ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸುವ ಬಗೆ ಹೇಗೆ?

ಚುನಾವಣಾ ಆಯೋಗದ ಮೇಲೆ ಭಾರತದ ಪ್ರಜಾತಂತ್ರವನ್ನು ರಕ್ಷಿಸಬೇಕಾದ ಗುರುತರ ಹೊಣೆಗಾರಿಕೆ ಇದೆ. ಅದು ಈ ಗುರುತರ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕಿದ್ದರೆ, ಚುನಾವಣಾ ಪ್ರಕ್ರಿಯೆಗಳು ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿರಬೇಕಾಗುತ್ತದೆ. ಆದರೆ, ಇಂತಹ ನಿಷ್ಪಕ್ಷಪಾತ ಚುನಾವಣಾ ಪ್ರಕ್ರಿಯೆ ನಡೆಸಲು ಈ ಬಾರಿ ಚುನಾವಣಾ ಆಯೋಗ ತೋರಿರುವ ಅಸಡ್ಡೆ ತೀವ್ರ ವಿವಾದಕ್ಕೆ ಗುರಿಯಾಗಿದೆ. ದೇಶವಾಸಿಗಳ ಹಣೆಬರಹವನ್ನು ನಿರ್ಧರಿಸುವ ಚುನಾವಣಾ ಪ್ರಕ್ರಿಯೆಯ ಬಗ್ಗೆಯೇ ಶಂಕೆ ವ್ಯಕ್ತವಾಗುವಂತೆ ಯಾವುದೇ ಚುನಾವಣಾ ಆಯೋಗ ವರ್ತಿಸುವುದು ಅದರ ಘನತೆಗೆ ತಕ್ಕನಾದ ನಡವಳಿಕೆಯಲ್ಲ.

Update: 2024-06-04 03:24 GMT

ಈ ಬಾರಿಯ ಚುನಾವಣಾ ಪ್ರಕ್ರಿಯೆ ಸಂದರ್ಭದಲ್ಲಿ ಪದೇ ಪದೇ ನೆನಪಾದ ಹೆಸರು ಟಿ.ಎನ್.ಶೇಷನ್. ಡಿಸೆಂಬರ್ 12, 1990ರಿಂದ ಡಿಸೆಂಬರ್ 11, 1996ರವರೆಗೆ ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್. ಶೇಷನ್, ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಮಹತ್ತರ ಬದಲಾವಣೆಯನ್ನು ತಂದರು. ಅವುಗಳಲ್ಲಿ ಪ್ರಮುಖವಾದದ್ದು ನಕಲಿ ಮತದಾನವನ್ನು ತಡೆಯಲು ಚುನಾವಣಾ ಗುರುತಿನ ಚೀಟಿ ಪರಿಚಯಿಸಿದ್ದು. ಎರಡನೆಯದು, ಒಂದೇ ಹಂತದಲ್ಲಿ ದೇಶಾದ್ಯಂತ ನಡೆಯುತ್ತಿದ್ದ ಚುನಾವಣಾ ಪ್ರಕ್ರಿಯೆಗೆ ತಿಲಾಂಜಲಿ ನೀಡಿ, ಬಹು ಹಂತದ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಿದ್ದು.

ಇದರಿಂದ ಅಲ್ಲಿಯವರೆಗೆ ಸರ್ವೇಸಾಮಾನ್ಯವಾಗಿದ್ದ ರಿಗ್ಗಿಂಗ್, ನಕಲಿ ಮತದಾನ ಹಾಗೂ ಮತ ಪೆಟ್ಟಿಗೆ ವಶದಂತಹ ದುಷ್ಕೃತ್ಯಗಳು ಬಹುತೇಕ ತಹಬಂದಿಗೆ ಬಂದಿತು. ಆಳುವವರ ಪಾಲಿಗೆ ಅವರು ಸಿಂಹಸ್ವಪ್ನವಾಗಿ ಪರಿಣಮಿಸಿದ್ದರಿಂದಲೇ, ಕೇವಲ ಏಕವ್ಯಕ್ತಿ ಮುಖ್ಯ ಚುನಾವಣಾ ಆಯುಕ್ತರಾಗಿರುತ್ತಿದ್ದ ಜಾಗದಲ್ಲಿ ಬಹು ಸದಸ್ಯರ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದಿದ್ದು. ಆ ಮೂಲಕ ಸ್ವಯಂ ವಿವೇಚನೆ ಹಾಗೂ ಚುನಾವಣಾ ಆಯೋಗದ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಮುಂದಾಗುವ ಚುನಾವಣಾ ಆಯುಕ್ತರಿಗೆ ಮೂಗುದಾರ ಹಾಕಲಾಯಿತು.

ಚುನಾವಣಾ ಪ್ರಕ್ರಿಯೆ ಪ್ರಾರಂಭವಾದ ಸಂದರ್ಭದಲ್ಲಿ ರಾಜ್ಯ ಚುನಾವಣಾ ಆಯೋಗಗಳು ಹಾಗೂ ಭಾರತೀಯ ಚುನಾವಣಾ ಆಯೋಗಕ್ಕೆ ಸಂವಿಧಾನದಲ್ಲಿ ಅಪರಿಮಿತವಾದ ಅಧಿಕಾರವನ್ನು ನೀಡಲಾಗಿದೆ. ಸಂವಿಧಾನದ ವಿಧಿ 324ರಿಂದ 329ರವರೆಗೆ ಭಾರತೀಯ ಚುನಾವಣಾ ಆಯೋಗಕ್ಕೆ ಆಡಳಿತಾರೂಢ ಸರಕಾರಕ್ಕಿಂತ ಹೆಚ್ಚು ಅಧಿಕಾರ ನೀಡಲಾಗಿದೆ. ಈ ಪ್ರಕ್ರಿಯೆಯ ಅವಧಿಯಲ್ಲಿ ಅಧಿಕಾರಶಾಹಿಯ ಮೇಲೆ ನಿಯಂತ್ರಣ ಹೊಂದುವ ಚುನಾವಣಾ ಆಯೋಗವು, ಅಧಿಕಾರಿಗಳನ್ನು ತನ್ನ ವಿವೇಚನೆಗೆ ಅನುಗುಣವಾಗಿ ವರ್ಗಾವಣೆಗೊಳಿಸುವ, ನಿಯೋಜಿಸುವ ಪರಮಾಧಿಕಾರ ಹೊಂದಿದೆ.

ತಾನು ಜಾರಿಗೊಳಿಸುವ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುವ ಯಾವುದೇ ನಾಯಕ(ಪ್ರಧಾನಿಯಿಂದ ಹಿಡಿದು ಸಾಮಾನ್ಯ ನಾಯಕನವರೆಗೆ)ನಿಗೆ ನೋಟಿಸ್ ಜಾರಿಗೊಳಿಸುವ ಅಧಿಕಾರವೂ ಚುನಾವಣಾ ಆಯೋಗಕ್ಕಿದೆ. ಒಂದು ವೇಳೆ ಯಾವುದೇ ಅಭ್ಯರ್ಥಿ ಮತ, ಧರ್ಮ, ಜಾತಿ, ಬಣ್ಣದ ಆಧಾರದಲ್ಲಿ ಮತ ಯಾಚಿಸಿದರೆ, ಪ್ರಜಾಪ್ರತಿನಿಧಿ ಕಾಯ್ದೆ, 1951ರ ಪ್ರಕಾರ, ಅಂತಹ ಅಭ್ಯರ್ಥಿಯ ಉಮೇದುವಾರಿಕೆಯನ್ನು ರದ್ದುಗೊಳಿಸುವ ಪರಮಾಧಿಕಾರವೂ ಚುನಾವಣಾ ಆಯೋಗಕ್ಕೆ ದತ್ತವಾಗಿದೆ. ಹೀಗಿದ್ದೂ ಟಿ.ಎನ್.ಶೇಷನ್ ಚುನಾವಣಾ ಆಯುಕ್ತರಾಗುವವರೆಗೂ ಚುನಾವಣಾ ಆಯೋಗಕ್ಕಿರುವ ಪರಮಾಧಿಕಾರಗಳು ಯಾವ ಚುನಾವಣಾ ಆಯುಕ್ತರಿಗೂ ತಿಳಿದಿರಲಿಲ್ಲ ಅಥವಾ ಆಳುವವರ ಕೈಗೊಂಬೆಯಂತೆಯೇ ಅವರೆಲ್ಲ ಕಾರ್ಯನಿರ್ವಹಿಸಿದ್ದರು.

ಟಿ.ಎನ್. ಶೇಷನ್ ಅವಧಿಯನ್ನು ಹೊರತುಪಡಿಸಿದ ನಂತರ ಇದೇ ಪ್ರಥಮ ಬಾರಿಗೆ ಅಂತಹ ತೀವ್ರ ಟೀಕೆ, ಅನುಮಾನ ಹಾಗೂ ಅಸಮಾಧಾನಕ್ಕೆ ಈ ಬಾರಿಯ ಚುನಾವಣಾ ಪ್ರಕ್ರಿಯೆ ಗುರಿಯಾಗಿದೆ. ಈ ಬಾರಿಯ ಸಾರ್ವತ್ರಿಕ ಚುನಾವಣೆಯುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಆಡಳಿತಾರೂಢ ಬಿಜೆಪಿ ನಾಯಕರು ಕೋಮು ಪ್ರಚೋದನೆಯ ಭಾಷಣ ಮಾಡಿದರೂ, ಚುನಾವಣಾ ಆಯೋಗ ಮಾತ್ರ ಬಹುತೇಕ ನಿಷ್ಕ್ರಿಯ ಸ್ಥಿತಿ ತಲುಪಿತ್ತು. ಈ ಕುರಿತು ಮಾಧ್ಯಮಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಒತ್ತಡ ತೀವ್ರವಾದ ನಂತರವಷ್ಟೆ, ಚುನಾವಣಾ ಆಯೋಗವು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ನೋಟಿಸ್ ಜಾರಿಗೊಳಿಸಿ ಕೈತೊಳೆದುಕೊಂಡಿತು. ಈ ನೋಟಿಸ್ ಜಾರಿಯಾದ ನಂತರವೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಪದೇ ಪದೇ ಕೋಮು ಪ್ರಚೋದಕ ಭಾಷಣ ಮಾಡಿದರೂ, ಚುನಾವಣಾ ಆಯೋಗ ಈ ಕುರಿತು ತೋರಿದ ನಿರ್ಲಿಪ್ತ ಮೌನವೇ ಈ ಬಾರಿಯ ಚುನಾವಣಾ ಪ್ರಕ್ರಿಯೆ ಎಷ್ಟು ವಿವಾದಾಸ್ಪದವಾಗಿ ಮುಕ್ತಾಯಗೊಂಡಿದೆ ಎಂಬುದಕ್ಕೆ ನಿದರ್ಶನ.

ಚುನಾವಣಾ ಆಯೋಗದ ಮೇಲೆ ಭಾರತದ ಪ್ರಜಾತಂತ್ರ ವನ್ನು ರಕ್ಷಿಸಬೇಕಾದ ಗುರುತರ ಹೊಣೆಗಾರಿಕೆ ಇದೆ. ಅದು ಈ ಗುರುತರ ಹೊಣೆಗಾರಿಕೆ ಯನ್ನು ಸಮರ್ಪಕವಾಗಿ ನಿರ್ವಹಿಸಬೇಕಿದ್ದರೆ, ಚುನಾವಣಾ ಪ್ರಕ್ರಿಯೆಗಳು ನಿಷ್ಪಕ್ಷ ಹಾಗೂ ಪಾರದರ್ಶಕವಾಗಿರಬೇಕಾಗುತ್ತದೆ. ಆದರೆ, ಇಂತಹ ನಿಷ್ಪಕ್ಷಪಾತ ಚುನಾವಣಾ ಪ್ರಕ್ರಿಯೆ ನಡೆಸಲು ಈ ಬಾರಿ ಚುನಾವಣಾ ಆಯೋಗ ತೋರಿರುವ ಅಸಡ್ಡೆ ತೀವ್ರ ವಿವಾದಕ್ಕೆ ಗುರಿಯಾಗಿದೆ. ದೇಶವಾಸಿಗಳ ಹಣೆಬರಹವನ್ನು ನಿರ್ಧರಿಸುವ ಚುನಾವಣಾ ಪ್ರಕ್ರಿಯೆಯ ಬಗ್ಗೆಯೇ ಶಂಕೆ ವ್ಯಕ್ತವಾಗುವಂತೆ ಯಾವುದೇ ಚುನಾವಣಾ ಆಯೋಗ ವರ್ತಿಸುವುದು ಅದರ ಘನತೆಗೆ ತಕ್ಕನಾದ ನಡವಳಿಕೆಯಲ್ಲ. ಆದರೆ, ಈ ಬಾರಿ ಅಂತಹ ನಡವಳಿಕೆಯನ್ನು ಪ್ರದರ್ಶಿಸುವ ಮೂಲಕ ಚುನಾವಣಾ ಆಯೋಗವು ತನಗಿರುವ ಪರಮಾಧಿಕಾರವನ್ನು ಸಂಪೂರ್ಣವಾಗಿ ಆಡಳಿತಾರೂಢ ಪಕ್ಷಕ್ಕೆ ಒತ್ತೆ ಇಟ್ಟಿದೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿವೆ. ಭಾರತದ ಚುನಾವಣಾ ಇತಿಹಾಸದ ಮಟ್ಟಿಗೆ ಇದೊಂದು ಅಳಿಸಲಾಗದ ಕಪ್ಪು ಚುಕ್ಕೆ.

ಚುನಾವಣಾ ಆಯೋಗವು ಆಡಳಿತಾರೂಢ ಪಕ್ಷದ ಕೈಗೊಂಬೆಯಂತೆ ವರ್ತಿಸಬಾರದು ಎಂಬ ಕಾರಣಕ್ಕಾಗಿಯೇ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇನ್ನಿತರ ಚುನಾವಣಾ ಆಯುಕ್ತರನ್ನು ಪ್ರಧಾನ ಮಂತ್ರಿ ನೇತೃತ್ವದ ಮೂವರು ಸದಸ್ಯರ ಸಮಿತಿಯು ಆಯ್ಕೆ ಮಾಡಿ, ತನ್ನ ಆಯ್ಕೆಯನ್ನು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುವ ವಾಡಿಕೆ ಇತ್ತು. ಆದರೆ, 2023ರಲ್ಲಿ ‘ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇನ್ನಿತರ ಚುನಾವಣಾ ಆಯುಕ್ತರು’ (ನೇಮಕಾತಿ ಸೇವೆಗಳ ಷರತ್ತುಗಳು ಹಾಗೂ ಅವಧಿ, 2023) ಕಾಯ್ದೆಯನ್ನು ಜಾರಿಗೆ ತಂದಿದೆ.

ಈ ಕಾಯ್ದೆಯ ಪ್ರಕಾರ, ಈ ಹಿಂದೆ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಪ್ರಧಾನಿ ನೇತೃತ್ವದ ಸಮಿತಿಯಲ್ಲಿರುತ್ತಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಜಾಗದಲ್ಲಿ ಕೇಂದ್ರ ಸಚಿವರೊಬ್ಬರು ಇರುತ್ತಾರೆ. ಇವರೊಂದಿಗೆ ವಿರೋಧ ಪಕ್ಷದ ನಾಯಕರು ಸಮಿತಿಯಲ್ಲಿ ಮುಂದುವರಿಯಲಿ ದ್ದಾರೆ. ಇದರಿಂದಾಗಿ ಇಡೀ ಚುನಾವಣಾ ಆಯೋಗದ ಮೇಲಿನ ನಿಯಂತ್ರಣ ಆಡಳಿತಾರೂಢ ಸರಕಾರದ ಹಿಡಿತಕ್ಕೆ ಜಾರಿದೆ. ಇದರಿಂದ ನಿಷ್ಪಕ್ಷ ಮತ್ತು ಪಾರದರ್ಶಕ ಚುನಾವಣಾ ಪ್ರಕ್ರಿಯೆ ಮತ್ತಷ್ಟು ಮರೀಚಿಕೆಯಾಗಿದೆ.

ಚುನಾವಣಾ ಪ್ರಕ್ರಿಯೆಗಳ ಸಂದರ್ಭದಲ್ಲಿ ಚುನಾವಣಾ ಆಯೋಗದ ವಿರುದ್ಧ ಪದೇ ಪದೇ ಕೇಳಿ ಬರುತ್ತಿರುವ ಆರೋಪಗಳಿಗೆ ಪ್ರಮುಖ ಕಾರಣ: ಚುನಾವಣಾ ಪ್ರಕ್ರಿಯೆ ಆರಂಭಗೊಂಡ ನಂತರವೂ, ಹಾಲಿ ಸರಕಾರದ ಅಧಿಕಾರಾವಧಿ ಮುಂದುವರಿಯುವುದು. ಈ ಹಾಲಿ ಸರಕಾರಕ್ಕೆ ಚುನಾವಣಾ ಪ್ರಕ್ರಿಯೆಯ ಸಂದರ್ಭದಲ್ಲಿ ಹೊಸ ನೇಮಕಾತಿ, ವರ್ಗಾವಣೆ ಪ್ರಕ್ರಿಯೆ, ಹೊಸ ಯೋಜನೆಗಳ ಘೋಷಣೆ ಮಾಡದಂತೆ ನಿರ್ಬಂಧವಿದೆ ಯಾದರೂ, ಇಡೀ ಆಡಳಿತ ಯಂತ್ರದ ಮೇಲಿನ ನಿಯಂತ್ರಣವಂತೂ ಸಂಪೂರ್ಣವಾಗಿ ಅದರ ಬಳಿಯೇ ಉಳಿದಿರುತ್ತದೆ. ಹಾಗೆಯೇ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇನ್ನಿತರ ಆಯುಕ್ತರನ್ನು ನೇಮಿಸುವ ಅಧಿಕಾರ ಕೂಡಾ ಆಡಳಿತಾರೂಢ ಪಕ್ಷದೊಂದಿಗೇ ಇರುವುದರಿಂದ ಪ್ರಾಮಾಣಿಕ, ನಿಷ್ಪಕ್ಷಪಾತ, ದಕ್ಷ ಹಾಗೂ ಸಮರ್ಥ ಚುನಾವಣಾ ಆಯುಕ್ತರ ನೇಮಕಾತಿ ಮಾಡುವುದು ಯಾವ ಆಡಳಿತಾರೂಢ ಸರಕಾರಕ್ಕೂ ಬೇಡವಾಗಿದೆ.

ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆ ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಬೇಕಾದರೆ, ಮೊದಲಿಗೆ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆ ಆಡಳಿತಾರೂಢ ಪಕ್ಷದ ಹಿಡಿತದಿಂದ ಮುಕ್ತವಾಗಬೇಕಿದೆ. ಹಾಗಾಗಬೇಕಿದ್ದರೆ, ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇನ್ನಿತರ ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಲ್ಲಿ ಎಲ್ಲ ರಾಷ್ಟ್ರೀಯ ಮಾನ್ಯತೆ ಪಡೆದ ಪಕ್ಷಗಳ ಚುನಾವಣಾ ತಜ್ಞ ಪ್ರತಿನಿಧಿಗಳನ್ನು ಸದಸ್ಯರನ್ನಾಗಿಸಬೇಕಿದೆ. ಈಗಿರುವ ನೇಮಕಾತಿ ಸಮಿತಿಯಲ್ಲಿ ಇಬ್ಬರು ಆಡಳಿತಾರೂಢ ಪಕ್ಷದ ಸದಸ್ಯರೇ ಇರುವುದರಿಂದ, ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯ ಕುರಿತು ಪ್ರತಿ ಸರಕಾರದ ಅವಧಿಯಲ್ಲೂ ವಿರೋಧ ಪಕ್ಷಗಳಿಂದ ಅಪಸ್ವರ ಏಳುವುದು ಮಾಮೂಲು ಸಂಗತಿಯಾಗಿ ಬದಲಾಗಿದೆ. ಹೀಗಾಗಿ ಎಲ್ಲ ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷಗಳು ಸೂಚಿಸುವ ಚುನಾವಣಾ ತಜ್ಞರನ್ನು ಸಮಿತಿಯ ಸದಸ್ಯರನ್ನಾಗಿಸಬೇಕು. ಅಂತಹ ಸಮಿತಿಯು ಕಡ್ಡಾಯವಾಗಿ ಬಹುಮತ ಅಥವಾ ಒಮ್ಮತದ ಆಧಾರದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರ ಹೆಸರುಗಳನ್ನು ಅಂತಿಮಗೊಳಿಸಿ, ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಬೇಕು. ಆಗ ಚುನಾವಣಾ ಆಯುಕ್ತರ ನೇಮಕಾತಿಯ ಸಂದರ್ಭದಲ್ಲಿ ಪದೇ ಪದೇ ಭುಗಿಲೇಳುತ್ತಿರುವ ವಿವಾದಗಳು ಅಂತ್ಯಗೊಳ್ಳಲಿವೆ.

ಇನ್ನು, ಚುನಾವಣಾ ಪ್ರಕ್ರಿಯೆ ಪ್ರಾರಂಭಗೊಂಡಾಗ, ಹಾಲಿ ಸರಕಾರದ ಅವಧಿಯೂ ಮುಂದುವರಿಯುವು ದರಿಂದ, ಇಂತಹ ಸಂದರ್ಭದಲ್ಲಿ ಆಡಳಿತಾರೂಢ ಸರಕಾರದ ಪ್ರಭಾವವು ಸಹಜವಾಗಿಯೇ ಕಾರ್ಯಾಂಗದ ಮೇಲಿರುತ್ತದೆ. ಇದನ್ನು ತಪ್ಪಿಸಬೇಕಿ ದ್ದರೆ, ಹಾಲಿ ಸರಕಾರದ ಅವಧಿಯು ಪೂರ್ಣಗೊಂಡ ನಂತರವಷ್ಟೇ ಚುನಾವಣಾ ಪ್ರಕ್ರಿಯೆಯನ್ನು ಘೋಷಿಸ ಬೇಕು. ಈ ಚುನಾವಣಾ ಪ್ರಕ್ರಿಯೆ ಸಂದರ್ಭದಲ್ಲಿ ಹಂಗಾಮಿ ರಾಷ್ಟ್ರೀಯ ಸರಕಾರ ಅಸ್ತಿತ್ವದಲ್ಲಿರಬೇಕು. ಈ ಸಂದರ್ಭದಲ್ಲಿ ಕೇಳಿ ಬರುವ ಎಲ್ಲ ಚುನಾವಣಾ ಪ್ರಕ್ರಿಯೆ ಸಂಬಂಧಿ ದೂರುಗಳನ್ನು ಆಲಿಸಲು ಹಂಗಾಮಿ ಪ್ರಧಾನಿ ನೇತೃತ್ವದಲ್ಲಿ ಎಲ್ಲ ಮಾನ್ಯತೆ ಪಡೆದ ಪಕ್ಷಗಳ ಪ್ರತಿನಿಧಿಗಳು, ಮುಖ್ಯ ಚುನಾವಣಾ ಆಯುಕ್ತರು ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಬೇಕು. ಇದರೊಂದಿಗೆ, ತನ್ನ ಬಳಿ ಬರುವ ಎಲ್ಲ ದೂರುಗಳನ್ನು ಇತ್ಯರ್ಥಗೊಳಿಸಿ, ಕ್ರಮ ಕೈಗೊಳ್ಳುವ ಅಧಿಕಾರವೂ ಈ ಸಮಿತಿಗೇ ದತ್ತವಾಗಬೇಕು. ಆಗ ಮಾತ್ರ ಚುನಾವಣಾ ಪ್ರಕ್ರಿಯೆಯ ಸಂದರ್ಭದಲ್ಲಿ ಪದೇ ಪದೇ ಕೇಳಿ ಬರುವ ಪಕ್ಷಪಾತಿ ಧೋರಣೆಯ ಆರೋಪಗಳಿಗೆ ಅಂತ್ಯ ಹಾಡಲು ಸಾಧ್ಯ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಸದಾನಂದ ಗಂಗನಬೀಡು

contributor

Similar News