ಕ್ರೂರ , ಅಮಾನವೀಯ, ವಿಪತ್ತು ತೆರಿಗೆ ವಿಧಿಸ ಹೊರಟ ಸರಕಾರ
ಇತಿಹಾಸದಲ್ಲಿ ಎಂತೆಂಥ ಕ್ರೂರಾತಿಕ್ರೂರ ಪ್ರಭುತ್ವಗಳ ಬಗ್ಗೆ ನಾವು ಕೇಳಿದ್ದೇವೆ, ಓದಿದ್ದೇವೆ. ಕೆಳಜಾತಿಯ ಮಹಿಳೆಯರ ಸ್ತನದ ಮೇಲೆಯೇ ತೆರಿಗೆ ವಿಧಿಸಿದ ವಿಕೃತ ಅರಸರ ಬಗ್ಗೆಯೂ ಕೇಳಿದ್ದೇವೆ. ಆದರೆ ಜನತೆಯ ಸಂಕಟ, ನೋವು, ವಿಪತ್ತುಗಳ ಮೇಲೆಯೇ ತೆರಿಗೆ ವಿಧಿಸಿದ ರಾಜರು ಇತಿಹಾಸದಲ್ಲೂ ಆಗಿ ಹೋಗಿಲ್ಲ, ವರ್ತಮಾನದಲ್ಲಂತೂ ನಾವು ಕೇಳಿಲ್ಲ. ಆದರೆ ಅಂತಹ ‘ಅಚ್ಛೇ ದಿನ್’ ಕೂಡಾ ಭಾರತೀಯರಿಗೆ ಬಂದೊದಗಿದೆ. ನೀವು ನಂಬುತ್ತೀರೋ ನಿಮಗೆ ಬಿಟ್ಟ ವಿಚಾರ. ಕೇಂದ್ರದ ನರೇಂದ್ರ ಮೋದಿ ಸರಕಾರ ಸದ್ಯದಲ್ಲೇ ದೇಶವಾಸಿಗಳ ಮೇಲೆ ಶೇ.5 ವಿಪತ್ತು ತೆರಿಗೆ (ಜಿಛ್ಟಿ ಚ್ಡ) ಹೇರಲು ಸಜ್ಜಾಗಿದೆ. ನಾವು ಪಡೆಯುವ ಆರೋಗ್ಯ ಸೇವೆಗೆ ನಾವೇ ಭರಿಸುವ ದುಡ್ಡಿಗೆ + ಶೇ. 5 ವಿಪತ್ತು ತೆರಿಗೆಯನ್ನು ಭರಿಸಬೇಕಾದಂತಹ ನೂತನ ತೆರಿಗೆ ವಿಚಾರ ಸರಕಾರದ ಪ್ರಸ್ತಾವನೆಯಲ್ಲಿದೆ.
ಈ ನೂತನ ವಿಪತ್ತು ತೆರಿಗೆ ಒಮ್ಮೆ ಜಾರಿಗೆ ಬಂದರೆ ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರು 5,000 ದಿಂದ 10,000 ರೂ.ವರೆಗೆ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ತೆರಿಗೆಯ ರೂಪದಲ್ಲಿ ಕಟ್ಟಬೇಕು. ದುರದೃಷ್ಟಕ್ಕೆ ಯಾರಿಗಾದರೂ ಕ್ಯಾನ್ಸರ್‌ನಂತಹ ಭೀಕರ ಕಾಯಿಲೆ ಬಾಧಿಸಿದರೆ ಅದರ ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದರೆ ಕನಿಷ್ಠ 20,000 ರೂ. ಹೆಚ್ಚುವರಿಯಾಗಿ ವಿಪತ್ತು ತೆರಿಗೆ ಕಟ್ಟಬೇಕು. ಇದು ಕೇವಲ ಶಸ್ತ್ರಚಿಕಿತ್ಸೆಗಳಿಗೆ ಮಾತ್ರವಲ್ಲ. ಯಾವುದೇ ಉನ್ನತ ಮಟ್ಟದ ಚಿಕಿತ್ಸೆ ಪಡೆಯಬೇಕಾದರೂ ಒಟ್ಟು ಮೊತ್ತದ ಮೇಲೆ + ಶೇ.5 ವಿಪತ್ತು ತೆರಿಗೆ ಭರಿಸಲೇಬೇಕು.
ಮೋದಿ ಸರಕಾರ ನಮ್ಮ ಮೇಲೆ ಇಂತಹ ಕ್ರೂರ ಅಮಾನವೀಯ ತೆರಿಗೆ ವಿಧಿಸಿಯೂ ಬಡವರ ಕಣ್ಣೊರೆಸುವಂತಹ ನಾಟಕವಾಡುತ್ತಿದೆ. ಈ ತೆರಿಗೆ ಕೇವಲ ಐಷಾರಾಮಿ ಚಿಕಿತ್ಸೆಗಳಿಗೆ ಮಾತ್ರ ಎನ್ನುತ್ತದೆ. ಅರ್ಥಾತ್ ಹವಾನಿಯಂತ್ರಿತ ಕೊಠಡಿಯಲ್ಲಿ ನಡೆಸಲಾಗುವ ಚಿಕಿತ್ಸೆ/ ಶಸ್ತ್ರಚಿಕಿತ್ಸೆಗಳಿಗೆ ಮಾತ್ರ ಅನ್ವಯ ಎನ್ನುತ್ತದೆ. ಅಲ್ಲ ಸ್ವಾಮಿ ಕಾಯಿಲೆಗಳಿಗೆ ಪಡೆಯುವ ಚಿಕಿತ್ಸೆಯಲ್ಲೂ ಐಷಾರಾಮಿ ಮತ್ತು ಸಾಮಾನ್ಯ ಎಂಬ ವಿಂಗಡಣೆ ಎಲ್ಲಾದರೂ ಇದ್ದರೆ ನಮ್ಮ ಮಹಾನ್ ದೇಶದಲ್ಲಿ ಮಾತ್ರ. ವೈದ್ಯಕೀಯ ಕಾನೂನುಗಳ ಪ್ರಕಾರ ಶಸ್ತ್ರಚಿಕಿತ್ಸಾ ಕೊಠಡಿಯನ್ನು (ಮೇಜರ್ ಆಪರೇಷನ್ ಥಿಯೇಟರ್) ಮತ್ತು ರಕ್ತ ನಿಧಿಯನ್ನು (ಬ್ಲಡ್ ಬ್ಯಾಂಕ್) ಹವಾನಿಯಂತ್ರಕದ ಹೊರತಾಗಿ ನಡೆಸಲು ಸಾಧ್ಯವೇ ಇಲ್ಲ.
ನಮ್ಮ ಸರಕಾರವು ನಮ್ಮ ಜಿಡಿಪಿಯ ಒಂದು ಶೇಕಡಾಕ್ಕಿಂತಲೂ ಕಡಿಮೆ ಮೊತ್ತವನ್ನು ಆರೋಗ್ಯ ಸೇವೆಗಳಿಗೆ ಬಳಸುತ್ತಿದೆ ಎಂದರೆ ಆಶ್ಚರ್ಯಪಡಬೇಕಾಗಿಲ್ಲ. ಇದಕ್ಕಿಂತಲೂ ಕಡಿಮೆ ಮೊತ್ತವನ್ನು ಆರೋಗ್ಯ ಸೇವೆಗಳಿಗೆ ಬಳಸುವ ಜಗತ್ತಿನ ಏಕೈಕ ಸರಕಾರ ನರೇಂದ್ರ ಮೋದಿಯ ಖಾಸಾ ದೋಸ್ತ್ ಪಾಕಿಸ್ತಾನದ ನವಾಝ್ ಶರೀಫ್ ಸರಕಾರ.
ನಮ್ಮ ದೇಶದಲ್ಲಿ ಶೇ.80ರಷ್ಟು ಜನರು ಆರೋಗ್ಯ ಸೇವೆಯನ್ನು ಖಾಸಗಿ ಆಸ್ಪತ್ರೆಗಳಲ್ಲೇ ಪಡೆಯುತ್ತಾರೆ. ದೇಶದ ನಾಗರಿಕರಿಗೆ ಕೈಗೆಟಕುವ ದರದಲ್ಲಿ ಅಥವಾ ಉಚಿತವಾಗಿ ಆರೋಗ್ಯ ಸೇವೆಯನ್ನು ನೀಡುವುದು ಯಾವುದೇ ಪ್ರಜಾಸತ್ತಾತ್ಮಕ ಸರಕಾರದ ಕರ್ತವ್ಯವಾಗಿದೆ. ಕೈಗೆಟಕುವ ದರದಲ್ಲೋ, ಉಚಿತವಾಗಿ ನೀಡುವುದೋ ಒತ್ತಟ್ಟಿಗಿರಲಿ. ಜನರು ಆರೋಗ್ಯ ಸೇವೆ ಪಡೆಯುವಾಗ ಬಳಸುವ ಯಾವುದೇ ಔಷಧಿಗಳಿಗೆ, ಪರೀಕ್ಷೆಗಳಿಗೆ ಮೊದಲೇ ಇನ್‌ಕ್ಲೂಡೆಡ್ ಟ್ಯಾಕ್ಸ್ ಭರಿಸುತ್ತಾರೆ. ಅದರ ಮೇಲೆ ಮತ್ತೆ ಹೆಚ್ಚುವರಿಯಾಗಿ ಶೇ.5 ತೆರಿಗೆ ವಿಧಿಸುವುದು ಯಾವ ನ್ಯಾಯ....? ಈಗಾಗಲೇ ಕಿರು ಆರೋಗ್ಯ ವಿಮೆಯ ಮೇಲೆ (micro health insurance) ಶೇ.8 ತೆರಿಗೆಯನ್ನು ವಿಧಿಸಲಾಗುತ್ತಿದೆ. ಆರೋಗ್ಯ ರಕ್ಷಣೆ ಮನುಷ್ಯನ ಮೂಲಭೂತ ಅಗತ್ಯ ಮಾತ್ರವಲ್ಲದೆ ಮಾನವ ಹಕ್ಕು ಕೂಡಾ ಹೌದು. ದೇಶವಾಸಿಗಳ ಆರೋಗ್ಯ ರಕ್ಷಣೆ ಸರಕಾರದ ಕರ್ತವ್ಯವೂ ಕೂಡಾ ಹೌದು. ಅದು ಯಾವುದೇ ಸರಕಾರ ತನ್ನ ಪ್ರಜೆಗಳಿಗೆ ನೀಡುವ ಭಿಕ್ಷೆಯಲ್ಲ.
ಗಗನಕ್ಕೇರುತ್ತಿರುವ ಜೀವರಕ್ಷಕ ಔಷಧಿಗಳ ಬೆಲೆ, ಮಾರಾಟ ತೆರಿಗೆ, ವಿದೇಶಗಳಿಂದ ಆಮದು ಮಾಡುವ ಔಷಧಿಗಳ ಮೇಲಿನ ಕಸ್ಟಮ್ಸ್ ಡ್ಯೂಟಿ, ಎಂಟ್ರಿ ಟ್ಯಾಕ್ಸ್, ವೌಲ್ಯ ವರ್ಧಿತ ತೆರಿಗೆ (ವ್ಯಾಟ್) ವಿದ್ಯುಚ್ಛಕ್ತಿಯ ಬೆಲೆ ಇತ್ಯಾದಿಗಳಿಂದಾಗಿ ಆಸ್ಪತ್ರೆಗಳು ತಮ್ಮ ದರದಲ್ಲೂ ವಿಪರೀತ ಏರಿಕೆ ಮಾಡುವುದರಿಂದ ಗುಣಮಟ್ಟದ ಆರೋಗ್ಯ ಸೇವೆ ನಮ್ಮ ದೇಶದ ಬಹುವಂಶ ನಾಗರಿಕರಿಗೆ ಗಗನಕುಸುಮವಾಗಿದೆ. ತಮ್ಮ ಹೆಂಡತಿ ಮಕ್ಕಳ ಜೀವ ಉಳಿಸಲಿಕ್ಕಾಗಿ ಈ ದೇಶದ ಅಸಂಖ್ಯ ಜನ ತಮ್ಮ ಮನೆಮಠಗಳನ್ನು ಮಾರಿ ವಸತಿ ಹೀನರಾಗುತ್ತಿದ್ದಾರೆ, ಸಾಲಗಾರರಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಎಂತಹ ಕಟುಕನೂ ಜನತೆಯ ಗಾಯದ ಮೇಲೆ ಬರೆ ಎಳೆಯುವ ವಿಪತ್ತು ತೆರಿಗೆ ವಿಧಿಸಲಾರ. ಆದರೆ ನಮ್ಮ ಮೋದಿ ಸರಕಾರವು ಅವೆಲ್ಲವನ್ನೂ ಮೀರಿ ಹೃದಯಹೀನವಾಗಿದೆ.
ನಮ್ಮ ಜನಸಂಖ್ಯೆಯ ಶೇ.10ಕ್ಕಿಂತಲೂ ಕಡಿಮೆ ಜನತೆಗೆ ಮಾತ್ರ ಹೃದಯ, ಮೆದುಳು, ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿದೆ. ಇದರಿಂದಾಗಿ ಜಗತ್ತಿನಲ್ಲಿ ಅತೀ ಹೆಚ್ಚು ವಿಧವೆಯರನ್ನು ಮತ್ತು ಅನಾಥ ಮಕ್ಕಳನ್ನು ಹೊಂದಿದ ದೇಶವಾಗಿ ಭಾರತ ಮುಂಚೂಣಿಯಲ್ಲಿದೆ.
ಈ ವಿಪತ್ತು ತೆರಿಗೆಯನ್ನು ವಿರೋಧಿಸಿ ದೇಶದ ಹೆಮ್ಮೆಯ ಕನ್ನಡಿಗ ವೈದ್ಯ ಡಾ.ದೇವಿಶೆಟ್ಟಿಯವರು ಮಾರ್ಚ್ 12 ರಂದು ಎಲ್ಲ ರಾಜ್ಯಗಳ ರಾಜ್ಯಪಾಲರ ಮನೆಯ ಮುಂದೆ ಜಿಛ್ಟಿ ಈ (ವಿಪತ್ತು ದಿನ) ಆಚರಿಸಲು ಕರೆಕೊಟ್ಟಿದ್ದಾರೆ. ಡಾ ದೇವಿಶೆಟ್ಟಿಯವರ ಈ ಜನಪರ ಹೋರಾಟದಲ್ಲಿ ನಾವೆಲ್ಲಾ ಕೈ ಜೋಡಿಸಬೇಕಾಗಿದೆ. ಯಾವುದೇ ಕಾರಣಕ್ಕೂ ದೇಶದ ಜನತೆಯ ಮೇಲೆ ಹೇರಲಾಗುವ ಕ್ರೂರ ಅಮಾನವೀಯ ವಿಪತ್ತು ತೆರಿಗೆಯನ್ನು ಹಿಂದೆಗೆಸಬೇಕಾಗಿದೆ.