ಜಲ ಕ್ರಾಂತಿಯ ಹರಿಕಾರ ನಾಲ್ವಡಿಗೀಗ 140

Update: 2024-06-04 02:48 GMT

ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನೀರಾವರಿಗೆ ಅತಿ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಅನೇಕ ಕೆರೆ, ಕಟ್ಟೆ ಕಾಲುವೆಗಳನ್ನು ಹೊಸದಾಗಿ ಮಾಡಲಾಯಿತು, ಹಲವನ್ನು ದುರಸ್ತಿಗೊಳಿಸಲಾಯಿತು. ಪ್ರತಿವರ್ಷ ಒಂದು ಸಾವಿರ ಕೆರೆಗಳನ್ನು ದುರಸ್ತಿ ಮಾಡುವ ಗುರಿಯನ್ನು ಅಂದು ನಾಲ್ವಡಿ ಹಾಕಿಕೊಂಡಿದ್ದರು. ಖರ್ಚಿನಲ್ಲಿ 1/3 ಭಾಗವನ್ನು ರೈತರು ನೀಡಿದರೆ, 2/3 ಭಾಗವನ್ನು ಸರಕಾರ ನೀಡಲು ಮುಂದಾಯಿತು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅತಿ ಹೆಚ್ಚು ರೈತಾಪಿ ಜನರಿಗಾಗಿ ಕೆಲಸ ಮಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ನಮ್ಮ ಕಣ್ಣಿಗೆ ಇಂದಿಗೂ ಕಾಣುತ್ತಲೇ ಇರುವ ಕನ್ನಂಬಾಡಿಕಟ್ಟೆ(ಕೃಷ್ಣರಾಜ ಜಲಾಶಯ). ಇದರ ಜತೆಗೆ ನಾಲ್ವಡಿ ಅವರು ಅಂಜನಾಪುರ ಜಲಾಶಯ, ಗೋಪಾಲದ ಜಲಾಶಯ, ಭೀಮನಹಳ್ಳಿ ಜಲಾಶಯ, ನೆಲ್ಲಿಗೆರೆ ಜಲಾಶಯ, ಮಾರ್ಕೋನಹಳ್ಳಿ ಜಲಾಶಯ ಹೀಗೆ ಹಲವಾರು ಜಲಾಶಯಗಳು ಅವರ ಕಾಲದಲ್ಲಿ ನಿರ್ಮಾಣಗೊಂಡವು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಿಸಿದ ಕನ್ನಂಬಾಡಿ ಕಟ್ಟೆಯಿಂದ ಮೈಸೂರು, ಬೆಂಗಳೂರು ಜನತೆಗೆ ಕುಡಿಯುವ ನೀರು ಒದಗಿಸಲಾಯಿತು. ಮಂಡ್ಯದ ಜನತೆ ಬೆಳೆ ಬೆಳೆಯಲು ಒದಗಿಸಲಾಯಿತು. ಈ ನೀರಿನಿಂದ ಲಕ್ಷಾಂತರ ಮಂದಿ ಬದುಕುತ್ತಿದ್ದಾರೆ. 1881 ರಿಂದ 1923ರವರೆಗೆ ನಾಲ್ವಡಿ ಅವರು 527 ಲಕ್ಷ ರೂಪಾಯಿಗಳನ್ನು ನೀರಾವರಿಗಾಗಿ ಖರ್ಚುಮಾಡಿದರು. 1927 ರಿಂದ 1933ರವರೆಗೆ 62 ಲಕ್ಷ ರೂಪಾಯಿ ವೆಚ್ಚ ಮಾಡಿ 7,400 ಕೆರೆಗಳನ್ನು ಜೀರ್ಣೋದ್ಧಾರ ಮಾಡಿದರು. ದಳವಾಯಿ ಕೆರೆ, ಕೇತೋಹಳ್ಳಿ ಕೆರೆ, ಮರಳವಾಡಿ ಕೆರೆ, ತುಂಬಾಡಿ ಕೆರೆ, ಕಾಮಸಮುದ್ರ ಕೆರೆ, ಹೈರಿಗೆ ಕೆರೆ ಮೊದಲಾದ ಕೆರೆಗಳನ್ನು ಹೊಸದಾಗಿ ನಿರ್ಮಿಸಿದರು. 1939ನೇ ಇಸವಿಯಲ್ಲಿ ‘ನೀರಾವರಿ ಅಭಿವೃದ್ಧಿ ನಿಧಿ’ ಸ್ಥಾಪಿಸಿ 28 ಲಕ್ಷ ರೂಪಾಯಿಗಳನ್ನು ಮೂಲನಿಧಿಯಾಗಿ ಇಟ್ಟಿದ್ದರು.

ಕನ್ನಂಬಾಡಿ ಕಟ್ಟೆಗೆ ತುಂಬಾ ವರ್ಷಗಳ ಇತಿಹಾಸವಿದೆ. ಹಲವಾರು ರಾಜರ ಕೊಡುಗೆಗಳ ಮೂಲವೇ ಒಂದು ನಿರ್ದಿಷ್ಟ ತೆಗೆಬಂದಿದ್ದು. ಕ್ರಿ.ಶ. 1595ರ ಕಾಲದ ದಳವಾಯಿ ಕುಮಾರರಾಮ ಎನ್ನುವವರು ಕಾವೇರಿಯ ನೀರನ್ನು ಅಡ್ಡಗಟ್ಟಿ, ನೀರಾವರಿ ಸೌಲಭ್ಯಗಳಿಗೆ ಒಳಪಡಿಸಲು ಸಾಕಷ್ಟು ಪ್ರಯತ್ನಿಸಿದ್ದರು. ಕಂಠೀರವ ನರಸರಾಜ ಒಡೆಯರು (1673-1659)ರ ವರ್ಷಗಳ ನಡುವೆ, ಶ್ರೀರಂಗಪಟ್ಟಣದ ಉತ್ತರದಲ್ಲಿ ಅಣೆಕಟ್ಟನ್ನು ನಿರ್ಮಿಸಿದ್ದರು. 1638-1659 ಚಿಕ್ಕದೇವರಾಜ ಒಡೆಯರ್ ಕಾಲದಲ್ಲಿ ಕಾವೇರಿಗೆ ಒಂದು ಅಣೆಕಟ್ಟು ಕೆಲಸವಾಗಿತ್ತು. ಆದರೆ ತಾಂತ್ರಿಕ ವಿಧಾನಗಳ ಪರಿಚಯದ ಕೊರತೆಯಿಂದ ಪೂರ್ಣ ಯಶಸ್ಸು ಸಾಧಿಸಲು ಸಾಧ್ಯವಾಗಿರಲಿಲ್ಲ. ಅನಂತರ ಟಿಪ್ಪು ಸುಲ್ತಾನ್ ಅಧಿಕಾರವಧಿಯಲ್ಲಿ ಕಾವೇರಿಗೆ 70 ಅಡಿ ಅಣೆಕಟ್ಟು ಕಟ್ಟಲು ಶಂಕುಸ್ಥಾಪನೆ ನಡೆದಿತ್ತು. ಇಂದಿಗೂ ಕನ್ನಂಬಾಡಿ ಕಟ್ಟೆಯನ್ನು ಕಟ್ಟಲು ಟಿಪ್ಪು ಕೂಡ ಕನಸು ಕಂಡಿದ್ದರು ಎಂಬುದು ಎಷ್ಟೋ ಜನರಿಗೆ ತಿಳಿದೇ ಇಲ್ಲ. ಟಿಪ್ಪು ಸುಲ್ತಾನ್ ಶಂಕುಸ್ಥಾಪನೆ ಮಾಡಿದ ಮೇಲೆ ಪರ್ಶಿಯನ್ ಭಾಷೆಯಲ್ಲಿ ಶಾಸನವೊಂದನ್ನು ಬರೆಸಿದ್ದು 1911ರಲ್ಲಿ ಪತ್ತೆಯಾಗಿ ಅವರು ಕೂಡ ಅಣೆಕಟ್ಟೆ ಕಟ್ಟಲು ಮುಂದಾಗಿದ್ದರು ಎಂಬುದು ತಿಳಿಯಿತು. ಆ ಶಾಸನದಲ್ಲಿ ಅಣೆಕಟ್ಟೆಗೆ ಸಂಬಂಧಿಸಿದಂತೆ ಹೀಗೆ ಬರೆಯಲಾಗಿದೆ.. ‘‘ದೇವನ ಛಾಯ ಸ್ವರೂಪದ ಹಝರತ್ ಟಿಪ್ಪು ಸುಲ್ತಾನನಾದ ನಾನು ಬೇಡಿದ್ದನ್ನು ನಿಡುವ ಭಗವಂತನ ಕೃಪೆಯಿಂದ ಪವಿತ್ರವಾದ ಖಲೀಫ ಪದವಿಯಲ್ಲಿದ್ದು, ಜಗತ್ತಿನಲ್ಲಿಯೇ ಸರ್ವಶ್ರೇಷ್ಠರಾಗಿದ್ದ ಪೈಗಂಬರ್ ಮುಹಮ್ಮದ್‌ರವರ ಪ್ರೇರಣಾರೂಪವಾದ ದಿವ್ಯ ಸಹಾಯದಿಂದಲೂ, ರಾಜಧಾನಿಗೆ ಪಶ್ಚಿಮ ದಿಕ್ಕಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಶಾಶ್ವತವಾದ ಅಣೆಕಟ್ಟೆಯನ್ನು ನಿರ್ಮಾಣ ಮಾಡಲು ಶಂಕುಸ್ಥಾಪನೆ ನೆರವೇರಿಸಿದ್ದೇನೆ.’’ ಟಿಪ್ಪು ಸುಲ್ತಾನ್ ಅವರ ಶಾಸನದ ಮೂಲಕ ನಾವು ತಿಳಿದುಕೊಳ್ಳಬೇಕಿರುವುದು, ಇವರು ಕೂಡ ಕೃಷ್ಣರಾಜ ಜಲಾಶಯಕ್ಕೆ ಶ್ರಮಿಸಿದ್ದಾರೆ ಎಂಬುದನ್ನು.

ಕಾವೇರಿ ಅಣೆಕಟ್ಟನ್ನು ಕಟ್ಟಲು ಪ್ರಮುಖವಾದ ಮತ್ತೊಂದು ಅಂಶವೆಂದರೆ ಅದು ಶಿವನಸಮುದ್ರ. ಅಲ್ಲಿನ ಜಲಶಕ್ತಿಯು ವ್ಯರ್ಥವಾಗಿ ಹರಿದು ಹೋಗುತ್ತಿತ್ತು. ಅದರಿಂದ ವಿದ್ಯುತ್ ಉತ್ಪಾದನೆ ಮಾಡಬಹುದೆಂಬ ಚಿಂತನೆ ಹಾಗೆಯೇ ಉಳಿದಿತ್ತು. ಆದರೆ ಈ ನೈಸರ್ಗಿಕ ಜಲಪಾತದಿಂದ ವಿದ್ಯುತ್ ಉತ್ಪಾದನೆ ಮಾಡಬಹುದೆಂಬುದನ್ನು ತಿಳಿಸಿಕೊಟ್ಟಿದ್ದು ಜನರಲ್ ಜಾಲಿ ಡಿ.ಲಾಟ್ ಬಿನೀರ್. ನಯಾಗರ ಜಲಪಾತದಿಂದ ವಿದ್ಯುತ್ ಉತ್ಪಾದಿಸಿ 26 ಮೈಲಿ ರವಾನಿಸಲಾಗುತ್ತಿತ್ತು. ಜರ್ಮನಿಯಲ್ಲಿ 300 ಅಶ್ವಶಕ್ತಿಯಷ್ಟು ವಿದ್ಯುತ್ ಅನ್ನು 106 ಮೈಲಿ ದೂರದವರೆಗೆ ಸಫಲವಾಗಿ ಸಾಗಿಸಲಾಗಿತ್ತು. ವಿವರವಾಗಿ ಇದರ ಅಧ್ಯಯನ ಮಾಡಿದ ಲಾಟ್ ಬಿನೀರ್ ಈ ಯೋಜನೆಯನ್ನು ಬೆನ್ನು ಹತ್ತಿದರು. ಶಿವನಸಮುದ್ರದಿಂದ ಉತ್ಪಾದಿಸಬಹುದಾದ ನೀರನ್ನು 92 ಮೈಲಿ ದೂರದಲ್ಲಿರುವ ಕೋಲಾರದ ಚಿನ್ನದ ಗಣಿಗೆ ಸಾಗಿಸಬಹುದಾದ ನೀಲನಕ್ಷೆಯನ್ನು ಲಾಟ್ ಬಿನೀರ್ ಸಿದ್ಧಪಡಿಸಿದರು. ಆದರೆ ಇದನ್ನು ಕಾರ್ಯಗತಗೊಳಿಸಿದ್ದು ಅಂದಿನ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್, ಅದಕ್ಕೆ ಬೆಂಬಲವಾಗಿ ನಿಂತಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್. ಅಂದು ಬ್ರಿಟಿಷ್ ರೆಸಿಡೆಂಟ್ ಆಗಿದ್ದ ಕರ್ನಲ್ ಸರ್ ಡೊನಾಲ್ಡ್, ರಾಬರ್ಟ್ ಸನ್ ಮುಂತಾದವರ ಅಧಿಪತ್ಯದಿಂದ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸಫಲವಾಯಿತು. 1902ರಲ್ಲಿ ಲಾರ್ಡ್ ಕರ್ಜನ್ ಮೂಲಕ ಅಧಿಕೃತ ಚಾಲನೆ ದೊರೆಯಿತು.

ಬೇಸಿಗೆ ಕಾಲದಲ್ಲಿ ನೀರಿನ ಹರಿವು ಇಳಿಮುಖವಾಗುತ್ತಿದ್ದುದರಿಂದ ವಿದ್ಯುತ್ ಉತ್ಪಾದನೆ ಕುಂಠಿತವಾಗುತ್ತಿತ್ತು. ಈ ಕಾರಣದಿಂದ ಶಿವನಸಮುದ್ರದಲ್ಲಿ ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದಿಸಿ, ಜಲಶಕ್ತಿಯನ್ನು ವೃದ್ಧಿಸುವ ದೃಷ್ಟಿಯಿಂದ 1902 ರಿಂದ 1908ರವರೆಗೆ ಅಲ್ಲಲ್ಲಿ ಅಡ್ಡಗಟ್ಟೆಗಳಲ್ಲಿ ಮರಳಿನ ಚೀಲಗಳನ್ನು ಅಡ್ಡವಾಗಿಟ್ಟು ಹರಿವಿನ ಗತಿ ಮತ್ತು ವೇಗವನ್ನು ನಿಯಂತ್ರಿಸಲಾಯಿತು. ಆದರೂ ಕೂಡ ಪ್ರಮಾಣದಲ್ಲಿ ಏರಿಳಿತ ಇದ್ದೇ ಇರುತ್ತಿತ್ತು. ಹಾಗಾಗಿ 10 ಸಾವಿರ ಅಶ್ವಶಕ್ತಿಯ ವಿದ್ಯುತ್ ಉತ್ಪಾದನೆಯ ಭರವಸೆ ನೀಡಿದ್ದರೂ ಅಷ್ಟನ್ನು ಪೂರೈಸುವುದು ಅಸಾಧ್ಯವಾಗಿತ್ತು.

ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಶುರುವಾದದ್ದು ಕಾವೇರಿ ನೀರನ್ನು ಅಡ್ಡಗಟ್ಟುವ ಮೂಲಕ ಅಣೆಕಟ್ಟನ್ನು ಕಟ್ಟುವ ಯೋಜನೆಯು ಸಹ ಒದಗಿಬಂತು. ಮೈಸೂರಿನ ಮುಖ್ಯ ಇಂಜಿನಿಯರ್ ಆಗಿದ್ದ ಕ್ಯಾಪ್ಟನ್ ಮೆಕ್ ಹಚಿನ್ ಮತ್ತು ಅವರ ಸಹಾಯಕರಾದ ಬರ್ನಾಡ್ ಡಾವೆಸ್ ಆರ್.ಇ. ಇಬ್ಬರೂ ಸೇರಿ ಅಣೆಕಟ್ಟನ್ನು ಕಟ್ಟುವ ಯೋಜನೆಯೊಂದನ್ನು ಸಿದ್ಧಪಡಿಸಿದರು. ಅವರು ತಯಾರು ಮಾಡಿದ ಯೋಜನೆಯ ಪ್ರಕಾರ ಅಣೆಕಟ್ಟು ಎತ್ತರ 70 ಅಡಿ. ನೀರಿನ ಶೇಖರಣೆ 60 ಅಡಿ. ಇದರಿಂದ ಕೊಳವೆಗಳ ಮೂಲಕ ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆಗೆ 23 ಸಾವಿರದಷ್ಟು ಅಶ್ವಶಕ್ತಿಯ ವಿದ್ಯುತ್ತನ್ನು ಉತ್ಪಾದಿಸಿ ಕೋಲಾರ ಚಿನ್ನದ ಗಣಿಗೆ ಮಾತ್ರವಲ್ಲದೆ ಮದ್ರಾಸು ಮತ್ತು ಕೊಯಮತ್ತೂರುಗಳಿಗೂ ರವಾನಿಸುವ ನೀಲನಕ್ಷೆಯನ್ನು ಮಾಡಿದ್ದರು. ಆದರೆ ಈ ಯೋಜನೆಯಲ್ಲಿ ಕೃಷಿಗಾಗಿ ಕಾವೇರಿ ನೀರಿನ ಬಳಕೆ ಉಲ್ಲೇಖವಿರದ ಕಾರಣ ನಾಲ್ವಡಿ ಕೃಷ್ಣರಾಜ ಒಡೆಯರ್ ಈ ಯೋಜನೆಯನ್ನು ನಿರಾಕರಿಸಿದರು. ಆನಂತರ ಮುಖ್ಯ ಇಂಜಿನಿಯರ್ ಆಗಿದ್ದ ಮೆಕ್ ಹಚಿನ್ ಮತ್ತು ಬರ್ನಾಡ್ ಡಾವೆಸ್ ಆರ್.ಇ. 1908ರಲ್ಲಿ ಮತ್ತೊಂದು ಯೋಜನೆ ಸಿದ್ಧಪಡಿಸಿದರು. ಇದರ ಪ್ರಕಾರ ಎತ್ತರ 90 ಅಡಿ, ನೀರು ಶೇಖರಣೆ 80 ಅಡಿ, ಅಂದಾಜು ನಿರ್ಮಾಣ ವೆಚ್ಚ ಎರಡೂವರೆ ಕೋಟಿ ರೂಗಳು ಮತ್ತು ಶಿವನಸಮುದ್ರಕ್ಕೆ ನೀರು ಹರಿಸಿ ಉತ್ಪಾದಿಸುವ ವಿದ್ಯುತ್ ಪ್ರಮಾಣ 46 ಸಾವಿರ ಅಶ್ವಶಕ್ತಿಯಷ್ಟು. ಜೊತೆಗೆ 1 ಲಕ್ಷದ 25 ಸಾವಿರ ಎಕರೆ ಭೂಮಿಗೆ ನೀರಾವರಿ ಒದಗಿಸುವುದು.

ಈ ಯೋಜನೆಗೆ ಮದ್ರಾಸ್ ಪ್ರಾಂತದ ಬ್ರಿಟಿಷ್ ಆಡಳಿತದ ಅನುಮತಿ ಬಹಳ ಅವಶ್ಯಕವಿತ್ತು. ಯಾಕೆಂದರೆ ಕಾವೇರಿ ಹರಿಯುತ್ತಿದ್ದದ್ದೇ ಮದ್ರಾಸ್ ಪ್ರಾಂತದಲ್ಲಿ. ಅವರು ಬ್ರಿಟಿಷ್ ದೃಷ್ಟಿಯಿಂದ ಅನುಮತಿ ನೀಡಿದರು. 90 ಅಡಿ ಎತ್ತರ, 80 ಅಡಿ ನೀರು ಶೇಖರಣೆಗೆ.

ಆದರೆ ಮಹಾರಾಜರು ಮತ್ತು ಇಂಜಿನಿಯರ್‌ಗಳು ಸೇರಿಕೊಂಡು ಅಡಿಪಾಯ ಹಾಕಿದ್ದು 130 ಅಡಿ ಎತ್ತರ, 124 ಅಡಿ ನೀರು ಶೇಖರಣೆ ಮಾಡಿಕೊಳ್ಳುವುದು. ಈ ರೀತಿಯಾಗಿ ಯೋಜನೆ ಮಾರ್ಪಾಡು ಮಾಡಿಕೊಂಡು ಕಟ್ಟಲು ಸಿದ್ದವಾದರು. ಆದರೆ ಇದಕ್ಕೆ 2 ಕೋಟಿ 75 ಲಕ್ಷ ರೂ.ಗಳು ಬೇಕಾಗಿತ್ತು. ಅಂದಿನ ಸಂದರ್ಭದಲ್ಲಿ ರಾಜ್ಯದ ಆದಾಯ 2 ಕೋಟಿ 32 ಲಕ್ಷ ರೂ.ಗಳು ಮಾತ್ರ. ರಾಜ್ಯದ ಒಟ್ಟು ಆದಾಯವನ್ನು ಅಲ್ಲಿ ಬಳಸಲು ಸಾಧ್ಯವಿರಲಿಲ್ಲ. ಹಾಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಅರಮನೆಯ ಖಾಸಗಿ ಭಂಡಾರದಲ್ಲಿದ್ದ ನಾಲ್ಕು ಮೂಟೆಗಳ ವಜ್ರ ವೈಢೂರ್ಯಗಳ ಆಭರಣಗಳು ಮತ್ತು ಬೆಳ್ಳಿ ರೂಪಾಯಿಗಳನ್ನು ಮುಂಬೈಗೆ ತೆಗೆದುಕೊಂಡು ಹೋಗಿ, ಅಲ್ಲಿ ಮಾರಾಟ ಮಾಡಿ ಆ ಹಣವನ್ನು ಕನ್ನಂಬಾಡಿ ಅಣೆಕಟ್ಟು ಕಟ್ಟಲು ಬಳಸಿದರು.

ಕೃಷ್ಣರಾಜ ಜಲಾಶಯದ ಕಾರ್ಯ ಪ್ರಾರಂಭವಾದ ವರ್ಷ 1909. ಅದೇ ಸಂದರ್ಭದಲ್ಲಿ ಮುಖ್ಯ ಇಂಜಿನಿಯರ್ ಆಗಿದ್ದ ಮೆಕ್ ಹಚಿನ್ ನಿವೃತ್ತರಾಗುತ್ತಾರೆ. ಆನಂತರ ಎಲ್ಲಾ ಜವಾಬ್ದಾರಿಗಳು ಕ್ಯಾಪ್ಟನ್ ಬರ್ನಾಡ್ ಡಾವೆಸ್ ಹೆಗಲಿಗೆ ಬೀಳುತ್ತವೆ. ಅಣೆಕಟ್ಟಿನ ಕಾರ್ಯ ನಡೆಯುವ ಸ್ಥಳದಲ್ಲಿ ಡಾವೆಸ್ ಕಾರ್ಯನಿರತನಾಗಿರುವಾಗ ಅಚಾನಕ್ ಆಗಿ ನೆರೆ ಬಂದು ಹಾಕಿದ್ದ ಒಡ್ಡುಗಳೆಲ್ಲಾ ಜಖಂಗೊಂಡಿರುತ್ತವೆ. ಅದೇ ಸಂದರ್ಭದಲ್ಲಿ ಮೀನು ಹಿಡಿಯುವ ಬೆಸ್ತರು ಒಂದು ದೋಣಿಯಲ್ಲಿ ಕುಳಿತು ಮರಳು ಚೀಲದ ಒಡ್ಡು ಕೊಚ್ಚಿ ಹೋಗಿದ್ದ ಸ್ಥಳದಲ್ಲಿ ನೀರಿನ ರಭಸವನ್ನು ನಿಯಂತ್ರಿಸಲು ಸಿಮೆಂಟ್ ಪಿಪಾಯಿಗಳನ್ನು ಜೋಡಿಸುತ್ತಿದ್ದರು. ಆಗ ಅನಿರೀಕ್ಷಿತವಾಗಿ ಮತ್ತೆ ನೆರೆ ಅಪ್ಪಳಿಸಿ ಕ್ಷಣಾರ್ಧದಲ್ಲಿ ದೋಣಿ ಮಗುಚಿಕೊಂಡಿತು. ಅದರಲ್ಲಿ ಏಳು ಮಂದಿ ಜನರು ಈಜಿ ದಡ ಸೇರಿದರು. ಒಬ್ಬ ಮಾತ್ರ ನೀರಿನಲ್ಲೇ ಸಿಕ್ಕಿ ಒದ್ದಾಡುತ್ತಿದ್ದ. ಅದನ್ನು ಗಮನಿಸಿದ ಬರ್ನಾಡ್ ಡಾವೆಸ್ ಪ್ರವಾಹಕ್ಕೆ ಧುಮುಕಿ ಆತನನ್ನು ಬದುಕಿಸಿ ತಾನು ಪ್ರಾಣ ಕಳೆದುಕೊಂಡರು. ಬಹಳಷ್ಟು ಹುಡುಕಾಟದಿಂದ ನಾಲ್ಕು ದಿನಗಳ ನಂತರ ಡಾವೆಸ್ ಶವ ದೊರಕಿತು. ಅಣೆಕಟ್ಟೆಗಾಗಿ ಶ್ರಮಿಸುತ್ತಿದ್ದ ಕಾರ್ಮಿಕರನ್ನು ರಕ್ಷಿಸಲು ಡಾವೆಸ್ ಅವರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಅಣೆಕಟ್ಟಿನ ಸುತ್ತಮುತ್ತಲ ಜನರೇ ಚಂದಾ ಎತ್ತಿ 600 ರೂಪಾಯಿಗಳನ್ನು ಸರಕಾರದಲ್ಲಿ ಪ್ರತಿವರ್ಷ ಆರೂವರೆ ರೂಪಾಯಿಗಳ ಬಡ್ಡಿಗೆ ಠೇವಣಿಯಿಟ್ಟು 1916ರಲ್ಲಿ ಕ್ಯಾಪ್ಟನ್ ಡಾವೆಸ್ ಪುರಸ್ಕಾರ ಎಂಬ ದತ್ತಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಿದರು. ಆ ದತ್ತಿ ಠೇವಣಿ ಹಣದಿಂದ ಬರುವ ಬಡ್ಡಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರತಿವರ್ಷ ಅಪೂರ್ವ ಮಾನವತಾ ಸೇವೆಯ ವಿದ್ಯಾರ್ಥಿಯೊಬ್ಬನನ್ನು ಗುರುತಿಸಿ ಪಾರಿತೋಷಕ ನೀಡಲಾಗುತ್ತಿದೆ.

ಕೃಷ್ಣರಾಜ ಜಲಾಶಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ಎಷ್ಟೆಲ್ಲಾ ಬೆಳವಣಿಗೆಗಳು ನಡೆದು ಹೋಗಿವೆ. 1909ರಲ್ಲಿ ಅಣೆಕಟ್ಟಿನ ಪೂರ್ವಭಾವಿ ಕೆಲಸ ಪ್ರಾರಂಭವಾಯಿತು. ಅಧಿಕೃತವಾಗಿ ಪ್ರಾರಂಭಗೊಂಡಿದ್ದು 1911ರಲ್ಲಿ. ಇದರ ಸಂಪೂರ್ಣ ಕೆಲಸ ಮುಗಿದಿದ್ದು 1931ರಲ್ಲಿ. 20 ವರ್ಷಗಳ ನಿರ್ಮಾಣದ ಅವಧಿಯಲ್ಲಿ ನಾಲ್ಕು ಮಂದಿ ದಿವಾನರು ಉಸ್ತುವಾರಿಗಳಾಗಿದ್ದರು. ಅವರಲ್ಲಿ ಸರ್.ಎಂ.ವಿಶ್ವೇಶ್ವರಯ್ಯ, ಸರ್ದಾರ್ ಎಂ.ಕಾಂತರಾಜು ಅರಸು, ಸರ್ ಅಲ್ಪಜನ್ ರಾಜಕುಮಾರ ಬ್ಯಾನರ್ಜಿ ಹಾಗೂ ಮಿರ್ಜಾ ಎಂ. ಇಸ್ಮಾಯೀಲ್. ಇಲ್ಲಿ ವಿಶ್ವೇಶ್ವರಯ್ಯನವರು ಅದರ ಉಸ್ತುವಾರಿಯಾಗಿದ್ದರೇ ಹೊರತು, ಅವರು ಅಣೆಕಟ್ಟಿಗೆ ಪ್ಲ್ಯಾನ್ ಮಾಡಿದವರಲ್ಲ. ಅಣೆಕಟ್ಟಿನ ಪೂರ್ವಭಾವಿ ಪ್ರಾರಂಭವಾದದ್ದು 1909ರ ನಂತರ, ಮುಗಿದಿದ್ದು 1931ರಲ್ಲಿ. ಮೈಸೂರು ಸಂಸ್ಥಾನಕ್ಕೆ ದಿವಾನರಾಗಿ ವಿಶ್ವೇಶ್ವರಯ್ಯ ಬಂದಿದ್ದು 1912ರಲ್ಲಿ. ಆನಂತರ ಅವರು 1918ರಲ್ಲಿ ರಾಜೀನಾಮೆ ನೀಡಿದರು. ಅವರು ಇಲ್ಲಿ ಕಾರ್ಯನಿರ್ವಹಿಸಿರುವುದೇ ಕೇವಲ 6 ವರ್ಷಗಳ ಕಾಲ. ಪ್ಲ್ಯಾನ್ ಮಾಡಿ ಯೋಜನೆ ರೂಪಿಸಿದ್ದು ಮೆಕ್ ಹಚಿನ್, ಹಣ ನೀಡಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್, ಅಂತಿಮವಾಗಿ ಅಣೆಕಟ್ಟಿನ ಕೆಲಸವನ್ನು ಮುಗಿಸಿದ್ದು ಮಿರ್ಜಾ ಇಸ್ಮಾಯೀಲ್ .

ಕನ್ನಂಬಾಡಿ ಕಟ್ಟೆ ಕಟ್ಟಿ ಜಲಕ್ರಾಂತಿಯನ್ನೇ ಉಂಟು ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರದು ಇಂದು 140ನೇ ಜನ್ಮ ದಿನಾಚರಣೆ. ಎಲ್ಲರೂ ಅವರನ್ನು ಮನದುಂಬಿ ನೆನೆಯೋಣ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಹಾರೋಹಳ್ಳಿ ರವೀಂದ್ರ

contributor

Similar News