳ್ವಿಕೆಯ ನೆಲೆಗಳಲ್ಲಿದ್ದ ಅಸಮರ್ಥತೆ ಇವೆಲ್ಲವನ್ನೂ ಕೋವಿಡ್ ಒಮ್ಮೆಲೇ ಜನತೆಯ ಮುಂದೆ ಅನಾವರಣಗೊಳಿಸಿತ್ತು. ಈ ಹಂತದಲ್ಲಿ ಗುರುತಿಸಲೇಬೇಕಾದ ಕೋವಿಡ್ ಕೊಡುಗೆ ಎಂದರೆ ಭಾರತದ ಮುಖ್ಯವಾಹಿನಿ ವಿದ್ಯುನ್ಮಾನ ಮಾಧ್ಯಮಗಳ, ವಿಶೇಷವಾಗಿ ಸುದ್ದಿವಾಹಿನಿಗಳ ಅಸೂಕ್ಷ್ಮತೆ, ಆಂತರಿಕ ದ್ವೇಷಾಸೂಯೆ ಮತ್ತು ವೃತ್ತಿ ಧರ್ಮದ ಕೊರತೆ, ಬೇಜವಾಬ್ದಾರಿಯನ್ನು ಹೊರಹಾಕಿದ್ದು.
ಈ ಹಂತದಲ್ಲೇ ಭಾರತದ, ಅದರಲ್ಲೂ ಕನ್ನಡದ ವಿದ್ಯುನ್ಮಾನ ಸುದ್ದಿಮನೆಗಳು ವಿವೇಕ ಪಡೆದುಕೊಳ್ಳಬೇಕಿತ್ತು. ಬಂಡವಾಳ-ಮಾರುಕಟ್ಟೆ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳ ಸಂರಕ್ಷಕರಾಗಿ ಕಾರ್ಯನಿರ್ವಹಿಸುವಾಗಲೂ, ಮಾಧ್ಯಮ ಎನ್ನಲಾಗುವ ಒಂದು ಜವಾಬ್ದಾರಿಯುತ ಸಂವಹನ ವಲಯದಲ್ಲಿ ವೃತ್ತಿಧರ್ಮ, ವೃತ್ತಿಪರತೆ, ವಸ್ತುನಿಷ್ಠತೆ, ಪಾರದರ್ಶಕತೆ ಮತ್ತು ಕನಿಷ್ಠ ಪ್ರಾಮಾಣಿಕತೆ ಅತ್ಯವಶ್ಯವಾಗಿ ಇರಲೇಬೇಕು ಎಂಬ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕಿತ್ತು. ಯಾವುದೇ ಘಟನೆ ನಡೆದರೂ ಕ್ಷಣಮಾತ್ರದಲ್ಲಿ ಸಮಾಜದ ತಳಮಟ್ಟದವರೆಗೂ ಸುದ್ದಿಯನ್ನು ತಲುಪಿಸುವ ಶಕ್ತಿ ಹೊಂದಿರುವ ವಿದ್ಯುನ್ಮಾನ ಸುದ್ದಿಮನೆಗಳಿಗೆ ತಾವು ನಿಂತ ನೆಲದ ಅರಿವು ಇರುವಂತೆಯೇ ತಮ್ಮ ಸಾಮಾಜಿಕ-ನೈತಿಕ ಬಾಧ್ಯತೆ- ಜವಾಬ್ದಾರಿಯ ಪರಿವೆಯೂ ಇರಬೇಕು. ದುರದೃಷ್ಟವಶಾತ್ ಕನ್ನಡದ ಬಹುತೇಕ ಸುದ್ದಿಮನೆಗಳು ಈ ಜವಾಬ್ದಾರಿಯಿಂದ ವಿಮುಖವಾಗಿವೆ.
ರೋಚಕತೆಯ ಪರಾಕಾಷ್ಠೆ
ಸುದ್ದಿಯ ರೋಚಕತೆಯನ್ನೇ ಪ್ರಧಾನವಾಗಿ ಬಿಂಬಿಸುವ ಭರದಲ್ಲಿ ‘ಬ್ರೇಕಿಂಗ್ ನ್ಯೂಸ್’ ಎಂಬ ಪದಗುಚ್ಛದ ಮೂಲಾರ್ಥ ವನ್ನೇ ಹಾಳುಗೆಡಹಿರುವ ಸುದ್ದಿಮನೆಗಳಿಗೆ ಪ್ರತಿಯೊಂದು ಹೊಸ ಸುದ್ದಿಯೂ ‘ಬ್ರೇಕ್’ ಮಾಡಲೆಂದೇ ಸೃಷ್ಟಿಯಾಗುತ್ತವೆ. ಮಾರುಕಟ್ಟೆ ಟಿಆರ್‌ಪಿ ರೇಟಿಂಗ್ ವಾಹಿನಿಗಳ ಅಸ್ತಿತ್ವಕ್ಕೆ ಮೂಲ ಆಧಾರ ಎನ್ನುವುದು ಸರ್ವವೇದ್ಯವೇ ಆದರೂ, ಜನಮಾನಸದ ನಡುವೆ ಸದಭಿಪ್ರಾಯವನ್ನು ಮೂಡಿಸುವ ನಿಟ್ಟಿನಲ್ಲಿ, ಸಮಾಜದ ಒಳಿತು ಕೆಡುಕುಗಳನ್ನು ಪಾರದರ್ಶಕವಾಗಿ ಚರ್ಚೆಗೊಳಪಡಿಸಿ, ಸತ್ಯಾಸತ್ಯತೆಯನ್ನು ಜನರ ಮುಂದಿಡುವ ವೃತ್ತಿಪರ ಕರ್ತವ್ಯವನ್ನು ಸುದ್ದಿವಾಹಿನಿಗಳು ಮರೆಯಕೂಡದಲ್ಲವೇ? ಇಲ್ಲವಾದರೆ ಜನರ ಮನತಣಿಸಲೆಂದೇ ಪರದೆಗಳನ್ನಲಂಕರಿಸುವ ಮಸಾಲಾ ಚಿತ್ರಗಳಿಗೂ ಅಥವಾ ಅಸಭ್ಯ-ಅಶ್ಲೀಲ ಪತ್ರಿಕೆಗಳಿಗೂ, ವಿದ್ಯುನ್ಮಾನ ಮಾಧ್ಯಮಗಳಿಗೂ ಏನು ವ್ಯತ್ಯಾಸ ಇರಲು ಸಾಧ್ಯ?
ಕಳೆದ ಒಂದು ತಿಂಗಳಲ್ಲಿ ಕನ್ನಡದ ಪ್ರಮುಖ ಸುದ್ದಿವಾಹಿನಿಗಳನ್ನು ವೀಕ್ಷಿಸಿದ ಯಾರಿಗೇ ಆದರೂ ಜಿಗುಪ್ಸೆಯಾಗುವುದು ಖಚಿತ. ಅಷ್ಟೇ ಅಲ್ಲ ರಾಜ್ಯದಲ್ಲಿ ದರ್ಶನ್ ಎಂಬ ಸಿನೆಮಾ ನಟ ಮತ್ತು ಸಿದ್ದರಾಮಯ್ಯ ಸರಕಾರದ ಸುತ್ತ ಹಬ್ಬಿಕೊಂಡಿರುವ ಭ್ರಷ್ಟಾಚಾರದ ಹುತ್ತ, ಈ ಎರಡನ್ನು ಹೊರತುಪಡಿಸಿ ಮತ್ತೇನೂ ನಡೆಯುತ್ತಲೇ ಇಲ್ಲ ಎಂದು ಭಾಸವಾಗುವುದು ಖಚಿತ. ಅಪರಾಧಗಳನ್ನು ವರದಿ ಮಾಡುವುದಕ್ಕೂ, ಅದರ ರಾಜಕೀಯ-ಸಾಮಾಜಿಕ ಆಯಾಮಗಳನ್ನು ಚರ್ಚಿಸಿ ಪರಾಮರ್ಶಿಸುವುದಕ್ಕೂ ಒಂದು ಮಾಧ್ಯಮ ಸಂಹಿತೆ ಎನ್ನುವುದು ಇದ್ದೇ ಇರುತ್ತದೆ. ಎಂತಹ ಮೇರು ನಟರೇ ಆದರೂ, ರಾಜಕಿಯ ಮುತ್ಸದ್ದಿಯೇ ಆದರೂ ಅವರ ಸುತ್ತ ಹೆಣೆದುಕೊಳ್ಳುವ ಅಪರಾಧಗಳನ್ನು ವರದಿ ಮಾಡುವಾಗ ಮಾಧ್ಯಮಗಳಿಗೆ ರೋಚಕತೆಗಿಂತಲೂ ವಸ್ತುನಿಷ್ಠತೆ ಮುಖ್ಯವಾಗಿ ಕಾಣಬೇಕಲ್ಲವೇ?
ಕಳೆದ ಒಂದು ತಿಂಗಳಲ್ಲಿ ಸುದ್ದಿವಾಹಿನಿಗಳನ್ನು ಗಮನಿಸಿದರೆ ಈ ನೈತಿಕ ಕರ್ತವ್ಯದ ಪರಿವೆಯೇ ಇಲ್ಲವೇನೋ ಎನಿಸುತ್ತದೆ. ಚಿತ್ರ ನಟ ದರ್ಶನ್ ಸುದ್ದಿವಾಹಿನಿಗಳ ಅಷ್ಟದಿಕ್ಕುಗಳನ್ನೂ ಆವರಿಸಿಕೊಂಡಿರುವಂತೆ ಅವರ ಬಂಧನ, ಜೈಲುವಾಸ, ಜೈಲು ಬದಲಿ ಇತ್ಯಾದಿ ವಿಚಾರಗಳೇ ‘ಬ್ರೇಕಿಂಗ್ ನ್ಯೂಸ್’ಗಳಾಗುತ್ತಿವೆ. ದರ್ಶನ್ ಬಂಧನದಲ್ಲಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಡೆದ ಘಟನೆಗಳು ಬಹಿರಂಗವಾಗಿ ಸರಕಾರವೂ ಎಚ್ಚೆತ್ತು ಕೂಡಲೇ ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಿದೆ. ಇದು ಕಾನೂನಾತ್ಮಕ ಪ್ರಕ್ರಿಯೆ. ಆದರೆ ಕನ್ನಡದ ಸುದ್ದಿಮನೆಗಳಿಗೆ ಅಲ್ಲಿ ನಡೆದ ಪ್ರತಿಯೊಂದು ಕ್ಷಣದ ಘಟನೆಯೂ ‘ಪ್ರಮುಖ ಸುದ್ದಿ’ ಆಗುವುದಾದರೂ ಹೇಗೆ? ಅದರ ಸುತ್ತ ವರದಿಗಾರರು ಸ್ಥಳದಲ್ಲೇ ನಿಂತು ಎಳೆಎಳೆಯಾಗಿ ವಿವರಿಸುವ ಜರೂರತ್ತು ಮಾಧ್ಯಮಗಳಿಗೆ ಇದೆಯೇ? ಅಥವಾ ಸಾರ್ವಜನಿಕರಿಗೆ ಇಂತಹ ಕ್ಷುಲ್ಲಕ ಸುದ್ದಿಗಳು ಬೇಕಿವೆಯೇ?
ಸಾಮಾಜಿಕ ಜವಾಬ್ದಾರಿ ಮತ್ತು ಮಾರುಕಟ್ಟೆ
ಮಾರುಕಟ್ಟೆ ಟಿಆರ್‌ಪಿ ನಿರ್ಧಾರವಾಗುವುದು ವೀಕ್ಷಕರ ಸಂಖ್ಯೆಯನ್ನಾಧರಿಸಿಯೇ ಹೊರತು, ವೀಕ್ಷಕರ ಅಭಿಪ್ರಾಯವನ್ನು ಆಧರಿಸಿ ಅಲ್ಲ. ವೀಕ್ಷಕರು ಕೇಬಲ್ ಮೂಲಕ ಒಮ್ಮೆ ಕಣ್ಣಾಡಿಸಿದರೂ ಅದು ಟಿಆರ್‌ಪಿಗೆ ನೆರವಾಗುತ್ತದೆ. ಆದರೆ ಕನ್ನಡದ ಸಹೃದಯ ವೀಕ್ಷಕರಿಗೆ ಈ ರೋಚಕ ಸುದ್ದಿಗಳು ರುಚಿಸುತ್ತವೆಯೇ ಅಥವಾ ಅವರ ನಿತ್ಯ ಬದುಕಿನ ಜಂಜಾಟದಲ್ಲಿ ಇದು ಅತ್ಯವಶ್ಯವೇ ಅಥವಾ ಅನಿವಾರ್ಯವೇ ಎಂದು ಅಳೆಯಲು ಯಾವುದೇ ಮಾನದಂಡಗಳಿಲ್ಲ. ಹೀಗಿರುವಾಗಲೂ ತಮ್ಮ ಮಾರುಕಟ್ಟೆ ರೇಟಿಂಗ್‌ಗಾಗಿ ರೋಚಕತೆಯನ್ನು ಸೃಷ್ಟಿಸುವ ಸುದ್ದಿವಾಹಿನಿಗಳಿಗೆ ದರ್ಶನ್ ಆಗಲೀ, ಪ್ರಜ್ವಲ್ ರೇವಣ್ಣ ಆಗಲೀ ಅಥವಾ ಮುಡಾ ಹಗರಣವಾಗಲೀ ಸಾಮಾನ್ಯ ನಾಗರಿಕರಿಗೆ ಅಥವಾ ‘ಕನ್ನಡದ ವೀಕ್ಷಕ ಮಹಾಶಯರಿಗೆ’ ಏಕಮೇವ ಸುದ್ದಿಯೇನೂ ಆಗಿರಲಿಕ್ಕಿಲ್ಲ, ಅಲ್ಲವೇ?
ಏಕೆಂದರೆ ಸುತ್ತಲಿನ ರಾಜಕೀಯ-ಸಾಮಾಜಿಕ ವಿದ್ಯಮಾನಗಳನ್ನು ಗಮನಿಸಿದಾಗ ಕರ್ನಾಟಕದ ಜನತೆ ನೂರಾರು ಜಟಿಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಳೆ ಹಾವಳಿ, ಅತಿವೃಷ್ಟಿ, ಭೂಕುಸಿತ, ನಗರಗಳ ದುರವಸ್ಥೆ, ದುಡಿಯುವ ವರ್ಗಗಳ ಸಮಸ್ಯೆಗಳು, ಪ್ರತೀ 16 ನಿಮಿಷಕ್ಕೊಮ್ಮೆ ನಡೆಯುತ್ತಿರುವ ಮಹಿಳಾ ದೌರ್ಜನ್ಯಗಳು, ಶಿಕ್ಷಣ ವಲಯದಲ್ಲಿ ವಿದ್ಯಾರ್ಥಿ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳು ಇವೆಲ್ಲವೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಆಗಲೇ ಈ ಸಮಸ್ಯೆಗಳಿಗೆ ಸರಕಾರ ಯಾವ ರೀತಿ ಸ್ಪಂದಿಸುತ್ತಿದೆ ಎಂಬ ಅರಿವು ಸಾರ್ವಜನಿಕರಲ್ಲಿ ಮೂಡುತ್ತದೆ. ಆಗ ಸಾಮಾನ್ಯ ಜನತೆಗೆ ಸರಕಾರದ ತಪ್ಪುಒಪ್ಪುಗಳನ್ನು ಪ್ರಶ್ನಿಸುವ ಸ್ಥೈರ್ಯ ಬರುತ್ತದೆ. ಅದಕ್ಕೆ ತಕ್ಕುದಾದ ಆಕರಗಳು ದೊರೆಯುತ್ತವೆ. ಎಂತಹುದೇ ಪಾತಕ ಘಟನೆಯಾದರೂ ಅದರ ಸುತ್ತಲಿನ ರಾಜಕೀಯ-ಸಾಮಾಜಿಕ ಆಯಾಮಗಳನ್ನು ಅರಿಯದೆ ಹೋದರೆ, ಸಮಸ್ಯೆಯ ಮೂಲ ಕಾರಣವೇ ಮರೆಯಾಗಿಬಿಡುತ್ತದೆ. ಸಾರ್ವಜನಿಕ ಸಂಕಥನಗಳಲ್ಲಿ ಊಹಾಪೋಹಗಳು ಅಥವಾ ರಾಜಕೀಯ ಹಿತಾಸಕ್ತಿಯ ನಿಲುವುಗಳೇ ಪ್ರಧಾನವಾಗಿ ಹರಿಯತೊಡಗುತ್ತವೆ.
ಈ ನಿಟ್ಟಿನಲ್ಲಿ ಸಮಾಜ ಎದುರಿಸುವ ಸಮಸ್ಯೆಗಳ ಬಗ್ಗೆ ಆರೋಗ್ಯಕರ ಚರ್ಚೆಗಳನ್ನು ಹುಟ್ಟುಹಾಕುವ ನೈತಿಕ ಹೊಣೆ ಮಾಧ್ಯಮಗಳ ಮೇಲಿರುತ್ತದೆ. ವಿಶೇಷವಾಗಿ ವಿದ್ಯುನ್ಮಾನ ಸುದ್ದಿಮನೆಗಳ ಮೇಲಿರುತ್ತದೆ. ಆದರೆ ದರ್ಶನ್, ಪ್ರಜ್ವಲ್ ಅಥವಾ ಮುಡಾ ಪ್ರಕರಣಗಳ ಸುತ್ತ ಸುದ್ದಿವಾಹಿನಿಗಳು ನಡೆಸುವ ‘ಪ್ಯಾನೆಲ್ ಚರ್ಚೆಗಳು’ ತಲೆಚಿಟ್ಟುಹಿಡಿಸುವ ರೀತಿಯಲ್ಲಿ ಕರ್ಕಶವಾಗಿರುತ್ತವೆ. ಚರ್ಚೆ ಮತ್ತು ಸಂವಾದ ಎಂಬ ಉದಾತ್ತ ಅಭಿವ್ಯಕ್ತಿ ಸಾಧನಗಳನ್ನೇ ನಿರರ್ಥಕಗೊಳಿಸುವ ರೀತಿಯಲ್ಲಿ ನಡೆಯುವ ‘ಬಿಸಿಬಿಸಿ ಚರ್ಚೆಗಳು’ ಬೀದಿ ಕಾಳಗದಂತೆ ಗೋಚರಿಸುವುದು ವೀಕ್ಷಕರಲ್ಲಿ ಹೇವರಿಕೆ ತರಿಸುವಂತಿರುತ್ತದೆ. ಕನ್ನಡದ ಸುದ್ದಿಮನೆಗಳು ವಾರಕ್ಕೊಮ್ಮೆಯಾದರೂ ಬಿಬಿಸಿ ವಾಹಿನಿಯನ್ನು ನೋಡುವ ಪರಿಪಾಠ ಬೆಳೆಸಿಕೊಳ್ಳಬೇಕು. ಇಡೀ ಸಮಾಜವನ್ನು ಕಾಡುವ ಒಂದು ಗಂಭೀರ ವಿಚಾರವನ್ನು ಹೇಗೆ ಚರ್ಚಿಸಬಹುದು ಎಂದು ತಿಳಿಯಲು ಇದು ಉಪಯುಕ್ತವಾಗಬಹುದು.
ವ್ಯಕ್ತಿ ಕೇಂದ್ರಿತ ರೋಚಕೆ
ಈ ಸೂಕ್ಷ್ಮತೆಗಳ ಹೊರತಾಗಿ ನೋಡಿದಾಗ, ಕರ್ನಾಟಕದಲ್ಲಿ ದರ್ಶನ್ ಮತ್ತವರ ಪಾತಕ ಕೃತ್ಯಗಳನ್ನು ಹೊರತುಪಡಿಸಿ ಮತ್ತಾವುದೇ ಸುದ್ದಿಯೇ ಇಲ್ಲವೇ ಎನಿಸುವುದೂ ಸಹ ಸತ್ಯ. ನಿಜ, ಎಂತಹುದೇ ಅಪರಾಧಗಳನ್ನು ಎಸಗಿದ್ದರೂ ದರ್ಶನ್ ಅಥವಾ ಪ್ರಜ್ವಲ್ ರೇವಣ್ಣ ಇನ್ನೂ ಆರೋಪಿಗಳು ಮಾತ್ರ, ಅವರ ಅಭಿಮಾನಿ ವೃಂದ ತಮ್ಮ ನೆಚ್ಚಿನ ನಾಯಕ ಆರೋಪ ಮುಕ್ತರಾಗಲಿ ಎಂದು ಆಶಿಸುತ್ತಲೇ ಇರುತ್ತದೆ. ಆದರೆ ಘೋರ ಅಪರಾಧಗಳಿಗಾಗಿ ಶಿಕ್ಷೆಯ ನಿರೀಕ್ಷೆಯಲ್ಲಿರುವ ಆರೋಪಿಗಳನ್ನು ದಿನವಿಡೀ ವೈಭವೀಕರಿಸುವ ಅವಶ್ಯಕತೆ ಸುದ್ದಿಮನೆಗಳಿಗೆ ಇದೆಯೇ? ಇದು ಮಾಧ್ಯಮದ ಬಾಧ್ಯತೆಯೇ ಅಥವಾ ಆದ್ಯತೆಯೇ? ಪ್ರತಿಯೊಂದು ಸುದ್ದಿ ತುಣುಕನ್ನೂ ರೋಚಕಗೊಳಿಸುವ ಮೂಲಕ ಪಾತಕ ಲೋಕವನ್ನೂ ಆಕರ್ಷಕವಾಗಿಸುವುದು ತನ್ಮೂಲಕ ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯನ್ನು ಮತ್ತಷ್ಟು ವೈಭವೀಕರಿಸುವುದು ಸುದ್ದಿವಾಹಿನಿಗಳ ಬಾಧ್ಯತೆಯೇ?
ಕಾನೂನು ಕುಣಿಕೆಯಲ್ಲಿ ಸಿಲುಕಿರುವ ವ್ಯಕ್ತಿಯನ್ನು ಬಣ್ಣಿಸಲು ಸುದ್ದಿಮನೆಗಳು ಬಳಸುವ ರೋಚಕ ವಿಧಾನಗಳನ್ನೂ ಸಹ ಇಲ್ಲಿ ಪ್ರಶ್ನಿಸಬೇಕಾಗುತ್ತದೆ. ಬಹುಶಃ ಕನ್ನಡದ ಸುದ್ದಿಮನೆಗಳನ್ನು ಹೆಚ್ಚು ನೋಡುವ ವೀಕ್ಷಕರಿಗೆ ದರ್ಶನ್ ಅವರ ಮೂಲ ಹೆಸರೇ ಮರೆತುಹೋಗಿರಲಿಕ್ಕೂ ಸಾಕು. ಏಕೆಂದರೆ ಪ್ರತಿಯೊಂದು ಸುದ್ದಿವಾಹಿನಿಯಲ್ಲೂ ಅವರನ್ನು ಬಣ್ಣಿಸುವಾಗ ಅವರೇ ನಟಿಸಿದ ಚಲನಚಿತ್ರಗಳ ಹೆಸರನ್ನೇ ಸಂವಾದಿಯಾಗಿ ಬಳಸಲಾಗುತ್ತಿದೆ. ದಾಸ, ಡಿ ಬಾಸ್, ಗಜ, ಸಾರಥಿ, ಕರಿಯ ಇತ್ಯಾದಿ. ಹೀಗೆ ಬಣ್ಣಿಸುವಾಗ ಪೋಣಿಸಲಾಗುವ ವಾಕ್ಯಗಳಲ್ಲಿ ಕಾವ್ಯಾತ್ಮಕ ಅಭಿವ್ಯಕ್ತಿಯೂ ನುಸುಳುವುದರಿಂದ ಅಭಿಮಾನಿ ವೃಂದ ಪುಳಕಿತವಾಗಬಹುದು. ಆದರೆ ಕನ್ನಡದ ಭಾಷಾ ಪ್ರಿಯರಿಗೆ ಇದು ಅಸಹ್ಯ ತರಿಸುತ್ತದೆ. ಏಕೆಂದರೆ ಇಂತಹ ಪದಜೋಡಣೆಗಳಲ್ಲಿ ಭಾಷೆ ನಿಮಿತ್ತ ಮಾತ್ರವಾಗಿ ವ್ಯಕ್ತಿ ಆರಾಧನೆ ಪ್ರಧಾನವಾಗುತ್ತದೆ. ಪ್ರಸಿದ್ಧ ವ್ಯಕ್ತಿಗಳು ನಿಧನರಾದಾಗಲೂ ಇದೇ ಮಾದರಿಯನ್ನು ಬಳಸಲಾಗುತ್ತದೆ. ಅದು ಸತ್ತ ವ್ಯಕ್ತಿಯ ಮೇಲಿನ ಗೌರವದಿಂದ ಕೊಂಚ ಮಟ್ಟಿಗೆ ಸಹನೀಯ ಎನಿಸುತ್ತದೆ. ಆದರೆ ಘೋರ ಅಪರಾಧದ ಆರೋಪ ಎದುರಿಸುತ್ತಿರುವ ವ್ಯಕ್ತಿಗೂ ಇದೇ ಸೂತ್ರವನ್ನು ವಿಸ್ತರಿಸುವುದು ವಂದಿಮಾಗಧ ಲಕ್ಷಣವಾಗುತ್ತದೆ. ಈ ಪರಿಜ್ಞಾನ ಮಾಧ್ಯಮಗಳಲ್ಲಿ, ಸುದ್ದಿವಾಹಿನಿಗಳಲ್ಲಿ ಇರಬೇಕಲ್ಲವೇ?
ಇಲ್ಲಿ ದರ್ಶನ್ ನಿಮಿತ್ತ ಮಾತ್ರವಾಗುತ್ತಾರೆ ಅಥವಾ ಮಾಧ್ಯಮಗಳ, ಸುದ್ದಿಮನೆಗಳ ಮಾರುಕಟ್ಟೆ ವಿಸ್ತರಣೆಗೆ ನೆರವಾಗುವ ಬಳಕೆಯ ವಸ್ತು ಆಗುತ್ತಾರೆ. ಎಂತಹುದೇ ಘೋರ ಅಪರಾಧವಾಗಿದ್ದರೂ ಅದರ ಅಂತಿಮ ತೀರ್ಮಾನ ಮಾಡುವುದು ಈ ದೇಶದ ನ್ಯಾಯ ವ್ಯವಸ್ಥೆ ಮತ್ತು ಕಾನೂನು. ಅಲ್ಲಿಯವರೆಗೂ ವ್ಯಕ್ತಿ ಆರೋಪಿಯಾಗಿರುತ್ತಾನೆ. ಸಮಾಜದ ದೃಷ್ಟಿಯಲ್ಲಿ ಕಳಂಕಪ್ರಾಯರಾಗಿ ಕಾಣುವ ಇಂತಹ ಆರೋಪಿಗಳ ಸುತ್ತ ಇರುವ ಯಾವುದೇ ಅಪರಾಧಗಳನ್ನು ವಸ್ತುನಿಷ್ಠತೆಯಿಂದ ಚರ್ಚೆಗೊಳಪಡಿಸಿ, ಇಂತಹ ಅಪರಾಧಗಳ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಆಯಾಮಗಳನ್ನು ಚರ್ಚಿಸುವುದು ಮಾಧ್ಯಮಗಳ ಬಾಧ್ಯತೆ ಅಲ್ಲವೇ? ಇಲ್ಲಿ ವ್ಯಕ್ತಿಗಿಂತಲೂ ಅಂತಹ ವ್ಯಕ್ತಿಗಳು ಪ್ರಭಾವಿಸುವ ಸಮಾಜ ಮತ್ತು ಅವರನ್ನು ಪ್ರಭಾವಿಸುವ ಒಂದು ಸಾಮಾಜಿಕ ವ್ಯವಸ್ಥೆ ನಮ್ಮ ಸಂವಾದ-ಚರ್ಚೆಗಳಿಗೆ ಆಕರವಾಗಬೇಕಲ್ಲವೇ?
ನಾಗರಿಕ ಜವಾಬ್ದಾರಿ
ಈ ಅರಿವು ಮಾಧ್ಯಮಗಳಿಗೆ, ವಿದ್ಯುನ್ಮಾನ ಸುದ್ದಿಮನೆಗಳಿಗೆ ಇರಬೇಕಾಗುತ್ತದೆ. ತಮ್ಮ ಅಸ್ತಿತ್ವಕ್ಕಾಗಿ ಮಾರುಕಟ್ಟೆಯ ಅನಿವಾರ್ಯತೆಗಳನ್ನು ಸಮರ್ಪಕವಾಗಿ ನಿಭಾಯಿಸುವುದು ಅಗತ್ಯವೇ ಆದರೂ, ಇದನ್ನೂ ಮೀರಿದ ನಾಗರಿಕ ಜವಾಬ್ದಾರಿ ವಿದ್ಯುನ್ಮಾನ ಸುದ್ದಿಮನೆಗಳ ಮೇಲಿರುತ್ತದೆ. ಸಮಾಜಕ್ಕೆ, ಅದರಲ್ಲೂ ತಳಮಟ್ಟದ ಸಮಾಜದಲ್ಲಿ ನಿತ್ಯ ಸಂಕಷ್ಟಗಳನ್ನು ಎದುರಿಸುವ, ಸಾಮಾನ್ಯ ಜನತೆಗೆ ತಲುಪಿಸಬೇಕಾದ ಮಾಹಿತಿಗಳು ಹೇರಳವಾಗಿರುತ್ತವೆ. ಸುತ್ತಲೂ ನಡೆಯುವ ಘಟನೆಗಳ ಸುತ್ತ ಹೆಣೆಯಲಾಗುವ ಕತೆಗಳಿಂದಾಚೆಗೂ ಇರಬಹುದಾದ ಸಾಮಾಜಿಕ ಸತ್ಯಾಸತ್ಯತೆಗಳನ್ನು ಜನತೆಗೆ ತಲುಪಿಸಬೇಕಾಗುತ್ತದೆ. ಈ ನೈತಿಕ ಜವಾಬ್ದಾರಿ ಮಾಧ್ಯಮ ಲೋಕದ ಮೇಲಿದೆ, ವಿಶೇಷವಾಗಿ ವಿದ್ಯುನ್ಮಾನ ಸುದ್ದಿ ಮನೆಗಳ ಮೇಲಿದೆ. ಕರ್ನಾಟಕದಲ್ಲಿ ದರ್ಶನ್, ಪ್ರಜ್ವಲ್ ಅಲ್ಲದೆ ಬೇರೆ ವಿದ್ಯಮಾನಗಳೂ ನಡೆಯುತ್ತಿವೆ ಎನ್ನುವ ವಾಸ್ತವವನ್ನು ಜನತೆಗೆ ಮುಟ್ಟಿಸುವ ಜವಾಬ್ದಾರಿ ಸುದ್ದಿಮನೆಗಳ ಮೇಲಿರುತ್ತದೆ.
ಕನ್ನಡದ ಸುದ್ದಿಮನೆಗಳನ್ನು ನೋಡುತ್ತಿದ್ದರೆ ಈ ಜವಾಬ್ದಾರಿಯನ್ನು ಮರೆತಂತೆ ಕಾಣುತ್ತದೆ. ‘ಬ್ರೇಕಿಂಗ್ ನ್ಯೂಸ್’ಗಳು ವೀಕ್ಷಕರ ‘ಹೆಡ್ ಬ್ರೇಕಿಂಗ್ ನ್ಯೂಸ್’ ಆಗದಂತೆ ಎಚ್ಚರವಹಿಸುವುದು ಅತ್ಯವಶ್ಯ. ಈ ನಿಟ್ಟಿನಲ್ಲಿ ಕನ್ನಡದ ಸುದ್ದಿಮನೆಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸುದ್ದಿ ನಿರೂಪಕರು ಗಂಟಲು ಹರಿದುಕೊಂಡು ಏರುದನಿಯಲ್ಲೇ ಮಾತನಾಡಬೇಕಾದ ಅವಶ್ಯಕತೆಯೂ ಇಲ್ಲ. ಮೆದು ಧ್ವನಿಯಲ್ಲಿ ಹೇಳಿದರೆ ವೀಕ್ಷಕರಿಗೆ ಕರ್ಣಾನಂದವಾಗುತ್ತದೆ. ಹಾಗೆಯೇ ರೋಚಕತೆಯಿಂದ ಮೂಲ ವಿಷಯವನ್ನೇ ಅಪ್ರಸ್ತುತಗೊಳಿಸುವ ಬದಲು, ಘಟನೆಗಳ ಹಿಂದಿನ ಸುಡು ವಾಸ್ತವಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ಸುದ್ದಿಮನೆಗಳ ನೈತಿಕ ಕರ್ತವ್ಯವೂ, ವೃತ್ತಿ ಧರ್ಮವೂ ಆಗಿದೆ. ಕೋವಿಡ್-19ನಿಂದ ಪಾಠ ಕಲಿಯಲಿಲ್ಲ. ಈಗಲಾದರೂ ಕನ್ನಡದ ವಿದ್ಯುನ್ಮಾನ ಸುದ್ದಿಮನೆಗಳು ಸ್ವ-ವಿಮರ್ಶೆಯ ಹಾದಿಯಲ್ಲಿ ಯೋಚಿಸಲು ಸಾಧ್ಯವೇ?