ಸಹರಾದ 4,700 ಎಕ್ರೆ ಜಮೀನು ಮಾರಾಟಕ್ಕೆ

Update: 2016-05-30 14:39 GMT

ಮುಂಬೈ, ಮೇ 30: ಪ್ರಾಯಶಃ ಅತಿದೊಡ್ಡ ಅಖಿಲ ಭಾರತ ಜಮೀನು ಮಾರಾಟವೊಂದರಲ್ಲಿ ಸಹರಾ ಗುಂಪು 14 ರಾಜ್ಯಗಳಲ್ಲಿ ಪಡೆದಿರುವ 4,700 ಎಕ್ರೆಗಳಿಗೂ ಹೆಚ್ಚು ಜಮೀನನ್ನು ಎಚ್‌ಎಡಿಎಫ್‌ಸಿ ರಿಯಾಲ್ಟಿ ಹಾಗೂ ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್‌ಗಳು ಮಾರಾಟಕ್ಕಿರಿಸಿವೆ. ಈ ಮಾರಾಟದಿಂದ ರೂ.6,500 ಕೋಟಿ ಲಭ್ಯವಾಗುವ ನಿರೀಕ್ಷೆಯಿದೆ.

ತನ್ನಲ್ಲಿ ಒಟ್ಟು 33,633 ಎಕ್ರೆ ಜಮೀನಿದೆಯೆಂದು ಸಹರಾ ಪ್ರತಿಪಾದಿಸಿದೆ. ಇದರಲ್ಲಿ ಲೋನಾವಳದ ಸಮೀಪದ ಆಂಬಿ ವ್ಯಾಲಿ ಸಿಟಿ 10,600 ಎಕ್ರೆಯಷ್ಟಿದೆ. ಸುಮಾರು 1 ಸಾವಿರ ಎಕ್ರೆ ಭೂಮಿ ಉತ್ತರ ಪ್ರದೇಶದ ಪಟ್ಟಣಗಳು ಹಾಗೂ ನಗರಗಳಲ್ಲಿ ಹರಡಿದೆ. ಕಂಪೆನಿಯ ಮುಖ್ಯಾಲಯ ಲಕ್ನೊದಲ್ಲಿದೆ.

ಈ ತಿಂಗಳ ಆರಂಭದಲ್ಲಿ ಸುಪ್ರೀಂಕೋರ್ಟ್ ಸಹರಾದ ವರಿಷ್ಠ ಸುಬ್ರತ ರಾಯ್ ಹಾಗೂ ಗುಂಪಿನ ನಿರ್ದೇಶಕ ಅಶೋಕ್ ರಾಯ್ ಚೌಧರಿಯವರನ್ನು 4 ವಾರಗಳ ಪರೋಲ್‌ನ ಮೇಲೆ ಬಿಡುಗಡೆ ಮಾಡಿದೆ. ಸಹರಾ ಗುಂಪನ್ನು ಸೆಬಿ ನ್ಯಾಯಾಲಯಕ್ಕೆಳೆದ ಮೇಲೆ, 2014ರ ಮಾರ್ಚ್‌ನಿಂದ ರಾಯ್ ತಿಹಾರ್ ಜೈಲಿನಲ್ಲಿದ್ದಾರೆ. ರೂ. 5 ಸಾವಿರ ಕೋಟಿ ಬ್ಯಾಂಕ್ ಖಾತ್ರಿ ಹಾಗೂ ಮತ್ತೆ ರೂ. 5 ಸಾವಿರ ಕೋಟಿ ಜಾಮೀನಿಗಾಗಿ ಹೊಂದಿಸಲು ಸಹರಾ ತನ್ನ ಆಸ್ತಿಗಳನ್ನು ಮಾರಬಹುದೆಂದು ನ್ಯಾಯಾಲಯ ಸಲಹೆ ನೀಡಿತ್ತು.

 ಸುಪ್ರೀಂಕೋರ್ಟ್ ನಿರ್ದೇಶನದನ್ವಯ ದೇಶಾದ್ಯಂತದ 60 ಆಸ್ತಿಗಳ ಹರಾಜು ಹಾಕುವ ಹೊಣೆಯನ್ನು ಸೆಬಿ, ಎಚ್‌ಡಿಎಫ್‌ಸಿರಿ ಯಾಲ್ಟಿ ಹಾಗೂ ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್‌ಗಳಿಗೆ ನೀಡಿದೆ.

ಹರಾಜಿನಿಂದ ರೂ.6,500 ಕೋಟಿ ಬರುವ ನಿರೀಕ್ಷೆಯಿದೆ. ಆದರೆ, ಕೃಷಿ ಜಮೀನಿನ ಹೆಚ್ಚಿನ ಭಾಘ ಹಳ್ಳಿಗಳಲ್ಲಿರುವುದರಿಂದ ಅಷ್ಟು ಸಿಗುವುದು ಕಷ್ಟವೆಂದು ಮಾರುಕಟ್ಟೆ ಮೂಲಗಳು ಅಭಿಪ್ರಾಯಿಸಿವೆ.

ಇದೇ ವೇಳೆ ಆದಾಯ ತೆರಿಗೆ ಇಲಾಖೆ ಸಹ ತನ್ನ ಬಾಕಿ ವಸೂಲಿಗಾಗಿ ಈ ಆಸ್ತಿಗಳ ಮೇಲೆ ಹಕ್ಕು ಪ್ರತಿಪಾದಿಸಿದೆಯೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News