ಪಡಿತರ ಚೀಟಿ ಪ್ರಕರಣ:ಬಡವರ ಹೆಸರಲ್ಲಿ ರಾಜಕಾರಣ ?
ಮಾಹಿತಿಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿ, ಸುಳ್ಳನ್ನು ಹತ್ತಾರು ನಾಯಕರು ನೂರಾರು ಸಲ ಹೇಳಿ ಸತ್ಯದ ಭ್ರಮೆಯನ್ನು ಹುಟ್ಟಿಸುವ ಕಾಯಕದಲ್ಲಿ ಕೇಸರಿಪಡೆ ಸಿದ್ಧಹಸ್ತರು. ಕಾಂಗ್ರೆಸಿಗರು ಆಕ್ರಮಣಶೀಲವಾದ ಪ್ರತಿಕ್ರಿಯೆಯ ಬದಲಾಗಿ ರಕ್ಷಣಾತ್ಮಕವಾಗಿ ಸಮರ್ಥನೆಗಳನ್ನು ಕೊಡುವುದರಲ್ಲಿಯೇ ಕಾಲ ವ್ಯಯಿಸುತ್ತಾರೆ. ಅಷ್ಟರಲ್ಲಿ ಬಿಜೆಪಿಗರು ನಾಲ್ಕು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಜನರಲ್ಲಿ ಗೊಂದಲಗಳನ್ನು ಹುಟ್ಟಿಸಿರುತ್ತಾರೆ.
ಈಗ ಪಡಿತರ ಚೀಟಿ ರದ್ದತಿಯ ಸುದ್ದಿ ಚರ್ಚೆಯಲ್ಲಿದೆ. ಯಥಾಪ್ರಕಾರ ಆಳುವ ಹಾಗೂ ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳ ವಿನಿಮಯ ಅವ್ಯಾಹತವಾಗಿವೆ. ಅಂಕಿ ಸಂಖ್ಯೆಗಳ ವ್ಯಾಖ್ಯಾನಗಳು ಅಂಕೆ ಮೀರುತ್ತಿವೆ. ಎಲ್ಲಿ ತಮ್ಮ ಪಡಿತರ ಚೀಟಿ ರದ್ದಾಗಿದೆಯೋ ಎಂಬ ಆತಂಕ ಬಿಪಿಎಲ್ ಕಾರ್ಡುದಾರರದ್ದಾಗಿದೆ.
ನಿಜವಾಗಿಯೂ ರಾಜ್ಯ ಸರಕಾರ ಅನರ್ಹತೆಯ ಆಧಾರದಲ್ಲಿ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿದೆಯೇ? ಇಲ್ಲಿ ಯಾವೊಂದು ಕಾರ್ಡೂ ರದ್ದು ಮಾಡಲಾಗಿಲ್ಲ. ಬಿಪಿಎಲ್ ಕಾರ್ಡ್ ಮಾನದಂಡಗಳ ಗಡಿ ದಾಟಿದವರನ್ನು ಎಪಿಎಲ್ ಅಂದರೆ ಬಡತನ ರೇಖೆಗಿಂತ ಮೇಲಿರುವವರ ಕಾರ್ಡ್ ಆಗಿ ಅಪ್ ಗ್ರೇಡ್ ಮಾಡಲಾಗಿದೆ. ಸರಕಾರಿ ಹಾಗೂ ಅರೆ ಸರಕಾರಿ ನೌಕರರು ಮತ್ತು ತೆರಿಗೆ ಪಾವತಿ ಮಾಡುವವರು ಪಡೆದಿರುವ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ ಆಗಿ ಬದಲಾಯಿಸಲಾಗಿದೆ. ಹೀಗೆ ಪರಿಷ್ಕರಣೆ ಮಾಡುವಾಗ ಅಧಿಕಾರಿಗಳ ನಿರ್ಲಕ್ಷದಿಂದಲೋ ಇಲ್ಲಾ ಉದ್ದೇಶ ಪೂರ್ವಕವಾಗಿಯೋ ಕೆಲವು ಅರ್ಹರ ಕಾರ್ಡ್ಗಳೂ ಸಹ ಅನರ್ಹತೆಗೆ ಒಳಗಾಗಿ ಎಪಿಎಲ್ ಆಗಿ ಬದಲಾಗಿ ಆತಂಕವನ್ನು ಸೃಷ್ಟಿಸಿವೆ. ಇಂತಹ ಅವಕಾಶಕ್ಕಾಗಿಯೇ ಕಾಯುತ್ತಿರುವ ವಿರೋಧಪಕ್ಷ ಬಿಜೆಪಿಯವರು ದೊಡ್ಡ ಧ್ವನಿಯಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಎಂದಿನಂತೆ ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಬಡವರ ಆತಂಕದಲ್ಲೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರ ದೇಶಾದ್ಯಂತ 5.8 ಕೋಟಿಯಷ್ಟು ಬಿಪಿಎಲ್ ಕಾರ್ಡ್ಗಳನ್ನು ರದ್ದು ಪಡಿಸಿದ ಸುದ್ದಿ ರಾಜ್ಯದ ಬಿಜೆಪಿಗರಿಗೆ ಬಿಸಿ ತುಪ್ಪವಾಗಿದೆ. ಆಧಾರ್ ಹಾಗೂ ಇಕೆವೈಸಿ ದತ್ತಾಂಶ ಆಧರಿಸಿ, ಸಾರ್ವಜನಿಕ ಪಡಿತರ ವ್ಯವಸ್ಥೆ (ಪಿಡಿಎಸ್) ಡಿಜಿಟಲೀಕರಣ ಮಾಡುತ್ತಿರುವ ಕೇಂದ್ರ ಸರಕಾರವು 5.8 ಕೋಟಿ ಬಿಪಿಎಲ್ ಕಾರ್ಡ್ ಗಳನ್ನು ನಕಲಿ ಎಂದು ಪರಿಗಣಿಸಿ ರದ್ದು ಮಾಡಿದೆ. ಸರಿಯಾದ ದಾಖಲೆಗಳ ಕೊರತೆಯಿಂದ ಹಲವಾರು ಅರ್ಹ ಬಡವರ ಬಿಪಿಎಲ್ ಕಾರ್ಡ್ಗಳೂ ರದ್ದಾದವರ ಪಟ್ಟಿಯಲ್ಲಿ ಸೇರಿವೆ.
ಅದೇ ರೀತಿ ರಾಜ್ಯ ಸರಕಾರ ತನ್ನಲ್ಲಿರುವ ದತ್ತಾಂಶಗಳನ್ನು ಆಧರಿಸಿ, ಖಾಸಗಿ ಸಂಸ್ಥೆಯ ಮೂಲಕ ಸರ್ವೇ ಮಾಡಿಸಿ ಒಂದು ಲಕ್ಷದಷ್ಟು ಬಿಪಿಎಲ್ ಕಾರ್ಡ್ದಾರರನ್ನು ಅನರ್ಹ ಎಂದು ಪರಿಗಣಿಸಿದೆ. ಇದರಲ್ಲಿ 59 ಸಾವಿರ ಕಾರ್ಡ್ಗಳನ್ನು ಎಪಿಎಲ್ ಆಗಿ ಪರಿವರ್ತಿಸಿದೆ. ಇನ್ನೂ 17 ಸಾವಿರ ಕಾರ್ಡಗಳು ಪರಿಶೀಲನೆಯಲ್ಲಿವೆ.
ಅಂದರೆ ಕೇಂದ್ರ ಸರಕಾರ ಅನರ್ಹತೆಯ ಆಧಾರದಲ್ಲಿ 5.8 ಕೋಟಿ ಬಿಪಿಎಲ್ ಕಾರ್ಡ್ ಗಳನ್ನೇ ರದ್ದು ಗೊಳಿಸಿದರೆ, ರಾಜ್ಯ ಸರಕಾರ ಒಂದು ಲಕ್ಷದಷ್ಟು ಕಾರ್ಡ್ಗಳನ್ನು ಅನರ್ಹ ಎಂದು ಘೋಷಿಸಿ ಇದರಲ್ಲಿ ಬಹುತೇಕ ಕಾರ್ಡ್ ಗಳನ್ನು ಎಪಿಎಲ್ ಆಗಿ ಪರಿಷ್ಕರಣೆ ಮಾಡಿದೆ. ಆದರೆ ರಾಜ್ಯದ ಬಿಜೆಪಿಯವರು ಕೇಂದ್ರ ಸರಕಾರದ ರದ್ದತಿಯನ್ನು ಮರೆಮಾಚಿ, ರಾಜ್ಯ ಸರಕಾರದ ಪರಿಷ್ಕರಣೆ ಕ್ರಮವನ್ನು ರದ್ದತಿ ಎಂದು ಸುಳ್ಳು ಪ್ರಚಾರ ಮಾಡಿ ಜನರನ್ನು ಆಳುವ ಸರಕಾರದ ವಿರುದ್ಧ ಎತ್ತಿಕಟ್ಟುವ ಕೆಟ್ಟ ರಾಜಕೀಯ ಮಾಡುತ್ತಿದ್ದಾರೆ. ಅದು ಬಿಜೆಪಿಯ ಆಕ್ರಮಣಶೀಲ ಪ್ರವೃತ್ತಿ. ಮಾಹಿತಿಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿ, ಸುಳ್ಳನ್ನು ಹತ್ತಾರು ನಾಯಕರು ನೂರಾರು ಸಲ ಹೇಳಿ ಸತ್ಯದ ಭ್ರಮೆಯನ್ನು ಹುಟ್ಟಿಸುವ ಕಾಯಕದಲ್ಲಿ ಕೇಸರಿಪಡೆ ಸಿದ್ಧಹಸ್ತರು. ಕಾಂಗ್ರೆಸಿಗರು ಆಕ್ರಮಣಶೀಲವಾದ ಪ್ರತಿಕ್ರಿಯೆಯ ಬದಲಾಗಿ ರಕ್ಷಣಾತ್ಮಕವಾಗಿ ಸಮರ್ಥನೆಗಳನ್ನು ಕೊಡುವುದರಲ್ಲಿಯೇ ಕಾಲ ವ್ಯಯಿಸುತ್ತಾರೆ. ಅಷ್ಟರಲ್ಲಿ ಬಿಜೆಪಿಗರು ನಾಲ್ಕು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಜನರಲ್ಲಿ ಗೊಂದಲಗಳನ್ನು ಹುಟ್ಟಿಸಿರುತ್ತಾರೆ.
ಇಷ್ಟಕ್ಕೂ ಬಿಪಿಎಲ್ ಪಡಿತರ ಚೀಟಿಯ ಕುರಿತ ನಿಯಮಾವಳಿಗಳನ್ನು ರೂಪಿಸಿದ್ದು ಕೇಂದ್ರ ಸರಕಾರ. ಆ ನಿಬಂಧನೆಗಳ ಅನುಸಾರ ರಾಜ್ಯ ಸರಕಾರಗಳು ಪಡಿತರದ ಫಲಾನುಭವಿಗಳನ್ನು ನಿರ್ಧರಿಸಬೇಕಿದೆ. ಯಾಕೆಂದರೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಪ್ರಕಾರ ಪಡಿತರವನ್ನು ಕೇಂದ್ರ ಸರಕಾರ ಸಂಗ್ರಹಿಸಿ ಪ್ರತೀ ರಾಜ್ಯಕ್ಕೂ ಹಂಚುತ್ತದೆ. ಹೀಗೆ ಹಂಚಿಕೆ ಮಾಡುವಾಗ ಈ ಪಡಿತರಕ್ಕೆ ಯಾರು ಅರ್ಹರು ಎಂಬುದರ ಕುರಿತ ಮಾನದಂಡಗಳನ್ನು ಕೇಂದ್ರ ಸರಕಾರವೇ ನಿಗದಿ ಪಡಿಸಿರುತ್ತದೆ. ಆ ಮಾನದಂಡಗಳ ಪ್ರಕಾರವೇ ಫಲಾನುಭವಿಗಳ ನಿರ್ಧಾರವಾಗುತ್ತದೆ.
ಈಗ ರಾಜ್ಯ ಸರಕಾರ ಬಿಪಿಎಲ್ ಕಾರ್ಡ್ ಪಡೆಯುವ ಮಾನದಂಡಕ್ಕೆ ಹೊರತಾದ ಕಾರ್ಡ್ ಹೋಲ್ಡರ್ಗಳನ್ನು ಪರಿಷ್ಕರಿಸಿ ಎಪಿಎಲ್ ಆಗಿ ಬದಲಾಯಿಸಲಾಗಿದೆ. ಹೀಗೆ ಬದಲಾಯಿಸುವಾಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಂದ ಒಂದಿಷ್ಟು ತಪ್ಪುಗಳು ನಡೆದಿರುತ್ತವೆ. ಅರ್ಹ ಬಡವರ ಹೆಸರುಗಳೂ ಪರಿಷ್ಕರಣೆಯ ಸಮಯದಲ್ಲಿ ಅನರ್ಹವಾಗಿರುತ್ತವೆ. ಅಂತಹವುಗಳನ್ನು ಮರುಪರಿಶೀಲನೆಗೆ ಅಳವಡಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ವತಃ ಸಿಎಂ ಸಿದ್ದರಾಮಯ್ಯನವರೇ ಹೇಳಿಯಾಗಿದೆ. ತೆರಿಗೆ ಪಾವತಿಸುವ ಹಾಗೂ ಸರಕಾರಿ ಕೆಲಸಗಾರರನ್ನು ಹೊರತು ಪಡಿಸಿ ಯಾವುದೇ ಬಡವರ ಬಿಪಿಎಲ್ ಕಾರ್ಡ್ಗಳು ರದ್ದಾಗುವುದಿಲ್ಲ ಎಂಬ ಭರವಸೆಯನ್ನೂ ಕೊಟ್ಟಿದ್ದಾರೆ.
ಆದರೂ ಬಿಜೆಪಿ ನಾಯಕರು ತಮ್ಮ ವಿರೋಧವನ್ನು ಮುಂದುವರಿಸಿದ್ದಾರೆ. ಇದುವರೆಗೆ ಕೊಳೆಗೇರಿಯಿಂದ ದೂರ ಇದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ರವರು ಅಲ್ಲಿಗೆ ಹೋಗಿ ಬಡವರ ಪರವಾಗಿ ‘ಕಾಳಜಿ’ ತೋರಿಸಿ ಸುದ್ದಿ ಮಾಧ್ಯಮಗಳ ಮುಂದೆ ಬಡವರ ಬಂಧು ಆಗಲು ಪ್ರಯತ್ನ ಮಾಡಿದ್ದಾರೆ. ರಾಜ್ಯದ ಜನತೆ ಈ ಪ್ರಹಸನವನ್ನೂ ರಾಜಕೀಯದ ಭಾಗವೆಂದು ನಿರ್ಲಕ್ಷಿಸಬಹುದು. ಆದರೆ ಸಿ.ಟಿ. ರವಿ ಕೊಟ್ಟ ಧರ್ಮದ್ವೇಷದ ಹೇಳಿಕೆ ಮಾತ್ರ ಅಕ್ಷಮ್ಯ. ಬಿಜೆಪಿ ಪರ ಮತದಾರರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ, ಮುಸ್ಲಿಮ್ ತುಷ್ಟೀಕರಣಕ್ಕಾಗಿ ಆ ಸಮುದಾಯದವರ ಬಿಪಿಎಲ್ ಕಾರ್ಡ್ ಮುಂದುವರಿಸಲಾಗಿದೆ ಎಂಬರ್ಥದ ಧರ್ಮದ್ವೇಷದ ಮಾತುಗಳನ್ನು ಮಾಧ್ಯಮಗಳ ಮುಂದೆ ಹೇಳಿ ತಮ್ಮ ಮತಾಂಧ ರಾಜಕಾರಣ ಮುಂದುವರಿಸಿದ್ದಾರೆ. ಕೆಲವು ಮುಸ್ಲಿಮ್ ಮಹಿಳೆಯರೂ ಸಹ ತಮ್ಮ ಕಾರ್ಡ್ ರದ್ದಾಗಿದ್ದಕ್ಕೆ ಸುದ್ದಿ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ. ಆದರೆ ಈ ಕೇಸರಿ ಕನ್ನಡಕದ ಕೋಮುವಾದಿಗಳಿಗೆ ಬಿಪಿಎಲ್ ಕಾರ್ಡ್ ಅನರ್ಹತೆಯಲ್ಲೂ ಜಾತಿ ಧರ್ಮದ ದುರ್ವಾಸನೆಯೇ ಕಾಡುತ್ತಿದೆ.
ಆದರೆ ಇಂತಹ ವಿಷಯದಲ್ಲಿ ನಿಷ್ಕ್ರಿಯವಾಗಿರುವ ಕಾಂಗ್ರೆಸ್ ಸರಕಾರ ಕೇವಲ ಸಮರ್ಥನೆಯಲ್ಲಿ ಕಾಲ ಕಳೆಯುತ್ತದೆಯೇ ಹೊರತು ಆಕ್ರಮಣಶೀಲವಾದ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ಅಕಸ್ಮಾತ್ ತೆಗೆದುಕೊಂಡರೂ ನ್ಯಾಯಾಲಯ ಇದೆಲ್ಲಾ ರಾಜಕೀಯದಲ್ಲಿ ಸಾಮಾನ್ಯ ಎಂದು ಶರಾ ಬರೆದು ಕೂಡಲೇ ಬೇಲ್ ಮಂಜೂರು ಮಾಡುತ್ತದೆ. ಆಮೇಲೆ ಇಂತಹ ಕೇಸುಗಳೇ ಬಿದ್ದು ಹೋಗುತ್ತವೆ. ಮತ್ತೆ ಈ ಕೇಸರಿ ಪಡೆಯ ಸುಳ್ಳು ಪ್ರಚಾರ ಹಾಗೂ ಕೋಮು ಪ್ರಚೋದನೆ ಮುಂದುವರಿಯುತ್ತದೆ.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಸರಕಾರ 11 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುತ್ತಿದೆ ಎಂಬುದು ಬಿಜೆಪಿಗರ ಆರೋಪ. ಇದೇ ಬಿಜೆಪಿಯ ಅಧಿನಾಯಕ ಮೋದಿಯವರೇ ಉಚಿತ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳಿದ್ದರು. ಮೋದಿಯವರ ಮಾತಿನಂತೆ ರಾಜ್ಯ ದಿವಾಳಿಯಾಗುವುದನ್ನು ತಪ್ಪಿಸಲು ಅನರ್ಹ ಫಲಾನುಭವಿಗಳ ಪಡಿತರ ಚೀಟಿ ರದ್ದು ಮಾಡುವುದಾದರೆ ಮಾಡಲಿ ಬಿಡಿ. ಅಷ್ಟಾದರೂ ಹಣ ಸರಕಾರಕ್ಕೆ ಉಳಿದು ಅಭಿವೃದ್ದಿ ಯೋಜನೆಗಳಿಗೆ ಬಳಕೆಯಾಗಬಹುದು. ಕಡುಬಡವರಿಗೆ ಸಿಗಬೇಕಾದ ಪಡಿತರ ಸೌಲಭ್ಯಗಳು ಸರಕಾರಿ ನೌಕರರಿಗೆ, ತೆರಿಗೆ ಪಾವತಿದಾರರಿಗೆ ಯಾಕೆ ಕೊಡಬೇಕು? ಅದೆಷ್ಟು ಜನ ಉಳ್ಳವರು ಅದು ಹೇಗೋ ಸುಳ್ಳು ದಾಖಲೆ ಹಾಗೂ ಲಂಚ ಕೊಟ್ಟು ಬಿಪಿಎಲ್ ಕಾರ್ಡ್ ಮಾಡಿಸಿ ಫಲಾನುಭವಿಗಳಾಗಿಲ್ಲ? ಅಂತಹವರ ಕಾರ್ಡ್ ರದ್ದು ಮಾಡಿ ಅನರ್ಹರ ಪಾಲಾಗುವ ಪಡಿತರವನ್ನು ಉಳಿಸಿದರೆ ತಪ್ಪೇನು? ಬಡವರ ಹೆಸರಲ್ಲಿ ಉಳ್ಳವರೂ ಪಾಲು ಪಡೆಯುವುದನ್ನು ನಿಲ್ಲಿಸುವುದು ಅಗತ್ಯ ಅಲ್ಲವೇ? ಈಗ ರಾಜ್ಯ ಸರಕಾರ ಮಾಡಿದ್ದೂ ಅದನ್ನೇ, ಕೇಂದ್ರ ಸರಕಾರ ಮಾಡಿದ್ದೂ ಅದನ್ನೇ.
ಹೋಗಲಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಿಪಿಎಲ್ ಕಾರ್ಡ್ ವಿತರಣೆಗೆ ಮಾನದಂಡಗಳನ್ನು ರೂಪಿಸಿವೆ. ಆ ಮಾರ್ಗದರ್ಶಿ ಸೂತ್ರಗಳಂತೆಯೇ ಅರ್ಹ ಫಲಾನುಭವಿಗಳನ್ನು ಗುರುತಿಸಿ ಕಾರ್ಡ್ ವಿತರಿಸುವ ಕೆಲಸವನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಬೇಕಲ್ಲವೇ? ಲಂಚಕ್ಕೋ, ವಶೀಲಿಗೋ, ಒತ್ತಡಕ್ಕೋ ಒಳಗಾಗಿ ಸೂಚಿತ ಮಾನದಂಡಗಳನ್ನು ಮೀರಿ ಅನರ್ಹರಿಗೂ ಬಿಪಿಎಲ್ ಕಾರ್ಡ್ ಹಂಚಿಕೆ ಮಾಡಿದ್ದು ಇದೇ ಕಾರ್ಯಾಂಗದ ಅಧಿಕಾರಿಶಾಹಿಗಳಲ್ಲವೇ? ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು, ಸರಕಾರದ ನಿಯಮಾವಳಿಗಳನ್ನು ನಿರ್ಲಕ್ಷಿಸಿ ಅನರ್ಹರಿಗೆ ಬಿಪಿಎಲ್ ಕಾರ್ಡ್ ವಿತರಿಸಿದ ಸಮಸ್ತ ಅಧಿಕಾರಿಗಳ ಮೇಲೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮೊದಲು ಇಲಾಖಾವಾರು ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಿದೆ. ಕ್ರಿಮಿನಲ್ ದೂರು ದಾಖಲಿಸಿ ತನಿಖೆ ಮಾಡಿಸಬೇಕಿದೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕಿದೆ. ಆದರೆ ಭ್ರಷ್ಟ ವ್ಯವಸ್ಥೆಯಲ್ಲಿ ಇವು ಯಾವುವೂ ಸಾಧ್ಯವಿಲ್ಲ. ಆ ಧೈರ್ಯದಿಂದಲೇ ಅಧಿಕಾರಿಗಳು ಕಾನೂನು ಮೀರುತ್ತಲೇ ಇರುತ್ತಾರೆ. ಅನರ್ಹರಿಗೆ ಕಾರ್ಡ್ ವಿತರಿಸುತ್ತಲೇ ಇರುತ್ತಾರೆ. ಬಡವರ ಪಾಲನ್ನು ಬಲಿತರು ಕಬಳಿಸಲು ಅವಕಾಶ ಮಾಡಿಕೊಡುತ್ತಲೇ ಇರುತ್ತಾರೆ. ಭ್ರಷ್ಟ ಅಧಿಕಾರಿಗಳ ದುರಾಸೆಯ ಲಾಭವನ್ನು ಅನರ್ಹರು ಪಡೆದುಕೊಳ್ಳುತ್ತಾರೆ. ನಿಜವಾಗಿಯೂ ಅರ್ಹರಾದವರೂ ಸಹ ಆತಂಕಕ್ಕೆ ಒಳಗಾಗುತ್ತಾರೆ. ಇದೆಲ್ಲವನ್ನೂ ಬಿಜೆಪಿಯಂತಹ ಅವಕಾಶವಾದಿಗಳು ತಮ್ಮ ರಾಜಕಾರಣಕ್ಕೆ ಬಳಸಿಕೊಳ್ಳುತ್ತಾರೆ. ಇದೇ ಪಡಿತರ ಕಾರ್ಡ್ ಪ್ರಕರಣ. ಅದರ ಸುತ್ತ ಮುಂದುವರಿದಿದೆ ಕೇಸರಿ ಪಕ್ಷದ ರಾಜಕಾರಣ.