ಕಾರ್ಮಿಕರಿಗೆ ನಮಸ್ಕಾರ
ಇವತ್ತು ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ. ಶ್ರಮಿಕರ ದಿನಾಚರಣೆ ಎಂದು ಕೂಡ ಕರೆಯಲಾಗುವ ಈ ದಿನದಂದು ಎಲ್ಲ ಕಾರ್ಮಿಕ ಬಂಧುಗಳಿಗೂ ವಂದಿಸೋಣ. ಈ ಲೋಕದ ನಿತ್ಯದ ಬದುಕು ನಡೆಯಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ದುಡಿಯುತ್ತಿರುವ ಈ ಕಾರ್ಮಿಕ ಬಂಧುಗಳಿಗೆ ನಮ್ಮ ಕೃತಜ್ಞತೆ ಸಲ್ಲಿಸೋಣ. ಕಾರ್ಮಿಕ ದಿನಾಚರಣೆ ಆರಂಭವಾದ ಹಿನ್ನೆಲೆಯಲ್ಲಿರುವ ಘಟನೆಗಳು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಅದು ಶುರುವಾದದ್ದು ಇಪ್ಪತ್ತನೆಯ ಶತಮಾನದ ಶುರುವಿನಲ್ಲಿ. 1886ರಲ್ಲಿ ಅಮೆರಿಕದ ಷಿಕಾಗೋದಲ್ಲಿ ಒಂದು ಚಾರಿತ್ರಿಕ ಲೇಬರ್ ಯೂನಿಯನ್ ಚಳವಳಿ ನಡೆಯಿತು. ಅದನ್ನು ‘‘ಎಯ್ಟಿ ಹವರ್ ಡೇ ಮೂವ್‌ಮೆಂಟ್’’ ಎನ್ನುತ್ತಾರೆ.
ಅಂದರೆ, ದುಡಿಯುವ ವರ್ಗಕ್ಕೆ ಎಂಟು ಗಂಟೆಗಳ ಕೆಲಸ, ಎಂಟು ಗಂಟೆಗಳ ಮನರಂಜನೆ ಹಾಗೂ ಎಂಟು ಗಂಟೆಗಳ ವಿರಾಮವಿರಬೇಕು ಎಂಬ ವೈಜ್ಞಾನಿಕ ಕಲ್ಪನೆ ಇದು. 4 ಮೇ 1886ರಂದು ಶಿಕಾಗೋದಲ್ಲಿ ದಿನಕ್ಕೆ ಎಂಟು ಗಂಟೆಗಳ ದುಡಿಮೆಗಾಗಿ ಕಾರ್ಮಿಕರು ಮುಷ್ಕರ ಮಾಡುತ್ತಿದ್ದರು. ಆಗ ಯಾರೋ ಅಪರಿಚಿತನೊಬ್ಬ ಪೊಲೀಸರತ್ತ ಬಾಂಬ್ ಎಸೆದ; ನಂತರ ಪೊಲೀಸರು ಗುಂಡು ಹಾರಿಸಿ ನಾಲ್ಕು ಜನರನ್ನು ಕೊಂದರು ಎಂದು ಒಂದು ವರದಿ ಇದೆ. ಆದರೆ ಅವತ್ತು ಷಿಕಾಗೋದ ಹೇ ಮಾರ್ಕೆಟ್‌ನ ಮಾಲಕರು ಪೊಲೀಸರ ಜೊತೆ ಶಾಮೀಲಾಗಿ ಚಳವಳಿ ಮಾಡುತ್ತಿದ್ದ ಕಾರ್ಮಿಕರ ಮೇಲೆ ಹಲ್ಲೆ ಮಾಡಿದರು ಎಂಬ ವರದಿಯೂ ಇದೆ. ಇತಿಹಾಸದ ಪುಟಗಳಲ್ಲಿರುವ ಈ ಘಟನೆಗಳ ಸತ್ಯಾಸತ್ಯಗಳು ಏನೇ ಇರಲಿ, ಅಂದಿನ ಮಾಲಕ ವರ್ಗ ಕಾರ್ಮಿಕರ ನ್ಯಾಯಬದ್ಧ ಬೇಡಿಕೆಯನ್ನು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಆದರೆ ಈ ಮೇ 4ರ ಕಾರ್ಮಿಕರ ಬಲಿದಾನವನ್ನು ನೆನಪಿಸಿಕೊಳ್ಳಲು ಮೇ 1ರಂದು ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಆಚರಿಸಬೇಕೆಂಬ ಚಿಂತನೆ ಅಲ್ಲಿಂದ ಆರಂಭವಾಯಿತು.
1904ರಲ್ಲಿ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ನಡೆದ ಇಂಟರ್‌ನ್ಯಾಶನಲ್ ಸೋಷಲಿಸ್ಟ್ ಸಮ್ಮೇಳನ ಎಲ್ಲ ದೇಶಗಳಲ್ಲೂ ದಿನಕ್ಕೆ ಎಂಟು ಗಂಟೆಗಳ ದುಡಿಮೆಯ ಒತ್ತಾಯವನ್ನು ಮಂಡಿಸಲು ಹಾಗೂ ದುಡಿಯುವ ವರ್ಗದ ಬೇಡಿಕೆಗಳನ್ನು ಮಂಡಿಸಲು ಹಾಗೂ ವಿಶ್ವಶಾಂತಿಗಾಗಿ ಮೇ 1ರಂದು ಕೆಲಸಕ್ಕೆ ರಜೆ ಘೋಷಿಸಿಕೊಳ್ಳಲು ತೀರ್ಮಾನಿಸಿತು. ಈ ಎಲ್ಲದರ ಹಿಂದೆ ವಿವಿಧ ಬಗೆಯ ಕಮ್ಯುನಿಸ್ಟ್ ಚಿಂತನೆ, ಸಂಘಟನೆಗಳ ನಿರಂತರ ಶ್ರಮವಿದೆ. ಕಾಲ ಉರುಳಿದಂತೆ ಕಾರ್ಮಿಕರ ಎಂಟು ಗಂಟೆಗಳ ದುಡಿಮೆಯ ಬೇಡಿಕೆ ಜಗತ್ತಿನಾದ್ಯಂತ ಒಪ್ಪಿತವಾಯಿತು. ಹಲವು ರಾಷ್ಟ್ರಗಳಲ್ಲಿ ಮೇ ದಿನವನ್ನು ರಜಾ ದಿನವೆಂದು ಘೋಷಿಸಲಾಗಿದೆ. ಕರ್ನಾಟಕದಲ್ಲಿ ಎಂಬತ್ತರ ದಶಕದಲ್ಲಿ ರಾಮಕೃಷ್ಣ ಹೆಗಡೆಯವರ ಸರಕಾರ ಮೇ 1ರ ಕಾರ್ಮಿಕ ದಿನಾಚರಣೆಯಂದು ರಜಾ ಘೋಷಿಸುವ ಚಾರಿತ್ರಿಕ ನಿರ್ಣಯವನ್ನು ಕೈಗೊಂಡಿತು. ದೇಶದ ಇನ್ನು ಕೆಲವು ರಾಜ್ಯಗಳಲ್ಲೂ ಇದು ಜಾರಿಯಲ್ಲಿದೆ. ದೇಶಾದ್ಯಂತ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕ ವಲಯಗಳು ಕಾರ್ಮಿಕ ದಿನಾಚರಣೆಯನ್ನು ಆಚರಿಸುತ್ತವೆ. ಕಮ್ಯುನಿಸ್ಟ್ ಪಕ್ಷಗಳು ಕಾರ್ಮಿಕ ದಿನಾಚರಣೆಯನ್ನು ತಪ್ಪದೆ ನಡೆಸಿಕೊಂಡು ಬಂದಿವೆ.