ಶತಮಾನದ ಮಹೋನ್ನತ ಶೋಧ: ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಕ ಅಲೆಗಳ ಪತ್ತೆ

Update: 2016-02-11 18:36 GMT

ಕಪ್ಪುರಂಧ್ರಗಳ ಘರ್ಷಣೆಯಿಂದ ಅಗಾಧ ಶಕ್ತಿ ಉತ್ಪನ್ನ
 ವಾಶಿಂಗ್ಟನ್, ಫೆ.11: ಕೋಟ್ಯಂತರ ಬೆಳಕಿನ ವರ್ಷ ದೂರದಲ್ಲಿರುವ ಎರಡು ಕಪ್ಪುರಂಧ್ರಗಳು (ಬ್ಲಾಕ್‌ಹೋಲ್)ಗಳು ಒಂದನ್ನೊಂದು ಸುತ್ತುವರಿದು, ಢಿಕ್ಕಿ ಹೊಡೆದ ಸಂದರ್ಭದಲ್ಲಿ ಸೆಕೆಂಡ್ ಮಾತ್ರದಲ್ಲಿ ಅಪಾರ ಶಕ್ತಿ ಉತ್ಪನ್ನವಾಗಿ, ಗುರುತ್ವಾಕರ್ಷಕ ಕಂಪನಅಲೆಗಳು ಬರೋಬ್ಬರಿ 10.5 ಶತಕೋಟಿ ವರ್ಷಗಳಿಂದ ಬಾಹ್ಯಾಕಾಶದಲ್ಲಿ ಪ್ರಯಾಣಿಸುತ್ತಿರುವುದನ್ನು ಬಾಹ್ಯಾಕಾಶ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
 
ಬಾಹ್ಯಾಕಾಶದಲ್ಲಿ ಪತ್ತೆಯಾಗಿರುವ ಈ ಕಾಂತೀಯ ಅಲೆಗಳು ಐನ್‌ಸ್ಟೀನ್‌ನ ಸಾಪೇಕ್ಷ ಸಿದ್ಧಾಂತವನ್ನು ದೃಢಪಡಿಸಿವೆ. ಎರಡು ಕಪ್ಪು ರಂಧ್ರಗಳು ಪರಸ್ಪರ ಢಿಕ್ಕಿ ಹೊಡೆದಿರುವುದನ್ನು ವಿಜ್ಞಾನಿಗಳು ಇದೇ ಮೊದಲ ಬಾರಿಗೆ ಪತ್ತೆಹಚ್ಚಿದ್ದಾರೆ.ಸೂರ್ಯನಿಗಿಂತಲೂ ಹತ್ತು ಪಟ್ಟು ಭಾರವಿರುವ ಈ ಎರಡು ಕಪ್ಪುರಂಧ್ರಗಳು, ಪರಸ್ಪರ ಸುತ್ತುವರಿದು ಭೀಕರವಾಗಿ ಘರ್ಷಿಸಿದಂತಹ ವಿದ್ಯಮಾನವನ್ನು ವೀಕ್ಷಿಸಲು ವಿಜ್ಞಾನಿಗಳಿಗೆ ಹಿಂದೆಂದೂ ಸಾಧ್ಯವಾಗಿರಲಿಲ್ಲ. ಬಾಹ್ಯಾಕಾಶದಲ್ಲಿ ಬೆಳಕು ಕೂಡಾ ಹೊರಬರಲು ಸಾಧ್ಯವಿಲ್ಲದಷ್ಟು ಪ್ರಬಲವಾದ ಗುರುತ್ವಾಕರ್ಷಣಶಕ್ತಿಯಿರುವ ಪ್ರದೇಶಗಳನ್ನು ಕಪ್ಪುರಂಧ್ರಗಳೆಂದು ಕರೆಯಲಾಗುತ್ತದೆ.

ಇದೊಂದು ಈ ಶತಮಾನದ ಅತಿ ದೊಡ್ಡ ವೈಜ್ಞಾನಿಕ ಶೋಧವೆಂದು ಹಿರಿಯ ಬ್ರಿಟಿಷ್ ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಬಾಹ್ಯಾಕಾಶದಲ್ಲಿ ಗುಪ್ತವಾಗಿರುವ ಪ್ರದೇಶಗ ವೀಕ್ಷಣೆಗೆ ಹೊಸ ದಾರಿಗಳನ್ನು ಹುಡುಕಲು ಈ ಶೋಧ ನೆರವಾಗಲಿದೆಯೆಂದು ಅವರು ಅಭಿಪ್ರಾಯಿಸಿದ್ದಾರೆ.
  ಅಮೆರಿಕದ ಎರಡು ಖಗೋಳ ವೀಕ್ಷಣಾಲಯಗಳ ಅತಿ ಸಂವೇದನಾಕಾರಿ ಉಪಕರಣಗಳು, ಕಪ್ಪು ರಂಧ್ರಗಳ ಘರ್ಷಣೆಯಿಂದ ಉತ್ಪತ್ತಿಯಾದ ಕಂಪನ ಅಲೆಗಳನ್ನು ಪತ್ತೆಹಚ್ಚಿವೆ.
ಗುರುತ್ವಾಕರ್ಷಣ ಹಾಗೂ ಕಾಂತೀಯ ಅಲೆಗಳ ವೀಕ್ಷಣಾಲಯಗಳ ಜಾಲವೊಂದನ್ನು ನಿರ್ಮಿಸಲು ಈ ಶೋಧವು ನೆರವಾಗಲಿದೆ.ಕಪ್ಪು ರಂಧ್ರಗಳು ಹಾಗೂ ಇತರ ಬೃಹತ್ ಆಕಾಶ ಕಾಯಗಳ ನಡುವಿನ ಘರ್ಷಣೆಗಳ ಬಗ್ಗೆ ಅಧ್ಯಯನ ನಡೆಸಲು ಇದರಿಂದ ಸಾಧ್ಯವಾಗಲಿದೆ. ಅಷ್ಟೇ ಅಲ್ಲದೆ 13.7 ಶತಕೋಟಿ ವರ್ಷಗಳ ಹಿಂದೆ, ಸಂಭವಿಸಿದ ಮಹಾಸ್ಫೋಟ (ಬಿಗ್‌ಬ್ಯಾಂಗ್) ದ ಬಗೆಗೂ ವಿಜ್ಞಾನಿಗಳಿಗೆ ಅಪಾರ ಮಾಹಿತಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ.
 ಕಪ್ಪು ರಂಧ್ರಗಳ ಘರ್ಷಣೆಯಿಂದಾಗಿ ಉತ್ಪತ್ತಿಯಾದ ಕಾಂತೀಯಅಲೆಗಳನ್ನು ಜಿಡಬ್ಲು150914 ಎಂದು ವಿಜ್ಞಾನಿಗಳು ಅಧಿಕೃತವಾಗಿ ಹೆಸರಿಸಿದ್ದಾರೆ.ವಿಶ್ವದ ಕುರಿತಾದ ವೈಜ್ಞಾನಿಕ ಅನ್ವೇಷಣೆಯಲ್ಲಿ ಹೊಸ ಶಕೆಗೆ ಈ ಸಂಶೋಧನೆ ನಾಂದಿ ಹಾಡಲಿದೆಯೆಂದು ವಿಜ್ಞಾನಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News