ಎಪ್ರಿಲ್ ಫೂಲ್ ಎಂಬ ಆಚರಣೆ; ಮೂರ್ಖತನದ ಪರಮಾವಧಿ

Update: 2016-03-30 13:08 GMT

ಇನ್ನೇನು ಎಪ್ರಿಲ್1 ಬಂದೇ ಬಿಟ್ಟಿತು.ಮೂರ್ಖ ಜನ ಸೇರಿ ಆಚರಿಸುವ ಮೂರ್ಖರ ದಿನಾಚರಣೆ ಇದು. ಪಾಶ್ಚಾತ್ಯೀಕರಣದ ಭರಾಟೆಯಲ್ಲಿ ಇಂದು ನಾವು ಅವರ ಗುಲಾಮರಂತೆ ವರ್ತಿಸುತ್ತಿದ್ದೇವೆ.ಆಂಗ್ಲರ 150 ವರ್ಷಗಳ ಗುಲಾಮಗಿರಿಯ ಸಂಕೇತವಾಗಿ ಅಂಗ್ಲರು ಭಾರತ ಬಿಟ್ಟುತೊಲಗಿದರೂ ಅವರ ಕೆಲವು ಅನಿಷ್ಠ ಆಚರಣೆಗಳು ಇನ್ನೂ ನಮ್ಮಿಂದ ತೊಲಗುತ್ತಿಲ್ಲ. ಅಥವಾ ಭಾರತೀಯರಾದ ನಾವು ಇನ್ನೂಗುಲಾಮಗಿರಿಯ ವೃತ್ತದಲ್ಲೇ ಗಿರಕಿ ಹಾಕುತ್ತಿದ್ದು ಬ್ರಿಟೀಷರ ಕೆಲವು ಅನಿಷ್ಠಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ನಮ್ಮದೇಎನ್ನುವಂತೆಆಚರಿಸುತ್ತಿದ್ದೇವೆ. ಪ್ರೇಮಿಗಳ ದಿನ, ಮೂರ್ಖರ ದಿನ ಇತ್ಯಾದಿ. .

ಎಪ್ರಿಲ್ 1 ರಂದು ನಾವೂ ಬಹಳ ನಿಷ್ಟೆಯಿಂದಲೇ ಮೂರ್ಖರ ದಿನವನ್ನು ಆಚರಿಸಿ ನಾವೂ ಕೂಡಯಾವುದೇ ಮೂರ್ಖರಿಗಿಂತ ಕಮ್ಮಿಯೇನಲ್ಲ ಎನ್ನುವುದನ್ನು ಸಾಬೀತು ಮಾಡುತ್ತಿದ್ದೇವೆ. ಕೆಲವೊಂದು ಆಚರಣೆಗಳು ನಮಗೆ ಹಿಡಿಸದಿದ್ದರೂ ನಾವು ಅದನ್ನು ಮಾಡುತ್ತೇವೆ. ಹೀಗೆ ಮಾಡುವುದು ಸಭ್ಯ ನಾಗರೀಕರ ಲಕ್ಷಣಎಂದೂ ನಾವು ತಿಳಿದುಕೊಂಡಂತಿದೆ.ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಯುವ ಜನತೆ ಇಂತಹ ಅನಿಷ್ಠ ಅಚರಣೆಗಳ ಹಿಂದೆ ಬಿದ್ದಿದ್ದಾರೆ.ಸದಾ ಮೋಜು ಮಸ್ತಿಯಲ್ಲಿ ಕಾಲ ಕಳೆಯುತ್ತಿರುವ ಯುವಜನಾಂಗಕ್ಕೆ ನಮ್ಮ ಭಾರತೀಯ ಸಂಸ್ಕೃತಿಯ ಅರಿವು ಮೂಡಿಸುವುದು ಕಾಲದ ಬೇಡಿಕೆಯಾಗಿದೆ.ಮೂರ್ಖರ ದಿನವೆಂದು ಆಚರಿಸಲ್ಪಡುವ ಎಪ್ರಿಲ್ ಫೂಲ್‌ ಯಾಕಾಗಿ ಆಚರಿಸುತ್ತಾರೆ ಅದರ ಹಿಂದಿನ ಉದ್ದೇಶವೇನು? ಇದರಿಂದ ನಮಗೇನು ಪ್ರಯೋಜನ? ಎನ್ನುವ ಪ್ರಾಥಮಿಕ ಜ್ಞಾನವು ನಮ್ಮಲ್ಲಿಲ್ಲ. ಎಲ್ಲರೂ ಆಚರಿಸುತ್ತಾರೆ ನಾವು ಆಚರಿಸೋಣ ಎನ್ನುವ ಮನೋಭಾವ ನಮ್ಮಲ್ಲಿ ಬಂದು ಬಿಟ್ಟಿದ್ದು ಇದರ ಸಾಧಕ ಬಾಧಕಗಳೇನು? ಇದರ ಸತ್ಯಾಸತ್ಯತೆ ಏನು? ಏತಕ್ಕಾಗಿಇಂತಹ ದಿನಗಳು ಆಚರಿಸುತ್ತಾರೆ ಎನ್ನುವ ಪ್ರಶ್ನೆಗೆ ನಮ್ಮಲ್ಲಿ ಯಾವುದೇ ಉತ್ತರವಿಲ್ಲ. ನಮ್ಮದೇ ಅಂತ್ಯಕ್ಕಾಗಿ ನಾವು ವೇದಿಕೆಯನ್ನು ಸಿದ್ದಗೊಳಿಸಿಕೊಳ್ಳುತ್ತಿದ್ದೇವೆ.

ಎಪ್ರಿಲ್ ಪೂರ್ತಿ ಸುಳ್ಳನ್ನು ಹೇಳುವ, ಮೋಸ, ವಂಚನೆಯಿಂದ ಕೂಡಿರುವ ತಿಂಗಳಾಗಿದ್ದು, ಇದು ಮಾನವೀಯತೆ, ನೈತಿಕತೆಯ ವಿರುದ್ಧ ಆಡುವ ಒಂದು ಮೋಸದಾಟವಾಗಿದೆ.ತಿಂಗಳಪೂರ್ತಿ ಎಂತೆಂತಹ ಸುಳ್ಳು ಹಣೆಯಲಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.ಆ ದಿನ ಎಂತಹ ನಿಷ್ಕರುಣೆಯಿಂದ ಚೇಷ್ಟೆ, ಅಪಹಾಸ್ಯ ಮಾಡಲಾಗುತ್ತದೆ ಎನ್ನುವುದು ನಿಮಗೆಲ್ಲರಿಗೂ ತಿಳಿದ ವಿಷಯ.ಸುಮ್ಮನೆ ಚೇಷ್ಟೆ ಮಾಡುವುದಕ್ಕಾಗಿ ಬೇರೊಬ್ಬರನ್ನು ತೊಂದರೆ ಕೊಡುವುದು, ತುಂಟಾಟ ಮಾಡುವುದು ಎಷ್ಟು ಸರಿ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕಾಗಿದೆ.ಎಪ್ರಿಲ್ 1ನೇ ತಾರಿಕು ಬೆಳಿಗ್ಗೆಯೇ ಮುಬೈಲ್‌ ರಿಂಗಣಿಸುತ್ತದೆ.ಮನೆಯಲ್ಲಿ ಪತಿರಾಯ ಇಲ್ಲ. ಮಹಿಳೆಯೊಬ್ಬಳು ಮುಬೈಲ್ ಸ್ವೀಕರಿಸಿ ಅಘಾತಕ್ಕೊಳಗಾಗುತಾಳೆ. ಆ ಕಡೆಯಿಂದ ಕೇಳಿ ಬಂದ ದ್ವನಿ ಏನು ಗೊತ್ತೆ? ನಿಮ್ಮ ಗಂಡನ ಅಪಘಾತವಾಗಿದೆ ಕೂಡಲೆ ಆಸ್ಪತ್ರೆಗೆ ಹೋಗಿ ಎಂದಾಗಿರುತ್ತದೆ. ಇದನ್ನು ಕೇಳಿದ ಯಾವ ಪತ್ನಿಗೆ ಶಾಕ್‌ ಆಗದಿರಲಾರದು ನೀವೆ ಹೇಳಿ ನೋಡೋಣ? ನೌಕರಿಯ ನೀರಿಕ್ಷೆಯಲ್ಲಿರುವ ವ್ಯಕ್ತಿಗೆಯಾರೋ ಫೋನ್ಮಾಡಿ ಹೇಳುತ್ತಾರೆ.ನಿಮಗೆ ನಮ್ಮಕಂಪನಿಯಲ್ಲಿ ನೇಮಕವಾಗಿದೆ ಕೂಡಲೆ ನೀವು ಬೆಂಗಳೂರಿಗೆ ಬನ್ನಿ. ಕೆಲ ಸಮಯ ಅವನು ಸಂತೋಷಗೊಂಡರೂ ನಂತರ ಅದು ಸುಳ್ಳು ಎಂದು ತಿಳಿದಾಗ ಅವನ ಮನಸ್ಸಿಗೆ ಎಷ್ಟು ನೋವಾಗಬಹುದು.ಸ್ವಲ್ಪ ಯೋಚಿಸಿ ಆ ಜಾಗದಲ್ಲಿ ಒಂದುವೇಳೆ ನಾನಿದ್ದರೆ?ಎನ್ನುವುದನ್ನು ಕಲ್ಪಿಸಿಕೊಳ್ಳಿ.

ಮೂರ್ಖಎನ್ನುವ ಪದಕ್ಕೆ ಶಬ್ದಕೋಶದಲ್ಲಿ ಅವಿವೇಕ, ಹೆಡ್ಡ, ತಿಳಿಗೇಡಿ, ಪೆದ್ದು, ಮೂಢ, ದಡ್ಡ, ಎಂಬೆಲ್ಲ ಅರ್ಥ ನೀಡಲಾಗಿದೆ. ಹಾಗಾದರೆ ಈ ದಿನವನ್ನು ಆಚರಿಸುವ ನಾವೆ, ಅವಿವೇಕಿಗಳ? ತಿಳಿಗೇಡಿಗಳ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತವೆ. ನೈಜ ಸಂಗತಿ ಎಂದರೆ ಇಂತಹ ದಿನವನ್ನು ಯಾರು ಆಚರಿಸುತ್ತಾರೋ ಅವರೇ ಪೆದ್ದುಗಳು ಮಾತ್ರವಲ್ಲ ಮೂಢರುಕೂಡ.ಇಂತಹ ದಿನಗಳಿಗೆ ಯಾವುದೇಧಾರ್ಮಿಕ ಹಿನ್ನೆಲೆಯಿಲ್ಲ. ಭಾರತೀಯ ಇತಿಹಾಸದಲ್ಲಿ ಇದಕ್ಕೆಯಾವುದೇ ಪುರಾವೆನೂ ಇಲ್ಲ.

ಮೂರ್ಖರ ದಿನಾಚರಣೆ ಎಂದಿನಿಂದಯಾರಿಂದ ಏಕೆ ಶುರುವಾಯಿತು ಎಂಬ ಬಗ್ಗೆ ಸ್ಪಷ್ಟ ಪುರಾವೆಗಳು ಸಿಕ್ಕಿಲ್ಲ. ಆದರೆ 16ನೆಯ ಶತಮಾನದಲ್ಲಿ ನಡೆದ ಪಂಚಾಂಗ ಪದ್ಧತಿ ಬದಲಾವಣೆಯೇ ಇದಕ್ಕೆ ಕಾರಣವೆಂದು ಸಾಮಾನ್ಯವಾಗಿ ನಂಬಲಾಗಿದೆ.ರೋಮನ್ ಕಾಲದಿಂದಲೂ ನೂತನ ವರ್ಷದ ಆಚರಣೆಯನ್ನು ಮಾರ್ಚ್ 25 ರಿಂದ ಪ್ರಾರಂಭಿಸಿ, ಒಂದು ವಾರದ ವರೆಗೆ ಆಚರಿಸಿ, ಏಪ್ರಿಲ್ 01ರಂದು ಮುಕ್ತಾಯಗೊಳಿಸುತಿದ್ದರು.ಫ್ರಾನ್ಸಿನ ದೊರೆ ಒಂಭತ್ತನೆಯ ಚಾರ್ಲ್ಸ್ 1582 ರಲ್ಲಿ ಹೊಸ ಗ್ರೆಗೋರಿಯನ್‌ ಕ್ಯಾಲೆಂಡರ್ ಪದ್ಧತಿ ಘೋಷಿಸಿದ. ಹೊಸ ಪಂಚಾಂಗ ಪದ್ಧತಿ ಪ್ರಕಾರಜನವರಿ 01, ನೂತನ ವರ್ಷದ ದಿನವಾಗಿತ್ತು. ಹಲವಾರು ಜನರಿಗೆ ಈ ಘೋಷಣೆ ತಲುಪಲಿಲ್ಲ ಹಾಗೂ ಅವರು ಸಂಪ್ರದಾಯ ಮುರಿಯಲು ನಿರಾಕರಿಸಿದರು ಎನ್ನಲಾಗಿದೆ. ಇಂಥವರನ್ನು ’ಮೂರ್ಖರು’ ಎಂದು ಗೇಲಿ ಮಾಡಿ ಏಪ್ರಿಲ್ 01 ಅನ್ನುಅವರ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಎಂದು ವಿಕಿವಾಂಡ್‌ ಎಂಬ ಜಾಲಾತಾಣದಲ್ಲಿ ಮಾಹಿತಿಇದೆ.

ಮೂರ್ಖರ ದಿನಾಚರಣೆಗೆ ಆಧಾರ ಏನೆ ಇರಲಿ, ಇದು ಮನುಷ್ಯ ವಿರೋಧಿ, ಅನೈತಿಕ ಪದ್ದತಿಯಾಗಿದೆ ಎನ್ನುವುದು ದಿಟ. ಈ ನಿಟ್ಟಿನಲ್ಲಿ ಪಾಶ್ಚಾತ್ಯರ ಅನುಕರಣೆಯಿಂದ ಹೊರಬಂದು ನಮ್ಮ ದೇಶಿಯ ಸಂಸ್ಕೃತಿ, ಸ್ವಾಭಿಮಾನವನ್ನು ಬೆಳೆಸಿಕೊಂಡು ಉತ್ತಮ ನಾಗರೀಕರಾಗಿ ಬಾಳೋಣ ಎನ್ನುವುದೇ ನಮ್ಮೆಲ್ಲರ ಆಶಯವಲ್ಲವೇ?

Writer - ಎಂ.ಆರ್.ಮಾನ್ವಿ

contributor

Editor - ಎಂ.ಆರ್.ಮಾನ್ವಿ

contributor

Similar News