ಯುದ್ಧ

Update: 2016-03-07 11:17 GMT

ಒಂದು ರಾತ್ರಿ, ಅರಮನೆಯಲ್ಲಿ ಔತಣಕೂಟ ಭರ್ಜರಿಯಾಗಿ ನಡೆದಿತ್ತು. ಆಗ ಅಲ್ಲಿಗೆ ಒಬ್ಬ ವ್ಯಕ್ತಿ ಬಂದ. ಬಂದವನೇ ಮಹಾರಾಜರಿಗೆ ದೀರ್ಘ ದಂಡ ನಮಸ್ಕಾರ ಮಾಡಿದ. ಔತಣದಲ್ಲಿ ಊಟ ಮಾಡುತ್ತಿದ್ದ ಅತಿಥಿಗಳೆಲ್ಲ ಈ ವ್ಯಕ್ತಿಯತ್ತ ದೃಷ್ಟಿ ಹರಿಸಿದರು. ವ್ಯಕ್ತಿಯ ಒಂದು ಕಣ್ಣು ಗುಡ್ಡೆ ಹೊರಬಂದಿದ್ದು, ಕಣ್ಣು ಕುಳಿಯಿಂದ ರಕ್ತ ಹರಿಯುತ್ತಿತ್ತು.

‘ಏನಾಯಿತು?’

-ಮಹಾರಾಜರು ಕೇಳಿದರು. ವ್ಯಕ್ತಿ ಹೇಳಿದ: ‘‘ಮಹಾಪ್ರಭು, ವೃತ್ತಿಯಿಂದ ನಾನೊಬ್ಬ ಕಳ್ಳ. ಈ ರಾತ್ರಿ ಚೋರವೃತ್ತಿಗೆ ಹೊರಟಾಗ ಬೆಳದಿಂಗಳು ಇರಲಿಲ್ಲ. ಬೆಳದಿಂಗಳಿಲ್ಲದ ಕಾರಿರುಳಾದ್ದರಿಂದ ನಾಣ್ಯ ವಿನಿಮಯಗಾರನೊಬ್ಬನ ಅಂಗಡಿ ಕಳವು ಮಾಡಲು ಹೊರಟೆ. ಕಟ್ಟಡದ ಗೋಡೆ ಹತ್ತಿ ಕಿಟಕಿಯಿಂದ ಅಂಗಡಿಯೊಳಕ್ಕೆ ಇಳಿಯುವಾಗ ತಪ್ಪಾಗಿ ಹೋಯಿತು. ನಾಣ್ಯ ವಿನಿಮಯಗಾರನ ಅಂಗಡಿ ಬದಲು ನೇಕಾರನ ಅಂಗಡಿಯ ಒಳಹೊಕ್ಕಿದ್ದೆ. ಕತ್ತಲಲ್ಲಿ ಕಾಣದೆ ಮಗ್ಗಕ್ಕೆ ಢಿಕ್ಕಿ ಹೊಡೆದೆ. ಮಗ್ಗದ ಕಾವು ಚುಚ್ಚಿ ನನ್ನ ಕಣ್ಣುಗುಡ್ಡೆ ಕಿತ್ತು ಬಂತು. ಆದ್ದರಿಂದ ಮಹಾಪ್ರಭುಗಳು ನೇಯ್ಗೆಯವನಿಂದ ನನಗೆ ನ್ಯಾಯ ದೊರಕಿಸಿಕೊಡಬೇಕು.’’

ಮಹಾರಾಜರು ನೇಯ್ಗೆಯವನಿಗೆ ಹೇಳಿ ಕಳುಹಿಸಿದರು. ನೇಕಾರ ಬಂದ. ಅವನ ಒಂದು ಕಣ್ಣು ಕೀಳುವಂತೆ ಮಹಾರಾಜರು ತೀರ್ಪುಕೊಟ್ಟರು.

ನೇಕಾರ ಮಹಾರಾಜರಲ್ಲಿ ಈ ರೀತಿ ಮನವಿ ಮಾಡಿಕೊಂಡ:

‘‘ಮಹಾಪ್ರಭು, ತಮ್ಮ ತೀರ್ಪು ನ್ಯಾಯಯುತವಾಗಿಯೇ ಇದೆ. ನನ್ನ ಒಂದು ಕಣ್ಣನ್ನು ಕೀಳುವುದು ಸರಿಯೇ ಸರಿ. ಆದರೆ ನನ್ನ ವೃತ್ತಿ ಪಾಲನೆಗೆ ನನಗೆ ಎರಡೂ ಕಣ್ಣುಗಳ ಆವಶ್ಯಕತೆ ಇದೆ. ನೇಯುವಾಗ ಬಟ್ಟೆಯ ಎರಡೂ ಬದಿಗಳನ್ನು ನೋಡಲು ನನಗೆ ಎರಡೂ ಕಣ್ಣುಗಳು ಬೇಕೇ ಬೇಕು. ನನ್ನ ಪಕ್ಕದಂಗಡಿಯಲ್ಲಿ ಮೋಚಿಯೊಬ್ಬ ಇದ್ದಾನೆ. ಅವನಿಗೆ ಎರಡು ಕಣ್ಣುಗಳಿವೆ. ಅವನ ವೃತ್ತಿಗೆ ಎರಡು ಕಣ್ಣುಗಳ ಆವಶ್ಯಕತೆ ಇಲ್ಲ.’’

ಆಗ ಮಹಾರಾಜರು ಮೋಚಿಗೆ ಹೇಳಿ ಕಳುಹಿಸಿದರು. ಮೋಚಿ ಬಂದ. ಮೋಚಿಯ ಎರಡು ಕಣ್ಣುಗಳಲ್ಲಿ ಒಂದನ್ನು ಕಿತ್ತರು.

ನ್ಯಾಯದೇವತೆಗೆ ತೃಪ್ತಿಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಬೆಲೆ
ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಪ್ರಾರ್ಥನೆ
ಗೊಂದಲ!
ಆ ಚಿಂತಕ!