ಕೊಹಿನೂರ್ ಅಷ್ಟೇ ಅಲ್ಲ... ಇನ್ನೂ ನಾಲ್ಕು ಇವೆಯಲ್ಲ!
ಜಗದ್ವಿಖ್ಯಾತ ಕೊಹಿನೂರ್ ವಜ್ರವನ್ನು ಭಾರತ ವಾಪಸು ಪಡೆದೀತೇ? 13ನೆ ಶತಮಾನದ ಈ ವಿವಾದಾತ್ಮಕ ಅಮೂಲ್ಯ ಹರಳನ್ನು ಬ್ರಿಟಿಷರು ಪಂಜಾಬ್‌ನ ಮಹಾರಾಜ ದಿಲೀಪ್ ಸಿಂಗ್ ಅವರಿಂದ 1850ರಲ್ಲಿ ಪಡೆದಿದ್ದರು. ದೇಶದ ಖಜಾನೆಗೆ ಸಾಮ್ರಾಜ್ಯಶಾಹಿಗಳು ಮರಳಿಸಬೇಕಾದ ವಸ್ತುಗಳ ಪಟ್ಟಿಯಲ್ಲಿ ಇದಕ್ಕೆ ಸದಾ ಅಗ್ರಸ್ಥಾನ.
ಕಳೆದ ವರ್ಷ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಆಕ್ಸ್‌ಫರ್ಡ್‌ನಲ್ಲಿ ಮಾಡಿದ ಅದ್ಭುತ ಭಾಷಣದಲ್ಲಿ, ಭಾರತದಿಂದ ನಷ್ಟವಾದ ಅಥವಾ ಕದ್ದ ಎಲ್ಲ ಕಲಾಕೃತಿಗಳನ್ನು ವಾಪಸು ಮಾಡುವಂತೆ ಆಗ್ರಹಿಸಿದ್ದರು. ಆ ಬಳಿಕ ಬ್ರಿಟಿಷ್ ಸಂಸದ ಕೀತ್ ವಾಝ್ ಅವರು ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿಸುವಂತೆ ಆಗ್ರಹ ಮಂಡಿಸಿದರು. ಇದೀಗ ವಿಶ್ವದ ಅತ್ಯಮೂಲ್ಯ ಹರಳು ಮತ್ತೆ ಸುದ್ದಿಯಲ್ಲಿದೆ. ಕೊಹಿನೂರ್ ವಜ್ರವನ್ನು ಭಾರತದ ರಾಜ ಬ್ರಿಟಿಷರಿಗೆ ಉಡುಗೊರೆಯಾಗಿ ನೀಡಿದ್ದೇ ವಿನಃ ಬಲಾತ್ಕಾರದಿಂದ ಅದನ್ನು ಬ್ರಿಟಿಷರು ಪಡೆದಿಲ್ಲ ಎಂದು ಸಂಸ್ಕೃತಿ ಸಚಿವಾಲಯ ಸುಪ್ರೀಂಕೋರ್ಟ್‌ನಲ್ಲಿ ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ ಇದು ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗುತ್ತಿದ್ದಂತೇ, ಸಚಿವಾಲಯ ತದ್ವಿರುದ್ಧ ಹೇಳಿಕೆ ನೀಡಿ, ಲಂಡನ್ ಗೋಪುರದಲ್ಲಿರುವ ಈ ಅಮೂಲ್ಯ ಹರಳನ್ನು ವಾಪಸು ತರಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.
ಭಾರತದಂತೆ ಪಾಕಿಸ್ತಾನ, ಇರಾನ್ ಹಾಗೂ ಅಫ್ಘಾನಿಸ್ತಾನ ಕೂಡಾ ಕೊಹಿನೂರ್ ವಜ್ರ ನಮ್ಮ ರಾಷ್ಟ್ರದ ಸಂಪತ್ತು ಎಂದು ಹಕ್ಕೊತ್ತಾಯ ಮಂಡಿಸಿವೆ. ರಾಜಮಾತೆಯ ಕಿರೀಟದಲ್ಲಿ ಕಂಗೊಳಿಸುವ ಈ ಅತ್‌ಯಾಕರ್ಷಕ ವಜ್ರದ ವಾಪಸಾತಿಗೆ ಬ್ರಿಟಿಷ್ ಸರಕಾರ ಯಾವ ಉತ್ಸುಕತೆಯನ್ನೂ ತೋರಿಲ್ಲ.
ಆದರೆ ಈ ಪ್ರಾಚೀನ ಕಲಾಕೃತಿಗಳ ವಾಪಸಾತಿಗೆ ಸಂಬಂಧಿಸಿದಂತೆ ಭಾರತದ ಒಲವು ಇರುವುದು ಕೊಹಿನೂರ್ ವಜ್ರದ ಬಗ್ಗೆಯಷ್ಟೇ ಅಲ್ಲ. ಭಾರತಕ್ಕೆ ಮರಳಬೇಕಾದ ವಿದೇಶಿನೆಲದ ಕಲಾಕೃತಿಗಳ ದೊಡ್ಡ ಪಟ್ಟಿಯೇ ಭಾರತದಲ್ಲಿದೆ. ಇವುಗಳನ್ನು ಮಾಜಿ ಸಾಮ್ರಾಜ್ಯಶಾಹಿಗಳು ಒಯ್ದಿದ್ದಾರೆ ಇಲ್ಲವೇ, ಈ ಕಲಾಕೃತಿಗಳನ್ನು ಪಡೆದುಕೊಳ್ಳಲು ಯುದ್ಧಗಳನ್ನು ಸಾರಿದ್ದಾರೆ. ಇಂಥ ಕನಿಷ್ಠ ನಾಲ್ಕು ಸಾಂಪ್ರದಾಯಿಕ ಸಂಪತ್ತು ಎನಿಸಿದ ಅಮೂಲ್ಯ ವಸ್ತುಗಳು ಇವೆ. ಇವನ್ನು ಆದಷ್ಟು ಶೀಘ್ರವಾಗಿ ಭಾರತಕ್ಕೆ ಪಡೆಯಬೇಕಿದೆ.
ಸುಲ್ತಾನ್‌ಗಂಜ್ ಬುದ್ಧ ಬರ್ಮಿಂಗ್‌ಹ್ಯಾಂ ಮ್ಯೂಸಿಯಂ ಮತ್ತು ಕಲಾ ಗ್ಯಾಲರಿಯಲ್ಲಿ 150 ವರ್ಷಗಳಿಂದ 7.5 ಅಡಿ ಎತ್ತರದ ಬುದ್ಧನ ಪ್ರತಿಮೆ ಕಂಗೊಳಿಸುತ್ತದೆ. ಇದನ್ನು ಈಗ ಬರ್ಮಿಂಗ್‌ಹ್ಯಾಂ ಬುದ್ಧ ಎಂದೇ ಪರಿಗಣಿಸಲಾಗುತ್ತದೆ. ಆದರೆ ವಾಸ್ತವವಾಗಿ ಈ ಅಮೂಲ್ಯ ಪ್ರತಿಮೆ ಬಿಹಾರದ ಸುಲ್ತಾನ್‌ಗಂಜ್‌ನ ಹೆಮ್ಮೆ. 1861ರಲ್ಲಿ ಇದನ್ನು ಬ್ರಿಟನ್‌ಗೆ ಒಯ್ಯಲಾಗಿತ್ತು.
ಸುಲ್ತಾನ್‌ಗಂಜ್ ಬುದ್ಧ ಪ್ರತಿಮೆಯ ಇತಿಹಾಸ ಗುಪ್ತ- ಪಾಳರ ಆಡಳಿತಾವಧಿಗೆ ಎಂದರೆ ಕ್ರಿಸ್ತಶಕ 500 ರಿಂದ 700ನೆ ವರ್ಷದಷ್ಟು ಹಿಂದಕ್ಕೆ ಹೋಗುತ್ತದೆ. ಪೂರ್ವ ಭಾರತ ರೈಲ್ವೆ ನಿರ್ಮಾಣ ಕಾರ್ಯದ ವೇಳೆ ಇದು ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಪತ್ತೆಯಾಗಿತ್ತು. ಇದರ ತೂಕ 500 ಕೆ.ಜಿ. ಪರಿಶುದ್ಧ, ಕಚ್ಚಾ ತಾಮ್ರದಿಂದ ಇದನ್ನು ಸಿದ್ಧಪಡಿಸಲಾಗಿದ್ದು, ನಿಂತಿರುವ ಬುದ್ಧನನ್ನು ಇದು ಸಂಕೇತಿಸುತ್ತದೆ. ಒಂದು ಕೈಯನ್ನು ಅಭಯಮುದ್ರೆ ಸ್ಥಿತಿಯಲ್ಲಿ ಎತ್ತಿರುವುದನ್ನು ಬಿಂಬಿಸುತ್ತದೆ. ಹೀಗೆ ಮರುಶೋಧವಾದ ಪ್ರಾಚೀನ ವಿಗ್ರಹ ಹಲವು ಮಂದಿ ಸ್ಥಳೀಯ ಪ್ರೇಕ್ಷಕರನ್ನು ಆಕರ್ಷಿಸಿದರೂ, ಬರ್ಮಿಂಗ್‌ಹ್ಯಾಂ ಉದ್ಯಮಿ ಸ್ಯಾಮ್ಯುಯೆಲ್ ಥೋರ್ಮ್‌ಟಾಮ್ ಅದನ್ನು 200 ಪೌಂಡ್‌ಗೆ ಖರೀದಿಸಿ, ತನ್ನ ಊರಿನ ಹೊಸ ವಸ್ತುಸಂಗ್ರಹಾಲಯಕ್ಕೆ ಹಡಗಿನಲ್ಲಿಒಯ್ದ.
ಕೊಹಿನೂರ್ ವಜ್ರದ ಜತೆಗೆ ಸುಲ್ತಾನ್‌ಗಂಜ್ ಬುದ್ಧ ಕೂಡಾ ಭಾರತದ ಪ್ರಾಚ್ಯವಸ್ತು ಸಂಗ್ರಹ ಕಚೇರಿ ವಿದೇಶಿ ನೆಲದಿಂದ ವಾಪಸಾತಿ ಬಯಸಿದ ಅಮೂಲ್ಯ ಆಭರಣ.
ಮಹಾರಾಜ ರಂಜಿತ್ ಸಿಂಗ್ ಕಿರೀಟ
1820ರ ದಶಕದಲ್ಲಿ ಸಿಖ್ ಸಾಮ್ರಾಜ್ಯದ ಸಂಸ್ಥಾಪಕ ಮಹಾರಾಜಾ ರಂಜಿತ್ ಸಿಂಗ್ ಅಧಿಕಾರದ ತುತ್ತತುದಿಯಲ್ಲಿದ್ದ. ಆತನ ಅಕ್ಕಸಾಲಿಗ ಹನೀಫ್ ಮುಲ್ತಾನಿ ಆತನಿಗಾಗಿ ಅಮೂಲ್ಯ ಮರ ಹಾಗೂ ಚಿನ್ನದಿಂದ ಕೂಡಿದ ಕಿರೀಟವನ್ನು ಸಿದ್ಧಪಡಿಸಿದ. ಎರಡು ಪದರದ ಕಮಲದ ಹೂವಿನ ಆಕಾರದಲ್ಲಿ ಈ ವಿಶಿಷ್ಟ ಕಿರೀಟವನ್ನು ರೂಪಿಸಿದ. ಈ ಅಷ್ಟಭುಜಾಕೃತಿಯ ಕಿರೀಟವನ್ನು ಉತ್ತಮ ಜಾತಿಯ ಮರದಿಂದ ತಯಾರಿಸಿ, ಅದಕ್ಕೆ ಸೂಕ್ಷ್ಮ ಕುಸುರಿ ಕೆತ್ತನೆಯ ಚಿನ್ನದ ಹಾಳೆಯಿಂದ ಹೊದೆಸಲಾಯಿತು.
1449ರಲ್ಲಿ ಪಂಜಾಬನ್ನು ಪ್ರತ್ಯೇಕಿಸಿದಾಗ, ಈ ಕಿರೀಟವನ್ನು ಬ್ರಿಟಿಷರು ಸರಕಾರದ ಸ್ವತ್ತಾಗಿ ಸ್ವಾಧೀನಪಡಿಸಿಕೊಂಡರು. 1851ರಲ್ಲಿ, ಇದನ್ನು ಭಾರತ ಸಾಮ್ರಾಜ್ಯದ ಸಂಗ್ರಹವಾಗಿ ಇದನ್ನು ಅಂತಾರರಾಷ್ಟ್ರೀಯ ಕಲಾಕೃತಿಗಳ ಶ್ರೇಷ್ಠ ಪ್ರದರ್ಶನವಾಗಿ ಪ್ರದರ್ಶಿಸಲಾಯಿತು. ಈಗ ಇದು ವಿಕ್ಟೋರಿಯಾ ಮತ್ತು ಅಲ್ಬರ್ಟ್ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಕೊಹಿನೂರ್ ವಜ್ರವನ್ನು ಬಿಟ್ಟುಕೊಟ್ಟ ರಂಜಿತ್‌ಸಿಂಗ್‌ನ ಮಗ ದುಲೀಪ್ ಸಿಂಗ್ ಇತ್ತೀಚಿನ ವರ್ಷಗಳಲ್ಲಿ ಈ ಎರಡು ಅಮೂಲ್ಯ ಕಲಾಕೃತಿಗಳನ್ನು ಬ್ರಿಟನ್‌ನಿಂದ ಭಾರತಕ್ಕೆ ಮರಳಿ ಪಡೆಯಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.
ಅಮರಾವತಿ ಕಟಾಂಜನ
ಸುಣ್ಣದ ಕಲ್ಲಿನ ಪದರಗಳಲ್ಲಿ ಕೆತ್ತಲ್ಪಟ್ಟ ಈ ಆಕರ್ಷಕ ಸರಣಿ, ಅಮರಾವತಿ ಶಾಸನಗಳು ಆಂಧ್ರಪ್ರದೇಶದ ಗುಂಟೂರಿನಲ್ಲಿ ಪತ್ತೆಯಾದ ಪ್ರಾಚೀನ ಬುದ್ಧಸ್ತೂಪದ ಕಟಾಂಜನ (ಬೇಲಿ) ಹಾಗೂ ದ್ವಾರವಾಗಿತ್ತು. ಈ ಸ್ತೂಪ ಕ್ರಿಸ್ತಪೂರ್ವ ಮೂರನೆ ಶತಮಾನದಷ್ಟು ಪ್ರಾಚೀನ ಸ್ತೂಪವಾಗಿದ್ದು, ಈ ಸುಣ್ಣದ ಕಲ್ಲಿನ ಕೆತ್ತನೆಯನ್ನು ಕ್ರಿಸ್ತಪೂರ್ವ ಒಂದನೆ ಶತಮಾನದಿಂದ ಕ್ರಿಸ್ತಶಕ ಎಂಟನೆ ಶತಮಾನದ ಅವಧಿಯಲ್ಲಿ ಕೆತ್ತನೆ ಮಾಡಲಾಗಿದೆ. ಈ ಸರಣಿ ಕೆತ್ತನೆಯಲ್ಲಿ ಬುದ್ಧನ ಜೀವನ ಚರಿತ್ರೆಯನ್ನು ವಿವರಿಸುವ ಜಾತಕ ಕಥೆಗಳು ವರ್ಣಿಸಲ್ಪಟ್ಟಿವೆ.
ಈ ಪ್ರಾಚೀನ ಸ್ತೂಪದ ಪಳೆಯುಳಿಕೆಯನ್ನು ಮೊಟ್ಟಮೊದಲ ಬಾರಿಗೆ 1790ರ ದಶಕದಲ್ಲಿ ಬ್ರಿಟಿಷ್ ಅಧಿಕಾರಿ ಪತ್ತೆ ಮಾಡಿದ. 1840ರ ದಶಕದಲ್ಲಿ ಮದ್ರಾಸ್‌ನ ಸಿವಿಲ್ ಸರ್ವಿಸ್ ಅಧಿಕಾರಿ ಸರ್ ವಾಲ್ಟರ್ ಎಲಿಯಟ್ ಇಲ್ಲಿ ಮತ್ತೆ ದೊಡ್ಡ ಪ್ರಮಾಣದ ಉತ್ಖನನ ನಡೆಸಿದರು. ಕಾಲಕ್ರಮೇಣ ಅಮರಾವತಿ ಕಟಾಂಜನದ ಹಲವು ತುಣುಕುಗಳು ಭಾರತ ಹಾಗೂ ವಿಶ್ವದ ಹಲವು ವಸ್ತುಸಂಗ್ರಹಾಲಯಗಳಿಗೆ ರವಾನೆಯಾದವು. ಆದಾಗ್ಯೂ ಸುಮಾರು 120 ಶಾಸನಗಳ ಈ ಬೃಹತ್ ಸಂಗ್ರಹ ಇನ್ನೂ ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿದೆ. 1850ರ ದಶಕದಲ್ಲಿ ಇವುಗಳನ್ನು ಇಂಗ್ಲೆಂಡಿಗೆ ಒಯ್ಯಲಾಗಿತ್ತು. ಇಂಗ್ಲೆಂಡಿನಿಂದ ಭಾರತಕ್ಕೆ ಮರಳಿ ತರಲು ಉದ್ದೇಶಿಸಿರುವ ಹಲವು ಪ್ರಾಚ್ಯ ಕಲಾಕೃತಿಗಳ ಪೈಕಿ ಅಮರಾವತಿ ಕಟಾಂಜನವೂ ಸೇರಿದೆ. ಆದರೆ ಈ ಆಗ್ರಹವನ್ನು 2010ರಲ್ಲಿ ಬ್ರಿಟಿಷ್ ಸರಕಾರ ತಿರಸ್ಕರಿಸಿತ್ತು.
ಭೋಜಶಾಲಾದ ಸರಸ್ವತಿ/ ಅಂಬಿಕಾ ವಿಗ್ರಹ
1880ರ ದಶಕದಲ್ಲಿ ಬ್ರಿಟಿಷ್ ಮ್ಯೂಸಿಯಂ, ನಾಲ್ಕು ಅಡಿ ಎತ್ತರದ ಬಿಳಿ ಅಮೃತಶಿಲೆಯ ದೇವಿ ವಿಗ್ರಹವನ್ನು ಈಗ ಮಧ್ಯಪ್ರದೇಶದಲ್ಲಿರುವ ಧಾರ್ ಪಟ್ಟಣದಿಂದ ಸ್ವಾಧೀನಪಡಿಸಿಕೊಂಡಿತು. ಇದರ ತಳದಲ್ಲಿರುವ ಸಂಸ್ಕೃತ ಶಾಸನದಿಂದ ತಿಳಿದುಬರುವ ಅಂಶವೆಂದರೆ, ಈ ವಿಗ್ರಹ 11ನೆ ಶತಮಾನದ್ದಾಗಿದ್ದು, ಪರಮರ ಸಾಮ್ರಾಜ್ಯದ ಜೈನದೇವತೆ ಅಂಬಿಕೆಯ ವಿಗ್ರಹ ಇದಾಗಿದೆ. ಆದರೆ ಕಳೆದ ಎರಡು ದಶಕಗಳಿಂದ ಹಿಂದೂ ಜಾಗರಣ್ ಮಂಚ್ ಹಾಗೂ ಭಾರತೀಯ ಜನತಾ ಪಕ್ಷದಂಥ ಹಿಂದುತ್ವ ಸಂಘಟನೆಗಳು ಇದನ್ನು ಸರಸ್ವತಿ ದೇವಿಯ ವಿಗ್ರಹ ಎಂದು ಪ್ರತಿಪಾದಿಸುತ್ತಿವೆ. ಮೂಲಭೂತವಾಗಿ ಇದು ಧಾರ್ ನಗರದ ಭೋಜಶಾಲಾ ಸಂಕೀರ್ಣಕ್ಕೆ ಸೇರಿದ್ದು ಎನ್ನುವುದು ಅವರ ವಾದವಾಗಿದ್ದು, ಅದನ್ನು ಭಾರತಕ್ಕೆ ಮರಳಿಸುವಂತೆ ಆಗ್ರಹಿಸಿವೆ.
ಭೋಜಶಾಲಾ ಅಥವಾ ಕಲಿಕಾ ಕೇಂದ್ರ ಎನ್ನುವುದು ಭಾರತದ ಪ್ರಾಚ್ಯವಸ್ತು ಇಲಾಖೆಯ ಸಂರಕ್ಷಿತ ಸ್ಮಾರಕವಾಗಿದ್ದು, ಧಾರ್ ನಗರದಲ್ಲಿರುವ ಇದು ಹನ್ನೊಂದನೆ ಶತಮಾನದ ಭೋಜ ರಾಜನ ಕಾಲದ್ದು ಎಂದು ಹೇಳಲಾಗುತ್ತಿದೆ. ಆದರೆ ಈ ಪ್ರದೇಶವನ್ನು ಮಸೀದಿಯಾಗಿ ಬಳಕೆ ಮಾಡಲಾಗುತ್ತಿದ್ದು, ಹಲವು ಶತಮಾನಗಳಿಂದ ಇದು ದರ್ಗಾ ಆಗಿದೆ. ಇದು ಭೋಜಶಾಲಾ ಅಥವಾ ಸರಸ್ವತಿ ದೇಗುಲ ಎಂದು ಹಿಂದೂಗಳು ಹಾಗೂ ಮಸೀದಿ ಎಂದು ಸ್ಥಳೀಯ ಮುಸ್ಲಿಮರು ವಾದಿಸುತ್ತಿರುವ ಹಿನ್ನೆಲೆಯಲ್ಲಿ ಪದೇ ಪದೇ ಈ ವಿವಾದ ಘರ್ಷಣೆಗೆ ಕಾರಣವಾಗುತ್ತಿದೆ ಎಂಬ ಕಾರಣಕ್ಕೆ ಪ್ರಾಚ್ಯವಸ್ತು ಇಲಾಖೆ, ಇಲ್ಲಿ ಪ್ರತೀ ವಾರ ಮುಸ್ಲಿಂ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟಿದೆ ಮತ್ತು ಮಂಗಳವಾರದಂದು ಹಿಂದೂಗಳ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ.
ಬ್ರಿಟಿಷ್ ಮ್ಯೂಸಿಯಂ ಈ ಸರಸ್ವತಿ ವಿಗ್ರಹವನ್ನು ಭೋಜಶಾಲೆಗೆ ವಾಪಸು ಮಾಡಬೇಕು ಎಂದು 2003 ರಿಂದೀಚೆಗೆ ಹಿಂದುತ್ವ ಸಂಘಟನೆಗಳು ಒತ್ತಾಯಿಸುತ್ತಲೇ ಬಂದಿವೆ. ಬಿಜೆಪಿಯ ಗಣ್ಯ ಮುಖಂಡರಾದ ಉಮಾಭಾರತಿ ಹಾಗೂ ಸುಬ್ರಹ್ಮಣ್ಯನ್ ಸ್ವಾಮಿ ಈ ಆಗ್ರಹ ಮುಂದಿಟ್ಟಾಗ, ಬ್ರಿಟಿಷ್ ಸರಕಾರ 2003ರಲ್ಲಿ ಅಧಿಕೃತವಾಗಿ, ನಮ್ಮ ವಸ್ತುಸಂಗ್ರಹಾಲಯದಲ್ಲಿರುವುದು ಜೈನದೇವತೆ ಅಂಬಿಕೆಯ ವಿಗ್ರಹ ಎಂದು ಸ್ಪಷ್ಟಪಡಿಸಿತ್ತು.
(ಕೃಪೆ: ಸ್ಕ್ರೋಲ್.ಇನ್)