ಸೋಂಕು ಹಬ್ಬಿಸುವ ತಾಣಗಳಾಗುತ್ತಿರುವ ಆಸ್ಪತ್ರೆಗಳಲ್ಲಿನ ಐಸಿಯುಗಳು !
ಇಂದು ವಿವಿಧ ಕಾಯಿಲೆಯ ಹಿನ್ನೆಲೆಯ ರೋಗಿಗಳು ವಿವಿಧ ಸೋಂಕುಗಳನ್ನು ಆಸ್ಪತ್ರೆಗಳಿಗೆ ತರುತ್ತಿದ್ದಾರೆ. ಇದು ಸೋಂಕಿನ ನಿಯಂತ್ರಣವನ್ನು ಸಂಕೀರ್ಣಗೊಳಿಸುತ್ತಿದೆ. ವೈದ್ಯಕೀಯ ಸಾಧನಗಳು ಸಹ ಸೂಕ್ಷ್ಮಜೀವಿಗಳಿಗೆೆ ಐಸಿಯುಗಳಿಗೆ ನೇರ ಪ್ರವೇಶಕ್ಕೆ ರಹದಾರಿ ಒದಗಿಸುತ್ತಿವೆ. ಅಸಮರ್ಪಕ ಕ್ರಿಮಿನಾಶಕ ಅಥವಾ ದೀರ್ಘಕಾಲದ ಬಳಕೆಯು ಈ ಅಪಾಯವನ್ನು ಮತ್ತಷ್ಟೂ ಉಲ್ಬಣಗೊಳಿಸುತ್ತಿದೆ. ಕಟ್ಟುನಿಟ್ಟಾದ ಮಾರ್ಗಸೂಚಿಗಳ ಹೊರತಾಗಿಯೂ, ಐಸಿಯುನಲ್ಲಿ ಕೆಲಸ ಮಾಡುವ ಸಿಬ್ಬಂದಿಯ ನೈರ್ಮಲ್ಯದಲ್ಲಿನ ಲೋಪಗಳು ಗಮನಾರ್ಹ ಸಮಸ್ಯೆಯಾಗಿ ಉಳಿದಿವೆ.
ಆಸ್ಪತ್ರೆಗಳಲ್ಲಿನ ತೀವ್ರ ನಿಗಾ ಘಟಕಗಳನ್ನು (ಐಸಿಯು) ಗಂಭೀರವಾಗಿ ಅಸ್ವಸ್ಥರಾದ ರೋಗಿಗಳಿಗೆ ವಿಶೇಷವಾದ ಆರೈಕೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಈ ಕಾರಣದಿಂದ ಇಲ್ಲಿ ಸುಧಾರಿತ ಉಪಕರಣಗಳು ಮತ್ತು ಕಾರ್ಯವಿಧಾನಗಳನ್ನು ಬಳಸುತ್ತಾರೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಐಸಿಯುಗಳು ವಿವಿಧ ಕಾರಣಗಳಿಂದ ಸೋಂಕುಗಳ ಹರಡುವಿಕೆಗೆ ಹಾಟ್ಸ್ಪಾಟ್ಗಳಾಗಿ ಪರಿಣಮಿಸಿವೆ. ತೀವ್ರ ಕಾಯಿಲೆಯ ಸಮಯದಲ್ಲಿ ಐಸಿಯುಗಳು ಹೆಚ್ಚಿನ ಅವಲಂಬನೆಯ ವಲಯಗಳಾಗಿವೆ. ಅಲ್ಲಿ ರೋಗಿಗಳು ಸಾಮಾನ್ಯವಾಗಿ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರುತ್ತಾರೆ. ಇದರಿಂದ ರೋಗಿಗಳು ಬೇಗ ಸೋಂಕುಗಳಿಗೆ ಒಳಗಾಗುತ್ತಾರೆ. ವೆಂಟಿಲೇಟರ್ಗಳು, ಕ್ಯಾತಿಟರ್ಗಳು ಮುಂತಾದ ವೈದ್ಯಕೀಯ ಸಾಧನಗಳ ಉಪಸ್ಥಿತಿಯು ರೋಗಕಾರಕಗಳು ದೇಹಕ್ಕೆ ಪ್ರವೇಶಿಸುವ ಅಪಾಯವನ್ನು ಹೆಚ್ಚಿಸುತ್ತದೆ. ಇವಲ್ಲದೆ ಕಾರ್ಯಾವಧಿ ಮುಗಿದಿರುವ ವೈದ್ಯಕೀಯ ಉಪಕರಣಗಳಿಂದಲೂ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸುದ್ದಿಗಳು ಅಲ್ಲಲ್ಲಿ ನಿರಂತರವಾಗಿ ವರದಿಯಾಗುತ್ತಿವೆ. ಅಲ್ಲದೆ, ಐಸಿಯುನಲ್ಲಿ ಕೆಲಸ ಮಾಡುವ ನರ್ಸ್ಗಳು, ಆರೋಗ್ಯ ಸಹಾಯಕರು ಇವರುಗಳಿಂದಲೂ ಸೋಂಕು ಹರಡುವ ಅಪಾಯ ಭಾರತದಲ್ಲಿ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ.
ಅಧ್ಯಯನಗಳ ಪ್ರಕಾರ ಭಾರತದಲ್ಲಿ ವಿಶೇಷವಾಗಿ ತೀವ್ರ ನಿಗಾ ಘಟಕಗಳಲ್ಲಿ ಸಾಮಾನ್ಯವಾಗಿ ರಕ್ತಪ್ರವಾಹದ ಸೋಂಕುಗಳು, ವೆಂಟಿಲೇಟರ್-ಸಂಬಂಧಿತ ನ್ಯುಮೋನಿಯಾ ಸೋಂಕುಗಳು, ಕ್ಯಾತಿಟರ್-ಸಂಬಂಧಿತ ಮೂತ್ರದ ಸೋಂಕುಗಳು ಮತ್ತು ಶಸ್ತ್ರಚಿಕಿತ್ಸಾ ಸ್ಥಳದ ಸೋಂಕುಗಳನ್ನು ಒಳಗೊಂಡಿರುತ್ತವೆ. ಇತ್ತೀಚಿನ ಸಂಶೋಧನೆಗಳು ಪ್ರಕಾರ ಭಾರತೀಯ ಆಸ್ಪತ್ರೆಗಳ ಐಸಿಯುಗಳಲ್ಲಿ ವಿವಿಧ ಸೋಂಕುಗಳ ಹರಡುವಿಕೆಯು ಶೇ. ೯ ಮತ್ತು ೨೫ರ ನಡುವೆ ಇದೆ ಎಂದು ವರದಿಯಾಗಿದೆ, ಇದು ಜಾಗತಿಕ ಸರಾಸರಿಗಿಂತ ಹೆಚ್ಚಾಗಿದೆ. ಹೆಚ್ಚಾಗಿ ಸಂಪನ್ಮೂಲ ನಿರ್ಬಂಧಗಳು, ಕಡಿಮೆ ಸಿಬ್ಬಂದಿ ಮತ್ತು ಹೆಚ್ಚಿನ ರೋಗಿಗಳ ಹೊರೆ ಇದಕ್ಕೆ ಕಾರಣವಾಗಿದೆ. ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಶೇ. ೬೭.೭೩ ಗ್ರಾಂ-ಪಾಸಿಟಿವ್ ಬ್ಯಾಕ್ಟೀರಿಯಾ ಮತ್ತು ಐಸಿಯು ರೋಗಿಗಳಿಗೆ ಬಳಸುವ ಆ್ಯಂಟಿಬಯೋಟಿಕ್ಗಳು ಸಹ ಸೋಂಕಿನ ಹೆಚ್ಚಳಕ್ಕೆ ಪರೋಕ್ಷವಾಗಿ ಕಾರಣವಾಗುತ್ತಿವೆ ಎನ್ನಲಾಗಿದೆ.
ಭಾರತ ಸೇರಿ ವಿವಿಧ ದೇಶಗಳಲ್ಲಿ ಹಬ್ಬುತ್ತಿರುವ ಅನೇಕ ಬಗೆಯ ಮಾರಕ ಸೋಂಕು ರೋಗಗಳಿಗೆ ಕಾರಣವಾಗಿರುವ ಫಂಗೈಗಳಿಗೆ ಆಸ್ಪತ್ರೆಗಳು ಮತ್ತು ಅಲ್ಲಿರುವ ತೀವ್ರ ನಿಗಾ ಘಟಕಗಳೇ ಪ್ರಮುಖ ಆಶ್ರಯ ತಾಣವಾಗಿವೆ ಎನ್ನುತ್ತಾರೆ ತಜ್ಞರು. ಫಂಗೈನಿಂದ ಜಗತ್ತಿನಲ್ಲಿ ಪ್ರತೀ ವರ್ಷ ೯೮ ಕೋಟಿ ಜನ ಅಂದರೆ ಸರಿ ಸುಮಾರು ಶೇ.೧೪ಕ್ಕೂ ಹೆಚ್ಚು ಜನಸಂಖ್ಯೆ ಸೋಂಕಿಗೊಳಗಾಗುತ್ತಿದ್ದಾರೆ ಎಂದು ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಹ್ಯೂಮನ್ ಆ್ಯಂಡ್ ಅನಿಮಲ್ ಮೈಕಾಲಜಿಯು ತನ್ನ ವರದಿಯಲ್ಲಿ ಹೇಳಿದೆ. ಇತ್ತೀಚಿನ ದಿನಗಳಲ್ಲಿ ಹೊಸ ಬಗೆಯ ಸೋಂಕು ರೋಗಗಳು ಉದ್ಭವಿಸುತ್ತಿರುವುದು ಆಸ್ಪತ್ರೆ ಮತ್ತು ರೋಗಿಗಳಿಗೆ ಸವಾಲಾಗಿದೆ. ಆಸ್ಪತ್ರೆಗಳು ತಮ್ಮ ತೀವ್ರ ನಿಗಾ ಘಟಕಗಳಲ್ಲಿ ಹೆಚ್ಚಿನ ಸ್ವಚ್ಛತೆ ಕಾಯ್ದುಕೊಂಡಿದ್ದೇವೆ ಎಂದು ಹೇಳಿಕೊಂಡರೂ ಫಂಗೈಗಳನ್ನು ನಿರ್ಮೂಲನಗೊಳಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಅಲ್ಲದೆ, ಹೆಚ್ಚಿನ ಆಸ್ಪತ್ರೆಗಳು ಅದರಲ್ಲೂ ಗ್ರಾಮೀಣ ಭಾಗದಲ್ಲಿರುವ ಆಸ್ಪತ್ರೆಗಳು ಈ ಬಗ್ಗೆ ಹೆಚ್ಚಿಗೆ ಗಮನಹರಿಸುತ್ತಿಲ್ಲ. ಮುಖ್ಯವಾಗಿ ಇದಕ್ಕಾಗಿ ಹೆಚ್ಚು ಖರ್ಚು ಮಾಡಲು ಆಸ್ಪತ್ರೆಗಳು ತಯಾರಿಲ್ಲ. ಹೀಗಾಗಿ ಐಸಿಯುಗಳಲ್ಲಿ ಇದ್ದು ಹೊರಗೆ ಹೋದ ರೋಗಿ ಕೆಲವೇ ದಿನಗಳಲ್ಲಿ ಫಂಗೈ ಪರಿಣಾಮ ಕಾಣಿಸಿಕೊಂಡು, ಪುನಃ ಅನಾರೋಗ್ಯಕ್ಕೆ ಒಳಗಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಇತ್ತೀಚಿನ ಸಂಶೋಧನೆಗಳು ಹೇಳುತ್ತವೆ.
ದೇಶದ ಪ್ರಮುಖ ಆಸ್ಪತ್ರೆಗಳಲ್ಲಿರುವ ತೀವ್ರ ನಿಗಾ ಘಟಕಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಅಲ್ಲಿ ಫಂಗೈಗಳಿರುವುದು ಕಂಡು ಬಂದಿವೆ. ಅಷ್ಟೇ ಅಲ್ಲ, ಶೇ.೨೦ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಫಂಗೈ ಸೋಂಕು ರೋಗಗಳು ಐಸಿಯುಗಳಿಂದ ಹಬ್ಬಿರುವುದು ಬೆಳಕಿಗೆ ಬಂದಿತು ಎನ್ನಬಹುದು. ಫಂಗೈನಲ್ಲಿ ಹಲವು ಗಂಭೀರ ಸ್ವರೂಪದ, ಇನ್ನು ಕೆಲವು ಅಲ್ಪ ಪ್ರಮಾಣದ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಇದರ ಸಂಪೂರ್ಣ ನಿವಾರಣೆಗೆ ವೈಜ್ಞಾನಿಕ ರೀತಿಯ ಪ್ರಯತ್ನದ ಅಗತ್ಯವಿದೆ. ರೋಗ ಪತ್ತೆಯ ಜತೆಗೆ ಪ್ರಯೋಗಾಲಯದಲ್ಲಿ ಫಂಗಸ್ನ ಪತ್ತೆ ಮಾಡಬೇಕು. ಇವುಗಳ ನಿರ್ವಹಣೆಯ ಬಗ್ಗೆಯೂ ಗಮನಹರಿಸಬೇಕು ಎನ್ನುವ ಸಲಹೆ ಹೊರಬಿದ್ದಿದೆ. ಇತ್ತೀಚಿನ ದಿನಗಳಲ್ಲಿ ಔಷಧ ನಿರೋಧಕ ಶಕ್ತಿಯುಳ್ಳ ಫಂಗೈಗಳು ಹೆಚ್ಚು ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಬೆಕ್ಕು, ನಾಯಿಯಂತಹ ಸಾಕು ಪ್ರಾಣಿಗಳಿಂದ ಮಾನವರಿಗೆ ಫಂಗೈಗಳು ವರ್ಗಾವಣೆ ಆಗುತ್ತಿವೆ ಎನ್ನುವ ಅಂಶ ಪತ್ತೆಯಾಗಿದೆ.
ಅದಲ್ಲದೆ, ರೋಗಿಗಳ ನಿರಂತರ ಒಳಹರಿವು ಮತ್ತು ಹೊರಹರಿವು ಹೊಸ ರೋಗಕಾರಕಗಳನ್ನು ಪರಿಚಯಿಸುವ ಅಪಾಯವನ್ನು ಹೆಚ್ಚಿಸುತ್ತದೆ. ಇಂದು ವಿವಿಧ ಕಾಯಿಲೆಯ ಹಿನ್ನೆಲೆಯ ರೋಗಿಗಳು ವಿವಿಧ ಸೋಂಕುಗಳನ್ನು ಆಸ್ಪತ್ರೆಗಳಿಗೆ ತರುತ್ತಿದ್ದಾರೆ. ಇದು ಸೋಂಕಿನ ನಿಯಂತ್ರಣವನ್ನು ಸಂಕೀರ್ಣಗೊಳಿಸುತ್ತಿದೆ. ವೈದ್ಯಕೀಯ ಸಾಧನಗಳು ಸಹ ಸೂಕ್ಷ್ಮಜೀವಿಗಳಿಗೆೆ ಐಸಿಯುಗಳಿಗೆ ನೇರ ಪ್ರವೇಶಕ್ಕೆ ರಹದಾರಿ ಒದಗಿಸುತ್ತಿವೆ. ಅಸಮರ್ಪಕ ಕ್ರಿಮಿನಾಶಕ ಅಥವಾ ದೀರ್ಘಕಾಲದ ಬಳಕೆಯು ಈ ಅಪಾಯವನ್ನು ಮತ್ತಷ್ಟೂ ಉಲ್ಬಣಗೊಳಿಸುತ್ತಿದೆ. ಕಟ್ಟುನಿಟ್ಟಾದ ಮಾರ್ಗಸೂಚಿಗಳ ಹೊರತಾಗಿಯೂ, ಐಸಿಯುನಲ್ಲಿ ಕೆಲಸ ಮಾಡುವ ಸಿಬ್ಬಂದಿಯ ನೈರ್ಮಲ್ಯದಲ್ಲಿನ ಲೋಪಗಳು ಗಮನಾರ್ಹ ಸಮಸ್ಯೆಯಾಗಿ ಉಳಿದಿವೆ. ಇವರುಗಳು ರೋಗಕಾರಕಗಳನ್ನು ಒಬ್ಬ ರೋಗಿಯಿಂದ ಇನ್ನೊಬ್ಬರಿಗೆ ವರ್ಗಾಯಿಸುತ್ತಿದ್ದಾರೆ ಎನ್ನುವ ಮಾಹಿತಿಯಿದೆ. ಐಸಿಯುಗಳಲ್ಲಿ ಆ್ಯಂಟಿಬಯಾಟಿಕ್ಗಳ ಬಳಕೆಯು ಸಹ ಹೊಸ ನಿರೋಧಕ ತಳಿಗಳ ಹೊರಹೊಮ್ಮುವಿಕೆಗೆ ಕಾರಣವಾಗಬಹುದು ಮತ್ತು ಇದು ಸೋಂಕುಗಳಿಗೆ ಚಿಕಿತ್ಸೆ ನೀಡಲು ಕಷ್ಟವಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಐಸಿಯುಗಳ ಹಾಸಿಗೆಗಳು, ಮಾನಿಟರ್ಗಳು ಮತ್ತು ಇತರ ಉಪಕರಣಗಳನ್ನು ಒಳಗೊಂಡಂತೆ ಸಂಪೂರ್ಣವಾಗಿ ಸ್ವಚ್ಛಗೊಳಿಸದಿದ್ದಲ್ಲಿ ರೋಗಕಾರಕಗಳು ಹರಡಬಹುದು. ಐಸಿಯುಗಳ ಎ.ಸಿ. ವ್ಯವಸ್ಥೆ ಸಹ ಸೋಂಕು ಹರಡುವಲ್ಲಿ ಒಂದು ಪಾತ್ರವನ್ನು ವಹಿಸುತ್ತದೆ. ದಣಿದ ಐಸಿಯು ಸಿಬ್ಬಂದಿ ಅಜಾಗರೂಕತೆಯಿಂದ ಸೋಂಕು ನಿಯಂತ್ರಣ ಪ್ರೋಟೋಕಾಲ್ಗಳಲ್ಲಿನ ನಿರ್ಣಾಯಕ ಎಚ್ಚರಿಕೆಗಳನ್ನು ದಾಟಿ ಸೋಂಕುಗಳ ಪ್ರಸರಣದ ಸಾಧ್ಯತೆಯನ್ನು ಹೆಚ್ಚಿಸುತ್ತಾರೆ ಎನ್ನುತ್ತವೆ ಇತ್ತೀಚಿನ ಸಂಶೋಧನೆಗಳು.
ಕೆಲವು ವರ್ಷಗಳ ಹಿಂದೆ ಬೀದರ್ ಜಿಲ್ಲೆಯ ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಆಪರೇಷನ್ ಕೊಠಡಿಯನ್ನು ತಿಂಗಳಾನುಗಟ್ಟಲೇ ಮುಚ್ಚಬೇಕಾಯಿತು. ಕಾರಣ ಆಪರೇಷನ್ ಕೊಠಡಿ ಸಂಪೂರ್ಣವಾಗಿ ಸೋಂಕಿನಿಂದ ಕೂಡಿತ್ತು ಮತ್ತು ಯಾವುದೇ ಆಪರೇಷನ್/ಹೆರಿಗೆ ಮಾಡಿಸುವಂತಿರಲಿಲ್ಲ. ಇದರಿಂದ ಬಡ ರೋಗಿಗಳು ಬಹಳಷ್ಟು ಸಮಸ್ಯೆಯನ್ನು ಅನುಭವಿಸಬೇಕಾಯಿತು. ಖಾಸಗಿ ಆಸ್ಪತ್ರೆಗಳು ಇದರ ಲಾಭವನ್ನು ಪಡೆದುಕೊಂಡವು ಎಂದರೂ ತಪ್ಪಾಗುವುದಿಲ್ಲ. ಇದನ್ನು ತಡೆಗಟ್ಟುವ ಕ್ರಮಗಳು ಕುರಿತು ಚಿಂತಿಸುವುದಾದರೆ ಪ್ರತೀ ಆಸ್ಪತ್ರೆಗಳು ನೈರ್ಮಲ್ಯ ಪ್ರೋಟೋಕಾಲ್ಗಳ ಅನುಸರಣೆ ಮಾಡುವುದು ಅಗತ್ಯ. ಆಲ್ಕೋಹಾಲ್-ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಅಥವಾ ಸಾಬೂನು ಮತ್ತು ನೀರನ್ನು ಬಳಸಿ ಕಟ್ಟುನಿಟ್ಟಾದ ನೈರ್ಮಲ್ಯವು ಅತಿಮುಖ್ಯವಾಗಿದೆ. ಸಿಬ್ಬಂದಿಗೆ ನಿಯಮಿತ ತರಬೇತಿ ಮತ್ತು ನಿಯಮ ಅನುಸರಣೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಐಸಿಯುನಲ್ಲಿನ ಉಪಕರಣಗಳ ಸರಿಯಾದ ಶುಚಿಗೊಳಿಸುವಿಕೆ, ಕ್ರಿಮಿನಾಶಕ ಮತ್ತು ವೈದ್ಯಕೀಯ ಸಾಧನಗಳ ಸಮಯೋಚಿತ ಬದಲಾವಣೆ ಸೋಂಕಿನ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಆ್ಯಂಟಿಬಯೋಟಿಕ್ಗಳ ತರ್ಕಬದ್ಧ ಬಳಕೆಯು ಸೋಂಕಿನ ತಳಿಗಳ ಬೆಳವಣಿಗೆಯನ್ನು ತಡೆಯಬಹುದು. ತಜ್ಞ ವೈದ್ಯಕೀಯ ತಂಡಗಳು ಐಸಿಯುಗಳಲ್ಲಿ ಆ್ಯಂಟಿಬಯೋಟಿಕ್ ಬಳಕೆಯನ್ನು ಮೌಲ್ಯಮಾಪನ ಮಾಡಬೇಕು ಮತ್ತು ನಿಯಂತ್ರಿಸಬೇಕು.
ಐಸಿಯುಗಳಲ್ಲಿ ಬೆಳಕು ಅಥವಾ ಇತರ ಸುಧಾರಿತ ತಂತ್ರಜ್ಞಾನಗಳನ್ನು ಬಳಸುವುದರಿಂದ ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಸೋಂಕಿನ ಪ್ರಮಾಣವನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಸಕಾಲದಲ್ಲಿ ಗುರುತಿಸುವುದು ಮತ್ತು ಸಮಯೋಚಿತ ಕ್ರಮಗಳನ್ನು ಕೈಗೊಳ್ಳುವುದು ತೀರಾ ಅಗತ್ಯ. ಸೋಂಕಿತ ರೋಗಿಗಳನ್ನು ಪ್ರತ್ಯೇಕಿಸುವುದು ಮತ್ತು ಸೋಂಕಿನ ಮೂಲವನ್ನು ಪತ್ತೆಹಚ್ಚುವುದು ಸಹ ಅಷ್ಟೇ ಮುಖ್ಯ. ಸೋಂಕು ನಿಯಂತ್ರಣದ ಬಗ್ಗೆ ನಿಯಮಿತ ತರಬೇತಿ ಮತ್ತು ಸಾಕಷ್ಟು ಸಿಬ್ಬಂದಿಯ ಮೂಲಕ ಕೆಲಸದ ಹೊರೆ ಕಡಿಮೆ ಮಾಡುವುದು ಅಪಾಯಗಳನ್ನು ಗಮನಾರ್ಹವಾಗಿ ತಗ್ಗಿಸಬಹುದು. ಸೋಂಕುಗಳ ಸಂಭಾವ್ಯ ಹರಡುವಿಕೆಯನ್ನು ಕಡಿಮೆ ಮಾಡಲು, ಸಂದರ್ಶಕರ ಸಂಖ್ಯೆಯನ್ನು ನಿರ್ಬಂಧಿಸುವುದು ಇನ್ನೂ ಮುಖ್ಯ. ಅಲ್ಲದೆ, ಸಿಬ್ಬಂದಿ ಮತ್ತು ಸಂದರ್ಶಕರು ವೈದ್ಯಕೀಯ ಉಪಕರಣಗಳು ಅಥವಾ ಮೇಲ್ಮೈಗಳನ್ನು ಅನಗತ್ಯವಾಗಿ ಸ್ಪರ್ಶಿಸುವುದನ್ನು ತಡೆಯಬೇಕು. ಅಗತ್ಯವಿದ್ದರೆ ಸಂದರ್ಶಕರು ಮುಖ ಕವಚಗಳು, ಕೈಗವಸುಗಳು ಅಥವಾ ಗೌನ್ಗಳನ್ನು ಬಳಸಬೇಕು. ಸಾಧ್ಯವಾದರೆ ವರ್ಚುವಲ್ ಭೇಟಿಯನ್ನು ಉತ್ತೇಜಿಸಬೇಕು. ಆಸ್ಪತ್ರೆಯಲ್ಲಿ ಈ ಸಂಬಂಧ ಜನಸಾಮಾನ್ಯರಲ್ಲಿ ಅರಿವನ್ನು ಉಂಟುಮಾಡುವಂತಹ ಗೋಡೆ ಬರಹಗಳನ್ನು ಪ್ರದರ್ಶಿಸಬೇಕು. ಸಂದರ್ಶಕರು ಆಸ್ಪತ್ರೆಯ ಪ್ರೋಟೋಕಾಲ್ಗಳನ್ನು ಗೌರವಿಸಬೇಕು. ಆಸ್ಪತ್ರೆಯ ನೈರ್ಮಲ್ಯ ಅಭ್ಯಾಸಗಳಲ್ಲಿ ಲೋಪಗಳನ್ನು ಗಮನಿಸಿದರೆ ಅಥವಾ ರೋಗಿಯು ಸೋಂಕಿನ ಲಕ್ಷಣಗಳನ್ನು ತೋರಿಸುತ್ತಿದ್ದಾರೆ ಎಂದು ಅನುಮಾನ ಬಂದರೆ ತಕ್ಷಣವೇ ಸಿಬ್ಬಂದಿಗೆ ತಿಳಿಸಬೇಕು. ವೈದ್ಯಕೀಯ ಸಿಬ್ಬಂದಿಯಿಂದ ಅನುಮತಿಸದ ಹೊರತು ರೋಗಿಯೊಂದಿಗೆ ಸಂದರ್ಶಕರು ಅನಗತ್ಯ ದೈಹಿಕ ಸ್ಪರ್ಶವನ್ನು ತಪ್ಪಿಸಬೇಕು. ಏಕೆಂದರೆ ಇದು ರೋಗಕಾರಕಗಳನ್ನು ವರ್ಗಾಯಿಸಬಹುದು ಎನ್ನುತ್ತಾರೆ ತಜ್ಞರು. ಕೈ ತೊಳೆಯುವುದು, ಮುಖ ಕವಚಗಳನ್ನು ಧರಿಸುವುದು ಮತ್ತು ಭೇಟಿ ನಿಯಮಗಳನ್ನು ಅನುಸರಿಸುವುದು ಮುಂತಾದ ಸಣ್ಣ ಆದರೆ ಸ್ಥಿರವಾದ ಕ್ರಮಗಳು ಸೋಂಕಿನ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಭಾರತ ಸರಕಾರದ ಎನ್ಸಿಡಿಸಿ (ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್) ಮತ್ತು ಐಸಿಎಮ್ಆರ್ ವೈದ್ಯಕೀಯ ಸಂಸ್ಥೆಗಳು ಈ ಸಂಬಂಧ ಮಾರ್ಗಸೂಚಿಗಳನ್ನು ಮಾಡುತ್ತವೆ.
ಜೀವಗಳನ್ನು ಉಳಿಸಲು ಆಸ್ಪತ್ರೆಗಳಲ್ಲಿ ಐಸಿಯುಗಳು ಅನಿವಾರ್ಯವಾಗಿದ್ದರೂ, ಸೋಂಕುಗಳನ್ನು ಹರಡುವಲ್ಲಿ ಅವುಗಳ ಪಾತ್ರವನ್ನು ಕಡೆಗಣಿಸಲಾಗುವುದಿಲ್ಲ. ಸೋಂಕಿನ ಅಪಾಯಗಳನ್ನು ಕಡಿಮೆ ಮಾಡಲು ನೈರ್ಮಲ್ಯ ಅಭ್ಯಾಸಗಳು, ಪರಿಸರ ನಿಯಂತ್ರಣ ಮತ್ತು ವೈದ್ಯಕೀಯ ಮಧ್ಯಸ್ಥಿಕೆಗಳ ವಿವೇಚನಾಶೀಲ ಬಳಕೆಯನ್ನು ಸಂಯೋಜಿಸುವ ಸಮಗ್ರ ವಿಧಾನವು ಅತ್ಯಗತ್ಯ. ನೀತಿ ನಿರೂಪಕರು, ಆಸ್ಪತ್ರೆ ನಿರ್ವಾಹಕರು ಮತ್ತು ಆರೋಗ್ಯ ಕಾರ್ಯಕರ್ತರು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತರಲು ಮತ್ತು ಹೊಣೆಗಾರಿಕೆಯ ಸಂಸ್ಕೃತಿಯನ್ನು ಬೆಳೆಸಲು ಸಹಕರಿಸಬೇಕು. ಈ ವಿಚಾರದಲ್ಲಿ ಆಸ್ಪತ್ರೆಗಳು ತಮ್ಮ ಆದಾಯದ ಒಂದು ಭಾಗವನ್ನು ಹೂಡಿಕೆ ಮಾಡಬೇಕು. ಸರಕಾರಿ ಆಸ್ಪತ್ರೆಗಳು ಈ ವಿಚಾರದಲ್ಲಿ ಹೆಚ್ಚಿನ ಗಮನ ವಹಿಸಬೇಕು. ಆಪರೇಷನ್ ಕೊಠಡಿಗಳಲ್ಲಿನ ಸೋಂಕುಗಳ ವಿಚಾರದಲ್ಲಿ ಆಡಳಿತ ಮಂಡಳಿ ತೀವ್ರ ಗಮನವನ್ನು ವಹಿಸಬೇಕು. ಹಾಗೆ ಮಾಡುವುದರಿಂದ, ರೋಗಿಗಳ ಸುರಕ್ಷತೆ ಮತ್ತು ಸುಧಾರಿತ ಆರೋಗ್ಯದ ಫಲಿತಾಂಶಗಳ ಗುರಿಗಳನ್ನು ಸಾಧಿಸಬಹುದು, ಐಸಿಯುಗಳು ಹಾನಿಯ ಮೂಲಗಳಿಗಿಂತ ಹೆಚ್ಚಾಗಿ ಗುಣಪಡಿಸುವ ಸ್ಥಳಗಳು ಎಂದು ಖಚಿತಪಡಿಸಿಕೊಳ್ಳಬೇಕು. ರೋಗಿಗಳು, ಕುಟುಂಬ ಸದಸ್ಯರು ಮತ್ತು ಸಂದರ್ಶಕರು ಸೇರಿದಂತೆ ಸಾಮಾನ್ಯ ಜನರ ಪಾತ್ರವು ತೀವ್ರ ನಿಗಾ ಘಟಕಗಳಲ್ಲಿ (ಐಸಿಯು) ಸೋಂಕನ್ನು ತಡೆಗಟ್ಟುವಲ್ಲಿ ಪ್ರಮುಖವಾಗಿದೆ. ಸೋಂಕಿನ ನಿಯಂತ್ರಣವನ್ನು ಕಾಪಾಡಿಕೊಳ್ಳಲು ಆಸ್ಪತ್ರೆಗಳ ಸಿಬ್ಬಂದಿ ಪ್ರಾಥಮಿಕವಾಗಿ ಜವಾಬ್ದಾರರಾಗಿದ್ದರೂ, ಜನ ಸಾಮಾನ್ಯರಲ್ಲೂ ಈ ಬಗ್ಗೆ ಅರಿವು ಇರುವುದು ಈ ಸಮಸ್ಯೆ ಉಂಟು ಮಾಡುವ ಆರ್ಥಿಕ ಹೊರೆಯನ್ನೂ ಕಡಿಮೆ ಮಾಡಲು ಗಮನಾರ್ಹವಾಗಿ ಕೊಡುಗೆ ನೀಡುತ್ತವೆ.