ಜೀವ ಭಕ್ಷಕಗಳಾಗುತ್ತಿರುವ ಜೀವ ರಕ್ಷಕ ಔಷಧಿಗಳು
ಒಂದು ಮುಂಜಾನೆ ನನ್ನ ಮನೆಯ ಸಮೀಪದ ಮೆಡಿಕಲ್ ಶಾಪ್‌ಗೆ ವಿಪರೀತ ತಲೆನೋವು ತಾಳಲಾರದೆ ವಿಕ್ಸ್ ತರಲೆಂದು ಹೋಗಿದ್ದೆ. ಆ ಬಡಾವಣೆಗೆ ಅದೊಂದೇ ಔಷಧಿ ಅಂಗಡಿಯಾದ ಕಾರಣದಿಂದಲೇ ಏನೋ ಮುಂಜಾನೆಯೇ ಬಹಳ ಜನಸಂದಣಿ ಇತ್ತು. ನನ್ನ ಮುಂದುಗಡೆ ಸರದಿ ಸಾಲಲ್ಲಿ ನಡು ಹರೆಯದ ಯುವಕನೊಬ್ಬ ನಿಂತಿದ್ದ. ಪದೇ ಪದೇ ಸೀನುತ್ತಿದ್ದ ಮತ್ತು ಕರವಸದಿಂದ ಮೂಗಿನಿಂದ ಸುರಿಯುತ್ತಿದ್ದ ನೆಗಡಿಯನ್ನು ಒರೆಸುತ್ತಿದ್ದ. ಹವಾನಿಯಂತ್ರಿತ ಔಷಧಿ ಅಂಗಡಿಯಲ್ಲೂ ಆತ ಚಡಪಡಿಸುತ್ತಿದ್ದ. ಔಷ ಅಂಗಡಿಯ ನೌಕರನ ಬಳಿ ಆತ, ''ವಿಪರೀತ ಶೀತ, ತಲೆನೋವು ಮತ್ತು ಮೈಕೈ ನೋವು ಇದೆ.
ಯಾವುದಾದರೂ ಮಾತ್ರೆ ನೀಡಿ, ಸಾಯಂಕಾಲದೊಳಗೆ ಕಡಿಮೆಯಾಗಬೇಕು, ರಾತ್ರಿ ಬೆಂಗಳೂರಿಗೆ ಹೋಗಲಿಕ್ಕಿದೆ, ನಾಳೆ ಬೇರೆ ಕೆಲಸದ ದಿನ, ಸ್ವಲ್ಪ ಸ್ಟ್ರಾಂಗ್ ಡೋಸ್ ಔಷಧಿಯನ್ನೇ ನೀಡಿ'' ಎಂದು ವಿಶೇಷವಾದ ವಿನಂತಿಯನ್ನು ಮಾಡಿದ. ಔಷಧಿ ಅಂಗಡಿಯಾತನಿಗೆ ನಾನು ವೈದ್ಯನೆಂದು ತಿಳಿದಿಲ್ಲವೋ ಏನೋ ಗೊತ್ತಿಲ್ಲ. ಆತ ಆ ವ್ಯಕ್ತಿಯ ಬಳಿ ಜ್ವರ ಇದೆಯಾ?, ಅಲರ್ಜಿ ಇದೆಯಾ?, ಹೀಗೆ ಒಂದೆರಡು ಪ್ರಶ್ನೆ ಕೇಳಿ ಒಂದೆರಡು ನಿಮಿಷದಲ್ಲಿ ಒಳಗೆ ಹೋಗಿ ನಾಲ್ಕಾರು ಬಗೆಯ ಔಷಧಿಗಳನ್ನು ತಂದು ಮೇಜಿನ ಮೇಲೆ ಸುರಿದ. ಅಲ್ಲೇ ಇದನ್ನೆಲ್ಲಾ ನೋಡುತ್ತಿದ್ದ ನನಗೆ ಕುತೂಹಲ ಜಾಸ್ತಿಯಾಗಿತ್ತು. ಕೌತುಕ ತಾಳಲಾರದೆ ಔಷಧಿಯ ಹತ್ತಿರ ಕಣ್ಣು ಹಾಯಿಸಿದೆ. ಒಂದಷ್ಟು ಆ್ಯಂಟಿಬಯೋಟಿಕ್‌ಗಳು, ನೋವು ನಿವಾರಕಗಳು, ಆಂಟಿಹಿಸ್ಟಮಿನ್ ಗುಳಿಗೆಗಳು ಮತ್ತು ಒಂದಷ್ಟು ಆಂಟಾಸಿಡ್ (ಹೊಟ್ಟೆ ಉರಿ ಕಡಮೆಯಾಗಿಸುವ ಔಷಧಿ) ಮತ್ತು ವಿಟಮಿನ್ ಗುಳಿಗೆಗಳನ್ನು ನೀಡಿ, ಔಷಧಿ ಸೇವನೆಯ ಬಗ್ಗೆಯು ಒಂದಿಷ್ಟು ಉಚಿತ ಮಾಹಿತಿ ನೀಡಿದ.
'ಒಂದು ಡೋಸ್ ಈಗಲೇ ತೆಗೆದುಕೊಳ್ಳಿ' ಎಂದು ಹೇಳಿ ಒಂದು ಬಿಸ್ಲೆರಿ ನೀರಿನ ಬಾಟಲನ್ನು ಎದುರಿಗಿಟ್ಟ. ನಾನು ಕಣ್ಣು ಮುಚ್ಚುವುದರೊಳಗೆ ಆ ಯುವಕ ನಾಲ್ಕೆದು ಗುಳಿಗೆಗಳನ್ನು ಒಂದೇ ಏಟಿಗೆ ನುಂಗಿ ನೀರು ಕುಡಿದು ಮಗದೊಮ್ಮೆ ಜೋರಾಗಿ ಸೀನಿದ ಮತ್ತು ಈ ಬಾರಿ ಸುರಿಯುತ್ತಿದ್ದ ನೆಗಡಿಯನ್ನು ಅಂಗಿಯ ತೋಳಿನಿಂದ ಒರೆಸಿದ. ಔಷಧಿ ನೀಡಿದ ವ್ಯಕ್ತಿ ಕೇಳಿದ ಹಣವನ್ನು ನೀಡಿ ಚಿಲ್ಲರೆಗೂ ಕಾಯದೆ ಆ ವ್ಯಕ್ತಿ ಅಲ್ಲಿಂದ ಕಾಲುಕಿತ್ತ. ನಾನು ನಿಂತಲ್ಲೇ ದಂಗಾಗಿ ಹೋದೆ. ನನ್ನ ಬಳಿ ಸಾರ್ ನಿಮಗೆ ಯಾವ ಔಷಧಿ ನೀಡಲಿ ಎಂದು ಕೇಳಿದಾಗಲೇ ನಾನು ಇಹಲೋಕಕ್ಕೆ ಬಂದಿದ್ದು!!! ನಿಮಗೂ ಜ್ವರ ಇದೆಯಾ? ಎಂದು ಆತ ಕೇಳುವ ಮೊದಲು ನಾನು ಅಲ್ಲಿಂದ ಜಾಗ ಖಾಲಿ ಮಾಡಿದ್ದೆ. ಯಾತಕ್ಕಾಗಿ ನಾನು ಮೆಡಿಕಲ್ ಶಾಪ್‌ಗೆ ಬಂದಿದ್ದೆ ಎಂಬುದನ್ನು ಮರೆತಿದ್ದೆೆ. ಮನೆಗೆ ತಲುಪಿ ಸಾವರಿಸಿಕೊಂಡು ಪತ್ನಿಯ ಬಳಿ ಬಂದು ಸ್ಟ್ರಾಂಗ್ ಕಾಫಿ ಕೊಡು ಎಂದು ಆದೇಶ ನೀಡುವ ಮೊದಲೇ ಹಬೆಯಾಡುವ ಕಾಫಿ ರೆಡಿಯಾಗಿತ್ತು.
ಎಲ್ಲಿ ನೀವು ತಂದ ವಿಕ್ಸ್ ಎಂದು ಆಕೆ ಕೇಳಿದಾಗಲೇ ನನ್ನ ಮರೆವಿನ ಅರಿವು ನನಗಾಗಿದ್ದು. ಅಯ್ಯೋ ಮರೆತು ಬಿಟ್ಟೆ ಎಂದು ಹೇಳುವ ಮೊದಲೇ ನನ್ನಾಕೆ ಈ ವಯಸ್ಸಲ್ಲೂ ಏನು ಮರೆವು ನಿಮ್ಮದು ಎಂದು ಗೊಣಗುತ್ತಾ ಮರೆಯಾದಳು. ನಾನಿನ್ನೂ ಮೆಡಿಕಲ್ ಶಾಪ್‌ನ ಘಟನೆಯ ಗುಂಗಿನಲ್ಲೇ ಇದ್ದೆ. ಮೇಲೆ ತಿಳಿಸಿದ ಘಟನೆ ನಮ್ಮ ದೇಶದ ಮೂಲೆಮೂಲೆಯಲ್ಲಿ ಪ್ರತಿದಿನವೂ ನಡೆಯುತ್ತಿರುತ್ತದೆ. ಔಷಧಿ ಅಂಗಡಿಯಲ್ಲಿ ಮಾಲಕರು ಅಥವಾ ನೌಕರರು ದಿನನಿತ್ಯ ವೈದ್ಯರ ಪಾತ್ರವನ್ನು ನಿರಾತಂಕವಾಗಿ ವರ್ಷಾನೂ ವರ್ಷಗಳಿಂದ ನಿಭಾಯಿಸುತ್ತಿದ್ದಾರೆ. ಅವರ ಬಳಿ ಔಷಧಿ ಮಾರುವ ಲೈಸನ್ಸ್ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ರೋಗಿಗಳಿಗೆ ಔಷಯನ್ನು ಯಾವುದೇ ಅಡೆತಡೆ ಇಲ್ಲದೇ ನೀಡುತ್ತಲೇ ಇದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಂತೂ ತಲೆನೋವು, ಹಲ್ಲುನೋವು, ಹೊಟ್ಟೆನೋವು, ವಾಂತಿ, ಭೇದಿ, ಹೊಟ್ಟೆ ಉರಿ, ಶೀತ, ಕೆಮ್ಮು, ನೆಗಡಿ ಇತ್ಯಾದಿಗಳಿಗೆ ಔಷಧಿ ಅಂಗಡಿಗಳ ಮಾಲಕರೇ ಮೊದಲ ವೈದ್ಯರು. ಅವರು ನೀಡಿದ ಔಷಧಿಯಲ್ಲಿ ಕಡಿಮೆಯಾಗದಿದ್ದರೆ ಮಾತ್ರ ವೈದ್ಯರ ಬಳಿ ಬರುತ್ತಾರೆ. ಕೆಲವೊಮ್ಮೆ ವೈದ್ಯರ ಬಳಿ ತಲುಪಿದಾಗ ರೋಗಿಯ ರೋಗ ಉಲ್ಬಣವಾಗಿ, ವಿಪರೀತ ಹಂತಕ್ಕೆ ತಲುಪಿರುತ್ತದೆ.
ಇನ್ನು ಕೆಲವೊಮ್ಮೆ ಔಷಧಿ ಇಲ್ಲದೆ ಗುಣವಾಗುವ ರೋಗಗಳಿಗೂ ಅನಗತ್ಯ ಔಷಧಿ ಸೇವನೆ ಮಾಡಲಾಗುತ್ತದೆ. ಔಷಧಿ ಅಂಗಡಿಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಔಷಧಿ ನೀಡಬಾರದು ಎಂಬ ಕಾನೂನು ಇದ್ದರೂ ಈ ರೀತಿಯ ಮೆಡಿಕಲ್ ಔಷಧಿಗಾರಿಕೆ ನಮ್ಮ ಭಾರತ ದೇಶದಲ್ಲಿ ಸವೆರ್ಸಾಮಾನ್ಯವಾಗಿ ಬಿಟ್ಟಿದೆ. ಮೇಲೆ ತಿಳಿಸಿದ ಯುವಕನಿಗೆ ಆಗಿರುವುದು ವೈರಾಣುವಿನ ಸೋಂಕುನಿಂದಾದ ಶೀತ ಮತ್ತು ತಲೆನೋವು. ಈ ರೀತಿಯ ಸಂದರ್ಭಗಳಲ್ಲಿ ಆ್ಯಂಟಿಬಯೋಟಿಕ್ ಔಷಧಿಯ ಅಗತ್ಯವೇ ಇರುವುದಿಲ್ಲ. ಮೇಲಾಗಿ ಆ್ಯಂಟಿಬಯೋಟಿಕ್ ಔಷಗಳಿಂದ ವೈರಾಣುಗಳ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ.
ಅನಗತ್ಯವಾಗಿ ಇಲ್ಲಿ ಆ್ಯಂಟಿಬಯೋಟಿಕ್ ಔಷಧಿಯನ್ನು ಬಳಸಿ, ಮುಂದೆ ನಿಜವಾಗಿಯೂ ಆ್ಯಂಟಿಬಯೋಟಿಕ್ ಅಗತ್ಯವಿರುವ ಸಂದರ್ಭಗಳಲ್ಲಿ ಪುನಃ ಬಳಸಿದಾಗ ಅದರ ತೀವ್ರತೆ ಮತ್ತು ಗುಣಮಟ್ಟ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಪದೇ ಪದೇ ಆ್ಯಂಟಿಬಯೋಟಿಕ್ ಬಳಸುವುದು, (ಅಗತ್ಯವಿಲ್ಲದಿದ್ದರೂ) ಸ್ವಯಂ ಔಷಧಿಗಾರಿಕೆ, ಸರಿಯಾದ ಪ್ರಮಾಣದಲ್ಲಿ ಬಳಸದೇ ಇರುವುದು, ಸರಿಯಾದ ದಿನಗಳವರೆಗೆ ಒಂದು ಸಂಪೂರ್ಣ ಕೋರ್ಸ್ ಆ್ಯಂಟಿಬಯೋಟಿಕ್ ತೆಗೆದುಕೊಳ್ಳದಿರುವುದು ಇತ್ಯಾದಿ ಕಾರಣದಿಂದಾಗಿ ಆ್ಯಂಟಿಬಯೋಟಿಕ್ ಪ್ರತಿರೋಧ ಶಕ್ತಿಯನ್ನು ಬ್ಯಾಕ್ಟೀರಿಯಾಗಳು ಗಳಿಸಿಕೊಳ್ಳುತ್ತದೆ. ಮುಂದೆ ನಿಜವಾಗಿಯೂ ಮಾರಣಾಂತಿಕ ಅಥವಾ ಪ್ರಾಣಾಂತಕಾರಿ ಸೋಂಕು ಬಂದಾಗ ಈ ಆ್ಯಂಟಿಬಯೋಟಿಕ್‌ಗಳು ಬ್ಯಾಕ್ಟೀರಿಯಾಗಳ ಮೇಲೆ ಯಾವುದೇ ಪರಿಣಾಮ ಬೀರಲು ಸಾಧ್ಯವಾಗದೆ ರೋಗಿಯ ಜೀವಕ್ಕೂ ತುತ್ತು ಬರುವ ಸಾಧ್ಯತೆ ಹೆಚ್ಚಾಗುತ್ತದೆ.
ಆ್ಯಂಟಿಬಯೋಟಿಕ್ ಪ್ರತಿರೋಧಕತೆ ಯಾಕಾಗಿ ಬರುತ್ತದೆ?
ಬ್ಯಾಕ್ಟೀರಿಯಾ ಎಂದರೆ ಕೇವಲ ಒಂದು ಜೀವಕೋಶವಿರುವ ಸೂಕ್ಷಾಣು ಜೀವಿಯಾಗಿದ್ದು, ದೇಹದ ಎಲ್ಲೆಡೆ (ಒಳಗೆ ಮತ್ತು ಹೊರಗೆ) ಇರುತ್ತದೆ. ಹೆಚ್ಚಿನ ಬ್ಯಾಕ್ಟೀರಿಯಾಗಳು ನಿರುಪದ್ರವಿಯಾಗಿದ್ದು, ನಮ್ಮ ದೇಹದೊಳಗಡೆ ಬದುಕುತ್ತಿರುತ್ತವೆ. ಹೆಚ್ಚಿನ ಬ್ಯಾಕ್ಟೀರಿಯಾಗಳು ನಮ್ಮ ದೇಹದ ಕರುಳು (Intestine)ನಲ್ಲಿ ಕಾಣಸಿಗುತ್ತದೆ. ಕೆಲವೊಂದು ಬ್ಯಾಕ್ಟೀರಿಯಾಗಳು ದೇಹದ ಪ್ರತಿರೋಧಕ ಶಕ್ತಿ ಕಡಮೆಯಾದಾಗ ಸೋಂಕನ್ನು ಉಂಟುಮಾಡಿ ರೋಗಕ್ಕೆ ಕಾರಣವಾಗುತ್ತದೆ. ಇನ್ನೂ ಕೆಲವು ಬ್ಯಾಕ್ಟೀರಿಯಾಗಳು ನಿಜವಾಗಿಯೂ ಉಪದ್ರಕಾರಕ ಜೀವಿಯಾಗಿದ್ದು ಆಕಸ್ಮಿಕವಾಗಿ ದೇಹದೊಳಗೆ ಸೇರಿದಲ್ಲಿ ರೋಗಕ್ಕೆ ನಾಂದಿ ಹಾಡುತ್ತದೆ. ಇನ್ನು ವೈರಾಣುಗಳು(Virus) ಬ್ಯಾಕ್ಟೀರಿಯಾಗಳಿಗಿಂತಲೂ ಚಿಕ್ಕದಾದ ಜೀವಿಯಾಗಿದ್ದು, ಮನುಷ್ಯನ ದೇಹದ ಜೀವಕೋಶದ ಹೊರಗೆ ಬದುಕಲಾರವು.
ಆರೋಗ್ಯವಂತ ಜೀವಕೋಶಗಳನ್ನು ಆಕ್ರಮಿಸಿಕೊಂಡು ರೋಗಕ್ಕೆ ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾಗಳನ್ನು ಎದುರಿಸಲು ಮತ್ತು ನಿರ್ನಾಮ ಮಾಡಲು ಬಳಸುವ ಔಷಧಿಯನ್ನು ಆ್ಯಂಟಿಬಯೋಟಿಕ್ ಎನ್ನುತ್ತಾರೆ. ಈ ಆ್ಯಂಟಿಬಯೋಟಿಕ್‌ಗಳು ಬ್ಯಾಕ್ಟೀರಿಯಾವನ್ನು ನಾಶಮಾಡುತ್ತದೆ, ಇಲ್ಲವೇ ಅವುಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟಿ ರೋಗ ಉಂಟಾಗದಂತೆ ನೋಡಿಕೊಳ್ಳುತ್ತವೆ. ಆದರೆ ಈ ಆ್ಯಂಟಿಬಯೋಟಿಕ್‌ಗಳಿಂದ ವೈರಾಣುಗಳಿಗೆ (Virus) ಯಾವುದೇ ಹಾನಿ ಆಗುವುದಿಲ್ಲ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ವೈರಾಣುವಿನ ಸೋಂಕಿನಿಂದ ಆದ ಶೀತ, ಜ್ವರ, ಗಂಟಲು ಕೆರೆತ, ಕೆಮ್ಮುಗಳಿಗೆ ಆ್ಯಂಟಿಬಯೋಟಿಕ್ ಆವಶ್ಯಕತೆ ಇರುವುದಿಲ್ಲ. ಆ್ಯಂಟಿಬಯೋಟಿಕ್ ಪ್ರತಿರೋಧಕತೆ ಎಂದರೆ, ಬ್ಯಾಕ್ಟೀರಿಯಗಳು ಆ್ಯಂಟಿಬಯೋಟಿಕ್ ಔಷಧಿಯ ಪರಿಣಾಮವನ್ನು ಮೆಟ್ಟಿನಿಂತು ರೋಗವನ್ನು ಉಲ್ಬಣಗೊಳಿಸುವ ಪ್ರಕ್ರಿಯೆ. ಈ ಆ್ಯಂಟಿಬಯೋಟಿಕ್ ಪ್ರತಿರೋಧಕತೆ ಒಂದು ಜಾಗತಿಕವಾದ ಸಮಸ್ಯೆಯಾಗಿದ್ದು ಮುಂದುವರಿದ ದೇಶಗಳಲ್ಲಿ ಬಹುದೊಡ್ಡ ಆರೋಗ್ಯ ಸಮಸ್ಯೆಯಾಗಿ ಕಂಡುಬಂದಿದೆ.
ಆ್ಯಂಟಿಬಯೋಟಿಕ್ ಪ್ರತಿರೋಧಕತೆ ತಡೆಯುವಲ್ಲಿ ರೋಗಿಯ ಪಾತ್ರ
1.ನಿಮ್ಮ ವೈದ್ಯರು ಸೂಚಿಸಿದ ಆ್ಯಂಟಿಬಯೋಟಿಕ್ ಔಷಧಿಯನ್ನು ಅದೇ ಪ್ರಮಾಣದಲ್ಲಿ ಸೇವಿಸಿರಿ. ಯಾವತ್ತೂ ಡೋಸ್‌ನ್ನು ವೈದ್ಯರ ಸಲಹೆಯಿಲ್ಲದೆ ಬದಲಿಸಬೇಡಿ.
2.ಆ್ಯಂಟಿಬಯೋಟಿಕ್ ಪ್ರತಿರೋಧಕತೆಯ ಬಗ್ಗೆ ನಿಮಗಿರುವ ಕಾಳಜಿಯನ್ನು ವೈದ್ಯರ ಬಳಿ ಮುಕ್ತವಾಗಿ ಹೇಳಿ.
3.ಆ್ಯಂಟಿಬಯೋಟಿಕ್ ಇಲ್ಲದೆಯೇ ರೋಗ ಮತ್ತು ರೋಗದ ಲಕ್ಷಣಗಳನ್ನು ನಿವಾರಿಸಲು ಯಾವುದಾದರೂ ಅಗತ್ಯ ಕ್ರಮಗಳಿದ್ದಲ್ಲಿ ಅದನ್ನೇ ವೈದ್ಯರ ಬಳಿ ತಿಳಿದುಕೊಂಡು ಅನುಸರಿಸಿ.
4.ಯಾವುದೇ ಕಾರಣಕ್ಕೂ ವೈದ್ಯರ ಬಳಿ ಆ್ಯಂಟಿಬಯೋಟಿಕ್ ಬಳಸಿ ರೋಗದಿಂದ ಬೇಗನೆ ವಾಸಿಮಾಡಿ ಎಂದು ಒತ್ತಡ ಹಾಕಬೇಡಿ.
5.ನಿಮಗಾಗಿ ಸೂಚಿಸಿದ ಆ್ಯಂಟಿಬಯೋಟಿಕ್ ಔಷಧಿಯನ್ನು ಸಂಪೂರ್ಣವಾಗಿ ಬಳಸಿ, ರೋಗದ ಲಕ್ಷಣಗಳು ಕಡಮೆಯಾಗಿದೆ ಎಂದು ನೀವೇ ಔಷಧಿಯನ್ನು ನಿಲ್ಲಿಸಬೇಡಿ. ವೈದ್ಯರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿರಿ.
6.ಆ್ಯಂಟಿಬಯೋಟಿಕ್ ಔಷಧಿಯನ್ನು ಉಳಿಸಿ ಹಣ ಉಳಿಸುವ ಜಾಣತನ ಒಳ್ಳೆಯದಲ್ಲ.
7.ಬೇರೆಯವರಿಗೆ ನೀಡಿದ ಆ್ಯಂಟಿಬಯೋಟಿಕ್ ಔಷಧಿಯನ್ನು ನೀವು ಬಳಸಲೇಬಾರದು.
8.ಉಳಿದ ಆ್ಯಂಟಿಬಯೋಟಿಕ್ ಔಷಧಿಗಳನ್ನು ನಿರ್ದಾಕ್ಷಿಣ್ಯ ವಾಗಿ ಎಸೆದುಬಿಡಿ. ಮುಂದಿನ ಬಾರಿ ಬೇಕಾಗುತ್ತದೆ ಎಂದು ಶೇಖರಣೆ ಮಾಡುವ ಉಸಾಬಾರಿ ಬೇಡವೇ ಬೇಡ.
9.ಸಾಮಾನ್ಯ ವೈರಲ್ ಜ್ವರ, ಶೀತ, ಕೆಮ್ಮು, ಪ್ಲೂ ಇತ್ಯಾದಿಗಳಿಗೆ ಆ್ಯಂಟಿಬಯೋಟಿಕ್ ಅಗತ್ಯ ಇರುವುದಿಲ್ಲ. ಸ್ವಯಂ ಔಷಧಿಗಾರಿಕೆ ಬೇಡವೇ ಬೇಡ. ಸಂದೇಹವಿದ್ದಲ್ಲಿ ವೈದ್ಯರನ್ನು ಸಮಾಲೋಚಿಸಿ ವೈದ್ಯರು ಸೂಚಿಸಿದಲ್ಲಿ ಮಾತ್ರ ಬಳಸಬೇಕು.
10.ವೈದ್ಯರು ದಿನಕ್ಕೆರಡು ಬಾರಿ ಆ್ಯಂಟಿಬಯೋಟಿಕ್ ಸೇವಿಸಿರಿ ಎಂದಿದ್ದಲ್ಲಿ ದಿನಕ್ಕೆರಡೇ ಬಾರಿ ಸೇವಿಸಿರಿ. ರೋಗ ಬೇಗನೆ ಕಡಿಮೆಯಾಗಲೆಂದು ದಿನಕ್ಕೆ ಮೂರು ಬಾರಿ ಸೇವಿಸುವ ಅತಿ ಬುದ್ಧಿವಂತಿಕೆ ಬೇಡ. ಅದೇ ರೀತಿ ದಿನಕ್ಕೆ ಮೂರು ಬಾರಿ ಸೇವಿಸಲು ಹೇಳಿದ್ದರೆ ಎರಡು ಬಾರಿ ಮಾತ್ರ ಸೇವಿಸಿ ಹಣ ಉಳಿಸುವ ಜಿಪುಣತನ ಕೂಡ ಮಾಡಬೇಡಿ.
11.ರೋಗ ಬರದಂತೆ ತಡೆಗಟ್ಟುವ ಲಸಿಕೆಗಳು ಇದ್ದಲ್ಲಿ, ವೈದ್ಯರ ಬಳಿ ಕೇಳಿ ತಿಳಿದುಕೊಂಡು ಲಸಿಕೆ ಹಾಕಿಸಿಕೊಳ್ಳುವುದು ಬಹಳ ಮುಖ್ಯ. ಈ ರೀತಿ ಲಸಿಕೆ ಹಾಕಿಸಿಕೊಂಡಲ್ಲಿ ಆ್ಯಂಟಿಬಯೋಟಿಕ್‌ಗಳ ದುರ್ಬಳಕೆಯನ್ನು ತಪ್ಪಿಸಬಹುದು.
ನಗ್ನ ಸತ್ಯಗಳು..!!
1.2 ಮಿಲಿಯನ್ ಮಂದಿ ಅಮೆರಿಕ ದೇಶವೊಂದರಲ್ಲಿಯೇ ಪ್ರತೀ ವರ್ಷ ಆ್ಯಂಟಿಬಯೋಟಿಕ್ ಪ್ರತಿರೋಧಕ ಸೋಂಕಿನಿಂದ ಬಳಲುತ್ತಿದ್ದು ಇದರಲ್ಲಿ ಸುಮಾರು 23,000 ಮಂದಿ ಸಾವನ್ನಪ್ಪುತ್ತಾರೆ. 2.2,50,000 ಮಂದಿ ಪ್ರತಿ ವರ್ಷ ಆ್ಯಂಟಿಬಯೋಟಿಕ್ ಔಷಧಿಯ ಅತಿಯಾದ ಬಳಕೆಯಿಂದಾಗಿ ಕರುಳಿನ ಒಳಭಾಗದಲ್ಲಿ ಕ್ಲೋಸ್ಟ್ರಿಡಿಯಾ ಡಿಫಿಸಿಲ್ (Clostridia Difficile) ಬ್ಯಾಕ್ಟೀರಿಯಾದ ಸೋಂಕಿನಿಂದ ಅಮೆರಿಕದಲ್ಲಿ ಬಳಲುತ್ತಾರೆ. ಇದರಲ್ಲಿ ಸುಮಾರು 14,000 ಮಂದಿ ಪ್ರತಿ ವರ್ಷ ಸಾವನ್ನಪ್ಪುತ್ತಾರೆ.
3.ಜಗತ್ತಿನಲ್ಲಿ ಅತೀ ಹೆಚ್ಚು ಬಳಸಲ್ಪಡುವ ಔಷಧಿ ಎಂದರೆ ಆ್ಯಂಟಿಬಯೋಟಿಕ್. ಇದರಲ್ಲಿ ಶೇ.50 ಮಂದಿಗೆ ಔಷ ಅಗತ್ಯವಿರುವುದಿಲ್ಲ.
4.ಆ್ಯಂಟಿಬಯೋಟಿಕ್ ದುರ್ಬಳಕೆಯಿಂದಾಗಿ ಉಂಟಾಗುವ ವೆಚ್ಚ ಅಮೆರಿಕ ದೇಶವೊಂದರಲ್ಲಿಯೇ ವರ್ಷಕ್ಕೆ ಸುಮಾರು 20 ಮಿಲಿಯನ್ ಡಾಲರ್ ಆಗಿರುತ್ತದೆ ಮತ್ತು ಮಾನವ ಸಂಪನ್ಮೂಲ ಸೋರಿಕೆಯಿಂದಾಗುವ ನಷ್ಟ ಸುಮಾರು 35 ಮಿಲಿಯನ್ ಡಾಲರ್ ಪ್ರತೀ ವರ್ಷಕ್ಕೆ ಆಗುತ್ತದೆ.
5.ಭಾರತದ ಔಷಧಿ ಕಂಪೆನಿಗಳ ಮಾರುಕಟ್ಟೆ ವ್ಯವಹಾರ ಸುಮಾರು 35 ಸಾವಿರ ಕೋಟಿಗೂ ಮೀರಿದ್ದು, ಇದರಲ್ಲಿ ಸಿಂಹ ಪಾಲು (20,000ಕೋಟಿ) ಆ್ಯಂಟಿಬಯೋಟಿಕ್‌ಗೆ ಸಲ್ಲುತ್ತದೆ. ಇದರಲ್ಲಿ ಸರಿಸುಮಾರು ಶೇ.40 ಅನಗತ್ಯವಾಗಿಯೇ ಬಳಸಲಾಗುತ್ತದೆ ಎಂಬ ಸಂದೇಹ ಇದೆ.
6.ಆ್ಯಂಟಿಬಯೋಟಿಕ್ ಬಳಕೆಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ, ಕಳೆದ ದಶಕದಲ್ಲಿ ಬರೋಬ್ಬರಿ ಶೇ.62 ಹೆಚ್ಚಾಗಿ, ಭಾರತ ಅಗ್ರಸ್ಥಾನ ಗಳಿಸಿದೆ. 2001ರಲ್ಲಿ 8 ಬಿಲಿಯನ್ ಯೂನಿಟ್‌ಗಳಷ್ಟು ಇದ್ದ ಬಳಕೆ 2010ರಲ್ಲಿ 13 ಬಿಲಿಯನ್ ಯೂನಿಟ್‌ಗೆ ಏರಿದೆ. 125 ಕೋಟಿಯಷ್ಟು ಇರುವ ಭಾರತ ಜನಸಂಖ್ಯೆಯಲ್ಲಿ ಪ್ರತಿಯೊಬ್ಬ ಭಾರತೀಯ ವರ್ಷ ಒಂದರಲ್ಲಿ 11 ಆ್ಯಂಟಿಬಯೋಟಿಕ್ ಮಾತ್ರೆ ಬಳಸುತ್ತಾನೆ ಎಂಬುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಅಮೆರಿಕದಲ್ಲಿ ಪ್ರತಿಯೊಬ್ಬ ಪ್ರಜೆ ಸರಾಸರಿ ವರ್ಷವೊಂದರಲ್ಲಿ 22 ಆ್ಯಂಟಿಬಯೋಟಿಕ್ ಮಾತ್ರೆ, ಚೀನಾದಲ್ಲಿ ಸರಾಸರಿ 7 ಆ್ಯಂಟಿಬಯೋಟಿಕ್‌ನ್ನು ಬಳಸುತ್ತಾರೆ ಎಂದು ತಿಳಿದು ಬಂದಿದೆ.