ಎಕ್ಸಿಟ್ ಪೋಲ್‌ಗಳ ಅತಿರೇಕದ ನಂಬರ್‌ಗಳ ಹಿಂದಿದೆಯೇ ಮೋದಿಯನ್ನು ಹಣಿಯುವ ಆರೆಸ್ಸೆಸ್ ತಂತ್ರ?

ಬಿಜೆಪಿಗೆ ಮುನ್ನೂರೈವತ್ತು, ನಾಲ್ಕನೂರು ಸ್ಥಾನಗಳನ್ನು ಗೆಲ್ಲುವ ಭರಪೂರ ವಾತಾವರಣ ದೇಶದಲ್ಲಿ ಇದೆ ಎಂಬುದನ್ನು ಹುಟ್ಟುಹಾಕಿದರೆ, ಜನ ಮೋದಿ ಮತ್ತು ಬಿಜೆಪಿಯ ಸಾಧನೆಯನ್ನು ದೊಡ್ಡ ಮಟ್ಟದಲ್ಲಿ ನಿರೀಕ್ಷಿಸುತ್ತಾರೆ. ಮೋದಿಯ ಸಾಮರ್ಥ್ಯ larger than life ಆಗಿ ಪ್ರೊಜೆಕ್ಟ್ ಆಗುತ್ತೆ. ಅಂತಹ ಪರಿಸ್ಥಿತಿಯಲ್ಲಿ ಫಲಿತಾಂಶ ಸರಳ ಬಹುಮತಕ್ಕೆ ಕುಸಿದರೆ, ಮೋದಿಯ ಆ ಮಿಥ್ಯದ ಇಮೇಜಿನ ಬೆಲೂನಿಗೆ ಪಿನ್ನು ಚುಚ್ಚಿದಂತಾಗುತ್ತೆ. ಹುಟ್ಟುಹಾಕಿದ್ದ ನಿರೀಕ್ಷೆಗೂ, ಮೋದಿಯ ಸಾಧನೆಗೂ ಅಜಗಜಾಂತರ ವ್ಯತ್ಯಾಸ ಉದ್ಭವಿಸುತ್ತದೆ. ಮೋದಿ ನಿಶ್ಯಕ್ತವಾಗಬೇಕಾಗುತ್ತದೆ, ಆರೆಸ್ಸೆಸ್ ಮೇಲುಗೈ ಸಾಧಿಸುತ್ತದೆ. ಮೋದಿಯನ್ನು ಪ್ರಧಾನಿ ಹುದ್ದೆಯಿಂದ ದೂರವಿಡಲು ಆರೆಸ್ಸೆಸ್‌ಗೆ ಸಾಧ್ಯವಾಗುತ್ತದೆ ಎನ್ನುವುದಕ್ಕಿಂತ, ಹುದ್ದೆ ಬಿಡುವಂತೆ ವಾದ ಮಂಡಿಸಲು ಅದಕ್ಕೆ ಸುಲಭವಾಗುತ್ತದೆ.

Update: 2024-06-04 02:34 GMT

ಮೊನ್ನೆ ಸಂಜೆಯಿಂದ ಎಕ್ಸಿಟ್ ಪೋಲ್‌ಗಳದ್ದೇ ಚರ್ಚೆ. ಒಂದುಕಡೆ ಈ ಚುನಾವಣೆಯಿಂದ ಸ್ವತಃ ಮೋದಿಯವರೇ ಹತಾಶೆಗೊಂಡವರಂತೆ ವರ್ತಿಸುತ್ತಿದ್ದರೆ, ಎಕ್ಸಿಟ್ ಪೋಲ್‌ಗಳು ಮಾತ್ರ ಅವರ ‘ಚಾರ್ ಸೌ ಪಾರ್’ ಘೋಷಣೆಯನ್ನು ನಿಜವಾಗಿಸುವಂತಹ ನಂಬರ್‌ಗಳನ್ನು ಮುಂದಿಡುತ್ತಿವೆ. ಸಹಜವಾಗಿಯೇ, ದೇಶದ ಸ್ವಾಸ್ಥ್ಯಕ್ಕೋಸ್ಕರ ಮೋದಿ ಸೋಲಬೇಕೆಂದು ಹಂಬಲಿಸಿದ್ದವರೆಲ್ಲ ಈ ಪೋಲ್‌ಗಳ ‘ನಂಬರ್ ಸ್ಟ್ರೋಕ್’ಗೆ ತುತ್ತಾಗಿದ್ದಾರೆ. ಈ ಹಿಂದೆ ಹೆಚ್ಚೂಕಮ್ಮಿ ನಿಖರ ಪ್ರಿಡಿಕ್ಷನ್ ನೀಡುತ್ತಾ ಬಂದ ಇಂಡಿಯಾ ಟುಡೇ, ಇಂಡಿಯಾ ಆಕ್ಸಿಸ್ ತರಹದ ಸಂಸ್ಥೆಗಳೇ ಈ ರೀತಿಯ ನಂಬರ್ ಮುಂದಿಡುತ್ತಿರುವುದರಿಂದ ಸಂವಿಧಾನವಾದಿ ಮನಸ್ಸುಗಳು ಆತಂಕಗೊಳ್ಳುವುದು ಸಹಜ.

ದೊಡ್ಡ ಮಟ್ಟದಲ್ಲಿ ಚುನಾವಣಾ ಪ್ರೊಸೆಸ್ ಅನ್ನೇ ಮ್ಯಾನಿಪ್ಯುಲೇಟ್ ಮಾಡದ ಹೊರತು ಈ ಪರಿಯ ನಂಬರ್‌ಗಳನ್ನು ದಕ್ಕಿಸಿಕೊಳ್ಳುವುದು ಬಿಜೆಪಿಗೆ ಸಾಧ್ಯವಿಲ್ಲ. ಬಿಜೆಪಿ ಅಷ್ಟೆಲ್ಲ ಮ್ಯಾನಿಪ್ಯುಲೇಟ್ ಮಾಡಿರುವ ಪರಿಣಾಮವಾಗಿಯೇ, ಭುಗಿಲೇಳಬಹುದಾದ ವಿರೋಧ ಪಕ್ಷಗಳ ಹಾಗೂ ನಾಗರಿಕ ಸಮಾಜದ ಸಂಭಾವ್ಯ ಪ್ರತಿರೋಧಗಳನ್ನು ಹತ್ತಿಕ್ಕುವ ಸಲುವಾಗಿ ಸಂಸತ್ತಿಗೆ ಹೆಚ್ಚುವರಿ ಸಿಐಎಸ್‌ಎಫ್ ರಕ್ಷಣೆ ಒದಗಿಸಲಾಗಿದೆ, ರಕ್ಷಣಾ ಹುದ್ದೆಗಳ ಮುಖ್ಯಸ್ಥರ ಸೇವಾವಧಿಯನ್ನು ವಿಸ್ತರಿಸಲಾಗಿದೆ ಎಂದು ತಮ್ಮ ಈ ನಂಬರ್ ಸ್ಟ್ರೋಕ್‌ಗೆ ನಮ್ಮವರು ಒಂದಿಷ್ಟು ಸಮರ್ಥನೆಗಳನ್ನೂ ಹುಡುಕಿಕೊಳ್ಳುತ್ತಿದ್ದಾರೆ.

ನಿಜ, ಈಗಿರುವ ಪರಿಸ್ಥಿತಿಯಲ್ಲಿ ಯಾವ ಸಾಧ್ಯತೆಯನ್ನೂ ತಳ್ಳಿಹಾಕಲು ಸಾಧ್ಯವಿಲ್ಲ. ಆದರೆ ಒಂದು ಸಂಗತಿಯನ್ನು ನಾವು ಮರೆಯಬಾರದು. ಸಾಂವಿಧಾನಿಕ ಮಾನದಂಡಗಳು, ಪ್ರಜಾಪ್ರಭುತ್ವದ ಹೊಣೆಗಾರಿಕೆ ಇರುವ ಚುನಾವಣಾ ಆಯೋಗವೇ ಒನ್‌ಸೈಡೆಡ್ ಆಗಿ ವರ್ತಿಸುತ್ತಿರುವ ಇವತ್ತಿನ ಸಂದರ್ಭದಲ್ಲಿ; ಅಂತಹ ಗಹನ ಉತ್ತರದಾಯಿತ್ವ ಇಲ್ಲದ ಎಕ್ಸಿಟ್ ಪೋಲ್‌ಗಳು, ಮುಖ್ಯವಾಗಿ ಗೋದಿ ಮೀಡಿಯಾ ಪ್ರೇರಿತ ಅಂಕಿಅಂಶಗಳು ಸತ್ಯಕ್ಕೆ ಸನಿಹವಾಗಿವೆ, ಪಾರದರ್ಶಕವಾಗಿವೆ ಎಂದು ನಂಬಲು ಸಾಧ್ಯವೇ?

ಈ ನಂಬರ್‌ಗಳ ಬಗ್ಗೆ ನಾವು ಅನುಮಾನಿಸಲು ಸಾಕಷ್ಟು ಕಾರಣಗಳು ಸಿಗುತ್ತವೆ. ಒಂದು ಉದಾಹರಿಸುವುದಾದರೆ, ಆರನೇ ಹಂತದ ಚುನಾವಣೆ ಮುಗಿದಾಗಲೂ ಇಂಡಿಯಾ ಅಕ್ಸಿಸ್, ಸಿಎಸ್‌ಡಿಎಸ್, ಸಿ-ವೋಟರ್ ತರಹದ ಸಮೀಕ್ಷೆಗಳು ಇಂಡಿಯಾ ಮತ್ತು ಎನ್‌ಡಿಎ ಮೈತ್ರಿಕೂಟಗಳ ನಡುವೆ ನೇರ ಹಣಾಹಣಿ ಇರಲಿದೆ ಎಂದು ಹೇಳುತ್ತಿದ್ದವು. ಆದರೆ ಕೇವಲ ಐವತ್ತೇಳು ಸ್ಥಾನಗಳ ಏಳನೇ ಹಂತ ಮುಗಿಯುತ್ತಿದ್ದಂತೆಯೇ ಈ ನಂಬರ್‌ಗಳಲ್ಲಿ ಅಜಗಜಾಂತರ ವ್ಯತ್ಯಾಸವಾಗಲು ಹೇಗೆ ಸಾಧ್ಯ?

ಒಂದುವೇಳೆ, ಬಿಜೆಪಿ ಮಾಡಿರಬಹುದಾದ ಚುನಾವಣಾ ಮ್ಯಾನಿಪ್ಯುಲೇಷನ್‌ಗೆ ಪೂರಕವಾಗಿ ಎಕ್ಸಿಟ್ ಪೋಲ್‌ಗಳು ಇಂತಹ ಅಂಕಿಅಂಶಗಳನ್ನು ಮುಂದಿಡುತ್ತಿದ್ದುದೇ ನಿಜವಾದಲ್ಲಿ, ಈ ಸರ್ವಾಧಿಕಾರಿ ತಂತ್ರದ ವಿರುದ್ಧ ನಾವು ಒಡ್ಡಬಹುದಾದ ಪ್ರತಿರೋಧದ ತುರ್ತು ಕಾರ್ಯತಂತ್ರದ ಬಗ್ಗೆ ನಮ್ಮ ಸಮಯ, ಶ್ರಮ ಮತ್ತು ಯೋಚನೆಯನ್ನು ಮೊನಚುಗೊಳಿಸಿಕೊಳ್ಳಬೇಕೆ ವಿನಃ, ಆಘಾತದಿಂದ ನಿರುತ್ಸಾಹಗೊಳ್ಳುವ ಸಂದರ್ಭವಂತೂ ಇದಲ್ಲ. ಯಾಕೆಂದರೆ, ಎಲ್ಲರಿಗೂ ಗೊತ್ತಿದೆ ಈ ಬಾರಿ ದೇಶ ಬಿಜೆಪಿ ಪರವಾಗಿ ಇಲ್ಲ ಅನ್ನುವುದು.

ಬಿಜೆಪಿಯ ಚುನಾವಣಾ ಮ್ಯಾನಿಪ್ಯುಲೇಷನ್ ಬಗ್ಗೆ, ಇವಿಎಂ ಲಫಡಾಗಳ ಬಗ್ಗೆ ಈ ಹಿಂದೆ ನಾವೆಲ್ಲ ಪ್ರಸ್ತಾಪಿಸಿದಾಗ, ‘‘EVM's are not rigged, Hindu minds are rigged’’ ಎಂದು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನ ಕೊಟ್ಟು, ಬಹಳ ಹಿಂದೆಯೇ ಇಂತಹ ಮ್ಯಾನಿಪ್ಯುಲೇಷನ್ ಬಗ್ಗೆ ಹುಟ್ಟಬಹುದಾಗಿದ್ದ ಜನಾಂದೋಲನವನ್ನು ಇಲ್ಲಿಯವರೆಗೆ ಮುಂದೂಡಿಕೊಂಡು ಬಂದ ನಮ್ಮ ಬಹಳಷ್ಟು ಸೆಕ್ಯುಲರ್ ಬುದ್ಧಿವಂತರೇ ಈಗ, ‘ಚುನಾವಣಾ ಪ್ರಕ್ರಿಯೆ ಹ್ಯಾಕ್ ಆಗಿದೆ’ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಸಾರಾಂಶದಲ್ಲಿ ಹೇಳುವುದಾದರೆ ನಾವು ಈಗ ಮಾಡಬೇಕಿರೋದು ನಮ್ಮ ಮುಂದಿನ ಹೋರಾಟಕ್ಕೆ ನಮ್ಮನ್ನು ನಾವು ಅಣಿಗೊಳಿಸಿಕೊಳ್ಳುವುದೇ ವಿನಾಃ ಅಧೀರಗೊಳ್ಳುವುದಲ್ಲ...

ಎಕ್ಸಿಟ್ ಪೋಲ್‌ಗಳ ಅತಿರೇಕದ ನಂಬರುಗಳನ್ನು ಕಂಡು, ಫೋನ್ ಮಾಡಿ ತಮ್ಮ ಆತಂಕ ತೋಡಿಕೊಳ್ಳುತ್ತಿದ್ದ ನನ್ನ ಅನೇಕ ಸ್ನೇಹಿತರ ಮನಸ್ಸನ್ನು ತಿಳಿಗೊಳಿಸಲು ಇಷ್ಟು ಹೇಳಿ ಸುಮ್ಮನಾಗಬೇಕು ಅಂದುಕೊಂಡಿದ್ದೆ. ಆದರೆ ಇವತ್ತು ಬೆಳ್ಳಂಬೆಳಗ್ಗೆ ದಿಲ್ಲಿಯ ನನ್ನ ಗೆಳೆಯ ಫೋನ್ ಮಾಡಿ ಹೇಳಿದ ಈ ಸಂಗತಿ ಕೇಳಿದ ನಂತರ, ಈ ನಂಬರ್‌ಗಳ ಹಿಂದೆ ಇರಬಹುದಾದ ಬಿಜೆಪಿ-ಆರೆಸ್ಸೆಸ್ ಸಂಘರ್ಷದ ಆಯಾಮವನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳದೆ ಇರಲು ಸಾಧ್ಯವಾಗುತ್ತಿಲ್ಲ.

ನನ್ನ ಗೆಳೆಯ ಸಕ್ರಿಯ ರಾಜಕಾರಣಿಯಲ್ಲ. ಇಂಡಿಯನ್ ರೆವಿನ್ಯೂ ಸರ್ವಿಸ್‌ನಲ್ಲಿ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ನಿವೃತ್ತನಾಗಿ, ಈಗ ದಿಲ್ಲಿಯಲ್ಲೇ ನೆಲೆಸಿರುವ ಸೀದಾಸಾದಾ ವ್ಯಕ್ತಿ. ೨೦೧೪ರಲ್ಲಿ ನಮ್ಮ ದೇಶ ಭ್ರಷ್ಟಾಚಾರದಿಂದ ಮುಕ್ತವಾಗಿ ಸಬಲ ದೇಶವಾಗಬೇಕಾದರೆ ಮೋದಿಯೇ ಪ್ರಧಾನಿಯಾಗಬೇಕು ಎಂದು ನಮ್ಮನ್ನು ಮಾತಿನಲ್ಲೇ ಕಟ್ಟಿಹಾಕುತ್ತಿದ್ದವ. ೨ಜಿ ಸ್ಕ್ಯಾಮ್, ಕಾಮನ್‌ವೆಲ್ತ್ ಹಗರಣಗಳ ಬಗ್ಗೆ ತನಗೆ ತಿಳಿದ ಅಂಕಿಅಂಶಗಳನ್ನು ಕರಾರುವಾಕ್ಕಾಗಿ ಮಂಡಿಸಿ, ಕೇಳುಗರನ್ನು ಮೋದಿ ಪರ ಕನ್ವಿನ್ಸ್ ಮಾಡುತ್ತಿದ್ದ. ಆ ಕಾರಣಕ್ಕೆ ಅವನಿಗೆ ಒಂದಿಷ್ಟು ಆರೆಸ್ಸೆಸ್ ಅಧಿಕಾರಶಾಹಿಗಳ ಸಂಪರ್ಕ ಬೆಳೆದಿತ್ತು. ಜೊತೆಗೆ, ಅವನ ಮಾತುಗಾರಿಕೆಯ ಕೌಶಲ್ಯವನ್ನು ಸಾಧ್ಯವಾದಷ್ಟರ ಮಟ್ಟಿಗೆ ಅವರು ಬಳಸಿಕೊಂಡಿದ್ದೂ ಉಂಟು. ಆ ಸಂಪರ್ಕಗಳು ಇವತ್ತಿಗೂ ಅವನ ಬಳಿ ಉಳಿದಿವೆ. ಆದರೆ ಅವನು ಮಾತ್ರ ಈಗ ತದ್ವಿರುದ್ಧವಾಗಿ ಬದಲಾಗಿದ್ದಾನೆ. ನಮ್ಮ ದೇಶ ಸಬಲಗೊಳ್ಳುವ ಮಾತು ಒಂದುಕಡೆಗಿರಲಿ, ಈ ಹಿಂದಿನಂತೆ ಉಳಿಯಬೇಕಾದರೆ ಮೊದಲು ಈ ಬಿಜೆಪಿ ತೊಲಗಲಿ ಎಂದು ಹೇಳುತ್ತಿದ್ದಾನೆ. ಅವನು ಪ್ರಾಮಾಣಿಕ ಮತ್ತು ಅವನಿಗೆ ಬಂದಿರುವ ಮೂಲಗಳೂ ಸತ್ಯವಿರಬಹುದು ಎಂದು ನಾವು ನಂಬುವುದಾದರೆ, ಅವನು ಹೇಳಿದ ಮಾತುಗಳ ಒಟ್ಟಾರೆ ಸಾರಾಂಶ ಹೀಗಿದೆ...

ಈಗ ಮೋದಿ ಮತ್ತು ಆರೆಸ್ಸೆಸ್ ನಡುವೆ ಈ ಮೊದಲಿನ ಬಾಂಧವ್ಯ ಉಳಿದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸಂಘ ಪರಿವಾರದ ಕೈ ಮೀರಿ ಮೋದಿ ವೈಯಕ್ತಿಕವಾಗಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡಾಗಿದೆ. ಅವರ ಸರ್ವಾಧಿಕಾರದ ಬಿಸಿ ಈಗ ಆರೆಸ್ಸೆಸ್‌ಗೂ ತಾಕಲಾರಂಭಿಸಿದೆ. ಮೋದಿಯನ್ನು ನಿಯಂತ್ರಿಸಬೇಕಿರುವುದು ಈಗ ಆರೆಸ್ಸೆಸ್‌ನ ಮುಂದಿರುವ ಸವಾಲು. ಹೇಗೆ?

ಈ ಚುನಾವಣೆಯಲ್ಲಿ ಮೋದಿ ಸೋಲುವುದರಿಂದ, ಅರ್ಥಾತ್ ಬಿಜೆಪಿ ಅಧಿಕಾರ ಕಳೆದುಕೊಳ್ಳುವಂತೆ ಮಾಡುವುದರಿಂದ ಈ ಟಾಸ್ಕ್ ಅನ್ನು ಆರೆಸ್ಸೆಸ್ ಸುಲಭವಾಗಿ ಸಾಧಿಸಬಹುದು. ಆದರೆ ಅದರಿಂದ ಆರೆಸ್ಸೆಸ್‌ಗೆ ಸಿಗುವ ಲಾಭವೇನು? ಮೋದಿಯನ್ನು ನಿಯಂತ್ರಿಸುವುದಕ್ಕೋಸ್ಕರ, ಸಿಕ್ಕಿರುವ ಅಧಿಕಾರವನ್ನು ಕಳೆದುಕೊಳ್ಳಲು ಆರೆಸ್ಸೆಸ್ ಎಂಬುದು ಮುಠ್ಠಾಳ ಸಂಘಟನೆಯಲ್ಲ. ತಮ್ಮ ಬಳಿ ಅಧಿಕಾರವೂ ಉಳಿಯಬೇಕು, ಆದರೆ ಮೋದಿ ನಿಶ್ಯಕ್ತಗೊಳ್ಳಬೇಕು. ಇದು ಆರೆಸ್ಸೆಸ್‌ನ ಸ್ಟ್ರಾಟಜಿ.

ಒಂದುವೇಳೆ, ಬಿಜೆಪಿ ಅಥವಾ ಎನ್‌ಡಿಎ ಸರಳ ಬಹುಮತಕ್ಕಿಂತ ಕೆಳಕ್ಕೆ ಕುಸಿಯಿತು ಅಂತಿಟ್ಟುಕೊಳ್ಳಿ, ಆಗ ಆರೆಸ್ಸೆಸ್‌ನ ಮುಂದೆ ಎರಡು ಆಯ್ಕೆಗಳಿರುತ್ತವೆ. ತನ್ನನ್ನು ತಾನು ಅಧಿಕೃತವಾಗಿ ರಾಜಕೀಯ ಸಂಘಟನೆಯಾಗಿ ಘೋಷಿಸಿಕೊಂಡಿಲ್ಲವಾದ್ದರಿಂದ, ಅದು ಸರಕಾರ ರಚನೆಯಲ್ಲಿ ನೇರವಾಗಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಆಗ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಪ್ರಯತ್ನವನ್ನು ಕೈಚೆಲ್ಲಿ ತೆಪ್ಪಗಿರಬೇಕು. ಇಲ್ಲವೇ ಎರಡನೇ ಆಯ್ಕೆಯಾಗಿ, ಮತ್ತೆ ಮೋದಿ-ಶಾ ಜೋಡಿಗೆ ಆ ಹೊಣೆ ಒಪ್ಪಿಸಿ, ತಾನು ಹಿಂಬದಿಗೆ ಸರಿದು ನಿಲ್ಲಬೇಕು. ಹಾಗಾದಲ್ಲಿ, ಹೇಗೋ ನಂಬರ್ ದಕ್ಕಿಸಿಕೊಳ್ಳಲು ಯಶಸ್ವಿಯಾಗುವ ಮೋದಿ-ಶಾ, ಅದೇ ಕಾರಣಕ್ಕೆ ಆಂತರಿಕವಾಗಿ ಮತ್ತಷ್ಟು ಬಲಿಷ್ಠವಾಗಿ ಹೋಲ್ಡ್ ಪಡೆದುಕೊಳ್ಳುತ್ತಾರೆ.

ಈಗ ಆರೆಸ್ಸೆಸ್‌ನ ಅಸಲಿ ತಂತ್ರಕ್ಕೆ ಬರೋಣ. ಒಂದುವೇಳೆ, ಬಿಜೆಪಿಯ ಸೀಟು ಗಳಿಕೆಯಲ್ಲಿ ಕುಸಿತವಾಗಿಯೂ ಎನ್‌ಡಿಎ ಸರಳ ಬಹುಮತಕ್ಕಿಂತ ಹೆಚ್ಚು ಸೀಟು ಗಳಿಸಿತು ಎಂದಿಟ್ಟುಕೊಳ್ಳಿ. ಹೀಗಾದಲ್ಲಿ, ನಾವೆಲ್ಲ ಇಷ್ಟು ದಿನ ಊಹಿಸುತ್ತಿದ್ದುದೇನು? ಸೀಟು ಕುಸಿತವನ್ನೇ ನೆಪ ಮಾಡಿಕೊಂಡು, ಆರೆಸ್ಸೆಸ್ ಮೋದಿಯನ್ನು ಪಿಎಂ ಸ್ಥಾನದಿಂದ ಕೆಳಗಿಳಿಸಿ ಬೇರೊಬ್ಬರನ್ನು ತಂದು ಕೂರಿಸುತ್ತೆ ಎಂದು. ಇದು ಯಾವಾಗ ಸಾಧ್ಯವಿತ್ತೆಂದರೆ, ಮೋದಿಗಿಂತ ಆರೆಸ್ಸೆಸ್ ಬಲವಾಗಿದ್ದ ಕಾಲದಲ್ಲಿ ಸಾಧ್ಯವಿತ್ತು. ಆದರೆ ಇವತ್ತು ಆರೆಸ್ಸೆಸ್‌ಗಿಂತ ನಾನೇ ಬಲ ಎಂಬ ಭ್ರಮೆಗೆ ಮೋದಿ ಬಂದಾಗಿದೆ. ಈ ಭ್ರಮೆಯ ಪರಿಣಾಮವಾಗಿಯೇ ಜೆ.ಪಿ. ನಡ್ಡಾ ನಮಗೀಗ ಗೆಲ್ಲಲು ಆರೆಸ್ಸೆಸ್‌ನ ಅಗತ್ಯವಿಲ್ಲ ಎಂಬ ಹುಂಬತನದ ಹೇಳಿಕೆ ನೀಡಿದ್ದು. ಇಷ್ಟು ಹದ್ದುಮೀರಿ ಹೋಗಿರುವ ಮೋದಿಯನ್ನು ಬೆರಳೆಣಿಕೆಯ ಸೀಟುಗಳ ಕುಸಿತದ ನೆಪವೊಡ್ಡಿ ಹುದ್ದೆ ಬಿಡು ಎನ್ನುವ ಬಿಗಿತ ಆರೆಸ್ಸೆಸ್ ಬಳಿ ಉಳಿದಿಲ್ಲ ಅಥವಾ ಆ ಬಲಕ್ಕೆ ಮನ್ನಣೆ ಕೊಡುವ ಪರಿಸ್ಥಿತಿಯಲ್ಲಿ ಮೋದಿ ಇಲ್ಲ. ಯಾಕೆಂದರೆ, ಸದ್ಯದ ಚುನಾವಣಾ ವಾತಾವರಣ ಮತ್ತು ಗೋದಿ ಮೀಡಿಯಾಗಳಲ್ಲದ ಬಹುತೇಕ ಚುನಾವಣಾ ತಜ್ಞರು ನುಡಿಯುತ್ತಿರುವ ವಿಶ್ಲೇಷಣೆ ಹೇಗಿದೆಯೆಂದರೆ, ಎನ್‌ಡಿಎ ಅಧಿಕಾರ ಉಳಿಸಿಕೊಳ್ಳುವುದು ತುಂಬಾ ಕಷ್ಟ, ಬಿಜೆಪಿ ಏನಿಲ್ಲವೆಂದರೂ ಕನಿಷ್ಠ ಐವತ್ತು ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎನ್ನುವ ವಾಸ್ತವವನ್ನು ಜನರ ನಡುವೆ ಗಟ್ಟಿಗೊಳಿಸಿವೆ. ಇಂತಹ ವ್ಯತಿರಿಕ್ತ ಪರಿಸ್ಥಿತಿಯಲ್ಲೂ, ಎನ್‌ಡಿಯ ಮೈತ್ರಿಕೂಟವನ್ನು ಬಹುಮತ ಪಾರು ಮಾಡುವಷ್ಟು ಸೀಟುಗಳಲ್ಲಿ ಮೋದಿ ಗೆಲ್ಲಿಸಿಕೊಂಡು ಬಂದರೆ, ಇದು ತನ್ನ ಸಾಧನೆ ಎಂದು ಮೋದಿ ಕ್ಲೇಮ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಆರೆಸ್ಸೆಸ್ ಮಾತಿಗೆ ಮಣೆ ಹಾಕಿ ಸುಲಭವಾಗಿ ಅಧಿಕಾರ ಬಿಟ್ಟುಕೊಡಲಾರರು. ಎಲ್ಲವೂ ನಮಗೆ ಪೂರಕವಾಗಿದ್ದಾಗ ಮೈಲಿಗಟ್ಟಲೆ ನಡೆಯುವುದು ಸಾಧನೆಯಲ್ಲ; ಎಲ್ಲವೂ ನಮಗೆ ವ್ಯತಿರಿಕ್ತವಿದ್ದಾಗ ಹತ್ತು ಹೆಜ್ಜೆ ಇಡುವುದೂ ಸಾಧನೆಯಲ್ಲವೇ? ಇದು ಮೋದಿಯ ವಾದವಾಗಲಿದೆ.

ಆರೆಸ್ಸೆಸ್‌ನ ಸ್ಟ್ರಾಟಜಿ ಇರುವುದೇ ಇಲ್ಲಿ. ಬಿಜೆಪಿಗೆ ಮುನ್ನೂರೈವತ್ತು, ನಾಲ್ಕನೂರು ಸ್ಥಾನಗಳನ್ನು ಗೆಲ್ಲುವ ಭರಪೂರ ವಾತಾವರಣ ದೇಶದಲ್ಲಿ ಇದೆ ಎಂಬುದನ್ನು ಹುಟ್ಟುಹಾಕಿದರೆ, ಜನ ಮೋದಿ ಮತ್ತು ಬಿಜೆಪಿಯ ಸಾಧನೆಯನ್ನು ದೊಡ್ಡ ಮಟ್ಟದಲ್ಲಿ ನಿರೀಕ್ಷಿಸುತ್ತಾರೆ. ಮೋದಿಯ ಸಾಮರ್ಥ್ಯ larger than life ಆಗಿ ಪ್ರೊಜೆಕ್ಟ್ ಆಗುತ್ತೆ. ಅಂತಹ ಪರಿಸ್ಥಿತಿಯಲ್ಲಿ ಫಲಿತಾಂಶ ಸರಳ ಬಹುಮತಕ್ಕೆ ಕುಸಿದರೆ, ಮೋದಿಯ ಆ ಮಿಥ್ಯದ ಇಮೇಜಿನ ಬೆಲೂನಿಗೆ ಪಿನ್ನು ಚುಚ್ಚಿದಂತಾಗುತ್ತೆ. ಹುಟ್ಟುಹಾಕಿದ್ದ ನಿರೀಕ್ಷೆಗೂ, ಮೋದಿಯ ಸಾಧನೆಗೂ ಅಜಗಜಾಂತರ ವ್ಯತ್ಯಾಸ ಉದ್ಭವಿಸುತ್ತದೆ. ಮೋದಿ ನಿಶ್ಯಕ್ತವಾಗಬೇಕಾಗುತ್ತದೆ, ಆರೆಸ್ಸೆಸ್ ಮೇಲುಗೈ ಸಾಧಿಸುತ್ತದೆ. ಮೋದಿಯನ್ನು ಪ್ರಧಾನಿ ಹುದ್ದೆಯಿಂದ ದೂರವಿಡಲು ಆರೆಸ್ಸೆಸ್‌ಗೆ ಸಾಧ್ಯವಾಗುತ್ತದೆ ಎನ್ನುವುದಕ್ಕಿಂತ, ಹುದ್ದೆ ಬಿಡುವಂತೆ ವಾದ ಮಂಡಿಸಲು ಅದಕ್ಕೆ ಸುಲಭವಾಗುತ್ತದೆ.

ಹಾಗಾಗಿ, ಇಂತಹ ಅತಿರೇಕದ ಎಕ್ಸಿಟ್ ಪೋಲ್ ನಂಬರ್‌ಗಳನ್ನು ಆರೆಸ್ಸೆಸ್ ತೇಲಿಬಿಡುತ್ತಿದೆ ಎಂಬುದು ಸಂಘ ಪರಿವಾರದ ಸಂಪರ್ಕವಿರುವ ನನ್ನ ಗೆಳೆಯನ ವಾದ. ಮೀಡಿಯಾಗಳಲ್ಲಿರುವ ಬಹುತೇಕರು ಮೋದಿಯ ಭಕ್ತರೆನ್ನುವುದು ಎಷ್ಟು ಸರಿಯೋ, ಅವರು ಆರೆಸ್ಸೆಸ್‌ನ ಬೇರು ಹೊಂದಿದವರು ಎನ್ನುವುದೂ ಅಷ್ಟೇ ಸರಿ. ಹಾಗೆ ನೋಡಿದರೆ, ಆರೆಸ್ಸೆಸ್ ನಂಟಿನ ಕಾರಣಕ್ಕೇ ಅವರೆಲ್ಲ ಮೋದಿಯ ಭಕ್ತರಾಗಿ ಬದಲಾದವರು. ಮೀಡಿಯಾಗಳಲ್ಲಿ ಮತ್ತು ಸಮೀಕ್ಷೆಯ ತಂಡಗಳಲ್ಲಿರುವ ತನ್ನ ಕಾರ್ಯಕರ್ತರನ್ನು ಬಳಸಿಕೊಂಡು ಆರೆಸ್ಸೆಸ್ ಈ ತಂತ್ರ ಹೆಣೆದಿದೆ ಎನ್ನುತ್ತಾನೆ ನನ್ನ ಗೆಳೆಯ.

ಇದನ್ನು ಸುಳ್ಳು ಎಂದು ತಳ್ಳಿ ಹಾಕಲಿಕ್ಕೆ ನನ್ನಿಂದ ಸಾಧ್ಯವಾಗುತ್ತಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಮಾಚಯ್ಯ ಎಂ. ಹಿಪ್ಪರಗಿ

contributor

Similar News