ಒತ್ತೆಯಾಳುಗಳನ್ನು ಹೊರತಂದವರಿಗೆ 5 ದಶಲಕ್ಷ ಡಾಲರ್ ಬಹುಮಾನ : ನೆತನ್ಯಾಹು
ಜೆರುಸಲೇಂ : ಗಾಝಾದಲ್ಲಿರುವ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಹೊರತಂದರೆ 5 ದಶಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಗಾಝಾದಲ್ಲಿರುವ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಹೊರತರುವವರ ಮತ್ತು ಅವರ ಕುಟುಂಬದವರ ಸುರಕ್ಷತೆಯನ್ನು ನಾವು ಖಾತರಿಪಡಿಸುತ್ತೇವೆ. ಜತೆಗೆ ಬಿಡುಗಡೆಗೊಳಿಸಿದ ಪ್ರತೀ ಒತ್ತೆಯಾಳಿಗೆ ತಲಾ 5 ದಶಲಕ್ಷ ಡಾಲರ್ ನಂತೆ ಪುರಸ್ಕಾರ ದೊರೆಯುತ್ತದೆ ಎಂದವರು ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
ನಮ್ಮ ಒತ್ತೆಯಾಳುಗಳಿಗೆ ತೊಂದರೆ ನೀಡುವ ಧೈರ್ಯ ಮಾಡಿದವರು ಸತ್ತವರೆಂದು ಪರಿಗಣಿಸಲಾಗುತ್ತದೆ. ಅವರು ಎಲ್ಲಿಯೇ ಇದ್ದರೂ ಬೆನ್ನಟ್ಟಿ ಹಿಡಿಯುತ್ತೇವೆ ಎಂದು ನೆತನ್ಯಾಹು ಎಚ್ಚರಿಸಿದ್ದಾರೆ. ಗಾಝಾ ನಗರದ ದಕ್ಷಿಣದಲ್ಲಿರುವ ನೆಟ್‍ಝರಿಮ್ ಕಾರಿಡಾರ್ ಗೆ ಭೇಟಿ ನೀಡಿ ಇಸ್ರೇಲ್ ಸೈನಿಕರ ಜತೆ ಮಾತನಾಡಿದ ಅವರು ` ಗಾಝಾವನ್ನು ಹಮಾಸ್ ಆಳಬಾರದು ಎಂಬುದು ನಮ್ಮ ಯುದ್ಧದ ಮುಖ್ಯ ಗುರಿಯಾಗಿದೆ. ಒತ್ತೆಯಾಳುಗಳನ್ನು ಪತ್ತೆಹಚ್ಚಿ ಅವರನ್ನು ಮನೆಗೆ ತರುವ ಪ್ರಯತ್ನ ಮುಂದುವರಿದಿದೆ. ನಾವು ಕೈಚೆಲ್ಲುವುದಿಲ್ಲ. ಅವರನ್ನು ಜೀವಂತ ರಕ್ಷಿಸಲು ಸಾಧ್ಯವಾಗದಿದ್ದರ ಮೃತದೇಹವನ್ನಾದರೂ ಪತ್ತೆಹಚ್ಚುತ್ತೇವೆ' ಎಂದು ಹೇಳಿರುವುದಾಗಿ ವರದಿಯಾಗಿದೆ.