ಮತ್ತೆ ನಗೆಪಾಟಲಿಗೀಡಾದ ಮೋದಿಯ ‘ಇತಿಹಾಸ’!

Update: 2016-06-08 08:54 GMT

ಹೊಸದಿಲ್ಲಿ, ಜೂ.8: ಟ್ವಿಟರ್‌ನಲ್ಲಿ ‘ಉಡ್ತಾಪಿಎಂ’ ಹ್ಯಾಶ್ ಟ್ಯಾಗ್ ನೋಡಿದ್ದೀರೇನು? ಪ್ರಧಾನಿ ನರೇಂದ್ರ ಮೋದಿ ವಿಶ್ವದ ವಿವಿಧ ದೇಶಗಳಿಗೆ ಪರ್ಯಟನೆ ಮಾಡುವಲ್ಲಿ ನಿಸ್ಸೀಮರಾಗಿದ್ದಾರೆಂದು ಅಥವಾ 100 ಮಿಲಿಯನ್ ಬೆಲೆಬಾಳುವ ಹಾಗೂ ಕಳ್ಳ ಹಾದಿಯ ಮೂಲಕ ಅಮೇರಿಕಾ ಪ್ರವೇಶಿಸಿರುವ ಭಾರತದ ಪ್ರಾಚೀನ ಕಲಾಕೃತಿಗಳನ್ನು ಅಮೇರಿಕಾ ಹಿಂದಕ್ಕೆ ನೀಡಿದೆಯೆಂಬ ಕಾರಣಕ್ಕಾಗಿ ಈ ಹ್ಯಾಶ್ ಟ್ಯಾಗ್ ನೀಡಲಾಗಿಲ್ಲ.

ಪ್ರಧಾನಿ ಅಮೇರಿಕಾದಲ್ಲಿ ಮಾತನಾಡುತ್ತಾ ಭಾರತದ ಕೊಣಾರ್ಕ್ ದೇವಸ್ಥಾನ 2,000 ವರ್ಷಕ್ಕೂ ಹಿಂದೆ ನಿರ್ಮಿಸಲ್ಪಟ್ಟಿದೆಯೆಂದೂ ಅಲ್ಲಿರುವ ಶಿಲ್ಪಕಲೆಗಳಲ್ಲಿ ಕಾಣಿಸುವ ಮಹಿಳೆಯರು ಸ್ಕರ್ಟ್ ಧರಿಸಿ ಕೈಯಲ್ಲಿ ಹ್ಯಾಂಡ್ ಬ್ಯಾಗ್ ಹಿಡಿದಿದ್ದಾರೆಂದೂ ಹಾಗೂ ಇದು ‘‘ಉಸ್ ಸಮಯ್ ಭೀ ಯೇ ಚೀಸ್ ಮೌಜೂದ್ ಹೋಗಿ’’ (ಆ ಕಾಲದಲ್ಲೂ ಇಂತಹ ಸಂಗತಿಗಳು ಅಸ್ತಿತ್ವದಲ್ಲಿದ್ದವು) ಎಂಬುದನ್ನು ಸಾಬೀತು ಪಡಿಸುತ್ತದೆ ಎಂದಿದ್ದರು.

ಆದರೆ ವಾಸ್ತವವಾಗಿ ಈ ದೇವಸ್ಥಾನ 13ನೆ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದ್ದು 2,000 ವರ್ಷಕ್ಕೂ ಕಡಿಮೆ ಇತಿಹಾಸ ಹೊಂದಿದೆ. ಮೋದಿಯ ಈ ಹೇಳಿಕೆ ಬಂದಂದಿನಿಂದ ಟ್ವಿಟ್ಟರಿಗರು ಅವರನ್ನು ಲೇವಡಿ ಮಾಡಿದ್ದು, ಇತಿಹಾಸದ ಬಗ್ಗೆ ತಿಳಿದಿರುವವರು ಮೋದಿ ಇಂತಹ ಹೇಳಿಕೆಗಳನ್ನು ನೀಡುವ ಮೊದಲು ಇತಿಹಾಸ ಅರಿಯುವ ಪ್ರಯತ್ನ ಮಾಡಬೇಕೆಂಬ ಸಲಹೆಯನ್ನು ನೀಡಿದ್ದಾರೆ.

ಕೆಲವರಂತೂ ಪ್ರಧಾನಿಯ ಬಗ್ಗೆ ಕನಿಕರ ಕೂಡ ತೋರಿಸಿದ್ದು ಇತಿಹಾಸ ಪಠ್ಯಪುಸ್ತಕಗಳನ್ನು ಪುನರ್ರಚಿಸುವ ಯತ್ನಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಇತಿಹಾಸದ ಬಗೆಗಿನ ವಾಸ್ತವತೆಗಳ ಬಗ್ಗೆಯೂ ಮೋದಿಯವರಿಗೆ ಗೋಜಲುಂಟಾಗಿರಬಹುದೆಂದು ನವಿರಾದ ಹಾಸ್ಯ ಲೇಪನ ಮಾಡಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News