ಧ್ವಜ
ಅದೊಂದು ಊರು. ಅಲ್ಲಿ ಧ್ವಜವೇ ಧರ್ಮ. ಅಲ್ಲಿ ಒಂದೊಂದು ಸಮುದಾಯಕ್ಕೆ ಒಂದೊಂದು ಬಣ್ಣದ ಧ್ವಜ. ಕೇಸರಿ ಧ್ವಜದವರು, ಹಸಿರು ಧ್ವಜದವರು, ಕೆಂಪು ಧ್ವಜದವರು, ನೀಲಿ ಧ್ವಜದವರು, ಬಿಳಿ ಧ್ವಜದವರು....ಪ್ರತಿ ಮನೆ ಮನೆಯಲ್ಲಿ ಒಂದೊಂದು ಧ್ವಜ. ಕೇರಿಗೆ ಹಲವು ಧ್ವಜ. ಎಲ್ಲರೂ ತಮ್ಮ ತಮ್ಮ ಧ್ವಜ ಶ್ರೇಷ್ಠ ಎಂದು ಸಾರ್ವಜನಿಕವಾಗಿ ವಾದಿಸುತ್ತಿದ್ದರು. ಸಾರ್ವಜನಿಕವಾಗಿ ಧ್ವಜದ ಮೆರವಣಿಗೆ ಮಾಡುತ್ತಿದ್ದರು. ಧ್ವಜದ ಹಬ್ಬ ಮಾಡುತ್ತಿದ್ದರು. ತಮ್ಮ ತಮ್ಮ ಧ್ವಜದ ಶ್ರೇಷ್ಠತೆಗಾಗಿ ಹಿಂಸೆಗಿಳಿಯುತ್ತಿದ್ದರು. ಕೆಲವರು ಈ ಧ್ವಜಗಳ ಗಲಾಟೆಯನ್ನು ತಡೆಯಲು ಯತ್ನಿಸಿದರೂ ವಿಫಲರಾಗಿದ್ದರು.
‘‘ನೋಡಿ...ಎಲ್ಲ ಬಣ್ಣಗಳು ಅಂತಿಮವಾಗಿ ಒಂದೇ ಬಣ್ಣದಿಂದ ಸೃಷ್ಟಿಯಾಗಿವೆ. ಎಲ್ಲ ಧ್ವಜಗಳಿಗೆ ಬಳಸುವ ಬಟ್ಟೆ, ಬಟ್ಟೆಗೆ ಬಳಸುವ ನೂಲು ಎಲ್ಲವೂ ಒಂದೇ ಎಂದು ಸಮಾಧಾನಿಸಿದರೂ ಆಯಾ ಧ್ವಜಕ್ಕೆ ಸೇರಿದವರು ಒಪ್ಪುತ್ತಿರಲಿಲ್ಲ. ಹಲವರು ಈ ಧ್ವಜಗಳ ಬಗ್ಗೆ ನಂಬಿಕೆಯನ್ನು ಹೊಂದಿರಲಿಲ್ಲವಾದರೂ, ಇದನ್ನು ವಿರೋಧಿಸಲು ಅವರಿಗೆ ಧೈರ್ಯವಿರಲಿಲ್ಲ. ಆ ಊರಿನ ಕೆಲವು ತರುಣರು ಈ ಧ್ವಜಗಳ ಗಲಾಟೆಯಿಂದ ರೋಸಿ ಹೋಗಿ, ‘ನಮಗೆ ಯಾವುದೇ ಧ್ವಜವಿಲ್ಲ’ ಎಂದು ಒಂದು ಗುಂಪು ಕಟ್ಟಿಕೊಂಡರು. ಹಲವರು ಸಾರ್ವಜನಿಕವಾಗಿ ‘ನಾವು ಯಾವುದೇ ಧ್ವಜಕ್ಕೆ ಸೇರಿದವರಲ್ಲ’ ಎಂದು ಘೋಷಿಸಿದರು. ಹಾಗೇ ನಿಧಾನಕ್ಕೆ ಧ್ವಜವೇ ಇಲ್ಲದವರ ಗುಂಪು ಊರಲ್ಲಿ ಬೆಳೆಯತೊಡಗಿತು. ಈಗ ಧ್ವಜ ಮತ್ತು ಧ್ವಜವಿಲ್ಲದವರಿಗೆ ಘರ್ಷಣೆ ಶುರು ಹಚ್ಚಿತು. ಧ್ವಜವಿಲ್ಲದವರ ಸಂಖ್ಯೆ ಜಾಸ್ತಿಯಾಗತೊಡಗಿತು. ಒಂದು ದಿನ ಧ್ವಜವಿಲ್ಲದವರೆಲ್ಲ ಸಾರ್ವಜನಿಕವಾಗಿ ಸಮಾವೇಶ ಮಾಡಿದರು ‘‘ನಮ್ಮ ಮೇಲೆ ದೌರ್ಜನ್ಯ ಜಾಸ್ತಿಯಾಗುತ್ತಿದೆ. ನಾವೆಲ್ಲ ಒಂದಾಗಬೇಕು...’’ ಎಂದರು.
‘‘ಹೌದು...ನಾವು ಒಗ್ಗಟ್ಟಾಗಬೇಕು...ನಾವೆಲ್ಲ ಒಂದು ಧ್ವಜದ ಅಡಿಯಲ್ಲಿ ಸೇರಬೇಕು’’ ಕೆಲವರು ಸಲಹೆ ನೀಡಿದರು.
ಎಲ್ಲರೂ ಹೌದು ಎಂದರು. ಹಾಗೆ ಅವರೆಲ್ಲ ಸೇರಿ ತಮ್ಮದೇ ಚಿಂತನೆಗಳಿಗೆ ಪೂರಕವಾಗಿ ಒಂದು ಧ್ವಜವನ್ನು ಮಾಡಿಕೊಂಡರು.
ಆಮೇಲೆ ಆ ಧ್ವಜವನ್ನು ‘ಧ್ವಜವಿಲ್ಲದವರ ಸಮುದಾಯದ ಧ್ವಜ’ ಎಂದು ಊರು ಕರೆಯ ತೊಡಗಿತು.
ಈಗ ಧ್ವಜವಿದ್ದವರಿಗೂ, ಧ್ವಜವಿಲ್ಲದವರ ಧ್ವಜಕ್ಕೂ ಊರಲ್ಲಿ ದಿನಾ ಸಂಘರ್ಷ. ಕೆಲ ದಿವಸಗಳಾದ ಮೇಲೆ ಧ್ವಜವಿಲ್ಲದವರ ಧ್ವಜದೊಳಗೆ ಇನ್ನೊಂದು ಧ್ವಜ ಹುಟ್ಟಿ, ಧ್ವಜವಿಲ್ಲದವರ ಧ್ವಜದೊಳಗೇ ಗುಂಪುಗಳಾಗಿ ಊರ ತುಂಬಾ ಧ್ವಜಗಳೇ ಧ್ವಜಗಳು.