40 ಸಾವಿರ ನ್ಯಾಯಾಧೀಶರ ನೇಮಕ ಪ್ರಸ್ತಾಪ: ಸಿಜೆಐ ಹೇಳಿಕೆಯನ್ನು ತಿರಸ್ಕರಿಸಿದ ಕೇಂದ್ರ ಸರಕಾರ

Update: 2016-05-26 06:43 GMT

ಹೊಸದಿಲ್ಲಿ, ಮೇ 26: ದೇಶದಲ್ಲಿ ಬಾಕಿ ಉಳಿದಿರುವ ಮೂರು ಸಾವಿರ ಕೋಟಿ ಪ್ರಕರಣಗಳ ಇತ್ಯರ್ಥಗೊಳಿಸಲು 40 ಸಾವಿರ ನ್ಯಾಯಾಧೀಶರ ನೇಮಕ ಅಗತ್ಯ ಎಂದು  ಹೇಳಿರುವ ಸುಪ್ರೀಂ ಕೊರ್ಟ್‌‌ನ ನ್ಯಾಯಮೂರ್ತಿ ಟಿ.ಎಸ್.ಠಾಕೂರ‍್ ಅವರ ಅಭಿಪ್ರಾಯವನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿಗಳ ಅವರ ಹೇಳಿಕೆಯಲ್ಲಿ ಹುರುಳಿಲ್ಲ . ಈ ಹೇಳಿಕೆಯು ವೈಜ್ಞಾನಿಕ ಅಧ್ಯಯನ ಅಥವಾ ಅಂಕಿ ಅಂಶಗಳನ್ನು ಆಧರಿಸಿಲ್ಲ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.
ಮೇ8 ರಂದು ಮುಖ್ಯ ನ್ಯಾಯಮೂರ್ತಿ ನೀಡಿರುವ ಹೇಳಿಕೆಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥಕ್ಕೆ ನ್ಯಾಯಾಂಗ ಇಲಾಖೆಗೆ ಇನ್ನೂ 40,000 ನ್ಯಾಯಾಧೀಶರ ನೇಮಕ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದರು.  ಇದಕ್ಕೆ ಸ್ಪಷ್ಟನೆ ನೀಡಿರುವ ಸಚಿವ ಡಿವಿಎಸ್‌"1987ರ ಕಾನೂನು ಆಯೋಗದ  ವರದಿಯಲ್ಲಿ ನ್ಯಾಯಾಧೀಶರ ಸಂಖ್ಯೆಯನ್ನು  ಹೆಚ್ಚಿಸಲು ತಿಳಿಸಲಾಗಿದೆ. ತಜ್ಞರ ಮತ್ತು ಜನಸಾಮಾನ್ಯರ ಅಭಿಪ್ರಾಯವನ್ನು ಆಧರಿಸಿ ವರದಿ ತಯಾರಿಸಲಾಗಿದೆ.  ವೈಜ್ಞಾನಿಕ ಅಂಕಿ ಅಂಶಗಳು ಈ ತನಕ ಲಭ್ಯವಾಗಿಲ್ಲ. ಈ ಕಾರಣಕ್ಕಾಗಿ ಈ ವಿಚಾರದಲ್ಲಿ ನಾವೇನು ಹೇಳುವಂತಿಲ್ಲ” ಎಂದು  ಹೇಳಿದ್ದಾರೆ.
1987ರ ವರದಿ ಪ್ರಕಾರ 10 ಲಕ್ಷ ಜನಸಂಖ್ಯೆಗೆ 40 ನ್ಯಾಯಾಧೀಶರ ಅಗತ್ಯ.  2014ರಲ್ಲಿ ನೀಡಲಾದ 245ನೆ ವರದಿ ಪ್ರಕಾರ  10 ಲಕ್ಷ ಜನಸಂಖ್ಯೆಗೆ 50 ನ್ಯಾಯಾಧೀಶರು ಅಗತ್ಯ. ಪ್ರಸ್ತುತ ಮಂಜೂರಾದ  ನ್ಯಾಯಾಧೀಶರ ಹುದ್ದೆ 21,598. ಇದರಲ್ಲಿ 20,502 ಕೋರ್ಟ್‌ ನ್ಯಾಯಾಧೀಶರು. 1,065 ಹೈಕೋರ್ಟ್‌ ಮತ್ತು 31 ಸುಪ್ರೀಂ ಕೋರ್ಟ್‌‌ನ ನ್ಯಾಯಧೀಶರುಗಳ  ಹುದ್ದೆ ಒಳಗೊಂಡಿದೆ.

ಎನ್‌ಡಿಎ ಸರಕಾರವು ನ್ಯಾಯಾಧೀಶರ ನೇಮಕವನ್ನು ವಿಳಂಬ ಮಾಡುತ್ತಿದೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಸಚಿವ ಡಿವಿಎಸ್‌  ಸುಪ್ರೀಂ ಕೋರ್ಟ್‌ಗೆ ನಾಲ್ವರು ಜಡ್ಜ್‌ಗಳ ನೇಮಕ  ಆರು ದಿನಗಳ ಒಳಗಾಗಿ ನಡೆಯಲಿದೆ.  ಹೈಕೋರ್ಟ್‌ಗಳಿಗೆ 170 ನ್ಯಾಯಾಧೀಶರ ನೇಮಕ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News