ಗೋವಾದಲ್ಲಿ ಇಬ್ಬರು ಮುಖ್ಯಮಂತ್ರಿಗಳು!

Update: 2016-06-03 15:02 GMT

ಪಣಜಿ,ಜೂ.3: ಮುಂಬರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 40 ಸ್ಥಾನಗಳಿಗೆ ಸ್ಪರ್ಧಿಸಲು ಸಜ್ಜುಗೊಳ್ಳುತ್ತಿರುವ ಆಮ್ ಆದ್ಮಿ ಪಾರ್ಟಿ(ಆಪ್)ಯು ರಾಜ್ಯದ ಮುಖ್ಯ ನಿರ್ಧಾರಗಳಲ್ಲಿ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅವರ ಹಸ್ತಕ್ಷೇಪವನ್ನು ಬಲವಾಗಿ ಆಕ್ಷೇಪಿಸಿದೆ.

ಪಾರಿಕ್ಕರ್ ಅವರು ಗೋವಾ ಸಂಪುಟ ಸಭೆಗಳ ಅಧ್ಯಕ್ಷತೆಯನ್ನು ವಹಿಸುತ್ತಿದ್ದಾರೆ ಎಂದು ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಆರೋಪಿಸಿದ ಆಪ್‌ನ ರಾಷ್ಟ್ರೀಯ ವಕ್ತಾರ ಅಶುತೋಷ್ ಅವರು, ಗೋವಾದಲ್ಲಿ ಇಬ್ಬರು ಮುಖ್ಯಮಂತ್ರಿಗಳಿರುವುದರಿಂದ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಿದೆ. ಹೀಗಾಗಿ ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರ ಹಸ್ತಕ್ಷೇಪವು ಅಗತ್ಯವಾಗಿದೆ. ವಾಸ್ತವದಲ್ಲಿ ಪರ್ಯಟನ ಭವನ(ಗೋವಾದಲ್ಲಿ ಪಾರ್ರಿಕರ್ ಅವರ ಮೊಕ್ಕಾಂ ಕಚೇರಿ)ವು ಮುಖ್ಯಮಂತ್ರಿಗಳ ಕಚೇರಿಯಾಗಿ ಪರಿಣಮಿಸಿದೆ ಎಂದರು.

ಭಾರತೀಯ ಸಂವಿಧಾನದಂತೆ ಯಾವುದೇ ರಾಜ್ಯವು ಎರಡು ಮುಖ್ಯಮಂತ್ರಿಗಳನ್ನು ಹೊಂದುವಂತಿಲ್ಲ ಎಂದ ಅವರು,ಇದು ಸಾಂವಿಧಾನಿಕ ಬಿಕ್ಕಟ್ಟಿನ ಸ್ಪಷ್ಟ ಪ್ರಕರಣವಾಗಿದೆ. ನಾಳೆ ಅಥವಾ ನಾಳಿದ್ದು ನಾವು ರಾಜ್ಯಪಾಲರನ್ನು ಭೇಟಿಯಾಗಿ ಇಂತಹ ಸ್ಥಿತಿಯ ವಿರುದ್ಧ ಅಹವಾಲು ಸಲ್ಲಿಸಲಿದ್ದೇವೆ ಎಂದರು.

ಗೋವಾದ ಮುಖ್ಯಮಂತ್ರಿ ಯಾರು ಎನ್ನುವುದನ್ನು ಬಿಜೆಪಿಯು ನಮಗೆ ತಿಳಿಸಬೇಕು.ಮನೋಹರ ಪಾರಿಕ್ಕರರೋ ಅಥವಾ ಲಕ್ಷ್ಮೀಕಾಂತ ಪಾರ್ಸೇಕರರೋ ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News