ಯಕ್ಷಗಾನದಲ್ಲಿ ಪಿಎಚ್‌ಡಿ ಮಾಡಿದ ಮೊದಲ ಮಹಿಳೆ ಡಾ. ಮಾರ್ಥ

Update: 2016-05-23 17:08 GMT

ಕರಾವಳಿಯ ಗಂಡು ಕಲೆ ಎಂದೇ ಪ್ರಸಿದ್ಧವಾಗಿರುವ ಯಕ್ಷಗಾನವನ್ನು ನಾಲ್ಕು ದಶಕಗಳ ಹಿಂದೆಯೇ ಉಡುಪಿಯಲ್ಲಿ ಕಲಿತು ಅದೇ ವಿಷಯದಲ್ಲಿ ಪಿಎಚ್‌ಡಿ ಮಾಡಿದ ಮೊದಲ ಮಹಿಳೆ ಅಮೆರಿಕದ ಕ್ಯಾಲಿ ಪೋರ್ನಿಯಾ ನಿವಾಸಿ ಡಾ.ಮಾರ್ಥ ಆಸ್ಟನ್ ಸಿಕೋರ(81). ಯಕ್ಷಗಾನ ಕಲೆಯನ್ನು ಇನ್ನಷ್ಟು ಜನ ಅರಿತುಕೊಳ್ಳಬೇಕೆಂಬ ಇರಾದೆಯಲ್ಲಿ ಅವರು ಇದೀಗ ಆ ಕುರಿತು ಎರಡನೆ ಪುಸ್ತಕ ರಚನೆಯ ತಯಾರಿಯಲ್ಲಿದ್ದಾರೆ. ಅಮೆರಿಕದ ಬರ್ಕ್‌ಲಿಯ ವಿಶ್ವವಿದ್ಯಾನಿಲಯದಲ್ಲಿ ಜಾನಪದ ಪ್ರಾಧ್ಯಾಪಕಿಯಾಗಿದ್ದ ಮಾರ್ಥ, ಜಾನಪದ ವಿದ್ವಾಂಸ ಬಾಲ್ವಾಂಟ್ ಗಾರ್ಗಿ ಎಂಬವರು ಬರೆದ ಭಾರತದ ಜಾನಪದ ಕಲೆಗಳು ಎಂಬ ಪುಸ್ತಕವನ್ನು ಓದಿ ಯಕ್ಷಗಾನ ಕಲೆಯನ್ನು ಮೊತ್ತಮೊದಲ ಬಾರಿಗೆ ಅರಿತುಕೊಂಡರು. ನಂತರ ಅದರ ಬಗ್ಗೆ ಆಸಕ್ತಿ ಹೊಂದಿ ಶಿಷ್ಯವೇತನದೊಂದಿಗೆ 1969ರಲ್ಲಿ ಉಡುಪಿಗೆ ಬಂದರು. ಆಗ ಇವರಿಗೆ 31 ವರ್ಷ ವಯಸ್ಸು. ಉಡುಪಿ ಎಂಜಿಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕಿಯಾಗಿದ್ದ ಲೀಲಾ ಭಟ್‌ರ ಮನೆಗೆ ಬಂದ ಇವರು ನಂತರ ಹಿರಿಯ ಯಕ್ಷಗಾನ ಕಲಾವಿದ ಹಿರಿಯಡ್ಕ ಗೋಪಾಲ ರಾವ್‌ರಿಂದ ಯಕ್ಷಗಾನ ಕಲಿತರು. 6-7ವರ್ಷಗಳಲ್ಲಿ ಯಕ್ಷಗಾನ ಅಭ್ಯಾಸ ಮಾಡಿದ ಅವರು, ಮೊತ್ತ ಮೊದಲ ಪ್ರದರ್ಶನವನ್ನು ನೀಡಿದ್ದು 1971ರಲ್ಲಿ ಕಡಿಯಾಳಿ ಶ್ರೀಮಹಿಷಮರ್ಧಿನಿ ದೇವಸ್ಥಾನದಲ್ಲಿ. ಈ ಕಾರ್ಯಕ್ರಮದಲ್ಲಿ ಅವರು ಪೀಠಿಕಾ ಸ್ತ್ರೀ ವೇಷ ಮಾಡಿದರು.

ಅದೇ ರೀತಿ ಬ್ರಹ್ಮಾವರದಲ್ಲಿಯೂ ಪ್ರದರ್ಶನ ನೀಡಿದ್ದ ಇವರನ್ನು ಸನ್ಮಾನಿಸಲಾಗಿತ್ತು. ನಂತರ ಕೆರೆಮನೆ ಕುಟುಂಬದಿಂದಲೂ ಯಕ್ಷಗಾನದ ಬಗ್ಗೆ ಅಧ್ಯಯನ ನಡೆಸಿದ್ದರು. ಹೀಗೆ ಬಡಾಬಡಗು, ತೆಂಕು ಯಕ್ಷಗಾನವನ್ನು ತಿಳಿದು ಕೊಂಡ ಮಾರ್ಥ, 1972ರಲ್ಲಿ ಲ್ಯಾನ್ಸಿಂಗ್ ಮಿಚಿಗನ್ ಸ್ಟೇಟ್‌ನ ವಿವಿಯಿಂದ ಏಷ್ಯನ್ ಥಿಯೇಟರ್ ವಿಷಯವಾಗಿ ಯಕ್ಷಗಾನದಲ್ಲಿ ಪಿಎಚ್‌ಡಿ ಪಡೆದುಕೊಂಡರು. 1977ರಲ್ಲಿ ಇವರು ತಮ್ಮ ಗುರು ಗೋಪಾಲರಾಯರನ್ನು ಅಮೆರಿಕಕ್ಕೆ ಕರೆದುಕೊಂಡು ಹೋದರು. ಮುಂದೆ 1978ರಲ್ಲಿ ಮಾರ್ಥ ಉಡುಪಿಯ ಯಕ್ಷಗಾನ ಮೇಳವನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗಿ ಮೂರು ತಿಂಗಳ ಕಾಲ ವಿವಿ ಸೇರಿದಂತೆ ಹಲವು ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡುವಂತೆ ಮಾಡಿದರು. ಹೀಗೆ ಯಕ್ಷಗಾನ ಕಲೆಯ ಕಂಪನ್ನು ಅಮೆರಿಕದಲ್ಲೂ ಬೆಳಗಿಸಿದ ಕೀರ್ತಿಗೆ ಅವರು ಪಾತ್ರರಾದರು. ಯಕ್ಷಗಾನವನ್ನು ಆಳವಾಗಿ ಅಧ್ಯಯನ ಮಾಡಿದ್ದ ಡಾ.ಮಾರ್ಥ 1977ರಲ್ಲಿ ‘ಯಕ್ಷಗಾನ: ಎ ಡ್ಯಾನ್ಸ್ ಡ್ರಾಮಾ ಆಫ್ ಇಂಡಿಯಾ’ ಎಂಬ ಪುಸ್ತಕವನ್ನು ಬರೆದರು.

ಎಂಜಿಎಂನ ಪ್ರಾಧ್ಯಾಪಕರಾದ ಲೀಲಾ ಭಟ್ ಹಾಗೂ ಲಕ್ಷ್ಮೀ ಕುಟ್ಟಿಯವರಿಂದ ಕನ್ನಡವನ್ನು ಕಲಿತ ಡಾ.ಮಾರ್ಥ ಈಗ ನಿರರ್ಗಳವಾಗಿ ಶುದ್ಧ ಕನ್ನಡ ಮಾತನಾಡುತ್ತಾರೆ. ಇದರೊಂದಿಗೆ ಹಿಂದಿ, ಫ್ರೆಂಚ್ ಭಾಷೆಯನ್ನು ಕೂಡ ಇವರು ಕಲಿತಿದ್ದರು. ಅಮೆರಿಕದಲ್ಲಿ ನೃತ್ಯ ಕಲಿಕೆ ಮಾಡುತ್ತಿದ್ದಾಗ ಮಾರ್ಥರಿಗೆ ಜೀವ ವಿಜ್ಞಾನಿ ಹಾಗೂ ಹವ್ಯಾಸಿ ಛಾಯಾಗ್ರಾಹಕರಾಗಿದ್ದ ಬಾಬ್ ಸಿಕೋರಾ ಅವರ ಪರಿಚಯವಾಯಿತು. ಅವರನ್ನು 1987ರಲ್ಲಿ ಹಿರಿಯಡ್ಕದ ಓಂತಿಬೆಟ್ಟುವಿನಲ್ಲಿರುವ ತಮ್ಮ ಗುರು ಗೋಪಾಲ ರಾಯರ ಮನೆಯಲ್ಲಿ ಭಾರತೀಯ ಸಂಪ್ರದಾಯದಂತೆ ವಿವಾಹವಾದರು. ಇದೀಗ ಡಾ.ಮಾರ್ಥ ಈ ಇಳಿ ವಯಸ್ಸಿನಲ್ಲೂ ಯಕ್ಷಗಾನದ ಬಗ್ಗೆ ಅಧ್ಯಯನ ಪುಸ್ತಕ ರಚಿಸಲು ಮುಂದಾಗಿದ್ದಾರೆ. ಯಕ್ಷಗಾನ ಈ ಹಿಂದೆ ಹೇಗೆ ಇತ್ತು, ಈಗ ಹೇಗೆ ಇದೆ, ಮುಂದೆ ಹೇಗೆ ಇರಬೇಕು ಎಂಬುದರ ಬಗ್ಗೆ ಅವರು ಪುಸ್ತಕ ಬರೆಯುವ ಸಿದ್ಧತೆಯಲ್ಲಿದ್ದಾರೆ. ಅದಕ್ಕಾಗಿ ಮತ್ತೆ ಭಾರತಕ್ಕೆ ಬಂದಿರುವ ಅವರು ಯಕ್ಷಗಾನವನ್ನು ಇನ್ನಷ್ಟು ಅಧ್ಯಯನ ಮಾಡುತ್ತಿದ್ದಾರೆ. ‘‘ಯಕ್ಷಗಾನ ಕಲೆ ಇನ್ನಷ್ಟು ಜನರಿಗೆ ತಿಳಿಯಬೇಕು. ಅಮೆರಿಕದಲ್ಲಿ ಇದಕ್ಕೆ ಸಾಕಷ್ಟು ಪ್ರಚಾರ ಸಿಗಬೇಕೆಂಬ ಉದ್ದೇಶದಿಂದ ಪುಸ್ತಕ ಬರೆಯುವ ಸಂಕಲ್ಪ ಮಾಡಿದ್ದೇನೆ’’ ಎನ್ನುತ್ತಾರೆ ಡಾ.ಮಾರ್ಥ.

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News