‘ಒಮ್ಮೆ ನಕ್ಕು ಬಿಡು ಗೆಳತಿ.....’

Update: 2024-05-26 07:19 GMT

ಪ್ರೀತಿಯ ಗೆಳತಿ,

ನಾನಿನ್ನು ಹೊರಡುತ್ತೇನೆ. ಹೊರಡಬೇಕೆಂದು ನಿರ್ಧರಿಸಿದ್ದೇನೆ. ಇನ್ನು ಯಾವುದೇ ಆತಂಕವಿಲ್ಲದೇ ನಿನ್ನ ಮನೆ ಬಾಗಿಲನ್ನು ತೆರೆದಿಡು.! ಮಕ್ಕಳು ಇನ್ನೆಂದೂ ಬಂದು ‘ದೊಡ್ಡಮ್ಮ ಬಾಗಿಲ ತೆಗೆ’ ಎಂದು ಹಿಂಸಿಸುವುದಿಲ್ಲ.! ಈ ಪತ್ರ ನಿನ್ನ ಕೈ ಸೇರುವುದರೊಳಗೆ ನಿನ್ನನ್ನು ಈಗಾಗಲೇ ಹಲವಾರು ಮಂದಿ ಬಂದು ಕೇಳಿರಬಹುದು. ‘ಎಲ್ಲಿ ಹೋದಳು ಎಳೆ ಮಕ್ಕಳೊಂದಿಗೆ’ ಎಂದು. ‘ಜನುಮದ ಜೋಡಿಗಳಿದ್ದಂಗೆ ಇದ್ದವರು ನೀವು, ನಿನಗೆ ಹೇಳದೆ ಹೋಗಿರುತ್ತಾಳೆಯೇ? ಎಂದು ಕೊಂಕೂ ಆಡಿರಬಹುದು. ನೀನು ಉತ್ತರಕ್ಕಾಗಿ ತಡಕಾಡುತ್ತಿರುವೆ ಅಲ್ಲವೇ ಗೆಳತಿ. ಅದಕ್ಕಾಗೆ ಈ ಪತ್ರ.

ಒಂದು ವಾರದಿಂದ ನಿನ್ನಿಂದ ಒಂದೂ ಮಾತಿಲ್ಲ. ನೀನು ಪಕ್ಕದ ಮನೆಯಲ್ಲೇ ಇದ್ದರೂ, ನಾನೆಲ್ಲೋ ದೇಶದ ಗಡಿಯಾಚೆ ಇರುವಂತಿದೆ.. ಮಕ್ಕಳಿಬ್ಬರೂ ಅದೆಷ್ಟು ಬಾರಿ ಕೇಳಿದರೋ, ದೊಡ್ಡಮ್ಮ ಏಕೆ ಮಾತಾಡುತ್ತಿಲ್ಲ, ಬಾಗಿಲೇಕೆ ತೆಗೆಯುತ್ತಿಲ್ಲವೆಂದು. ದೊಡ್ಡವಳಿಗೆ ಏನೋ ಹೇಳಿ ಸಮಾಧಾನ ಮಾಡುತ್ತಿದ್ದೆ. ಆದರೆ ಚಿಕ್ಕವನಿಗೆ ಹೇಳಲು ನನ್ನಿಂದ ಸಾಧ್ಯವಾಗದೆ ಹೋಯಿತು.... ನಿನಗೇ ಗೊತ್ತಿದೆ, ನಿನ್ನನ್ನು ಅವನು ಎಷ್ಟು ಹಚ್ಚಿಕೊಂಡಿದ್ದನೆಂದು. ನೆಲಕ್ಕೆ ಬಿದ್ದು ಒದ್ದಾಡಿ ರಂಪ ಮಾಡುತ್ತಿದ್ದ. ‘ದೊಡ್ಡು... ದೊಡ್ಡಮ್ಮ’ಎಂಬ ಅವನ ತೊದಲು ನುಡಿಯ ಅಲೆಗಳು ನೀನು ಮುಚ್ಚಿದ ಎಲ್ಲಾ ಕಿಟಕಿ ಬಾಗಿಲುಗಳನ್ನು ಭೇದಿಸಿ ನಿನ್ನ ಕಿವಿಗಳನ್ನೂ ಅಪ್ಪಳಿಸಿರುತ್ತವೆ...ಇಲ್ಲವೆನ್ನಬೇಡ.!

ನೆನಪಿದೆಯಾ ಗೆಳತಿ, ಅಂದು ಇಂದಿನಂತೆ ಗಾಢ ಕತ್ತಲು ನನ್ನ ಸುತ್ತ. ನಾನು ಕತ್ತಲಾಗಿ ಕುಳಿತ್ತಿದ್ದೆ. ಮಡಿಲಲ್ಲಿ ವರುಷದ ಕೂಸು. ಪುಟ್ಟಿಗೆ ಮೂರು ವರ್ಷ. ಕೋವಿಡ್ ಮಹಾಮಾರಿ ಗಂಡನನ್ನು ಬಲಿ ತೆಗೆದುಕೊಂಡಿತ್ತು.. ಆ ಕತ್ತಲಲ್ಲಿ ಕೋಲ್ಮಿಂಚಂತೆ ಬಂದೆ ನೀನು. ನಿನ್ನ ಕಣ್ಣುಗಳಲ್ಲಿದ್ದ ಆ ಪ್ರೀತಿ, ವಾತ್ಸಲ್ಯ, ಆತ್ಮೀಯ ಭಾವ ಇನ್ನೂ ಅಚ್ಚಳಿಯದೆ ನನ್ನ ಕಣ್ಣಕಟ್ಟಿವೆ. ನೀನು ಚಾಚಿದ ಆ ಸ್ನೇಹದ ಹಸ್ತ, ನನ್ನೆಲ್ಲಾ ರಕ್ತ ಸಂಬಂಧವನ್ನು ನಾಚಿಸಿದ್ದವು. ‘ಮುಳುಗಿದ ಸೂರ್ಯ ನಾಳೆ ಬಂದೇ ಬರುತ್ತಾನೆ. ನೆನ್ನೆಯ ಬಿಟ್ಟು, ಮುಂಬರುವ ನಾಳೆಗಳ ನೋಡೆಂದೆ.’ ಅದೆಂತ ಜೀವನದ ಚೈತನ್ಯವನ್ನು ತುಂಬಿದವು ನಿನ್ನ ಮಾತುಗಳು ನನಗೆ. ಅಂದು ಮಾತ್ರವಲ್ಲ ಇಂದು ಸಹ... ಕಗ್ಗತ್ತಲೆಯ ದಾರಿಯಲ್ಲಿ ದೀಪಗಳಾಗಿವೆ ..

ದುಡಿಮೆಗಾಗಿ ಮನೆಕೆಲಸದ ದಾರಿ ತೋರಿಸಿದೆ.. ವರುಷಗಳು ಉರುಳಿದವು. ನೀನು ಹೇಳಿದಂತೆ ಕತ್ತಲು ಕ್ರಮೇಣ ಸರಿಯಿತು. ಮಕ್ಕಳು ದೊಡ್ಡದಾದವು. ಮನೆಯ ಖರ್ಚು ದೊಡ್ಡದಾಯಿತು. ಆಗಲೇ ಅದ್ಯಾರಿಂದಲೋ ಗೊತ್ತಾಯಿತು ದೊಡ್ಡಮನೆಯಲ್ಲಿ ಮನೆಗೆಲಸಕ್ಕೆ ಹೆಣ್ಣಾಳು ಬೇಕಿದ್ದಾರೆ ಎಂದು. ನಿನ್ನ ಬಳಿ ಹೇಳಿದೆ. ನನ್ನ ಮಾತಿನ್ನೂ ಮುಗಿದೆ ಇರಲಿಲ್ಲಾ,... ನೀನು ಮಾತು ಮುಂದುವರಿಸಿದೆ, ‘‘ಒಪ್ಪಿಕೋ. ಇನ್ನೇನು ಯೋಚಿಸುತ್ತಿರುವೆ. ಒಂದೆರಡು ಕಾಸು ಉಳಿಸು. ಪಾಪು ಹಾಗೂ ಪುಟ್ಟಿಯ ಚಿಂತೆಯನ್ನು ಬಿಡು. ಪುಟ್ಟಿ ಶಾಲೆಯಿಂದ ನೇರ ಬಂದು ನಮ್ಮ ಮನೆಯಲ್ಲಿರುತ್ತಾಳೆ. ನನ್ನ ಗಂಡ ಬರುವುದು ಸಂಜೆಯ ಮೇಲೆ. ಅಲ್ಲಿಯವರೆಗೂ ಮನೆಯಲ್ಲಿ ನಾನು ಒಂಟಿ ಪಿಶಾಚಿಯೇ. ಮಕ್ಕಳಿಬ್ಬರು ಅಂಗಳದಲ್ಲಿ ಆಡಿಕೊಂಡಿರಲಿ ಬಿಡು’’ ಎಂದೇ... ನಾನು ಏನು ಹೇಳದೇ ಹೋದರೂ ಅಂದು ನೀನು ಎಲ್ಲವನ್ನು ಅರ್ಥಮಾಡಿಕೊಂಡು ಆಡಿದ ಮಾತುಗಳು ನನ್ನೆಲ್ಲಾ ಆತಂಕವನ್ನು ದೂರ ಮಾಡಿದವು. ನಿಶ್ಚಿಂತೆಯಿಂದ ನಿಟ್ಟುಸಿರು ಬಿಟ್ಟೆ.

ದೊಡ್ಡ ಮನೆಯ ಕೆಲಸ ದಿನ ಕಳೆದಂತೆ ಉಸಿರುಗಟ್ಟಿಸಿತು. ದಿನಪೂರ ಮಾಡಿದರೂ ಮುಗಿಯಲಾರದ ಕೆಲಸ. ಮಕ್ಕಳ ಭವಿಷ್ಯಕ್ಕೆಂದು ಎಲ್ಲವನ್ನು ಸಹಿಸಿಕೊಂಡೆ. ಅದೊಂದು ದಿನ ಮನೆಯ ಮಾಲಕನ ಕಾಮದ ಕೂಪದ ಬಾಯಿಗೆ ಆಹಾರವಾಗಿ ನಾನು ಬಲಿಯಾದೆ. ಪ್ರತಿಭಟಿಸಿದ್ದೆ ಗೆಳತಿ. ನನ್ನ ಪ್ರತಿಭಟನೆಯ ಧ್ವನಿಯನ್ನು ಮುಗಿಲೆತ್ತರದ ಮನೆಯ ನಾಲ್ಕು ಗೋಡೆಗಳು ಹೊಸಕಿ ಹಾಕಿದವು.. ಪ್ರತಿಭಟಿಸಿದ್ದ ಫಲವಾಗಿ ಮೈತುಂಬಾ ಗಾಯಗಳಾದವು. ಮಕ್ಕಳು ಕೇಳಿದವು. ಅದೇಗಾಯಿತು, ಇದೇಗಾಯ್ತು ಎಂದು. ಹೇಳಿದೆ ಮೊದಲ ಬಾರಿ ಪುಂಕಾನುಪುಂಕ ಸುಳ್ಳುಗಳ. ಅಲ್ಲಿ ಬಿದ್ದೆ, ಇಲ್ಲಿ ಬಿದ್ದೆ ಎಂದು. ಮಕ್ಕಳು ನಂಬಿದವು. ಅದೆಷ್ಟು ಬಲವಾದ ನಂಬಿಕೆ ಅಲ್ಲವೇ ಮಕ್ಕಳಿಗೆ ತಾಯಿಯ ಮೇಲೆ.! ಆ ನಂಬಿಕೆಯನ್ನು ಯಾವ ತಾಯಿ ತಾನೇ ಕಳೆದುಕೊಳ್ಳಲು ಇಚ್ಛಿಸುತ್ತಾಳೆ. ಮರುದಿನ ನಿನ್ನ ಬಳಿಯೂ ಮಕ್ಕಳಿಗೆ ಕೊಟ್ಟ ಉತ್ತರವನ್ನೇ ಕೊಟ್ಟೆ. ಅದೇಕೋ ಧೈರ್ಯವೇ ಬರಲಿಲ್ಲ ಗೆಳತಿ ನಿನ್ನ ಬಳಿಯೂ ಸಹ. ಅದ್ಯಾವ ಭಯ ನನ್ನ ಬಾಯಿ ಕಟ್ಟಿಹಾಕಿತ್ತೊ ಗೊತ್ತಿಲ್ಲ.

ಕೆಲಸವನ್ನು ಬಿಡುತ್ತೇನೆ ಎಂದೆ. ನೀನು ಕಾರಣವನ್ನು ಕೇಳಿದೆ, ನಾನು ‘ತುಂಬಾ ಕೆಲಸ’ವೆಂದು ಮಾತ್ರ ಉತ್ತರಿಸಿದೆ. ‘‘ಬಿಡುವುದಾದರೆ ಮತ್ತೊಂದು ಕೆಲಸವನ್ನು ಕೈಯಲ್ಲಿ ಹಿಡಿದುಕೊಂಡು ಬಿಡು. ಇಲ್ಲದಿದ್ದರೆ ಮಕ್ಕಳ ಕಥೆ ಏನು?’’ ಎಂದು ಎಚ್ಚರಿಸಿದೆ. ಮಕ್ಕಳ ಹಸಿವು ನೆನಪಾಯಿತು. ಮತ್ತೆ ಹೋದೆ ಆ ಮನೆಯ ಅಂಗಳಕ್ಕೆ. ಬೆಂಕಿಯನ್ನು ಸೆರಗಲ್ಲೇ ಕಟ್ಟಿಕೊಂಡಂತೆ, ಜೀವ ಹಿಡಿದೇ ಕೆಲಸ ಮಾಡಿದೆ. ಅದೆಷ್ಟುಸಲ ನಿದ್ದೆಯಲ್ಲಿ ಬೆಚ್ಚಿಬಿದ್ದಿದ್ದೇನೋ... ಮಕ್ಕಳು ಸಹ ಎಚ್ಚರಗೊಳ್ಳುತ್ತಿದ್ದವು.. ತಡೆಯಲಾರದೆ ಹೋದೆ ಆ ಉಸಿರು ಗಟ್ಟಿಸಿದ ಮನೆಯ.. ನಿರ್ಧರಿಸಿಬಿಟ್ಟೆ. ನಾಳೆಯಿಂದ ನಾನು ಹೋಗುವುದಿಲ್ಲವೆಂದು. ಬಿಟ್ಟೆ ಕೆಲಸವನ್ನು. ಸ್ವಲ್ಪ ದಿನಗಳು ಕಷ್ಟವಾದವು. ಆಗಲೂ ನೆರವಾದದ್ದು ನಿನ್ನ ಕೈಗಳೇ. ಅದೇಗೋ ಮತ್ತೆ ಮೂರು ಮನೆಗಳಲ್ಲಿ ಚಿಕ್ಕ ಪುಟ್ಟ ಕೆಲಸ ಗಿಟ್ಟಿಸಿಕೊಂಡೆ.

ಎಲ್ಲವೂ ಸರಿ ಹೋಗುತ್ತಿದೆ ಎನ್ನುವಷ್ಟರಲ್ಲೇ, ನನ್ನನ್ನು ಅದ್ಯಾರೋ ಬೆಂಕಿಯ ಕೆನ್ನಾಲಿಗೆಗೆ ದಬ್ಬಿದಂತೆ ಅನ್ನಿಸಿತು ಗೆಳತಿ. ಅಂದು ಸಂಜೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದೆ. ಮಕ್ಕಳಿಗೆ ತಿಂಡಿ ತೆಗೆದುಕೊಳ್ಳಲು ಅಂಗಡಿಗೆ ಹೋದಾಗ, ನನ್ನ ನೋಡಿ ಅಲ್ಲಿದ್ದವರಲ್ಲಿ ಅದೇನೋ ಗುಸು ಗುಸು. ‘ಇವಳೇ ಇವಳೇ’ ಎಂಬ ಶಬ್ದ ಮಾತ್ರ ಸ್ಪಷ್ಟವಾಗಿ ಕೇಳಿಸಿತು. ಮತ್ತೆಲ್ಲವೂ ಗುಸುಗುಸು. ದಾರಿ ಉದ್ದಕ್ಕೂ ಅದೆಂಥಾ ಮುಜುಗರ.! ಎಲ್ಲರ ಕಂಗಳು ನನ್ನ ಮೈಮೇಲೆ , ಹರಿದಾಡಿದಂತಾಯಿತು.! ನನ್ನ ಬಟ್ಟೆ ಎಲ್ಲಾದರೂ ಹರಿದಿದೆಯೋ ಎಂದು ನೋಡಿಕೊಂಡೆ. ಕೈಗಳನ್ನು ಬೆನ್ನ ಮೇಲೆ ಹಾಯಿಸಿದೆ. ಎಲ್ಲವೂ ಸರಿಯಿತ್ತು. ಆದರೂ ಜನರ ವಿಚಿತ್ರ ನೋಟ ನನ್ನೆಡೆಗೆ!. ದಾರಿ ಉದ್ದಕ್ಕೂ ಅದೇ ನೋಟ, ಬಿಡಲಾರದ ನೋಟ.!

ಅಲ್ಲಿಂದ ಕಾಲು ಕಿತ್ತವಳಂತೆ ನೇರ ನಿನ್ನ ಮನೆಗೆ ಬಂದೆ. ನಿನ್ನ ಬಳಿ ಏನೋ ಹೇಳಲಿದ್ದೇ ಅಷ್ಟರಲ್ಲಿ ನೀನು ‘‘ನಿನ್ನಂತಹ ನೀತಿಗೆಟ್ಟವಳಿಗೆ ನನ್ನ ಮನೆಯಲ್ಲಿ ಪ್ರವೇಶವಿಲ್ಲ’’ವೆಂದೆ. ಅದೆಷ್ಟು ಹರಿತವಾಗಿದ್ದವು ಆ ಮಾತುಗಳು. ಮನಸ್ಸು ಬಾಣಕ್ಕೆ ಸಿಕ್ಕ ಬೇಟೆಯು ವಿಲವಿಲನೆ ಒದ್ದಾಡುವಂತೆ ಆಡಿತು. ಏನಾಯಿತು ಎನ್ನುವಷ್ಟರಲ್ಲೇ ‘‘ಹೊರಡು ಇಲ್ಲಿಂದ, ನನ್ನ ಗಂಡ ಬರುವ ಸಮಯವಾಯಿತೆಂದೆ.’’ ಬೆಚ್ಚಿದೆ ಒಮ್ಮೆ ನಿನ್ನ ಕೋಪಕ್ಕೆ. ದುಃಖ, ಕೋಪ ಒಟ್ಟೊಟ್ಟಿಗೆ ಬಂದವು. ಬರಲಾರದ ಮಕ್ಕಳನ್ನು ಅಂಗಳದಿಂದ ಎಳೆದುಕೊಂಡು ಮನೆಗೆ ಬಂದೆ.

ಮಕ್ಕಳ ಮುಂದೆ ಎಂದು ಅಳಲಾರದವಳು ಅಂದು ಸಹಿಸಲಾರದೆ ಹೋದೆ. ನನ್ನ ಕಣ್ಣೀರ ಕಟ್ಟೆ ಒಡೆಯಿತು. ನನ್ನ ನೋಡಿ ಮಕ್ಕಳು ಅಳಲಾರಂಭಿಸಿದವು. ಮಕ್ಕಳಿಗಾಗಿ ಕಣ್ಣೀರ ಮರೆಮಾಚಿದೆ. ಏನಾಗಿದೆ ಎಂದು ತಿಳಿಯಲು ಹರಸಾಹಸ ಮಾಡಿದೆ. ಎಲ್ಲವೂ ಕಗ್ಗಂಟಾಗಿತ್ತು. ರಾತ್ರಿ ಪೂರಾ ನಿದ್ದೆ ಇಲ್ಲದೆ ಒದ್ದಾಡಿದೆ..

ಮರುದಿನ ದೊಡ್ಡಮನೆಯಲ್ಲಿ ನನ್ನೊಟ್ಟಿಗೆ ಕೆಲಸ ಮಾಡುತ್ತಿದ್ದ ಒಬ್ಬಾಕೆ ಮನೆಗೆ ಬಂದಳು. ಅವಳ ಮೂಲಕವೇ ವಿಷಯ ಗೊತ್ತಾಯ್ತು. ದೊಡ್ಡಮನೆಯ ಕಾಮುಕನು ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ವೀಡಿಯೊಗಳು ಸಾವಿರಾರು ಸಂಖ್ಯೆಯ ಪೆನ್ಡ್ರೈವ್ಗಳ ಮೂಲಕ ಊರಿನ ಹಾದಿ ಬೀದಿಯಲ್ಲಿ ಬಹಿರಂಗವಾಗಿವೆ. ಈ ವೀಡಿಯೊಗಳನ್ನು ಸ್ವತಃ ಆ ಕಾಮುಕನೇ ತನ್ನ ಮೊಬೈಲ್ನಲ್ಲಿ ಸೆರೆಹಿಡಿದುಕೊಂಡಿದ್ದು, ಈ ಚುನಾವಣಾ ಸಮಯದಲ್ಲಿ ಅವು ಹೊರಬಿದ್ದಿವೆ. ಅದರಲ್ಲಿ ನನ್ನದೂ ಇದೆ ಎಂದು! ಕೇಳಿದೊಡನೆ, ಅದೇಕೋ ಮೈತುಂಬಾ ಬಟ್ಟೆ ಇದ್ದರೂ, ಒಮ್ಮೆಲೆ ಇಡೀ ಜಗತ್ತೆ ನನ್ನನ್ನು ನಗ್ನಗೊಳಿಸಿತು ಎಂದೆನಿಸಿತು. ನಿಂತಲ್ಲೇ ಕುಸಿದೆ. ಕುಸಿದಲ್ಲೇ ಮುದುಡಿದೆ.....!!

ನಿನ್ನ ಮೇಲೆ ಯಾವ ಬೇಸರವೂ ಇಲ್ಲ ಗೆಳತಿ. ನಿನ್ನ ಕೋಪ ಯಾರ ಮೇಲೆಂದು ತಿಳಿಯಲು ಅಸಮರ್ಥಳಾದೆ. ಅಷ್ಟೇ! ನನ್ನಿಂದಾಗಲಿ, ಮಕ್ಕಳಿಂದಾಗಲಿ ನೀನೆಂದೂ ಅವಮಾನಕ್ಕೊಳಗಾಗ ಬಾರದು. ಆದ್ದರಿಂದಲೇ ಹೊರಡುತ್ತಿದ್ದೇನೆ. ಊರ ತೊರೆದು. ಜೀವ ತೊರೆದಲ್ಲ.! ಮಕ್ಕಳಿಗೆ ಹೊಸ ಊರೆಂದು ಇನ್ನೂ ತಿಳಿದಿಲ್ಲ. ನನ್ನ ಕರುಳಿನ ಋಣಕ್ಕಿಂತ, ನಿನ್ನ ಮಡಿಲಲ್ಲಿ ಕುಳಿತು ತಿಂದ ಕೈತುತ್ತಿನ ಋಣ ಮಕ್ಕಳ ಮೇಲೆ ಹೆಚ್ಚಿದೆ. ಕೆಲ ಕಾಲ ಸಮಾಧಾನ ಮಾಡಲು ನನ್ನೊಬ್ಬಳಿಗೆ ಕಷ್ಟವಾಗಬಹುದು, ಹೊಂದಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ. ಯಾವುದೋ ಭಯ ಬಹುಕಾಲ ನನ್ನನ್ನು ಮೂಕಳಾಗಿಸಿದಂತೆ, ನಿನ್ನನ್ನು ಇಂದು ಬಂಧಿಸಿಟ್ಟಿರಬಹುದು. ಚಿಂತೆಯಿಲ್ಲ. ನಿನ್ನಲ್ಲಿ ಒಂದೇ ಒಂದು ಮನವಿ, ಮುಂದೆ ಎಂದಾದರೂ ಎಲ್ಲಿಯಾದರೂ ನಾವು ನಿನಗೆ ಎದುರಾದರೇ ಒಮ್ಮೆ, ಒಮ್ಮೆ ನಕ್ಕು ಬಿಡು ಗೆಳತಿ, ನಮ್ಮೆಡೆಗೆ ಮೊದಲಿನಂತೆಯೇ,...ಸಾಕು. ನಿನ್ನ ಪ್ರೀತಿ ಕಂಗಳ ಮತ್ತ್ತೊಮ್ಮೆ ನೋಡುವ ಬಯಕೆ ...... ಅಷ್ಟೇ. ಕಾಯುತ್ತಿರುತ್ತೇನೆ ಆ ದಿನಕ್ಕಾಗಿ..

...ಇಂತಿ ......

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ನಿರ್ಮಲಾ ಎಚ್.ಎಲ್.

contributor

Similar News