ನೀರಿಗಾಗಿ ಹಾಳು ಬಾವಿಗಿಳಿದ ಇಬ್ಬರು ಬಾಲಕರ ಸಹಿತ 5 ದಲಿತರು ಬಲಿ

Update: 2016-05-17 03:36 GMT

ಚಂಡೀಗಢ, ಮೇ 17: ನೀರಿಗಾಗಿ ಬಾವಿ ಸ್ವಚ್ಛಗೊಳಿಸಲು ಹಾಳುಬಾವಿಗೆ ಇಳಿದ ಹದಿಹರೆಯದ ಇಬ್ಬರು ಬಾಲಕರು ಸೇರಿದಂತೆ ಐದು ಮಂದಿ ದಲಿತರು ವಿಷಾನಿಲದಿಂದಾಗಿ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಇಲ್ಲಿಗೆ ಸಮೀಪದ ನಿದಾನ ಎಂಬ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಕೇವಲ ಎರಡು ಕೊಳವೆಬಾವಿಗಳಿದ್ದು, ಗ್ರಾಮಸ್ಥರು ಪರ್ಯಾಯ ಜಲಮೂಲದ ಶೋಧದಲ್ಲಿದ್ದರು ಎಂದು ಮೂಲಗಳು ಹೇಳಿವೆ.

ಮಹಿಪಾಲ್‌ಸಿಂಗ್ (35), ದಿನೇಶ್ ಕುಮಾರ್ (24), ಸಂಜಯ ಕುಮಾರ್ (23), ಸುಖಚೈನ್ ಅಲಿಯಾಸ್ ಟೋನಿ (18) ಹಾಗೂ ಮೋಹನ್ (17) ಸ್ಥಳದಲ್ಲೇ ಮೃತಪಟ್ಟರು. ಅವರ ದೇಹವನ್ನು ಹೊರತೆಗೆಯಲು ಬಾವಿಗೆ ನೀರು ತುಂಬಿಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

"ವಿಷಾನಿಲದಿಂದ ತುಂಬಿರುವ ಈ ಬಾವಿಯಲ್ಲಿ ಎರಡು ನಿಮಿಷ ಕೂಡಾ ನಿಲ್ಲಲಾಗದು. ಅದಾಗ್ಯೂ ಸಾವಿನ ಕಾರಣವನ್ನು ಅಟಾಪ್ಸಿ ಪರೀಕ್ಷೆಯಿಂದ ಖಚಿತವಾಗಿ ತಿಳಿದುಕೊಳ್ಳಬೇಕಾಗಿದೆ" ಎಂದು ಪೊಲೀಸ್ ಅಧಿಕಾರಿ ಸಮುಂದರ್ ಸಿಂಗ್ ಹೇಳಿದ್ದಾರೆ. ಜಿಲ್ಲಾಧಿಕಾರಿ ವಿಜಯ ಸಿಂಗ್ ಹಾಗೂ ಎಸ್ಪಿ ರಾಕೇಶ್ ಆರ್ಯ ಪರಿಹಾರ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದು, ಗ್ರಾಮದಲ್ಲಿ ಶೋಕ ಕವಿದಿದೆ.

ಐದು ವರ್ಷದಿಂದ ಪಾಳುಬಿದ್ದಿದ್ದ ಬಾವಿಯನ್ನು ಉಪಯೋಗಿಸಲು ದಲಿತ ಮುಖಂಡರು ಭಾನುವಾರ ನಿರ್ಧರಿಸಿದ್ದರು. ಈ ಬಾವಿಯನ್ನು ಸ್ವಚ್ಛಗೊಳಿಸಿ ಪಕ್ಕದ ಕೆರೆಯಿಂದ 15 ಅಡಿ ನೀರು ತುಂಬುವ ನಿರ್ಧಾರಕ್ಕೆ ಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಮೋಹನ್ ಮೊದಲು ಬಾವಿಗೆ ಇಳಿದ. ಆತನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ದಿನೇಶ್ ಹಾಗೂ ಇತರ ಮೂವರು ಒಬ್ಬರ ಹಿಂದೆ ಒಬ್ಬರಂತೆ ಇಳಿದರು ಎಂದು ಪೊಲೀಸರು ಹೇಳಿದ್ದಾರೆ. ತಕ್ಷಣ ಬಾವಿಯ ಮೇಲಿದ್ದ ವ್ಯಕ್ತಿ ಸರಪಂಚ ಹಾಗೂ ಪೊಲೀಸರಿಗೆ ವಿಷಯ ಮುಟ್ಟಿಸಿದರು. ಆದರೆ ಆ ವೇಳೆಗಾಗಲೇ ಎಲ್ಲರೂ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News