ಕಾಡಂಕಲ್ಲ್ ಮನೆ

Update: 2016-06-18 18:56 GMT

ಇಂದಿನಿಂದ ಪ್ರತೀ ರವಿವಾರ ಮತ್ತು ಗುರುವಾರದಂದು ಖ್ಯಾತ ಕತೆಗಾರ ಮುಹಮ್ಮದ್ ಕುಳಾಯಿಯವರ ‘‘ಕಾಡಂಕಲ್‌ಲ್ ಮನೆ’’’ ಕಾದಂಬರಿಯು ಕಂತುಗಳಲ್ಲಿ ಪ್ರಕಟವಾಗಲಿದೆ.-ಸಂ.

ಮಂಗಳೂರು ಬಸ್ಸು ನಿಲ್ದಾಣದಲ್ಲಿ ಇಳಿದು ಸಿಟಿಬಸ್ಸು ಹತ್ತಿದರೆ ಜಳಕದಕಟ್ಟೆಗೆ ಅರ್ಧಗಂಟೆ ಪ್ರಯಾಣ. ಜಳಕದಕಟ್ಟೆಯಿಂದ ಕಾಡಂಕಲ್‌ಲ್ಗೆ ನಡೆದುಕೊಂಡು ಹೋಗುವುದಾದರೆ ಕಡಿಮೆಯೆಂದರೂ ಒಂದು ಗಂಟೆ ಬೇಕು. ಆಟೋದಲ್ಲಿ ಹೋಗುವುದಾದರೆ 15-20 ನಿಮಿಷ ದಾರಿ.

ತಾಹಿರಾ ಜಳಕದಕಟ್ಟೆಯಲ್ಲಿ ಬಂದು ಇಳಿದಾಗ ಬೆಳಗ್ಗೆ 6 ಗಂಟೆಯ ಹೊತ್ತು. ಚುಮು ಚುಮು ಚಳಿಗೆ ಕೈ ಕೈ ಹೊಸೆದುಕೊಳ್ಳುತ್ತಾ ಸುತ್ತಲೂ ನೋಡಿದವಳಿಗೆ ಒಂದು ನರಪಿಳ್ಳೆಯೂ ಕಾಣಿಸಲಿಲ್ಲ. ಹಾಗೆಯೇ ತನ್ನ ಚಕ್ರದ ಬ್ಯಾಗನ್ನು ಎಳೆದುಕೊಂಡು ಬಂದವಳು ಕಟ್ಟೆಯ ಬಳಿಯಲ್ಲಿ ಬಂದು ನಿಂತು ತನ್ನ ಪ್ಯಾಂಟಿನ ಕಿಸೆಯಲ್ಲಿರುವ ಚೀಟಿಯನ್ನು ತೆಗೆದು ಮತ್ತೊಮ್ಮೆ ವಿಳಾಸವನ್ನು ಓದಿಕೊಂಡಳು. ‘‘ಕಾಡಂಕಲ್‌ಲ್ ಅಬ್ಬು ಬ್ಯಾರಿ, ಕಾಡಂಕಲ್‌ಲ್ ಮನೆ...’’ ಚೀಟಿಯನ್ನು ಮಡಚಿ ಮತ್ತೆ ಕಿಸೆಗೆ ತಳ್ಳಿದವಳು ಅಲ್ಲೇ ಕಟ್ಟೆ ಹತ್ತಿ ಕುಳಿತಳು. ‘‘ಈ ಊರಿನ ಜನರಿಗೆ ಬೆಳಗಾಗಲು ಇನ್ನು ಎಷ್ಟು ಹೊತ್ತಿದೆಯೋ’’ ಎಂದು ಯೋಚಿಸುವಷ್ಟರಲ್ಲಿ ಒಂದಷ್ಟು ದೂರದಲ್ಲಿ ಬೆಳಕು ಚೆಲ್ಲುತ್ತಾ ಬರುವ ಸ್ಕೂಟರ್ ಕಾಣಿಸಿತು. ಕಟ್ಟೆಯಿಂದ ದಿಗ್ಗನೆ ಜಿಗಿದವಳು ರಸ್ತೆಯಂಚಿಗೆ ಬಂದು ಸ್ಕೂಟರ್ ನಿಲ್ಲಿಸುವಂತೆ ಅಡ್ಡಲಾಗಿ ಕೈ ನೀಡಿದಳು. ಸ್ಕೂಟರ್‌ನವನು ನಿಲ್ಲಿಸುವುದೋ ಬೇಡವೋ ಎಂಬ ಅನುಮಾನದಿಂದೆಂಬಂತೆ ಒಂದು ನೂರು ಹೆಜ್ಜೆಯಷ್ಟು ಮುಂದೆ ಸಾಗಿ ಒಮ್ಮೆಲೇ ಬ್ರೇಕ್ ಹಾಕಿದ. ತಾಹಿರಾ ಅವನ ಬಳಿ ಓಡುತ್ತಲೇ ಹೋದವಳು ‘‘ನನಗೆ ಕಾಡಂಕಲ್‌ಲ್ಗೆ ಹೋಗಬೇಕು. ಇಲ್ಲಿ ಏನಾದರೂ ವಾಹನ ಸಿಗುತ್ತದಾ?’’ ಕೇಳಿದಳು. ಆ ವ್ಯಕ್ತಿ ಅವಳನ್ನು ‘‘ಇದ್ಯಾವುದಪ್ಪ, ಒಂದು ಹೊಸ ಪ್ರಾಣಿ ನಮ್ಮೂರಿಗೆ ಬಂದದ್ದು!’’ ಎನ್ನುವಂತೆ ದಿಟ್ಟಿಸಿ ನೋಡಿ, ‘‘ಈಗ ಏನೂ ಸಿಗುವುದಿಲ್ಲ. 8 ಗಂಟೆಯ ನಂತರ ಆದ್ರೆ ಆಟೋ ಸಿಗುತ್ತೆ’’ ಎಂದು ಮತ್ತೊಮ್ಮೆ ಅವಳನ್ನು ದುರುಗುಟ್ಟಿ ನೋಡಿ ‘‘ಕಾಡಂಕಲ್‌ಲ್ ನಲ್ಲಿ ಎಲ್ಲಿಗೆ, ಯಾರ ಮನೆಗೆ ಹೋಗಬೇಕು?’’ ಕೇಳಿದ. ‘‘ಅಬ್ಬು ಬ್ಯಾರಿ, ಕಾಡಂಕಲ್‌ಲ್ ಅಬ್ಬು ಬ್ಯಾರಿ ಮನೆಗೆ’’ ಎಂದವಳು, ‘‘ಇಲ್ಲಿ ಹತ್ತಿರ ಎಲ್ಲಿಯಾದರೂ ಹೋಟೆಲ್ ಇದೆಯಾ’’ ಕೇಳಿದಳು. ಆ ವ್ಯಕ್ತಿ ಈಗ ಸ್ಕೂಟರ್ ಬಂದ್ ಮಾಡಿ ಬಹಳ ಆತ್ಮೀಯತೆಯಿಂದ ‘‘ಇಲ್ಲಿ ಹತ್ತಿರ ಎಲ್ಲೂ ಇಲ್ಲಮ್ಮಾ. ಒಂದು ಫರ್ಲಾಂಗು ಹಿಂದೆ ಹೋಗಬೇಕು. ಹೋದರೂ ಮತ್ತೆ ಆಟೋ ಸಿಗಬೇಕಾದರೆ ನೀವು ಇಲ್ಲಿಗೇ ಬರಬೇಕು. ನೀವು ಇಲ್ಲಿಯೇ ನಿಲ್ಲುವುದು ಒಳ್ಳೆಯದು. ಒಮ್ಮೆಮ್ಮೆ ಎಲ್ಲಿಗಾದರೂ ಬಂದ ಆಟೋ ಸಿಗುತ್ತದೆ’’ ಎಂದು ಸ್ಕೂಟರನ್ನು ತಳ್ಳಿಕೊಂಡು ಬಂದು ಬದಿಯಲ್ಲಿ ನಿಲ್ಲಿಸಿದ.

ಅದಾಗಲೇ ದೂರದಲ್ಲಿ ಒಂದು ಆಟೋ ಬರುವುದು ಕಾಣಿಸಿತು. ಆ ವ್ಯಕ್ತಿಯೇ ಮುಂದೆ ಹೋಗಿ, ಕೈ ತೋರಿಸಿ ಆಟೋ ನಿಲ್ಲಿಸಿದ. ‘‘ನೋಡಿ ಈ ಹೆಣ್ಣು ಮಗಳು ಒಬ್ಬಳೇ ಇದ್ದಾಳೆ. ಕಾಡಂಕಲ್‌ಲ್ಗೆ ಹೋಗಬೇಕಂತೆ, ಸ್ವಲ್ಪ ಅಲ್ಲಿಯವರೆಗೆ ಬಿಟ್ಟು ಬಿಡಿ’’ ಎಂದು ಸಹಾಯ ಯಾಚಿಸುವವನಂತೆ ಕೇಳಿ, ಆಕೆಯ ಬ್ಯಾಗನ್ನು ಎತ್ತಿ ತಂದು ಆಟೋದಲ್ಲಿಟ್ಟು, ಆಕೆಯನ್ನು ಹತ್ತಿಸಿ, ಆಟೋದವನಿಗೆ ವಿಳಾಸ ಹೇಳಿ ‘‘ಸರಿ ಹೋಗಮ್ಮ’’ಎಂದು ಬೀಳ್ಕೊಟ್ಟ. ಅವಳು ಆತನಿಗೆ ಕೃತಜ್ಞತೆ ಹೇಳುತ್ತಿದ್ದಂತೆಯೇ ಆಟೋ ಚಲಿಸಿತು.

ಕಾಡಂಕಲ್‌ಲ್ ಮನೆ ತಲುಪಿದಾಗ 7 ಗಂಟೆಯಾಗಿತ್ತು. ಆಟೋದಿಂದಿಳಿದವಳೇ ಒಮ್ಮೆ ಸುತ್ತಲೂ ನೋಡಿದಳು. ಹಚ್ಚಹಸುರಿನಿಂದ ಕಂಗೊಳಿಸುತ್ತಿರುವ ಪ್ರಕೃತಿ, ಸುಂದರವಾದ ಆ ಪರಿಸರ ಅವಳಿಗೆ ಬಹಳ ಖುಷಿ ಕೊಟ್ಟಿತು. ತೆಂಗು, ಕಂಗು, ಮಾವು, ಹಲಸಿನ ಮರಗಳ ಕಾಡಿನ ಮಧ್ಯೆ ದೀಪವಿಟ್ಟಂತೆ ಕಾಡಂಕಲ್‌ಲ್ ಮನೆ ಎದ್ದು ಕಾಣುತ್ತಿತ್ತು. ತನ್ನ ಬ್ಯಾಗನ್ನು ಎಳೆಯುತ್ತಾ ಹೆಜ್ಜೆ ಹಾಕಿದವಳು, ಗೇಟಿನ ಬಳಿ ನಿಂತು ಒಮ್ಮೆ ಆ ಮನೆಯನ್ನೇ ನೋಡಿದಳು. ‘’ ಮಾಡಿನ ಹಳೇ ಕಾಲದ ಹೆಂಚಿನ ಮನೆ. ವಿಶಾಲವಾದ ಜಗಲಿ. ಮರದ ದೊಡ್ಡ ದೊಡ್ಡ ಕಂಬಗಳು. ಬಹಳ ವರ್ಷಗಳಷ್ಟು ಹಳೆಯ ಮನೆಯಾಗಿರಬಹುದಾದರೂ ಈಗ ಕಟ್ಟಿಸಿದಂತೆ ಸುಣ್ಣ-ಬಣ್ಣದಿಂದ ಪಳ ಪಳ ಹೊಳೆಯುತ್ತಿತ್ತು. ಮನೆಯ ಬಾಗಿಲು ಮುಚ್ಚಿತ್ತು. ತಾಹಿರಾ ಜಗಲಿಯೇರಿದವಳೇ ಕರೆಗಂಟೆ ಒತ್ತಿದಳು. ನಿಮಿಷಗಳು ಕಳೆದರೂ ಬಾಗಿಲು ತೆರೆಯದ್ದು ಕಂಡು ಮತ್ತೆ ಒತ್ತಿದಳು. ಬಾಗಿಲು ತೆರೆಯಲಿಲ್ಲ. ಮನೆಯಲ್ಲಿ ಯಾರೂ ಇಲ್ಲವೇನೋ ಎಂದು ಮುಚ್ಚಿದ ಕಿಟಕಿಯ ಎಡೆಯಲ್ಲಿ ಇಣುಕಿದಳು. ಏನೂ ಕಾಣಿಸಲಿಲ್ಲ. ಒಳಗಿಂದ ಯಾವುದೇ ಶಬ್ದವಿಲ್ಲ. ಮತ್ತೊಮ್ಮೆ ಸ್ವಲ್ಪ ದೀರ್ಘವಾಗಿಯೇ ಕರೆಗಂಟೆ ಒತ್ತಿದಳು.

***

ಕೆಲವು ದಿನಗಳಿಂದ ಮೊಣಕಾಲು ಗಂಟು ನೋವಿನಿಂದ ಬಳಲುತ್ತಿದ್ದ ಪಾತಜ್ಜಿಗೆ ಅಂದು ರಾತ್ರಿ ಇಡೀ ನಿದ್ದೆ ಬಂದಿರಲಿಲ್ಲ. ಮಧ್ಯರಾತ್ರಿ ಎರಡು ಸಲ ಎದ್ದು ಎಣ್ಣೆ ತಿಕ್ಕಿದ್ದರೂ, ಮಾತ್ರೆ ಸೇವಿಸಿದ್ದರೂ ನೋವು ಕಡಿಮೆಯಾಗಿರಲಿಲ್ಲ. ಸಾವಿರ ಸೂಜಿಗಳಿಂದ ಚುಚ್ಚಿದಂತಹ ಅಸಹ್ಯ ನೋವಿಗೆ ನರಳುತ್ತಾ, ಹೊರಳುತ್ತಾ ಇದ್ದವರು ಮುಂಜಾನೆ ಬಾಂಗ್ ಕರೆ ಕೇಳುತ್ತಿದ್ದಂತೆಯೇ ಎದ್ದು ಹೋಗಿ ವುಝೂ ಮಾಡಿ ನಮಾಝ್ ಮುಗಿಸಿದರು. ಆನಂತರ ಮತ್ತೆ ಮೊಣಕಾಲಿಗೆ ಎಣ್ಣೆ ತಿಕ್ಕಿ ಮಲಗಿದವರಿಗೆ ಯಾವಾಗ ನಿದ್ದೆ ಹತ್ತಿತ್ತೋ ಗೊತ್ತಿಲ್ಲ, ಕರೆಗಂಟೆ ಕೇಳಿಸಿದಾಗಲೇ ಎಚ್ಚರವಾದದ್ದು. ಕಣ್ಣು ಬಿಟ್ಟವರು ಮಗ್ಗುಲು ಬದಲಿಸುತ್ತಾ, ‘‘ಐಸೂ’’ ಎಂದು ಕರೆದರು. ನಿಮಿಷ ಕಳೆದು ಮತ್ತೆ ಕರೆಗಂಟೆ ಶಬ್ದ ಕೇಳಿದಾಗ, ‘‘ಐಸೂ... ಎಲ್ಲಿದ್ದಿಯಾ... ಯಾರು ನೋಡಲ್ಲಿ...’’ ಎಂದು ಕೂಗುತ್ತಾ ಎದ್ದು ಕುಳಿತರು. ಮೂರನೆ ಸಲ ಗಂಟೆ ಬಾರಿಸಿದಾಗ ಜೋರಾಗಿ ‘‘ಐಸೂ...’’ ಎನ್ನುತ್ತಾ ತನ್ನ ಕೋಲಿಗಾಗಿ ಅತ್ತಿತ್ತ ಹುಡುಕಿದರು. ಕೋಲು ಕಾಣಲಿಲ್ಲ. ಮೆಲ್ಲನೆ ಎದ್ದು ನಿಂತು ಹೆಜ್ಜೆ ಬದಲಿಸುತ್ತಾ ನಡೆದು, ಚಿಲಕ ಸರಿಸಿ ಬಾಗಿಲು ತೆರೆದರು. ಅಪರಿಚಿತ ವ್ಯಕ್ತಿಯೊಬ್ಬರು ಬಾಗಿಲಲ್ಲಿ ನಿಂತಿದ್ದರು. ಅಜ್ಜಿ ಕಣ್ಣು ಪಿಳಿಪಿಳಿ ಮಾಡುತ್ತಾ, ‘‘ಯಾರೂ...?’’ ಎಂದು ಕೇಳಿದರು.

‘‘ಅಜ್ಜೀ... ನಾನಜ್ಜೀ...’’

ಅರೇ... ಹೆಣ್ಣು ಧ್ವನಿ...! ಅಜ್ಜಿ ಕಣ್ಣುಜ್ಜುತ್ತಾ ಮತ್ತೆ ಮತ್ತೆ ಆ ವ್ಯಕ್ತಿಯನ್ನೇ ದಿಟ್ಟಿಸಿ ನೋಡಿದರು. ಹೌದು ಹೆಣ್ಣು. ಗಂಡು ವೇಷದಲ್ಲಿರುವ ಹೆಣ್ಣು! ಯಾರಿರಬಹುದು ಇಷ್ಟು ಬೆಳಗ್ಗೆ...!

‘‘ಯಾರು ನೀನು... ಯಾರು ಬೇಕಾಗಿತ್ತು...?

‘‘ಅಜ್ಜಿ... ನಾನಜ್ಜಿ, ನಿಮ್ಮ ಮೊಮ್ಮಗಳು...’’

‘‘ಮೊಮ್ಮಗಳು... ಯಾವ ಮೊಮ್ಮಗಳು...?’’ ಅಜ್ಜಿ ಪರೀಕ್ಷಿಸುವವರಂತೆ ಅವಳನ್ನೇ ನೋಡಿದರು.

‘‘ಅಜ್ಜೀ... ನಾನು ನಿಮ್ಮ ಕಿರಿಯ ಮಗಳು ರೊಹರಾ ಇದ್ದಾರಲ್ಲಾ ಅವರ ಮಗಳು, ನಿಮ್ಮ ಮೊಮ್ಮಗಳು...’’

ಅಜ್ಜಿಗೆ ಒಮ್ಮೆಗೆ ಸಿಡಿಲು ಬಡಿದಂತಾಗಿ ‘‘ಏನೂ...!’’ ಅನ್ನುತ್ತಾ ಅವಳನ್ನೇ ದಿಟ್ಟಿಸಿ ನೋಡಿದರು. ಹೃದಯದಾಳದಲ್ಲಿ ಹೊತ್ತಿಕೊಂಡ ಸಣ್ಣ ಕಿಡಿಯೊಂದು ಭಗ್ಗನೆ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ದೇಹವೆಲ್ಲ ಆವರಿಸಿದಂತಾಗಿ ಕಂಪಿಸಿದ ಅವರು, ತಲೆ ಸುತ್ತಿಬಂದಂತಾಗಿ ಬಾಗಿಲನ್ನು ಹಿಡಿದುಕೊಂಡು ಸ್ವಲ್ಪ ಹೊತ್ತು ಅಲ್ಲೇ ನಿಂತರು. ಮತ್ತೆ ತಿರುಗಿ ಹೆಜ್ಜೆ ಬದಲಿಸುತ್ತಾ ‘‘ಐಸೂ...’’ ಎಂದು ಜೋರಾಗಿ ಕರೆದರು. ಅವರ ಧ್ವನಿ ಈಗ ನಡುಗುತ್ತಿತ್ತು. ಅದಾಗಲೇ ಐಸು ಬಂದು ಅವರ ಎದುರು ನಿಂತಿದ್ದಳು. ‘‘ನೋಡು ಅಲ್ಲಿ ಹೊರಗೆ ಯಾರೋ ಬಂದಿದ್ದಾರೆ. ಅವಳಿಗೆ ಏನು ಬೇಕು ಕೇಳಿ ಕೊಟ್ಟು ಕಳಿಸು’’ ಎನ್ನುತ್ತಾ ಬಂದು ತನ್ನ ಕೋಣೆಯಲ್ಲಿ ಮಂಚದ ಮೇಲೆ ಬಿದ್ದುಕೊಂಡರು.

ಐಸು ಬಾಗಿಲ ಬಳಿ ಬಂದು ನೋಡಿದಳು. ಪ್ಯಾಂಟ್-ಅಂಗಿ ಧರಿಸಿದ ಬೊಂಬೆಯಂತಹ ಹುಡುಗಿಯೊಬ್ಬಳು ಬಾಗಿಲಲ್ಲಿ ನಿಂತಿದ್ದಳು. ಅವಳಿಗೆ ಆಶ್ಚರ್ಯವಾಗಿತ್ತು.

‘‘ಯಾರು ನೀನು...? ಏನು ಬೇಕಾಗಿತ್ತು...?’’ ಕೇಳಿದಳು.

‘‘ನನ್ನ ಹೆಸರು ತಾಹಿರಾಂತ. ನಾನು ಅಜ್ಜಿಯ ಕಿರಿಯ ಮಗಳು ರೊಹರಾಳ ಮಗಳು. ಅಜ್ಜಿಯನ್ನು ನೋಡಬೇಕೆಂದು ಆಸೆಯಾಯಿತು. ಅದಕ್ಕೆ ಬಂದೆ...’’

ಐಸು ಒಂದು ಕ್ಷಣ ಕಂಬದಂತೆ ನಿಂತುಬಿಟ್ಟಳು. ಅವಳಿಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಅವಳು ಸಂತೋಷದಿಂದ ‘‘ಏನು, ರೊಹರಾಳ ಮಗಳಾ... ಯಾ ಅಲ್ಲಾಹ್... ಬಾಮ್ಮಾ... ಅಲ್ಲೇ ಯಾಕೆ ನಿಂತಿದ್ದಿಯಾ... ಒಳಗೆ ಬಾಮ್ಮಾ...’’ ಎನ್ನುತ್ತಾ ಅಜ್ಜಿಯ ಬಳಿಗೆ ಓಡಿದಳು.

‘‘ಅಜ್ಜೀ, ಅಲ್ಲಿ ಯಾರು ಬಂದಿದ್ದಾರೆ ನೋಡಿ.. ರೊಹರಾಳ ಮಗಳು... ನಿಮ್ಮ ಮೊಮ್ಮಗಳು ಬಂದಿದ್ದಾಳೆ... ಬೇಗ ಬನ್ನಿ ಅಜ್ಜೀ...’’

ಅಜ್ಜಿ ಗೋಡೆಗೆ ಮುಖ ಹಾಕಿ ತಿರುಗಿ ಮಲಗಿದರು ಅಷ್ಟೇ, ಮಾತನಾಡಲಿಲ್ಲ. ‘‘ಬನ್ನಿ ಅಜ್ಜೀ... ಆ ಹುಡುಗಿ ಅಲ್ಲೇ ನಿಂತಿದೆ. ನೀವು ಬಂದು ಒಳಗೆ ಕರೆಯಿರಿ...’’

ಈಗಲೂ ಅಜ್ಜಿ ತುಟಿ ಬಿಚ್ಚಲಿಲ್ಲ.

‘‘ಮನೆ ಬಾಗಿಲಿಗೆ ಬಂದವರನ್ನು ನೋಯಿಸಬಾರದು ಎಂದು ನೀವೇ ಹೇಳುತ್ತಿದ್ದಿರಲ್ಲ ಅಜ್ಜಿ... ನಾನು ಅವಳನ್ನು ಒಳಗೆ ಕರೆಯುತ್ತೇನೆ... ನೀವು ಮತ್ತೆ ನನ್ನನ್ನು ಬಯ್ಯಬಾರದು...’’ ಎಂದಳು ಐಸು.

‘‘ನಿನ್ನ ಕೆಲಸ ಎಷ್ಟುಂಟು ಅದಷ್ಟನ್ನು ಮಾಡಿದರೆ ಸಾಕು. ಅಧಿಕ ಪ್ರಸಂಗ ಮಾಡಬೇಡ ಹೋಗು’’ ಅಜ್ಜಿಯ ಧ್ವನಿ ಕಂಪಿಸುತ್ತಿತ್ತು. ಅವರ ಮನಸಿನಲ್ಲಿ ನಡೆಯುತ್ತಿರುವ ಸಂಘರ್ಷ, ಯಾತನೆ ಅವಳಿಗೆ ಅರ್ಥವಾಗಿತ್ತು.

‘‘ನನಗಿದೆಲ್ಲ ಆಗುವುದಿಲ್ಲ. ಮನೆ ಬಾಗಿಲಿಗೆ ಬಂದವರನ್ನು ಹಿಂದೆ ಕಳುಹಿಸುವುದೆಂದರೆ, ಇದು ಸರಿಯಾ... ಎಷ್ಟು ದೂರದಿಂದ ಬಂದಿದ್ದಾಳೋ ಏನೋ ಆ ಹುಡುಗಿ. ನಾನು ಅವಳನ್ನು ಒಳಗೆ ಕರೆಯುತ್ತೇನೆ. ನೀವು ನನಗೆ ಬಯ್ದರೂ ಪರವಾಗಿಲ್ಲ...’’ ಎನ್ನುತ್ತಾ ಬಂದ ಐಸು ತಾಹಿರಾಳನ್ನು ಒಳಗೆ ಕರೆತಂದಳು. ಅವಳ ಬ್ಯಾಗನ್ನು ಕೊಂಡು ಹೋಗಿ ಒಳ ಕೋಣೆಯಲ್ಲಿಟ್ಟಳು.

‘‘ನಿನ್ನ ಹೆಸರೇನೆಂದೆ...?’’

‘‘ತಾಹಿರಾ... ನೀವು ಯಾರು?’’

‘‘ನಾನು ... ನಾನು ಈ ಮನೆಯ ಕೆಲಸದವಳೂಂತ ಇಟ್ಟುಕೋ’’

‘‘ನಿಮ್ಮ ಹೆಸರೇನು?’’

‘‘ಐಸು...’’

‘‘ತುಂಬ ಚಂದದ ಹೆಸರು... ನಾನು ನಿಮ್ಮನ್ನು ಐಸು ಮಾಮೀಂತ ಕರೆಯಲಾ?’’

‘‘ಏನೂ ಬೇಕಾದರೂ ಕರೆ. ನೀನು ಎಲ್ಲಿಂದ ಬಂದೆ?’’

‘‘ಬೆಂಗಳೂರಿನಿಂದ’’

‘‘ಒಬ್ಬಳೇ ಬಂದಿಯಾ...?’’

‘‘ಹೌದು’’

‘‘ರಾತ್ರಿ ಒಬ್ಬಳೇ ಬರ್ಲಿಕ್ಕೆ ಭಯ ಆಗಲಿಲ್ಲವಾ?’’

‘‘ಭಯ ಯಾಕೆ?’’

ಅಮ್ಮನಿಗೆ ನೀನು ಇಲ್ಲಿಗೆ ಬರುವುದೂಂತ ಹೇಳಿ ಬಂದಿದ್ದಿಯಾ?’’

‘‘ಇಲ್ಲ’’

‘‘ಮತ್ತೆ...!’’

‘‘ಒಂದು ವಾರ ಕಾಲೇಜು ಟೂರ್ ಇದೇಂತ ಸುಳ್ಳು ಹೇಳಿ ಬಂದೆ’’

‘‘ಯಾಕೆ ಸುಳ್ಳು ಹೇಳಿದೆ?’’

‘‘ಸುಮ್ಮನೆ’’

( ಸಶೇಷ )

Writer - ಮುಹಮ್ಮದ್ ಕುಳಾಯಿ

contributor

Editor - ಮುಹಮ್ಮದ್ ಕುಳಾಯಿ

contributor

Similar News