ಧರ್ಮದ ಹೊರತು ಇವರಿಗೆ ಅಸ್ತಿತ್ವವೇ ಇಲ್ಲವೇ?

Update: 2024-10-05 06:23 GMT

ಹರ್ಯಾಣದಲ್ಲಿ ಆದಿತ್ಯನಾಥ್ ಮಾಡಿದ ಭಾಷಣ ಕೇಳಿದರೆ, ಬಿಜೆಪಿಯವರಿಗೆ ಧರ್ಮವನ್ನು ಬಿಟ್ಟು ಹೊಸದಾಗಿ ಏನೂ ಹೇಳಲು ಸಾಧ್ಯವೇ ಇಲ್ಲ ಎಂದೆನ್ನಿಸದೇ ಇರದು.

ನಮ್ಮ ಧರ್ಮ, ಅವರ ಧರ್ಮ ಎಂದು ಹೋಲಿಕೆ ಮಾಡುತ್ತಲೇ ಕಳೆದುಬಿಡುತ್ತಾರೆ, ದ್ವೇಷ ಹಬ್ಬಿಸುತ್ತಲೇ ಸಂಭ್ರಮಿಸುತ್ತಾರೆ. ನಾವು ಶ್ರೇಷ್ಠ, ಅವರು ಕನಿಷ್ಠ ಎನ್ನುವುದನ್ನೇ ಹೇಳುತ್ತ ಬಂದಿದ್ದಾರೆ.

ಮೋದಿ ಹೋಗಿ ರೋಮ್ನಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿ, ಅವರೊಂದಿಗೆ ಸಮಾಲೋಚನೆಗೆ ಅವಕಾಶ ಸಿಕ್ಕಿದ್ದರ ಬಗ್ಗೆ ಎಕ್ಸ್ ನಲ್ಲಿ ಬರೆದುಕೊಳ್ಳುತ್ತಾರೆ. ಆದರೆ ಅವರದೇ ಪಕ್ಷದ ಮತ್ತೊಬ್ಬ ನಾಯಕ ಆದಿತ್ಯನಾಥ್ ರೋಮ್ ಸಂಸ್ಕೃತಿಯ ಬಗ್ಗೆ ಕಡಗಣನೆಯ ಧಾಟಿಯಲ್ಲಿ ಮಾತಾಡುತ್ತಾರೆ.

ರಾಮನ ಸಂಸ್ಕೃತಿ ಮತ್ತು ರೋಮಿನ ಸಂಸ್ಕೃತಿ ಎಂದು ಆದಿತ್ಯನಾಥ್ ಹೊಸದೇ ಚರ್ಚೆಯನ್ನು ಮುಂದೆ ತರಲು ನೋಡುತ್ತಾರೆ.

ಇಟಲಿ ಪ್ರಧಾನಿ ಜೊತೆ ಮೋದಿ ಇರುವ ಚಿತ್ರಗಳು ಗಮನ ಸೆಳೆಯುತ್ತವೆ. ರಾಜತಾಂತ್ರಿಕ ಸಂಬಂಧವನ್ನು ಬಿಂಬಿಸುವ ಅಂಥ ಚಿತ್ರಗಳೆಲ್ಲ ಮೋದಿಯವರ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅಂತರ್ರಾಷ್ಟ್ರೀಯ ವಿಜಯದ ಸಂಕೇತವೆಂಬಂತೆ ಪ್ರದರ್ಶನಗೊಳ್ಳುತ್ತಿರುತ್ತವೆ.

ಆದರೆ ಇಟಲಿ ಜೊತೆಗಿನ ಭಾರತದ ಇಂಥ ರಾಜತಾಂತ್ರಿಕ ಸಂಬಂಧ ಒಂದೆಡೆಯಾದರೆ, ಹರ್ಯಾಣದ ಚುನಾವಣೆಯಲ್ಲಿ ರೋಮ್ ಸಂಸ್ಕೃತಿಯ ಬಗ್ಗೆ ಹೀಗಳೆದು ರಾಮನ ಸಂಸ್ಕೃತಿ ತಮ್ಮದೆಂದುಕೊಳ್ಳುವವರು ಮಾತಾಡುವುದು ಇನ್ನೊಂದೆಡೆ ಕಾಣಿಸುತ್ತಿದೆ.

ಪ್ರಮುಖ ವಿಪಕ್ಷ ಕಾಂಗ್ರೆಸ್ ಅನ್ನು ರೋಮ್ ಸಂಸ್ಕೃತಿಯ ಪಕ್ಷವೆಂದು ಜರೆಯುವುದರಲ್ಲಿ ಏನಾದರೂ ಸತ್ಯವಿದೆಯೇ? ಅಥವಾ ಸತ್ಯಕ್ಕೆ ಎಂದಾದರೂ ಬಿಜೆಪಿ ಮುಖಾಮುಖಿಯಾದದ್ದು ಇದೆಯಾ?

ಏನೋ ನೆಪ ಹುಡುಕಿ ಬಂಧಿಸುವುದು, ಜೈಲಿಗೆ ಹಾಕುವುದು, ಅನುಮಾನಾಸ್ಪದ ಎನ್ಕೌಂಟರ್ ಮೂಲಕ ಮುಗಿಸಿಬಿಡುವುದು ಇಂಥ ನೂರೆಂಟು ರಗಳೆಗಳಲ್ಲಿಯೇ, ಸತ್ಯಕ್ಕೆ ವಿಮುಖವಾಗಿ ಅಡಗಿಕೊಳ್ಳುವುದರಲ್ಲಿಯೇ ಬಿಜೆಪಿ ಬಲವೆಲ್ಲ ಮುಗಿದುಹೋಗಿದೆ. ಅವರಲ್ಲಿ ನೈತಿಕತೆಯೂ ಉಳಿದಿಲ್ಲ.

ಅತ್ಯಾಚಾರ, ಹತ್ಯೆಯಂಥ ಪ್ರಕಣಗಳಲ್ಲಿ ಜೈಲಿನಲ್ಲಿರುವ ರಾಮ್ ರಹೀಮ್ಗೆ ಚುನಾವಣೆಗೆ ಮೊದಲು ಪೆರೋಲ್ ಮೇಲೆ ಹೊರಗೆ ಬರಲು ಅವಕಾಶ ಮಾಡಿಕೊಡಲಾಗಿದೆ. ಪ್ರಧಾನಿ ಮೋದಿಯ ಧರ್ಮ, ಅವರೇ ಹೇಳುವ ನಾರಿಶಕ್ತಿಯ ವಿಚಾರದಲ್ಲಿ ತೋರಿಸುವ ಗೌರವ ಇದೆಯೇ? ಅತ್ಯಾಚಾರಿಗೆ ಮತ್ತೆ ಮತ್ತೆ ಜೈಲಿನಿಂದ ಹೊರಗಿರುವ ಅವಕಾಶ ಅದು ಹೇಗೆ ಸಿಗುತ್ತದೆ?

ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಬಂದಾಗ ರಾಮನ ಆದರ್ಶಗಳಲ್ಲಿ ಯಾವುದನ್ನಾದರೂ ಪಾಲಿಸಲಾಯಿತೆ? ಟಿಕೆಟ್ ತಪ್ಪಿಸಲಾಯಿತು, ಆದರೆ ಬ್ರಿಜ್ ಭೂಷಣ್ ಬದಲು ಆತನ ಪುತ್ರನಿಗೆ ಕೊಡಲಾಯಿತು.

ಇನ್ನು ಗಿರಿರಾಜ್ ಸಿಂಗ್ ಥರದವರ ದ್ವೇಷ ರಾಜಕೀಯ ಇನ್ನೊಂದೆಡೆ. ತಿರುಪತಿ ಲಡ್ಡು ವಿಚಾರವಾಗಿ ಅನವಶ್ಯಕವಾಗಿ ಅವರು ಹೇಳಿಕೆ ನೀಡುತ್ತಾರೆ. ತನಿಖೆ ಪೂರ್ತಿಯಾಗಿಲ್ಲ, ಪ್ರಾಣಿಗಳ ಕೊಬ್ಬಿನ ಬಳಕೆ ಸಾಬೀತಾಗಿಯೂ ಇಲ್ಲ. ಆದರೆ ಗಿರಿರಾಜ್ ಸಿಂಗ್ ಅದೇ ಸುಳ್ಳನ್ನೇ ಸತ್ಯ ಎಂದು ತಾನೂ ಮತ್ತೊಮ್ಮೆ ಹೇಳುವ ಯತ್ನ ಮಾಡುತ್ತಾರೆ.

ಬಿಜೆಪಿಯವರು ಮತ್ತೆ ಮತ್ತೆ ಹೇಳುವ ಸುಳ್ಳುಗಳಲ್ಲಿ ರಾಮನ ಮರ್ಯಾದೆ ಎಲ್ಲಿದೆ? ಮೋದಿ ಏನೇ ಮಾತಾಡಿದರೂ ಅದರಲ್ಲಿ ಸುಳ್ಳುಗಳೇ ಇರುತ್ತವೆ.

ಬಿಜೆಪಿ ಜೊತೆ ಕೈಜೋಡಿಸಿರುವ ಚಂದ್ರಬಾಬು ನಾಯ್ಡು ಏಕೆ ತಿರುಪತಿ ಲಡ್ಡು ವಿಚಾರವನ್ನು ಎತ್ತಿಕೊಂಡು ಧರ್ಮದ ಹೆಸರಿನ ರಾಜಕೀಯಕ್ಕೆ ಪ್ರಚೋದಿಸುತ್ತಾರೆ ಎಂಬುದು ಬಯಲಾಗಿದೆ.

ಅವರ ಹೇಳಿಕೆಯನ್ನು ತೆಗೆದುಕೊಂಡು ಕೇಂದ್ರ ಮಂತ್ರಿ ಗಿರಿರಾಜ್ ಸಿಂಗ್ ಮಾತಾಡುತ್ತಾರೆ.

ಇಂಥ ನೂರೆಂಟು ಉದಾಹರಣೆಗಳನ್ನು ಕೊಡುತ್ತ ಹೋಗಬಹುದು.

ಕಳೆದ 10 ವರ್ಷಗಳಲ್ಲಿ ಮೋದಿ ಸುಳ್ಳನ್ನೇ ಹೇಳದ ಒಂದೇ ಒಂದು ಭಾಷಣವಾದರೂ ಇದೆಯೆ? ಬಿಜೆಪಿಯವರ ಧರ್ಮದ ಹೆಸರಿನ ರಾಜಕಾರಣದಿಂದ ಧರ್ಮಕ್ಕೆ ಏನಾದರೂ ಪ್ರಯೋಜನವಾಗಿದೆಯೆ? ಧರ್ಮದ ಹೆಸರಿನ ರಾಜಕಾರಣ ಮಾಡುವವರು ಸತ್ಯವನ್ನು ಸ್ವೀಕರಿಸಲು ಏಕೆ ಹಿಂಜರಿಯುತ್ತಾರೆ?

ಆಕಸ್ಮಿಕವಾಗಿ ಹಿಂದೂ ಎಂದು ನೆಹರೂ ಹೇಳಿದ್ದರು ಎನ್ನಲಾಗುವ ತಪ್ಪು ಕಥೆಯನ್ನೇ ಇವತ್ತಿಗೂ ಹೇಳಿಕೊಂಡು ಬರಲಾಗಿದೆ.

ಹೊಸದಾಗಿ ಹೇಳಲು ಏನೂ ಇಲ್ಲದ ಆದಿತ್ಯನಾಥ್ ಥರದವರು ಮತ್ತೆ ಮತ್ತೆ ಅದೇ ಸುಳ್ಳನ್ನೇ ಹೇಳುತ್ತ ಚರಿತ್ರೆಯನ್ನು ಸಾಯಿಸುತ್ತಲೇ ಇದ್ದಾರೆ.

ನಾನು ಶಿಕ್ಷಣದಿಂದ ಕ್ರಿಶ್ಚಿಯನ್, ಸಂಸ್ಕೃತಿಯಿಂದ ಮುಸಲ್ಮಾನ್ ಹಾಗೂ ಹುಟ್ಟಿನಿಂದ ಆಕಸ್ಮಿಕವಾಗಿ ಹಿಂದೂ ಎಂದು ನೆಹರೂ ಹೇಳಿದ್ದಾರೆ ಎಂಬುದು ನೆಹರೂ ವಿರುದ್ಧದ ಇವರ ಅತಿ ದೊಡ್ಡ ಸುಳ್ಳುಗಳಲ್ಲಿ ಒಂದು. ಆದರೆ ಹಾಗೆ ನೆಹರೂ ಹೇಳಿದ್ದೇ ಇಲ್ಲ. ಅವೆಲ್ಲವೂ ಬಿಜೆಪಿಯದ್ದೇ ಆವೃತ್ತಿಗಳು.

ಹೀಗೆ ನೆಹರೂ ವಿರುದ್ಧ ಸುಳ್ಳುಗಳನ್ನೇ ಹರಡುವ ಬಿಜೆಪಿಯವರು, ಆ ಮಾತನ್ನು ನೆಹರೂ ಬಗ್ಗೆ ಹೇಳಿದ್ದವರು 1950ರಲ್ಲಿ ಹಿಂದೂ ಮಹಾಸಭಾ ಅಧ್ಯಕ್ಷರಾಗಿದ್ದ ಎನ್.ಬಿ. ಖರೆ ಎಂಬ ಸತ್ಯವನ್ನು ತಿಳಿದೇ ಇಲ್ಲವೆ? ಅಥವಾ ಏಕೆ ಮರೆಮಾಚುತ್ತಾರೆ?

ನೆಹರೂ ಬಗ್ಗೆ ಹೇಳುತ್ತ ಎನ್.ಬಿ. ಖರೆ, ಶಿಕ್ಷಣದಿಂದ ಕ್ರಿಶ್ಚಿಯನ್, ಸಂಸ್ಕೃತಿಯಿಂದ ಮುಸಲ್ಮಾನ್ ಹಾಗೂ ಹುಟ್ಟಿನಿಂದ ಆಕಸ್ಮಿಕವಾಗಿ ಹಿಂದೂ ಎಂದು ಅವಮಾನಿಸುವ ಧಾಟಿಯಲ್ಲಿ ಹೇಳಿದ್ದರು. ಆದರೆ ಆ ಮಾತು ಅವರಿಗೇ ಗೊತ್ತಿಲ್ಲದೆ ನೆಹರೂ ಅವರ ಸಹಿಷ್ಣು ಗುಣವನ್ನೇ ತೋರಿಸಿತ್ತು.

ಕಡೆಗೆ ಅದು ಸಂಘಿಗಳ ಬಾಯಲ್ಲಿ, ವಾಟ್ಸ್ಆ್ಯಪ್ ಗ್ರೂಪಿನ ಭಕ್ತರ ಬಾಯಲ್ಲಿ ನೆಹರೂ ತಮ್ಮ ಬಗ್ಗೆ ತಾವು ಹೇಳಿದ್ದು ಎಂಬ ಘೋರ ಸುಳ್ಳಾಗಿ ಪ್ರಚಾರ ಪಡೆಯಿತು. ಆದರೆ ನೆಹರೂ ಯಾವತ್ತೂ ತಮ್ಮನ್ನು ಆಕಸ್ಮಿಕವಾಗಿ ಹಿಂದೂ ಆದೆ ಎಂದು ಹೇಳಿಕೊಂಡಿರಲಿಲ್ಲ.

ಹರ್ಯಾಣದ ಜನರ ಎದುರು ರೋಮ್ ಸಂಸ್ಕೃತಿ ಎನ್ನುವ ಆದಿತ್ಯನಾಥ್ಗೆ 1,200 ವರ್ಷಗಳಿಂದ ಇರುವ ಯುರೋಪಿನ ಆಕ್ಸ್ಫರ್ಡ್ ವಿವಿಗೆ, ಅವರ ರಾಜ್ಯದ ಯಾವುದಾದರೂ ಶಿಕ್ಷಣ ಸಂಸ್ಥೆ ಸರಿಸಮನಾಗಿ ನಿಲ್ಲಲಾರದು ಎಂಬ ಅರಿವಿದೆಯೇ? ಉತ್ತರ ಪ್ರದೇಶದ ಒಂದೇ ಒಂದು ಕಾಲೇಜು ಅಂತರ್ರಾಷ್ಟ್ರೀಯ ಮಟ್ಟದ್ದಾಗಿದೆಯೆ? ಹತ್ತು ವರ್ಷಗಳಿಂದ ಆಡಳಿತ ಮಾಡುತ್ತಿರುವವರಿಗೆ ದ್ವೇಷ ಹರಡಲು ಬರುತ್ತದೆ, ಆದರೆ ಶಿಕ್ಷಣ ಸಂಸ್ಥೆಯನ್ನು ಅಂತರ್ರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಆಗುವುದಿಲ್ಲವೆ?

ರೋಮ್ನ ಸಂಸ್ಕೃತಿಯ ಭವ್ಯತೆ ಮತ್ತು ಪತನ ಎರಡೂ ಚರಿತ್ರೆಯಲ್ಲಿ ದಾಖಲಾಗಿವೆ. ಅದರ ಪುರಾತನ ಗುರುತುಗಳನ್ನು ಅತಿಕ್ರಮಣದ ಹೆಸರಲ್ಲಿ ಅಳಿಸಿಹಾಕದೆ, ಹಾಳುಗೆಡವದೆ ಇವತ್ತಿಗೂ ಉಳಿಸಿಕೊಂಡು ಬರಲಾಗಿದೆ.

ರೋಮನ್ ಸಾಮ್ರಾಜ್ಯವೆಂದರೆ ವಿಸ್ತಾರಕ್ಕೆ ಮಾತ್ರವಲ್ಲ, ತನ್ನ ಕಲೆ, ವಾಸ್ತು ಕುರಿತ ಭವ್ಯತೆಯಿಂದಲೂ ಹೆಗ್ಗಳಿಕೆ ಹೊಂದಿತ್ತು.

ಕಲೆ ಸಂಸ್ಕೃತಿ ಮಾತ್ರವಲ್ಲದೆ, ಧರ್ಮದ ಸಂಘಟಿತ ರೂಪ ಕೂಡ ಅದರ ಹಿರಿಮೆಯಾಗಿತ್ತು. ರೋಮನ್ ಚರ್ಚ್ಗಳು ಸೆಕ್ಯುಲರ್ ಸಭ್ಯತೆಯಿಂದಲೂ ಚರಿತ್ರೆಯಲ್ಲಿ ಗುರುತಿಸಿಕೊಂಡಿವೆ.

ಸಾವಿರ ವರ್ಷಗಳ ಕಾಲ ರೋಮ್ ಯುರೋಪಿನ ಮೇಲೆ ತನ್ನ ಪ್ರಭಾವವನ್ನು ಬೀರಿತ್ತು. ಅಂಥ ರೋಮ್ ನಮ್ಮದೇ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಮತಿಯ ಭಾಗವೂ ಆಗಿರುತ್ತದೆ.

ಅದನ್ನು ರಾಮನ ಸಂಸ್ಕೃತಿಯ ಎದುರು ನಿಲ್ಲಿಸಿ ನೋಡುವ ತಪ್ಪು ಮಾಡುವ ಮೂಲಕ ಬಿಜೆಪಿಯವರು ಮಾಡುತ್ತಿರುವುದು ರಾಮನಿಗೆ ಮಾಡುವ ಅವಮಾನವಲ್ಲದೆ ಮತ್ತೇನೂ ಅಲ್ಲ.

ಇವತ್ತಿನ ರೋಮಿನ ಯಾವುದೇ ನಗರ ನಮ್ಮಲ್ಲಿನ ಯಾವುದೇ ನಗರ ಹೊಂದಿರಬಹುದಾದ ಸಮಸ್ಯೆಗಳನ್ನೂ ಹೊಂದಿರುವಂಥದ್ದೇ ಆಗಿದೆ. ಹೀಗಿರುವಾಗ ನಾವು ಶ್ರೇಷ್ಠ, ಅವರಲ್ಲ ಎಂದೆಲ್ಲ ಗೊತ್ತಿಲ್ಲದೆ ಬಡಾಯಿ ಕೊಚ್ಚಿಕೊಳ್ಳುವುದರಲ್ಲಿ ಅರ್ಥವಿಲ್ಲ.

ಧರ್ಮದ ರಾಜಕಾರಣ ಮಾಡುತ್ತ ಬಿಜೆಪಿ ಬುಲ್ಡೋಜರ್ ಅನ್ನು ಹಾಯಿಸುತ್ತಿರುವುದನ್ನು ಕೂಡ ಧರ್ಮ ಎಂಬಂತೆ ಮಾಡಿಕೊಂಡಿರುವುದು ಮತ್ತೊಂದು ವಿಪರ್ಯಾಸ. ಬುಲ್ಡೋಜರ್ ಬಳಕೆ ಅಸಾಂವಿಧಾನಿಕ ಎಂಬ ಸುಪ್ರೀಂ ಕೋರ್ಟ್ ಮಾತನ್ನೂ ಅದು ಕಿವಿ ಮೇಲೆ ಹಾಕಿಕೊಳ್ಳಲು ತಯಾರಿಲ್ಲ. ಇಷ್ಟಾದ ಮೇಲೂ ಬಿಜೆಪಿ ಗೆಲ್ಲುವುದು ಸಾಧ್ಯವಾಗಲಿಲ್ಲ. ಈ ಬುಲ್ಡೋಜರ್ ದುರಹಂಕಾರವೇ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಿತ್ತು.

ಸಾಂವಿಧಾನಿಕ ಹೊಣೆಗಾರಿಕೆಯನ್ನೇ ತೋರಿಸದೆ ಸುಳ್ಳುಗಳ ಮೂಲಕವೇ ರಾಜಕಾರಣ ಮಾಡಹೊರಟವರ ಕಥೆ ಇದು.

ಅಭಿವೃದ್ಧಿಯ ಮಾತಾಡಬೇಕಾದವರು ಹಳೇ ಚರಿತ್ರೆಯ ಕಡೆಗೆ ಜಾರಿಕೊಳ್ಳುತ್ತ, ಅದನ್ನು ಕಾಂಗ್ರೆಸ್ ಅನ್ನು ಬಯ್ಯುವುದಕ್ಕೆ ದಾರಿಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಆದಿತ್ಯನಾಥ್ ಹೇಳಿದ್ದನ್ನೆಲ್ಲ ಕೇಳಿಸಿಕೊಳ್ಳುವ ಜನರಿಗೆ ಯಾವ ಮಾತನ್ನು ತೆಗೆದುಕೊಳ್ಳಬೇಕು, ಯಾವುದನ್ನಲ್ಲ ಎಂಬುದು ಇವತ್ತು ತಿಳಿದಿದೆ.

ಒಂದೇ ನೂರಾರು ವರ್ಷ ಹಳೆಯದರ ಬಗ್ಗೆ ಇಲ್ಲವೆ 2047ರ ಬಗ್ಗೆ ಮಾತಾಡುವ ಬಿಜೆಪಿಯವರಿಗೆ ಇವತ್ತಿನ ಬಗ್ಗೆ, 2024ರ ಬಗ್ಗೆ ಮಾತಾಡುವುದು ಯಾಕೆ ಸಾಧ್ಯವಾಗುತ್ತಿಲ್ಲ?

ರಾಹುಲ್ ಗಾಂಧಿ ಹಿಂದೂ ಧರ್ಮದ ಬಗ್ಗೆ ಮಾತಾಡಿದರೂ ಅದು ವಿಮರ್ಶಾತ್ಮಕವಾಗಿ ಇರುತ್ತದೆಯೇ ಹೊರತು ದ್ವೇಷಕ್ಕಾಗಿ ಅಲ್ಲ. ರಾಹುಲ್ ಚಕ್ರವ್ಯೆಹದ ಬಗ್ಗೆ ಮಾತಾಡುವಾಗ ಅದರ ರೂಪಕ ಹೇಗೆ ಆಧುನಿಕ ಭಾರತದಲ್ಲಿ ಕಾಣಿಸುತ್ತಿದೆ? ಅಲ್ಲಿ ಸಿಕ್ಕಿಕೊಂಡಿದ್ದ ಅಭಿಮನ್ಯು ಇವತ್ತಿನ ಭಾರತದಲ್ಲಿ ಯಾರನ್ನು ಪ್ರತಿನಿಧಿಸುತ್ತಾನೆ? ಎಂಬುದನ್ನು ರಾಹುಲ್ ತೋರಿಸಬಲ್ಲರು.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಅತ್ಯಾಚಾರಕ್ಕೂ ಕಾಂಗ್ರೆಸ್ ಕಡೆಗೆ ಆದಿತ್ಯನಾಥ್ ಬೆರಳು ಮಾಡುತ್ತಾರೆ. ಆದರೆ ಮೋದಿ ಸರಕಾರ ಏನು ಮಾಡುತ್ತಿದೆ? ಅದನ್ನೇಕೆ ಆದಿತ್ಯನಾಥ್ ಕೇಳುವುದಿಲ್ಲ?

ಇವರ ಮಾತುಗಳೇ ಇವರ ಚಹರೆ ಏನು ಎನ್ನುವುದನ್ನು ಸಾಬೀತುಪಡಿಸುತ್ತವೆ. ಅಲ್ಲಿ ರಾಜನೀತಿಯೇ ಇಲ್ಲ.

ಜನರನ್ನೂ ಭ್ರಮೆಯಲ್ಲಿ ಮುಳುಗಿಸಿ ತಾವೂ ಭ್ರಮೆಯಲ್ಲಿ ಬೀಳುವ ಈ ರೀತಿಯಲ್ಲಿ ಧರ್ಮವೂ ಇಲ್ಲ, ರಾಜನೀತಿಯೂ ಇಲ್ಲ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಎಸ್. ಸುದರ್ಶನ್

contributor

Similar News