ಸೈಬರ್ ಅಪರಾಧ ನಿಯಂತ್ರಣಕ್ಕೆ ಸಪ್ತಾಹ, ಮೈದಾನಗಳ ಕೆಳಗೆ ವಾಹನ ಪಾರ್ಕಿಂಗ್!

Update: 2015-12-29 07:34 GMT

ಸೈಬರ್ ಕ್ರೈಮ್ ನಿಯಂತ್ರಣಕ್ಕೆ ಸೈಬರ್ ಸೇಫ್ಟಿ ವೀಕ್
ದ್ವಿತೀಯ ಮುಂಬೈ ಎನ್ನಲಾಗುವ ನವಿಮುಂಬೈ ಕ್ಷೇತ್ರದಲ್ಲಿ ಸೈಬರ್ ಕ್ರೈಮ್ ಘಟನೆಗಳಲ್ಲಿ ವೃದ್ಧಿಯಾಗಿದೆ. ಇವುಗಳಲ್ಲಿ ಬ್ಯಾಂಕಿಂಗ್ ವ್ಯವಸಾಯ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮತ್ತು ಆನ್‌ಲೈನ್ ಡೆಪಾಸಿಟ್ ವ್ಯವಹಾರಕ್ಕೆ ಸಂಬಂಧಿಸಿದ ಅಪರಾಧಗಳು ಸೇರಿವೆ. ಇ-ಹಣಕಾಸು ವ್ಯವಹಾರ ವೃದ್ಧಿಯಿಂದ ಸೈಬರ್ ಅಪರಾಧಗಳಲ್ಲೂ ವೃದ್ಧಿಯಾಗಿದೆ. ಇದರಿಂದ ಪೊಲೀಸ್ ಮತ್ತು ಬ್ಯಾಂಕ್ ಎರಡೂ ವಿಭಾಗಗಳಲ್ಲಿ ಚಿಂತೆ ಹೆಚ್ಚಾಗಿದೆ. ಹಾಗೂ ಇಬ್ಬರೂ ಗ್ರಾಹಕರನ್ನು ಜಾಗೃತಗೊಳಿಸುವ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಂದು ವೇಳೆ ಸೈಬರ್ ಅಪರಾಧಗಳಿಗೆ ಶೀಘ್ರ ಅಂಕುಶ ಹಾಕದಿದ್ದರೆ ಸ್ಮಾರ್ಟ್ ಸಿಟಿಯತ್ತ ಹೆಜ್ಜೆ ಹಾಕಿರುವ ನವಿಮುಂಬೈ ಮಹಾನಗರ ಶೀಘ್ರವೇ 'ಸೈಬರ್ ಅಪರಾಧ ನಗರ' ಎಂಬ ರೂಪದಲ್ಲಿ ಗಮನ ಸೆಳೆಯಲಿದೆಯಂತೆ.!


ಈ ನಿಟ್ಟಿನಲ್ಲಿ ನವಿಮುಂಬೈ ಪೊಲೀಸರು ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ನ ಜೊತೆಗೂಡಿ ಒಂದು ವಾರದ ಜಾಗರೂಕತಾ ಅಭಿಯಾನ ಆರಂಭಿಸಿದರು.
ಇಂಟರ್‌ನೆಟ್ ಮಾಧ್ಯಮದಿಂದ ಕಂಪ್ಯೂಟರ್, ಮೊಬೈಲ್.....ಇತ್ಯಾದಿಗಳ ಸಹಾಯದಿಂದ ಇತರರಿಗೆ ಶಾರೀರಿಕ, ಮಾನಸಿಕ, ಆರ್ಥಿಕ ಮತ್ತಿತರ ನಷ್ಟವನ್ನುಂಟುಮಾಡಬಹುದು. ಇಂತಹ ಸಂಗತಿಗಳೆಲ್ಲ ಸೈಬರ್ ಅಪರಾಧಗಳಾಗುತ್ತವೆ. ಇವುಗಳಲ್ಲಿ ಅನೇಕ ರೀತಿಯ ಅಪರಾಧಗಳನ್ನು ಗಮನಿಸಬಹುದು. ಡಾಟಾ ಸೆಕ್ಯುರಿಟಿಯ ಕಳ್ಳತನ, ಆನ್‌ಲೈನ್ ಲಾಟರಿ, ಆನ್‌ಲೈನ್ ದೇಶೀ ವಿದೇಶಿ ನೌಕರಿಯ ಆಸೆ ತೋರಿಸುವುದು, ವಂಚನೆ, ಸೈಬರ್ ಆತಂಕವಾದ, ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡುವುದು, ಫೋನ್‌ನಲ್ಲಿ ಗ್ರಾಹಕರ ಬ್ಯಾಂಕ್, ಡೆಬಿಟ್/ ಕ್ರೆಡಿಟ್ ಕಾರ್ಡ್ ಗಳ ಪಾಸ್‌ವರ್ಡ್ ಕೇಳುವುದು ಹಾಗೂ ಹಣವನ್ನು ಖಾತೆಯಿಂದ ಲಪಟಾಯಿಸುವುದು ಇವೆಲ್ಲ ಸೈಬರ್ ಅಪರಾಧಗಳು.


2015ರಲ್ಲಿ ಈ ತನಕ ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ 500ಕ್ಕೂ ಹೆಚ್ಚು ದೂರುಗಳನ್ನು ಪೊಲೀಸರ ಸೈಬರ್ ಸೆಲ್ ವಿಭಾಗದಲ್ಲಿ ದಾಖಲಿಸಲಾಗಿದೆ. ಇತ್ತೀಚೆಗೆ ಮುಗಿದಿರುವ ಜಾಗರೂಕತಾ ಅಭಿಯಾನದಲ್ಲಿ 'ಬಿ ಅವೇರ್ - ಬಿ ಸೆಕ್ಯೂರ್' ಸ್ಲೋಗನ್ ಇರಿಸಲಾಗಿತ್ತು. ಈ ಆಯೋಜನೆ ಡಿಸೆಂಬರ್ 14ರಿಂದ 19ರ ತನಕ ನಡೆಯಿತು. ಮೊದಲ ದಿನ ಪೊಲೀಸ್ ಆಯುಕ್ತರಾದ ಪ್ರಭಾತ್ ರಂಜನ್ ಅವರ ಉಪಸ್ಥಿತಿಯಲ್ಲಿ ಡಾಟಾ ಸೆಕ್ಯುರಿಟಿ ವಿಷಯವಾಗಿ ಅಡ್ವ್ವೊಕೇಟ್ ಪ್ರಶಾಂತ್ ಮಾಲಿ ಮತ್ತು ರವಿರಾಜ್ ದೋಶಿಯವರ ಉಪನ್ಯಾಸವಿತ್ತು. ಪ್ರತಿದಿನ ಬೇರೆ ಬೇರೆ ಸಭಾಗೃಹಗಳಲ್ಲಿ ಉಪನ್ಯಾಸಗಳು ನಡೆಯಿತು. ಇದರಲ್ಲಿ ನವಿಮುಂಬೈ ಪೊಲೀಸ್ ವಿಭಾಗದ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.
* * *
ಪೊಲೀಸ್ ಹೋಮ್‌ಗಾರ್ಡ್ ವಿಭಾಗದಲ್ಲಿ ಶೂ ಹಗರಣ!
ಮಹಾರಾಷ್ಟ್ರ ಪೊಲೀಸರ ಹೋಮ್‌ಗಾರ್ಡ್ ಡಿಪಾರ್ಟ್‌ಮೆಂಟ್ ತನ್ನ ಡಿಫೆನ್ಸ್ ಜವಾನರಿಗಾಗಿ 2007-2008ರಲ್ಲಿ 3ಸಾವಿರಕ್ಕೂ ಹೆಚ್ಚು 6 ನಂಬರ್‌ನ ಶೂ ಖರೀದಿಸಿತ್ತು. ವಾಸ್ತವವಾಗಿ ಹೋಮ್ ಗಾರ್ಡ್‌ನಲ್ಲಿ ಭರ್ತಿಗೊಳಿಸುವಾಗ 18 ವರ್ಷ ಕಳೆದಿರಬೇಕು. ಆದರೆ ಈ ವಯಸ್ಸಿನ ಹುಡುಗರಿಗೆ ಈ 6 ನಂಬರ್‌ನ ಶೂಗಳು ಉಪಯೋಗಕ್ಕೆ ಬರುವುದೇ? ಯಾಕೆಂದರೆ 6 ನಂಬರ್‌ನ ಶೂಗಳು ಕೇವಲ 12 ರಿಂದ 16 ವರ್ಷದ ಒಳಗಿನ ವಯಸ್ಸಿನ ಯುವಕರಷ್ಟೇ ಧರಿಸಲು ಸಾಧ್ಯವಂತೆ. ಇಲ್ಲಿ ಲಕ್ಷಗಟ್ಟಲೆ ರೂಪಾಯಿ ಹಗರಣ ನಡೆದಿರುವುದಾಗಿ ಆರೋಪಗಳು ಕೇಳಿ ಬಂದಿವೆ.


ಇದೀಗ ಹೋಮ್‌ಗಾರ್ಡ್‌ನ ವರಿಷ್ಠ ಅಧಿಕಾರಿಗಳು ಈ ದೂರಿನ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಅಪರಾಧಿ ಎಂದು ಕಂಡು ಬಂದರೆ, ಆವಾಗಿನ ಖರೀದಿ ಸಂದರ್ಭದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಸಂಭವವಿದೆ.
ಹೋಮ್‌ಗಾರ್ಡ್‌ನ ಮೂಲಗಳಿಂದ ತಿಳಿದು ಬಂದಂತೆ ಈ 6 ನಂಬರ್‌ನ ಶೂಗಳನ್ನು ಸಂತ ರೋಹಿದಾಸ ಚರ್ಮ ಉದ್ಯೋಗ ಮತ್ತು ಚರ್ಮ ವಿಕಾಸ್ ಮಹಾಮಂಡಲ್, ಮುಂಬೈ ಮತ್ತು ಯೆರವಾಡ ಕಾರಾಗೃಹ - ಪುಣೆಯಿಂದ ಖರೀದಿಸಲಾಗಿದೆ. ಮಹಾರಾಷ್ಟ್ರದಲ್ಲಿ ಒಟ್ಟು 38 ಸಾವಿರ ಹೋಮ್‌ಗಾರ್ಡ್‌ಗಳಿದ್ದಾರೆ. ಈ ಸಂಸ್ಥೆಯ ಬಜೆಟ್ 127 ಕೋಟಿ ರೂಪಾಯಿಗಳು. ಹೋಮ್ ಗಾರ್ಡ್‌ಗಳಿಗೆ ಜಾಕೆಟ್, ಕ್ಯಾಪ್ ಇತ್ಯಾದಿ ವಸ್ತುಗಳೂ ಉಪಯೋಗಕ್ಕೆ ಬಂದಿಲ್ಲವಂತೆ. ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರದಿಂದ ಹೋಮ್‌ಗಾರ್ಡ್‌ಗೆ ಫಂಡ್ ದೊರೆಯುತ್ತದೆ. ಹಾಗಾಗಿ ಇವುಗಳ ಸರಿಯಾದ ಆಡಿಟ್ ನಡೆಯಬೇಕೆಂದು ಆಗ್ರಹಿಸಲಾಗಿದೆ.
* * *
ಮನಪಾ ಶಾಲೆಗಳ ಟ್ಯಾಬ್ ಯಾವ ಕಂಪೆನಿದ್ದು?
ಮುಂಬೈ ಮನಪಾ ಸದನದಲ್ಲಿ ಕಳೆದ ವಾರ ರಾಷ್ಟ್ರವಾದಿ ಕಾಂಗ್ರೆಸ್‌ನ ಮಹಿಳಾ ನಗರಸೇವಕರಾದ ಸಯೀದಾ ಖಾನ್ ಮನಪಾದ ಟ್ಯಾಬ್ ಹಗರಣವನ್ನು ಸದನದಲ್ಲಿ ಎತ್ತಿ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಮಹಾನಗರ ಪಾಲಿಕೆ ನಿಯಮ 66ರ ಅಡಿಯಲ್ಲಿ ಈ ಸಂಗತಿ ಎತ್ತಿಕೊಂಡು ತನಿಖೆಗೆ ಆದೇಶಿಸುವಂತೆ ಮೇಯರ್ ಬಳಿ ಕೇಳಿಕೊಂಡರು.
ಮನಪಾ ತನ್ನ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 27 ವಸ್ತುಗಳನ್ನು ಉಚಿತವಾಗಿ ವಿತರಣೆ ಮಾಡುತ್ತದೆ. ಆದರೆ ಈ ಬಾರಿ ಹೆಚ್ಚಿನ ವಸ್ತುಗಳನ್ನು ಇನ್ನೂ ವಿದ್ಯಾರ್ಥಿಗಳಿಗೆ ಕೊಟ್ಟಿಲ್ಲ!


ನಗರ ಸೇವಕಿ ಸಯೀದಾ ಖಾನ್ ಅವರು ವೀಡಿಯೋಕಾನ್‌ನ ಟ್ಯಾಬ್ ನೀಡಬೇಕಾದ ಸ್ಥಳದಲ್ಲಿ ಬೋಲ್ಡ್ ಕಂಪೆನಿಯ ಟ್ಯಾಬ್ ವಿತರಿಸಿದ್ದನ್ನು ಪ್ರಶ್ನಿಸಿದ್ದರು. ಆದರೆ ಈ ಕಂಪೆನಿಯ ಬಗ್ಗೆ ಯಾರಿಗೂ ಏನೂ ತಿಳಿದಿಲ್ಲವಂತೆ! ಚೈನಾ ಮಾರ್ಕೆಟ್‌ನಲ್ಲೂ ಇಂಥದೊಂದು ಕಂಪೆನಿ ಇದೆಯೆಂದು ಯಾರಿಗೂ ಮಾಹಿತಿ ಇಲ್ಲವಂತೆ. ಸಯೀದಾ ಖಾನ್ ಅವರನ್ನು ಇತ್ತೀಚೆಗೆ ಒಂದು ಶಾಲೆಯಲ್ಲಿ ಟ್ಯಾಬ್ ವಿತರಿಸಲು ಆಮಂತ್ರಿಸಿದ್ದರು. ಅಲ್ಲಿಗೆ ಹೋದಾಗ ಅವರಿಗೆ ಆಶ್ಚರ್ಯವಾಯಿತು. ಅವರು ಅಧಿಕಾರಿಗಳ ಬಳಿ ಟ್ಯಾಬ್‌ಗಳ ಬಿಲ್ ಕೇಳಿದರು. ಅವರಿಗೆ ಟೆಕ್ನೋ ಇಲೆಕ್ಟ್ರಾನಿಕ್ಸ್ ಲಿ. ಎಂಬ ಹೆಸರಿನ ಬಿಲ್ ನೀಡಲಾಯಿತು. ಅವರು ಆ ಬಿಲ್‌ನಲ್ಲಿ ಬರೆದ ಫೋನ್ ನಂಬರ್‌ಗೆ ಕಾಲ್ ಮಾಡಿದರು. ಆವಾಗ ಆ ಕಂಪೆನಿ ಮಹಾನಗರ ಪಾಲಿಕೆಗೆ ಯಾವುದೇ ಟ್ಯಾಬ್ ನೀಡಿಲ್ಲವೆಂದು ತಿಳಿದು ಬಂತು.


ಸಯೀದಾ ಖಾನ್ ಅವರ ಪ್ರಶ್ನೆಗೆ ಮೇಯರ್ ಸ್ನೇಹಲ್ ಆಂಬೆಕರ್ ಪ್ರತಿಕ್ರಿಯಿಸುತ್ತಾ ನಿಯಮ 66ರ ಅಡಿಯಲ್ಲಿ ಎತ್ತಿದ ಪ್ರಶ್ನೆಗೆ ತನಿಖೆಗೆ ಆದೇಶ ನೀಡಲು ಸಾಧ್ಯವಿಲ್ಲ. ಕೇವಲ ಆಯುಕ್ತರು ಮಾತ್ರ ತನಿಖೆಗೆ ಆದೇಶ ನೀಡಬಹುದು ಎಂದರು. ವಿಪಕ್ಷ ಎಷ್ಟೇ ಗದ್ದಲ ಮಾಡಿದರೂ ತನಿಖೆಗೆ ಆದೇಶ ಸಿಗಲಿಲ್ಲ. ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಗಬೇಕಾದ 27 ವಸ್ತುಗಳ ಚರ್ಚೆ ನಡೆದಾಗ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ರಿತು ತಾವ್ಡೆ ಸಭಾಗೃಹದಲ್ಲಿ ಉಪಸ್ಥಿತರಿರಲಿಲ್ಲ.
* * *
ಔದ್ಯೋಗಿಕ ಮಾಲಿನ್ಯ ಪ್ರಮಾಣದಲ್ಲಿ ಇಳಿಕೆ
ಔದ್ಯೋಗೀಕರಣದ ಕಾರಣದಿಂದ ಸಂಭವಿಸುವ ಮಾಲಿನ್ಯದ ಪ್ರಮಾಣ ಮುಂಬೈಯಲ್ಲಿ ಪ್ರತೀ ವರ್ಷದ ತುಲನೆಯಲ್ಲಿ ಈ ವರ್ಷ 25ರಿಂದ 30 ಶೇಕಡಾ ಕಡಿಮೆಯಾಗಿದೆಯಂತೆ. ಇದರಿಂದಾಗಿ ಕಾರ್ಖಾನೆಗಳ ಪರಿಸರದಲ್ಲಿ ವಾಸಿಸುವ ಸ್ಥಳೀಯ ನಾಗರಿಕರಿಗೆ ಸಲ್ಫರ್ ಡೈ ಆಕ್ಸೈಡ್, ನೈಟ್ರೋಜನ್ ಡೈ ಆಕ್ಸೈಡ್, ಕಾರ್ಬನ್ ಮೋನೋ ಆಕ್ಸೈಡ್ ಈ ಮೂರು ಮಾಲಿನ್ಯಗಳಿಂದ ಒಂದಿಷ್ಟು ಮುಕ್ತಿ ಸಿಗುತ್ತಿದೆ ಎಂದು ಮುಂಬೈ ಮಹಾನಗರ ಪಾಲಿಕೆಯ ಪರ್ಯಾವರಣ ವಿಭಾಗ ಹೇಳಿಕೊಂಡಿದೆ.


ಮುಂಬೈಯಲ್ಲಿ ಪ್ರತೀ ವರ್ಷ ಔದ್ಯೋಗೀಕರಣದ ಭಾರೀ ಮಾಲಿನ್ಯದ ಕಾರಣದಿಂದ ಕಾರ್ಖಾನೆಗಳ ಪರಿಸರದಲ್ಲಿರುವ ಸ್ಥಳೀಯ ನಾಗರಿಕರು ಈ ತನಕ ಭಾರೀ ಸಮಸ್ಯೆ ಎದುರಿಸುತ್ತಿದ್ದರು. ಆದರೆ ಈ ವರ್ಷ ಅವರಿಗೆ ಸ್ವಲ್ಪನಿರಾಳತೆ ಸಿಕ್ಕಿದೆ. ಮನಪಾ ಪರ್ಯಾವರಣ ವಿಭಾಗದಿಂದ ದೊರೆತ ಮಾಹಿತಿಯಂತೆ ಸದ್ಯ ಮುಂಬೈ ಸಹಿತ ಪೂರ್ವ - ಪಶ್ಚಿಮ ಉಪನಗರಗಳಲ್ಲಿ 30 ಸಾವಿರದ 140 ಉದ್ಯಮ ಮತ್ತು ಕಾರ್ಖಾನೆಗಳಿವೆ. ಇವುಗಳಲ್ಲಿ ಅತೀ ಹೆಚ್ಚು 14,127 ಕಾರ್ಖಾನೆಗಳು ಪಶ್ಚಿಮ ಉಪನಗರಗಳಾದ ಅಂಧೇರಿ, ಮಲಾಡ್, ಕಾಂದಿವಲಿಗಳಲ್ಲಿ ಇವೆ. ಗೋರೆಗಾಂವ್‌ನಲ್ಲಿ 5,039 ದೊಡ್ಡ ಉದ್ಯೋಗ ಘಟಕಗಳಿವೆ. ಮುಂಬೈ ನಗರದಲ್ಲಿ 8,570 ಉದ್ಯಮಗಳಲ್ಲಿ ವರ್ಲಿ, ಪ್ರಭಾದೇವಿ, ಲೋವರ್ ಪರೇಲ್‌ಗಳಲ್ಲಿ ಹೆಚ್ಚಾಗಿವೆ. ಭೈಕಲಾ, ನಾಗ್‌ಪಾಡ ಮಜ್‌ಗಾಂವ್ ವಿಭಾಗಗಳಲ್ಲಿ 1,950 ಉದ್ಯಮಗಳಿವೆ.
ಕಳೆದ ಅನೇಕ ವರ್ಷಗಳಿಂದ ಮನಪಾ ಆಡಳಿತ ಕಾರ್ಖಾನೆಗಳ ಮಾಲಕರಿಂದ ವಾಯುಮಾಲಿನ್ಯ ತಡೆ ಶುಲ್ಕವನ್ನು ವಸೂಲಿ ಮಾಡುತ್ತದೆ. ಮನಪಾ ಈ ವರ್ಷ (2014-15) ಕಾರ್ಖಾನೆಗಳ ಮಾಲಕರಿಂದ ಶುಲ್ಕದ ರೂಪದಲ್ಲಿ 2,53,43,000 ರೂಪಾಯಿ ಆದಾಯ ಗಳಿಸಿದೆ. ಔದ್ಯೋಗೀಕರಣದ ಕಾರಣ ಉತ್ಪತ್ತಿಯಾಗುವ ಮಾಲಿನ್ಯದ ಪ್ರಮಾಣವನ್ನು ಮಹಾನಗರ ಪಾಲಿಕೆ ಪರ್ಯಾವರಣ ವಿಭಾಗವು ಮೂರು ಬಣ್ಣಗಳಲ್ಲಿ ವಿಂಗಡಿಸಿದೆ. ಹೆಚ್ಚು ಮಾಲಿನ್ಯ ಹರಡುವ ಕಾರ್ಖಾನೆಗಳಿಗೆ ಕೆಂಪು ಬಣ್ಣ, ಮಧ್ಯಮ ಪ್ರಮಾಣದ ಮಾಲಿನ್ಯಕ್ಕೆ ಕಿತ್ತಳೆ ಬಣ್ಣ ಮತ್ತು ಕಡಿಮೆ ಮಾಲಿನ್ಯ ಹರಡುವ ಕಾರ್ಖಾನೆಗಳಿಗೆ ಹಸಿರು ಬಣ್ಣ ನೀಡಿದೆ. ಮುಂಬೈ ನಗರದಲ್ಲಿ 8,570, ಪಶ್ಚಿಮ ಉಪನಗರಗಳಲ್ಲಿ 14,127 ಮತ್ತು ಪೂರ್ವ ಉಪನಗರಗಳಲ್ಲಿ 7,443 ಇಂತಹ ಕಾರ್ಖಾನೆಗಳನ್ನು ಗುರುತಿಸಲಾಗಿದೆ.
* * *
ಮನಪಾ ಮೈದಾನಗಳ ಕೆಳಗಡೆ ಅಂಡರ್ ಗ್ರೌಂಡ್ ಪಾರ್ಕಿಂಗ್
ಮುಂಬೈ ಮಹಾನಗರದಲ್ಲಿ ಮನೋರಂಜನಾ ಮೈದಾನಗಳ (ಆರ್.ಜಿ.) ಮತ್ತು ಕ್ರೀಡಾ ಮೈದಾನಗಳ (ಪಿ.ಜಿ.) ಕೆಳಗಡೆ ಅಂಡರ್‌ಗ್ರೌಂಡ್ ಪಾರ್ಕಿಂಗ್ ಯೋಜನೆಗಳ ರೂಪುರೇಷೆ ನಡೆಯುತ್ತಿದೆ. ಬಿಜೆಪಿ ಮನಪಾ ಆಡಳಿತದ ಬಳಿ ಈ ಬೇಡಿಕೆ ಇರಿಸಿದೆ. ಇದರ ಪ್ರಸ್ತಾವ ಮನಪಾ ಸದನದಲ್ಲಿ ಮಂಡಿಸಲಾಗಿದೆ. ಈ ವಿಷಯದಲ್ಲಿ ವಿಪಕ್ಷವೂ ಜೊತೆಗೂಡಿದೆ. ನಗರ ಉಪನಗರಗಳ 4 ಸಾವಿರ ಚದರ ಮೀಟರ್ ಇರುವ ಮೈದಾನಗಳಲ್ಲಿ ಅಂಡರ್‌ಗ್ರೌಂಡ್ ಪಾರ್ಕಿಂಗ್ ನಿರ್ಮಿಸಲಾಗುವುದು. ಮನಾಪದಲ್ಲಿ ಪ್ರಸ್ತಾವಕ್ಕೆ ಮಂಜೂರಾತಿ ಸಿಕ್ಕಿದ ನಂತರ ರಾಜ್ಯ ಸರಕಾರದ ಮಂಜೂರಾತಿಗಾಗಿ ಕಳುಹಿಸಲಾಗಿದೆ. ಮಂಜೂರು ಸಿಕ್ಕಿದರೆ ಮುಂಬೈಯ ಆರ್.ಜಿ ಮತ್ತು. ಪಿ.ಜಿ ಮೈದಾನಗಳಲ್ಲಿ ಅಂಡರ್‌ಗ್ರೌಂಡ್ ಪಾರ್ಕಿಂಗ್‌ಗಾಗಿ ಕೆಲಸ ನಡೆಯಲಿದೆ. ಇದರಿಂದಾಗಿ ಪಾರ್ಕಿಂಗ್‌ನ ಸಮಸ್ಯೆಗೆ ಒಂದಿಷ್ಟು ಸಮಾಧಾನ ಸಿಗಬಹುದಾಗಿದೆ.

ಮುಂಬೈ ಸಹಿತ ಪೂರ್ವ-ಪಶ್ಚಿಮ ಉಪನಗರಗಳಲ್ಲಿ ಚಿಕ್ಕದು ದೊಡ್ಡದು ಎಂದು 1,168 ಮೈದಾನಗಳಿವೆ. ಇವುಗಳಲ್ಲಿ ಅಂಡರ್‌ಗ್ರೌಂಡ್ ಪಾರ್ಕಿಂಗ್ ನಿರ್ಮಾಣ ಮಾಡಿದರೆ ಲಕ್ಷಗಟ್ಟಲೆ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.

Writer - ಶ್ರೀನಿವಾಸ ಜೋಕಟ್ಟೆ

contributor

Editor - ಶ್ರೀನಿವಾಸ ಜೋಕಟ್ಟೆ

contributor

Similar News

ನಾಸ್ತಿಕ ಮದ