ದಿಲ್ಲಿಯ ಮಾಜಿ ಪೊಲೀಸ್‌ ಆಯುಕ್ತ ಬಸ್ಸಿ ಯುಪಿಎಸ್ಸಿ ಸದಸ್ಯರಾಗಿ ನೇಮಕ

Update: 2016-05-31 12:13 GMT

ಹೊಸದಿಲ್ಲಿ, ಮೇ 31: ದಿಲ್ಲಿಯ ಮಾಜಿ ಪೊಲೀಸ್‌ ಆಯುಕ್ತ ಬಿ.ಎಸ್.  ಬಸ್ಸಿ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಸದಸ್ಯರಾಗಿ  ನೇಮಕಗೊಂಡಿದ್ದಾರೆ.

ಐಎಎಸ್, ಐಪಿಎಸ್‌ ಮತ್ತಿತರ ಅಧಿಕಾರಿಗಳ ಆಯ್ಕೆಗೆ ಪರೀಕ್ಷೆ ನಡೆಸುವ  ಕೇಂದ್ರ ಲೋಕಸೇವಾ ಆಯೋಗಕ್ಕೆ   60ರ ಹರೆಯದ ಬಿ.ಎಸ್. ಬಸ್ಸಿ ಅವರನ್ನು ಸದಸ್ಯರಾಗಿ ಕೇಂದ್ರ ಸರಕಾರ ನೇಮಕ ಮಾಡಿದೆ. ಆಯೋಗದಲ್ಲಿ ಅಧ್ಯಕ್ಷರು , ಅಲ್ಲದೆ ಗರಿಷ್ಠ ಹತ್ತು ಮಂದಿ ಸದಸ್ಯರಿರುತ್ತಾರೆ. 
ದೀಪಕ್‌ ಗುಪ್ತಾ ಅಧ್ಯಕ್ಷರಾಗಿರುವ ಲೋಕಸೇವಾ ಆಯೋಗದಲ್ಲಿ ಅಲ್ಕಾ ಸಿರೋಹಿ, ಡೇವಿಡ್‌ ಆರ್‌ ಸೈಮೆಲಿ, ಮನ್ಬೀರ್‌ ಸಿಂಗ್‌, ನೇವಿಯ ಮಾಜಿ ವೈಸ್‌ -ಚೀಪ್‌ ಡಿ.ಕೆ.ಧವನ್‌, ವಿನಯ್‌ ಮಿತ್ತಲ್‌, ಚತ್ತರ್‌ ಸಿಂಗ್‌, ಪ್ರೊಫೆಸರ‍್ ಹೇಮ್‌ ಚಂದ್ರ, ಅರವಿಂದ್‌ ಸಕ್ಸೆನಾ ಮತ್ತು ಪ್ರೊಫೆಸರ್‌ ಪ್ರದೀಪ್‌ ಕುಮಾರ‍್ ಜೋಶ್‌  ಸದಸ್ಯರಾಗಿದ್ದಾರೆ. ಮಾಂಸ ರಫ್ತು ಹಗರಣದಲ್ಲಿ ಸಿಲುಕಿಕೊಂಡ ಹಿನ್ನೆಲೆಯಲ್ಲಿ ಕಳೆದ ಜನವರಿಯಲ್ಲಿ ರಾಜೀನಾಮೆ ನೀಡಿದ್ದ ಸಿಬಿಐನ ಮಾಜಿ  ನಿರ್ದೇಶಕ ಎ.ಪಿ. ಸಿಂಗ್‌   ಅವರು  ಆಯೋಗದ ಸದಸ್ಯರಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಎಜಿಎಂಯುಟಿ( ಅರುಣಾಚಲ ಪ್ರದೇಶ,-ಗೋವಾ-ಮಿಝೊರಾಮ್‌ ಮತ್ತು ಕೇಂದ್ರಾಡಳಿತ ಪ್ರದೇಶ) ಕೇಡರ್‌ನ  1977 ರ ಬ್ಯಾಚ್‌ನ  ಐಪಿಎಸ್‌ ಅಧಿಕಾರಿ ಬಸ್ಸಿ ಕಳೆದ ಫೆಬ್ರವರಿಯಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. 
 ಬಿ.ಎಸ್.  ಬಸ್ಸಿ  ದಿಲ್ಲಿಯ ಪೊಲೀಸ್‌ ಆಯುಕ್ತರಾಗಿದ್ದಾಗ ದಿಲ್ಲಿಯ ಜೆಎನ್‌ಯು ವಿದ್ಯಾರ್ಥಿ ನಾಯಕ  ಕನ್ಹೇಯಾ ಕುಮಾರ್‌ ಅವರನ್ನು ದೇಶ ವಿರೋಧಿ ಘೋಷಣೆ ಕೂಗಿದ  ಆರೋಪದಲ್ಲಿ ಬಂಧನ, ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್‌  ನೇತೃತ್ವದ ದಿಲ್ಲಿ ಸರಕಾರದ ವಿರುದ್ಧ ಘರ್ಷಣೆ ಸೇರಿದಂತೆ ಹಲವು ವಿವಾದಗಳಲ್ಲಿ ಶಾಮೀಲಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News